news18-kannada Updated:October 15, 2020, 10:47 PM IST
ಮನೀಶ್ ಶೆಟ್ಟಿ ಕೊಲೆ ಆದ ಸ್ಥಳ
ಬೆಂಗಳೂರು(ಅ. 15): ನಗರದಲ್ಲಿ ಮತ್ತೆ ಗುಂಡಿನ ಸದ್ದು ಮಾಡಿದೆ. ಡುಯಟ್ ಲೇಡೀಸ್ ಬಾರ್ ಮಾಲೀಕ ಮನೀಶ್ ಶೆಟ್ಟಿಯನ್ನು ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ರೆಸ್ಟ್ ಹೌಸ್ ಪಾರ್ಕ್ ರಸ್ತೆಯಲ್ಲಿ ರಾತ್ರಿ 9 ಸುಮಾರಿಗೆ ಈ ಘಟನೆ ನಡೆದಿರುವುದು ತಿಳಿದುಬಂದಿದೆ. ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಡಬಲ್ ಬ್ಯಾರಲ್ ಗನ್ನಿಂದ 45 ವರ್ಷದ ಮನೀಶ್ ಶೆಟ್ಟಿಯ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಚಾಕುವಿನಿಂದಲೂ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಮನೀಶ್ನನ್ನು ಕೂಡಲೇ ಸಮೀಪದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪ್ರಾಣ ಉಳಿಯಲಿಲ್ಲ.
ಚಿಕ್ಕಮಗಳೂರಿನ ಕೊಪ್ಪ ಮೂಲದ ಮನೀಶ್ ಶೆಟ್ಟಿಗೆ ಭೂಗತ ಜಗತ್ತಿನ ನಂಟಿತ್ತು. ಮಂಗಳೂರು, ಬಾಂಬೆಯಲ್ಲಿ ಇವರ ವಿರುದ್ಧ ಹಲವು ಪ್ರಕರಣಗಳು ಇವೆ. ಅಂಡರ್ವರ್ಲ್ಡ್ ಡಾನ್ಗಳಾಗಿದ್ದ ಬನ್ನಂಜೆ ರಾಜ, ರವಿ ಪೂಜಾರಿ ಅವರ ಆಪ್ತನಾಗಿಯೂ ಗುರುತಿಸಿಕೊಂಡಿದ್ದ. ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸಿದ್ದ ಬಾಣಸವಾಡಿಯ ಚೆಮ್ಮನೂರು ಜುವೆಲರಿ ಮಳಿಗೆಯ ರಾಬರಿ ಪ್ರಕರಣದಲ್ಲಿ ಮನೀಶ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: ಮುಧೋಳ ಶ್ವಾನಕ್ಕೆ ಈಗ ಎಲ್ಲಿಲ್ಲದ ಡಿಮ್ಯಾಂಡ್; ದೇಶದ ರಕ್ಷಣೆಯಿಂದ ಮನೆಯಲ್ಲಿ ಸಾಕಲು ಕೂಡ ದೇಸಿ ತಳಿಯೇ ಬೇಕು
ಈಗ ಮನೀಶ್ ಶೆಟ್ಟಿಯನ್ನ ಹತ್ಯೆಗೈದವರು ಯಾರು ಎಂಬುದು ಗೊತ್ತಾಗಿಲ್ಲ. ದಾಳಿ ನಡೆಸಿದ ಇಬ್ಬರು ದುಷ್ಕರ್ಮಿಗಳು ತಮ್ಮ ಡಿಯೋ ಬೈಕ್ ಮತ್ತು ರಿವಾಲ್ವರ್ ಅನ್ನು ದೂರದಲ್ಲಿ ಬಿಸಾಡಿ ತಪ್ಪಿಸಿಕೊಂಡಿದ್ದಾರೆ. ಇದೇ ವೇಳೆ, ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ಡಿಸಿಪಿ ಅನುಚೇತ್, ಪೊಲೀಸ್ ಕಮಿಷನರ್ ಕಮಲ್ ಪಂತ್ ಸೇರಿದಂತೆ ಅನೇಕ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸಿದ್ಧಾರೆ.
ವರದಿ: ಗಂಗಾಧರ ವಾಗಟ
Published by:
Vijayasarthy SN
First published:
October 15, 2020, 10:37 PM IST