‘ಪಂಕ್ಚರ್ ಹಾಕುವವರಿಂದ ಸರ್ಕಾರಕ್ಕೆ ಪಂಕ್ಚರ್’ - ಸಿಎಎ ವಿರುದ್ಧ ರಾಯಚೂರಲ್ಲಿ ಬೃಹತ್ ಹೋರಾಟ; ಕಲಬುರ್ಗಿ, ಚಾಮರಾಜನಗರದಲ್ಲೂ ಪ್ರತಿಭಟನೆ

ರಾಯಚೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆ ನೇತೃತ್ವದಲ್ಲಿ 66 ವಿವಿಧ ಸಂಘಟನೆಗಳು ಜನಾಧಿವೇಶನ ಸಮಾವೇಶ ನಡೆಸಿದವು.

news18
Updated:December 30, 2019, 6:44 PM IST
‘ಪಂಕ್ಚರ್ ಹಾಕುವವರಿಂದ ಸರ್ಕಾರಕ್ಕೆ ಪಂಕ್ಚರ್’ - ಸಿಎಎ ವಿರುದ್ಧ ರಾಯಚೂರಲ್ಲಿ ಬೃಹತ್ ಹೋರಾಟ; ಕಲಬುರ್ಗಿ, ಚಾಮರಾಜನಗರದಲ್ಲೂ ಪ್ರತಿಭಟನೆ
ಶಿವಸುಂದರ್
  • News18
  • Last Updated: December 30, 2019, 6:44 PM IST
  • Share this:
ಬೆಂಗಳೂರು(ಡಿ. 30): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಇವತ್ತೂ ವಿವಿಧೆಡೆ ಪ್ರತಿಭಟನೆಗಳು ನಡೆದಿವೆ. ರಾಯಚೂರು, ಕಲಬುರ್ಗಿ, ಚಾಮರಾಜನಗರ ಮೊದಲಾದ ಕಡೆ ವಿವಿಧ ಸಂಘಟನೆಗಳು ಪ್ರತಿಭಟನಾ ಸಮಾವೇಶಗಳನ್ನು ಆಯೋಜಿಸಿದ್ದವು. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಿಎಎ, ಎನ್​ಆರ್​ಸಿಯನ್ನು ಬಲವಾಗಿ ವಿರೋಧಿಸಲಾಯಿತು.

ರಾಯಚೂರಿನಲ್ಲಿ ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆ ನೇತೃತ್ವದಲ್ಲಿ 66 ವಿವಿಧ ಸಂಘಟನೆಗಳು ಜನಾಧಿವೇಶನ ಸಮಾವೇಶ ನಡೆಸಿದವು. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಾವಿರಾರು ಜನರಿದ್ದ ಈ ಸಮಾವೇಶದಲ್ಲಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂದಿಲ್, ಸಾಮಾಜಿಕ ಹೋರಾಟಗಾರರಾದ ಶಿವಸುಂದರ್, ಪ್ರೊ| ಹಮೀದ್ ಮೊಹಮ್ಮದ್ ಖಾನ್, ರಾಘವೇಂದ್ರ ಕುಷ್ಟಗಿ, ನಿವೃತ್ತ ಐಪಿಎಸ್ ಅದಿಕಾರಿ ನಿಸಾರ್ ಅಹ್ಮದ್ ಮೊದಲಾದ ಚಿಂತಕರು, ಹೋರಾಟಗಾರರು, ಮಾಜಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಲಬುರ್ಗಿಯ ವಾಡಿ ಪಟ್ಟಣದಲ್ಲಿ ನಡೆದ ಬೃಹತ್ ಜನಾಗ್ರಹ ಸಮಾವೇಶದಲ್ಲಿ ಕಾಂಗ್ರೆಸ್, ಜನವಾದಿ ಮಹಿಳಾ ಸಂಘಟನೆ, ದಲಿತರು, ಮುಸ್ಲಿಮರ ಸಂಘಟನೆಗಳು ಭಾಗಿಯಾಗಿದ್ದವು. ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ ಮೊದಲಾದವರು ಈ ಸಂದರ್ಭದಲ್ಲಿ ಭಾಷಣ ಮಾಡಿ ಪೌರತ್ವ ಕಾಯ್ದೆ ವಿರುದ್ಧ ಜನರಿಗೆ ಎಚ್ಚರ ಮೂಡಿಸುವ ಪ್ರಯತ್ನ ಮಾಡಿದರು.

ಇದನ್ನೂ ಓದಿ: ಸೋನಿಯಾ ಗಾಂಧಿಗೆ ಪೌರತ್ವ ನೀಡಲು ಧರ್ಮ ಯಾವುದು ಎಂದು ಕೇಳುವುದು ತಪ್ಪೇ?: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್​ ಮಾಧವ್​ ಪ್ರಶ್ನೆ

ಚಾಮರಾಜನಗರದ ಗುಂಡ್ಲುಪೇಟೆಯ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆಗಳು ನಡೆದವು. ಕೇರಳದಿಂದ ಪ್ರತಿಭಟನಾಕಾರರು ಆಗಮಿಸುವ ಶಂಕೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. 2 ಕೆಎಸ್​ಆರ್​ಪಿ, 6 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಬಿಗಿಭದ್ರತೆ ನಡುವೆ ನಡೆದ ಮೆರವಣಿಗೆಯಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸಿದವು.

ಪಂಕ್ಚರ್ ಹಾಕಿ ಬದುಕುವ ನಾವು ಸರ್ಕಾರದ ನಿರ್ಧಾರಕ್ಕೆ ಪಂಕ್ಚರ್ ಹಾಕ್ತೇವೆ: ಶಿವಸುಂದರ್

ರಾಯಚೂರಿನಲ್ಲಿ ನಡೆದ ಜನಾಧಿವೇಶನ ಸಮಾವೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡರು. ಪ್ರಗತಿಪರ ಹೋರಾಟಗಾರ ಶಿವಸುಂದರ್ ಅವರು ಈ ಸಮಾವೇಶದಲ್ಲಿ ಮಾತನಾಡಿ, ಸರ್ಕಾರದ ನಿರ್ಧಾರಕ್ಕೆ ಪಂಕ್ಚರ್ ಹಾಕಲು ಇಲ್ಲಿ ಎಲ್ಲರೂ ಸೇರಿದ್ಧಾರೆಂದು ಹೇಳಿ ಸಂಸದ ತೇಜಸ್ವಿ ಸೂರ್ಯರಿಗೆ ಪರೋಕ್ಷ ತಿರುಗೇಟು ನೀಡಿದರು.“ನಮ್ಮ ಎದೆಯಲ್ಲಿ ನಾಲ್ಕಕ್ಷರ ಇಲ್ಲವಾದರೂ ದೇಶದಲ್ಲಿರುವ ನಾವೆಲ್ಲರೂ ಒಂದೇ ಎನ್ನುವ ಭಾವನೆ ಹೊಂದಿದ್ದೇವೆ. ಪಂಕ್ಚರ್ ಹಾಕಿ ಬದುಕುವ ನಾವು ಈಗ ದೇಶದ ಸರ್ಕಾರದ ನಿರ್ಧಾರಕ್ಕೆ ಪಂಕ್ಚರ್ ಹಾಕಲು ಸೇರಿದ್ದೇವೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಎದೆ ಸೀಳಿದರೆ ನಾಲ್ಕಕ್ಷರ ಇರುವುದಿಲ್ಲ. ಪಂಕ್ಚರ್ ಹಾಕೋರೆಲ್ಲಾ ಬಂದು ಪ್ರತಿಭಟನೆ ಮಾಡುತ್ತಾರೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದಕ್ಕೆ ಶಿವಸುಂದರ್ ಅವರು ಮೇಲಿನ ಹೇಳಿಕೆ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಕೇಂದ್ರದ ಪೌರತ್ವ ಕಾಯ್ದೆಯಿಂದ ಮಹಿಳೆಯರಿಗೂ ತೊಂದರೆ ಆಗುತ್ತದೆ ಎಂದು ಈ ವೇಳೆ ಶಿವಸುಂದರ್ ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿಪಕ್ಷಗಳಿಂದ ಗೊಂದಲ ಸೃಷ್ಟಿ: ಗೋವಾ ಸಿಎಂ ಪ್ರಮೋದ್ ಸಾವಂತ್​

“ಸಿಎಎ ಮತ್ತು ಎನ್​ಆರ್​ಸಿಯಿಂದ ಬಡವರಷ್ಟೇ ಅಲ್ಲ ಮಹಿಳೆಯರಿಗೂ ಸಮಸ್ಯೆಯಾಗುತ್ತದೆ. ಇದು ಮುಸ್ಲಿಮ್ ಮಹಿಳೆಯರು ಮಾತ್ರವಲ್ಲ ಹಿಂದೂ ಮಹಿಳೆಯರೂ ಕೂಡ ತೊಂದರೆ ಅನುಭವಿಸಬೇಕಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ 60 ವರ್ಷದ ವೃದ್ಧೆಯೊಬ್ಬರನ್ನು ಪೌರತ್ವ ದಾಖಲೆಗಳನ್ನು ನೀಡಿಲ್ಲವೆಂದು ಜೈಲಿಗೆ ಕಳುಹಿಸಲಾಗಿದೆ. ಆದರೆ, ಅವರ ಮಗನಿಗೆ ಪೌರತ್ವ ನೀಡಲಾಗಿದೆ. ನಮ್ಮ ಸಮಾಜದಲ್ಲಿ ಮಹಿಳೆಗೆ ತಾನು ಹುಟ್ಟಿದ ಮನೆಯಲ್ಲಿ ಒಂದು ಹೆಸರಿದ್ದರೆ, ಗಂಡನ ಮನೆಯಲ್ಲಿ ಬೇರೆ ಹೆಸರಿಡುತ್ತಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ತೊಂದರೆಯೇ ಜಾಸ್ತಿ. ಶ್ರೀರಾಮನ ಈ ನಾಡಿನಲ್ಲಿ ಸೀತೆಯನ್ನೇ ಕಾಡಿಗಟ್ಟಲಾಗಿತ್ತು. ಹಾಗಾಗಿ ಮಹಿಳೆಯರು ಈ ಕಾಯ್ದೆಯಿಂದ ಸಮಸ್ಯೆಯ ಸುಳಿಗೆ ಸಿಲುಕುತ್ತಾರೆ” ಎಂದವರು ವಿವರಿಸಿದರು.

ಆರೆಸ್ಸೆಸ್ ಕಪಿಮುಷ್ಠಯಿಂದ ದೇಶ ಕಾಪಾಡಬೇಕು: ಹಮೀದ್

ದೇಶದ ನಿವಾಸಿಗಳಿಗೆ ಸಂಪ್ರದಾಯವಾದಿ, ದುರಾಡಳಿತ ಮತ್ತು ಜನವಿರೋಧಿ ನೀತಿಗಳಿಂದ ಸ್ವಾತಂತ್ರ್ಯ ಬೇಕಿದೆ. ಹೋರಾಟ ಇದೇ ರೀತಿ ಮುಂದುವರಿದರೆ ಆ ದಿನಗಳು ಬರುವುದು ದೂರವಿಲ್ಲ. ಆರೆಸ್ಸೆಸ್, ಬಿಜೆಪಿಯ ಕಪಿಮುಷ್ಠಿಯಿಂದ ದೇಶವನ್ನು ಕಾಪಾಡಬೇಕು ಎಂದು ಹಮೀದ್ ಮೊಹಮ್ಮದ್ ಖಾನ್ ಕರೆ ನೀಡಿದರು.

ದೇಶದಲ್ಲಿಆಡಳಿತ ನಡೆಸುವವರು ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತ ನಡೆಸುವಂತಿಲ್ಲ. ಸಂವಿಧಾನ ವಿರೋಧಿಗಳಿಗೆ ಅಧಿಕಾರದಲ್ಲಿರಲು ಅವಕಾಶ ನೀಡಬಾರದು. ಈ ಹೋರಾಟವು ದೇಶದ ಅಧಿಕಾರಶಾಹಿ ಹಾಗೂ ಜನಬೆಂಬಲಿತ ಹೋರಾಟಗಾರರ ಮಧ್ಯೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಗೂಂಡಾ ರಾಜಕೀಯ ಮಾಡುತ್ತಿದೆ. ಈ ಗೂಂಡಾ ರಾಜಕೀಯಕ್ಕೆ ಧಿಕ್ಕಾರ ಇರಲಿ ಎಂದು ಖಾನ್ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಮತ್ತು ಅಮಿತ್ ಶಾ ಅವರೇ ನೀವು 15 ಲಕ್ಷ ಜನರಿಗೆ ಪೌರತ್ವ ನೀಡಿದರೆ ನಿಮಗೆ ವೋಟು ನೀಡುತ್ತಾರೆ. ಆದರೆ ದೇಶದ ಜನರಿಗೆ ಪೀಪಲ್ಸ್ ಪೊಲಿಟಿಕ್ಸ್ ಗೊತ್ತಿದೆ. 2019ರಲ್ಲಿ ಪೀಪಲ್ಸ್ ಪೊಲಿಟಿಕ್ಸ್ ಮತ್ತು ಪವರ್ ಪೊಲಿಟಿಕ್ಸ್ ಮಧ್ಯೆ ಹೋರಾಟ ನಡೆಯಲಿದೆ ಎಂದ ಹಮೀದ್ ಮಹಮ್ಮದ್ ಖಾನ್, ನೀವು ಎಷ್ಟು ಸುಳ್ಳು ಹೇಳುತ್ತೀರಿ, ನಿಮ್ಮ ಜನನ ಪತ್ರ ಬೇಡ ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್ ಇದ್ದರೆ ತೋರಿಸಿ ಎಂದು ಮೋದಿ ಮತ್ತು ಅಮಿತ್ ಶಾ ಅವರಿಗೆ ಸವಾಲು ಹಾಕಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ