ಕಲಬುರ್ಗಿ(ಅ.23): ನ್ಯೂಸ್ 18 ಕನ್ನಡ ವರದಿಯ ಫಲಶೃತಿಯಾಗಿ ಬಿಲ್ಡಪ್ ಪಿ.ಎಸ್.ಐ. ಮಲ್ಲಣ್ಣ ಯಲಗೋಡ ಅಮಾನತುಗೊಳಿಸಲಾಗಿದೆ. ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆ ಪಿ.ಎಸ್.ಐ. ಯಲಗೋಡ ಅಮಾನತುಗೊಳಿಸಿ ಕಲಬುರ್ಗಿ ಎಸ್.ಪಿ. ಸಿಮಿ ಮರಿಯಮ್ ಜಾರ್ಜ್ ಆದೇಶಿಸಿದ್ದಾರೆ. ಪಿ.ಎಸ್.ಐ. ಹುಚ್ಚಾಟದ ಕುರಿತು ನ್ಯೂಸ್ 18 ಕನ್ನಡ ವಿಸ್ತೃತ ವರದಿ ಮಾಡಿತ್ತು. ಇದರ ಬೆನ್ನ ಹಿಂದೆಯೇ ಎಸ್.ಪಿ. ಸಿಮಿ ಮರಿಯಮ್ ಜಾರ್ಜ್ ನಿನ್ನೆ ಇಲಾಖಾ ತನಿಖೆಗೆ ಆದೇಶಿಸಿದ್ದರು. ವರದಿ ಬಂದಿದ್ದು ಪಿ.ಎಸ್.ಐ.ಯನ್ನು ಅಮಾನತುಗೊಳಿಸಿರೋದಾಗಿ ಕಲಬುರ್ಗಿ ಎಸ್.ಪಿ. ನ್ಯೂಸ್ 18 ಗೆ ಮಾಹಿತಿ ನೀಡಿದ್ದಾರೆ. ಕಲಬುರ್ಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಭೀಮಾ ನದಿ ಪ್ರವಾಹಕ್ಕೆ ಜನ ತೀವ್ರ ಸಂಕಷ್ಟಕ್ಕೆ ಗುರಿಯಾದ ಸಂದರ್ಭದಲ್ಲಿ ಪಿ.ಎಸ್.ಐ. ಎಂ.ಎಸ್.ಯಲಗೋಡ, ನೆರೆಪೀಡಿತ ಪ್ರದೇಶದಲ್ಲಿ ಫೋಜ್ ಕೊಟ್ಟಿದ್ದ. ಪ್ರವಾಹ ಸಂತ್ರಸ್ತರ ಜೊತೆ ಹುಚ್ಚಾಟ ನಡಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಯಲಗೋಡನನ್ನು ಅಮಾನತುಗೊಳಿಸಿ, ಆ ಸ್ಥಾನಕ್ಕೆ ಜೇವರ್ಗಿ ಪಿ.ಎಸ್.ಐ. ಸಂಗೇಮೇಶ್ ರನ್ನು ನೇಮಿಸಿ ಎಸ್.ಪಿ. ಆದೇಶಿಸಿದ್ದಾರೆ.
ಜೇವರ್ಗಿ ತಾಲೂಕಿನ ಕೂಡಲಗಿ ಗ್ರಾಮದಲ್ಲಿ ಪಿ.ಎಸ್.ಐ. ಹುಚ್ಚಾಟದ ಘಟನೆ ನಡೆದಿತ್ತು. ಬಟ್ಟೆ ತೊಯ್ಯಬಾರದೆಂದು ಮೀನುಗಾರರ ತೆಪ್ಪದಲ್ಲಿ ಹೋಗಿದ್ದ ಯಲಗೋಡ, ಗ್ರಾಮಸ್ಥರ ಮೂಲಕವೇ ತೆಪ್ಪ ತಳ್ಳಿಸಿಕೊಂಡು ಹೋಗಿದ್ದ. ಮೇಕೆ ಸಿಗುತ್ತೇನೋ ನೋಡ್ರಿ, ಹಿಡಿದು ರಕ್ಷಿಸಿರೋದಾಗಿ ವೀಡಿಯೋ ತೆಗೆಸಿಕೊಳ್ಳೋಣ ಎಂದು ಹೇಳಿದ್ದ. ಕೊನೆಗೆ ಗ್ರಾಮಸ್ಥರು ಮೇಕೆ ಮರಿ ತಂದು ಕೊಟ್ಟಾಗ ಅದನ್ನು ತಾನು ರಕ್ಷಿಸಿರೋದಾಗಿ ಫೋಜ್ ಕೊಟ್ಟಿದ್ದಲ್ಲದೆ, ಗ್ರಾಮಸ್ಥರ ಮೂಲಕ ಬಹುಪರಾಕ್ ಹೇಳಿಸಿಕೊಂಡಿದ್ದ. ಮೇಕೆ ಮರಿ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿತ್ತು. ಆದರೆ ಅದರ ರಕ್ಷಣೆ ಗ್ರಾಮಸ್ಥರ ಕೈಲಾಗಿರಲಿಲ್ಲ. ಹೀಗಾಗಿ ಗ್ರಮಕ್ಕೆ ಭೇಟಿ ನೀಡಿ ಪ್ರವಾಹದ ನೀರಿನಲ್ಲಿಯೇ ಹೋಗಿ ಮೇಕೆಯನ್ನು ಪಿ.ಎಸ್.ಐ. ರಕ್ಷಿಸಿದ್ದಾರೆ ಎಂದು ಗ್ರಾಮಸ್ಥರ ಮೂಲಕ ಹೇಳಿಸಿದ್ದ.
ಬಂಡೆ ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ; ಬಿಜೆಪಿ ನಾಯಕರಿಗೆ ಡಿಕೆ ಶಿವಕುಮಾರ್ ತಿರುಗೇಟು
ಗ್ರಾಮದಿಂದ ವಾಪಸ್ ಬರೋವಾಗ, ನೀರಿನಲ್ಲಿಳಿದು ಮೇಕೆ ಮರಿ ರಕ್ಷಿಸಿರೋದಾಗಿ ಫೋಜು ಕೊಟ್ಟಿದ್ದ. ಇಂತಹ ವಿಲಕ್ಷಣದಿಂದ ವರ್ತಿಸಿದ ಎಂ.ಎಸ್.ಯಲಗೋಡ ಕೊನೆಗೂ ಅಮಾನತ್ತಾಗಿದ್ದಾನೆ. ಅಮಾನತ್ತಾದ ಯಲಗೋಡ ಹುಚ್ಚಾಟ ಒಂದೆರಡಲ್ಲ. ಹೊಡಿ ಮಗ ಹೊಡಿ ಮಗ ಎಂದು ಗೋಡೆಯ ಮೇಲಿನಿಂದ ಜಂಪ್ ಮಾಡಿ ಸಿಂಗಂ ಫೋಜು ಸಹ ಕೊಡೋದು, ಪಿಸ್ತೂಲ್ ಹಿಡಿದು ಸಿಂಹದ ಪಕ್ಕದಲ್ಲಿ ನಡೆದು ಬಂದಂತೆ ಬಿಲ್ಡಪ್ ಕೊಡೋದು, ಯಾರೋ 10 ಜನಾನ ಹೊಡೆದು ನಾನು ಡಾನ್ ಆದೋನಲ್ಲ ಕಣೋ.. ನಾನು ಹೊಡೆದ 10 ಜನಾನೂ ಡಾನ್ ಗಳೇ ಗೊತ್ತಾ.. ಸಲಾಂ ರಾಕಿ ಭಾಯ್ ಸ್ಟೈಲಲ್ಲಿರೋ ವೀಡಿಯೋಗಳನ್ನೂ ತೆಗೆಯಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು, ಅದೀಗ ವೈರಲ್ ಆಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ