ಮೈಸೂರ್ ಬ್ಯಾಂಕ್ ಸರ್ಕಲ್ ಸೇರಿ ಬೆಂಗಳೂರಿನ ವಿವಿಧೆಡೆ ಪ್ರತಿಭಟನೆ; 40ಕ್ಕೂ ಹೆಚ್ಚು ಮಂದಿ ರೈತರು ಪೊಲೀಸ್ ವಶಕ್ಕೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ವಿರೋಧಿ ನೀತಿ ವಿರೋಧಿಸಿ ರೈತರು, ದಲಿತರು ಮತ್ತು ಕಾರ್ಮಿಕರ ಸಂಘಟನೆಗಳು ಇಂದು ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿವೆ. ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್​ನಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ.

news18-kannada
Updated:September 25, 2020, 11:40 AM IST
ಮೈಸೂರ್ ಬ್ಯಾಂಕ್ ಸರ್ಕಲ್ ಸೇರಿ ಬೆಂಗಳೂರಿನ ವಿವಿಧೆಡೆ ಪ್ರತಿಭಟನೆ; 40ಕ್ಕೂ ಹೆಚ್ಚು ಮಂದಿ ರೈತರು ಪೊಲೀಸ್ ವಶಕ್ಕೆ
ನೆಲಮಂಗಲ ಸಮೀಪದ ಮಾದಾವರದ ನೈಸ್ ರಸ್ತೆ ತಡೆದು ಕನ್ನಡ ಸೇನೆ ಸಂಘಟನೆಯ ಸದಸ್ಯರಿಂದ ಪ್ರತಿಭಟನೆ
  • Share this:
ಬೆಂಗಳೂರು(ಸೆ. 25): ದೇಶಾದ್ಯಂತ ರೈತರ ಪ್ರತಿಭಟನೆಗೆ ಸಾಂಕೇತಿಕ ಬೆಂಬಲವಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಬೆಂಗಳೂರಿನ ಕೆಲವೆಡೆ ರೈತರು, ದಲಿತರು ಮತ್ತು ಕಾರ್ಮಿಕರ ಸಂಘಟನೆಗಳು ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿವೆ. ನಗರದ ಹೃದಯಭಾಗದಲ್ಲಿರುವ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರುತ್ತಿದ್ದಾರೆ. ಇನ್ನು ಗೊರಗುಂಟೆ ಪಾಳ್ಯದ ಜಂಕ್ಷನ್​ನಲ್ಲಿ ರಸ್ತೆ ತಡೆ ಮಾಡಿದ್ದ 40ಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇವತ್ತು ರೈತ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದ ಕೆಲವೆಡೆ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ. ಹೆಚ್ಚು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರುವ ಮೈಸೂರ್ ಬ್ಯಾಂಕ್ ವೃತ್ತ ಬಳಿಯ ಮೌರ್ಯ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಆನಂದ್ ರಾವ್ ಸರ್ಕಲ್, ಚಾಲುಕ್ಯ ರಸ್ತೆ, ಕೆಜಿ ರಸ್ತೆಗಳಲ್ಲಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಸರ್ಕಲ್ ಸುತ್ತಲಿನ ರಸ್ತೆಗಳಲ್ಲಿ 500ಕ್ಕೂ ಹೆಚ್ಚು ಟ್ರಾಫಿಕ್ ಪೊಲೀಸರನ್ನೂ ಹಾಕಲಾಗಿದೆ. ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ, ಇಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡರೆ ಜನರನ್ನು ಬಂಧಿಸಿ ಕರೆದೊಯ್ಯಲು 10ಕ್ಕೂ ಹೆಚ್ಚು ಬಿಎಂಟಿಸಿ ಬಸ್ಸುಗಳನ್ನ ಸ್ಥಳಕ್ಕೆ ತರಲಾಗಿದೆ.

ಇದನ್ನೂ ಓದಿ: Karnataka Bandh: ರೈತ ವಿರೋಧಿ ಕಾಯ್ದೆ ಖಂಡಿಸಿ ಇಂದು ರಸ್ತೆ ತಡೆ; ಎಲ್ಲೆಲ್ಲಿ ಪ್ರತಿಭಟನೆ ಬಿಸಿ?

ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ತಂಡೋಪಾದಿಯಲ್ಲಿ ರೈತರು ಬೆಂಗಳೂರಿಗೆ ಬಂದಿದ್ದಾರೆ. ಪ್ರತೀ ಜಿಲ್ಲೆಯಿಂದ 250 ಮಂದಿಯಂತೆ 5 ಸಾವಿರಕ್ಕೂ ಹೆಚ್ಚು ಜನರು ಮೈಸೂರ್ ಬ್ಯಾಂಕ್ ಸರ್ಕಲ್​ನಲ್ಲಿ ಸೇರಿ ಪ್ರತಿಭಟನೆ ನಡೆಸುವ ನಿರೀಕ್ಷೆ ಇದೆ. ಈಗಾಗಲೇ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲ ರೈತರ ಒಂದು ಗುಂಪು ಸ್ಥಳಕ್ಕೆ ಬಂದು ಪ್ರತಿಭಟನೆ ಮೊದಲಾದರಂಭಿಸಿದೆ. ಹಾಗೆಯೇ, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಮತ್ತೊಂದು ರೈತರ ತಂಡ ಕೂಡ ಪ್ರತ್ಯೇಕವಾಗಿ ಆಗಮಿಸಿ ಪ್ರತಿಭಟನಾ ಸ್ಥಳ ಸೇರಿದೆ.

ಇದೇ ವೇಳೆ, ಮಾದವಾರದ ನೈಸ್ ರಸ್ತೆ ಜಂಕ್ಷನ್ ಬಳಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಜಿ. ಕುಮಾರ್ ನೇತೃತ್ವದಲ್ಲಿ ನೈಸ್ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು. ಗೊರಗುಂಟೆ ಪಾಳ್ಯದಲ್ಲಿ ನೆಲಮಂಗಲದತ್ತ ಹೋಗುವ ಹೆದ್ದಾರಿಯನ್ನು ರೈತರು ತಡೆದು ಪ್ರತಿಭಟಿಸಿ ಪೊಲೀಸರಿಂದ ಬಂಧಿತರಾದರು. ಅದೇ ರೀತಿ ನಾಯಂಡಳ್ಳಿಯಲ್ಲಿನ ಮೈಸೂರು ಹೆದ್ದಾರಿಗೆ ತಡೆ ಒಡ್ಡಲು ಪ್ರತಿಭಟನಾಕಾರರು ಮಾಡಿದ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು.

ಇದನ್ನೂ ಓದಿ: Karnataka Bandh: ಮೈಸೂರಿನಲ್ಲಿ ಸಾಂಕೇತಿಕವಾಗಿ ರಸ್ತೆ ತಡೆ; ಅರ್ಧ ಗಂಟೆಗೆ ಮುಕ್ತಾಯವಾದ ರೈತರ ಪ್ರತಿಭಟನೆ

ಕೇಂದ್ರ ಸರ್ಕಾರದ ಕೃಷಿ ಮಸೂದೆಗಳು ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನ ವಿರೋಧಿಸಿ ಈ ಪ್ರತಿಭಟನೆಗಳು ನಡೆದಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇವತ್ತು ನಡಸುತ್ತಿರುವ ಪ್ರತಿಭಟನೆಗಳು ಸಾಂಕೇತಿಕವಾಗಿವೆ. ಸೆ. 28ರಂದು ಕರ್ನಾಟಕ ಬಂದ್ ಇದ್ದು ಇದರತ್ತ ಎಲ್ಲಾ ಸಂಘಟನೆಗಳು ಗಮನ ಹರಿಸಿವೆ.
Published by: Vijayasarthy SN
First published: September 25, 2020, 11:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading