PSI Recruitment Exam: ಸಿಐಡಿ ಅಧಿಕಾರಿಗಳಿಂದ ಮತ್ತೊಬ್ಬ PSI ಬಂಧನ

ಸಿಐಡಿ ಅಧಿಕಾರಿಗಳು ಕಾಮಾಕ್ಷಿಪಾಳ್ಯ ಠಾಣೆ ಪಿಎಸ್ಐ ಶರೀಫ್ ಕಲ್ಲಿಮನಿ ಅವರನ್ನು ಬಂಧಿಸಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಆರೋಪ ಶರೀಪ್‌ ಕಲ್ಲಿಮನಿ ಮೇಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜು.30): ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ (PSI Recruitment Exam) ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪಿಎಸ್​ಐ ಬಂಧನವಾಗಿದೆ. ಸಿಐಡಿ ಅಧಿಕಾರಿಗಳು ಕಾಮಾಕ್ಷಿಪಾಳ್ಯ ಠಾಣೆ (Kamakshipalya Police Station) ಪಿಎಸ್ಐ ಶರೀಫ್ ಕಲ್ಲಿಮನಿ (PSI Sharif Kallimani) ಅವರನ್ನು ಬಂಧಿಸಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಆರೋಪ ಶರೀಪ್‌ ಕಲ್ಲಿಮನಿ ಮೇಲಿದೆ. ಪ್ರಕರಣ ದಾಖಲಾದ ಬಳಿಕ ಪಿಎಸ್​ಐ ಶರೀಫ್ ನಾಪತ್ತೆಯಾಗಿದ್ದರು. ಇಂದು ಶರೀಫ್​ ಅವರನ್ನು ಮುಂಬೈನಲ್ಲಿ ಸಿಐಡಿ ಪೊಲೀಸರು (CID Police) ಬಂಧಿಸಿದ್ದಾರೆ.

OMR ಶೀಟ್ ಗಳನ್ನು ತಿದ್ದುವ ಮೂಲಕ ಅಕ್ರಮ

ಪಿಎಸ್‌ಐ ನೇಮಕಾತಿ ಹಗರಣವು ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಒಳಗೊಂಡ ಜೇಡರ ಬಲೆಯೇ ಹೊರತು ಬೇರೇನೂ ಅಲ್ಲ ಎಂದು ರಾಜ್ಯ ಸರ್ಕಾರದ ಅಭಿಯೋಜಕರು ವಿವರಿಸಿದ್ದಾರೆ.

ಕಳಂಕಿತ ಅಭ್ಯರ್ಥಿಗಳು 100 ಪ್ರಶ್ನೆಗಳಲ್ಲಿ ಕೇವಲ 16 ರಿಂದ 20 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ್ದಾರೆ. ಆದರೆ ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಸೂಚಿಸಿದಂತೆ ಒಎಂಆರ್ ಶೀಟ್ ಗಳನ್ನು ತಿದ್ದುವ ಮೂಲಕ ಅವರನ್ನು ಆಯ್ಕೆ ಮಾಡಲಾಗಿದೆ. ಇದು ಸಿಐಡಿಗೆ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳಿಂದ ಬಹಿರಂಗವಾಗಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.

ಇದನ್ನೂ ಓದಿ: CET Result: ಸಿಇಟಿ ಫಲಿತಾಂಶದಲ್ಲಿ ರಿಪೀಟರ್ಸ್​ಗೆ ಅನ್ಯಾಯ; ಸಚಿವರ ಮನೆ ಮುಂದೆ ಪ್ರತಿಭಟನೆ​

ಈ ಹಿಂದೆ ಹಾಸನದಲ್ಲಿ ಮೂವರ ಬಂಧನ

ಪಿಎಸ್ಐ ನೇಮಕಾತಿ ಅಕ್ರಮ (PSI Recruitment Scam) ಸಂಬಂಧ ಹಾಸನ ಜಿಲ್ಲೆಯ ಮೂವರು ವ್ಯಕ್ತಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿ (Arrest) ವಿಚಾರಣೆ ನಡೆಸುತ್ತಿದ್ದಾರೆ. ಹಾಸನ ಜಿಲ್ಲೆಯ ಶ್ರವಣಬೆಳಗೊಳ ತಾಲೂಕಿನ ಬೆಕ್ಕ ಗ್ರಾಮಪಂಚಾಯಿತಿಯ ಕೇಶವ ಹಾಗೂ ಅದೇ ಗ್ರಾಮದ ನಾರಾಯಣಪ್ಪ (Narayanppa) ಮತ್ತು ಪರೀಕ್ಷೆ ಬರೆದಿದ್ದ ಆತನ ಮಗ ವೇಣುಗೋಪಾಲರನ್ನ ಸಿಐಡಿ ಅಧಿಕಾರಿಗಳು (CID Officer) ಇಂದು ಬೆಳಗ್ಗೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪಿಎಸ್ಐ ಹಗರಣದಲ್ಲಿ ದಿನದಿಂದ ದಿನಕ್ಕೆ ಒಬ್ಬಬ್ಬರು ಸಿಐಡಿ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಿದ್ದಾರೆ.

ಹಾಸನದಲ್ಲಿ ಡಿವೈಎಸ್ಪಿಯಾಗಿ ಸೇವೆ

ಇನ್ನು ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿ ಕೇಶವ ಅವರ ಸಂಬಂಧಿಕರೊಬ್ಬರು ಈ ಹಿಂದೆ ಹಾಸನದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಅದಲ್ಲದೆ ಈಗ ಮತ್ತೊಬ್ಬ ಸಂಬಂಧಿಕ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಮತ್ತೊಬ್ಬ ಮಹಿಳಾ ಸಂಬಂಧಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೀಗಾಗಿ ಕೇಶವ ಅವರ ಕುಟುಂಬದ ಸಾಕಷ್ಟು ಮಂದಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ಪರೀಕ್ಷೆ ಬರೆದಿದ್ದ ವೇಣುಗೋಪಾಲ್, ಆಯ್ಕೆ ಪ್ರಕ್ರಿಯೆಯಲ್ಲಿ ಕೇಶವ ಎಂಬುವವರು ಹಣದ ಮೂಲಕ ಡೀಲ್ ಮಾಡಿ ಪರೀಕ್ಷೆ ಪಾಸು ಮಾಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಒಂದೇ ಕುಟುಂಬದ ಮೂವರು ಪೊಲೀಸರು

ಹೀಗಾಗಿ ಪಿಎಸ್ಐ ಹಗರಣದ ನಂಟು ಈಗ ಹಾಸನಕ್ಕೂ ಅಂಟಿದ್ದು, ಹಾಸನ ಜಿಲ್ಲೆಯ ಒಂದೇ ಕುಟುಂಬದ ಮೂವರು ಪೊಲೀಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯಿಂದ ಬಯಲಾಗಬೇಕಿದೆ. ಸದ್ಯ ಬೆಕ್ಕ ಗ್ರಾಮ ಪಂಚಾಯತಿಯ ಅಧ್ಯಕ್ಷ ಕೇಶವ ರವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿ ತನಿಖೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಜಿಲ್ಲೆಯ ಇನ್ನೆಷ್ಟು ಜನ ಸಿಕ್ಕಿಬಿಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : Monkeypox: ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆ

16 ಅಭ್ಯರ್ಥಿಗಳ ಬಂಧನ

ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧ ಬೆಂಗಳೂರಿನ ಕೇಂದ್ರಗಳಲ್ಲಿ ನಡೆದಿರುವ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಮತ್ತಿಬ್ಬರು ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದನ್ನು ಪತ್ತೆ ಮಾಡಿದ್ದ ಸಿಐಡಿ ಪೊಲೀಸರು 92 ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದರು. ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ ಕಂಡು ಬಂದ ಬೆನ್ನಲ್ಲೇ 12 ಆರೋಪಿಗಳನ್ನು ಬಂಧಿಸಿದ್ದರು. ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.
Published by:Pavana HS
First published: