ಬೆಳಗಾವಿ(ಆಗಸ್ಟ್ 27): ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ರಣಧೀರ ಪಡೆ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಸುವರ್ಣ ವಿಧಾನಸೌಧದಿಂದ ಬಿ. ಎಸ್. ಯಡಿಯೂರಪ್ಪ ಮಾರ್ಗದವರೆಗೆ ಬೃಹತ್ ರ್‍ಯಾಲಿಯನ್ನು ನಡೆಸಿದರು. ನಂತರ ಆಗಸ್ಟ್ 30 ವರೆಗೆ ಜಿಲ್ಲಾಡಳಿತಕ್ಕೆ ಗಡುವು ನೀಡಿ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.
ಬೆಳಗಾವಿಯ ಬಳಿಯ ಪೀರನವಾಡಿ ಗ್ರಾಮದ ಬಳಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿಚಾರ ಕಳೆದ 2 ವರ್ಷಗಳಿಂದ ಪ್ರಕ್ರಿಯೆ ನಡೆಯುತ್ತಲೇ ಇದೆ. 2018ರಲ್ಲಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಸ್ಥಳೀಯ ಹೋರಾಟಗಾರರ ಮೂರ್ತಿ ಸ್ಥಾಪನೆಗೆ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ನೀಡಿದ್ದರು. ಸಚಿವ ರಮೇಶ ಜಾರಕಿಹೊಳಿ ಸಹ ಅಂದಿನ ಲೋಕೋಪಯೋಗಿ ಸಚಿವರಿಗೆ ಸರ್ಕಲ್ ಮತ್ತು ಮೂರ್ತಿ ಸ್ಥಾಪನೆ ಬಗ್ಗೆ ಪತ್ರ ಬರೆದಿದ್ದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ನೀಲ ನಕ್ಷೆ ಸಹ ಸಿದ್ದವಾಗಿತ್ತು. ಆದರೇ ರಸ್ತೆ ಅಗಲೀಕರಣದ ಕಾರಣ, ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಪೊಲೀಸ್ ಇಲಾಖೆ ಇದಕ್ಕೆ ಅನುಮತಿ ನೀಡರಲಿಲ್ಲ.
ಬಡವರ ಪಾಲಿನ ಆಪದ್ಭಾಂದವ ಸೋನು ಸೋದ್; ಯಾದಗಿರಿಯ ಬಾಣಂತಿಗೆ ನೆರವು ನೀಡಿದ ನಟ
ಆಗಸ್ಟ್ 15ರಂದು ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಅಭಿಮಾನಿಗಳು ಅಂದೇ ಮೂರ್ತಿ ಸ್ಥಾಪನೆಗೆ ಮುಂದಾಗಿದ್ದರು. ಬೆಳ್ಳಂ ಬೆಳಗ್ಗೆ 4 ಗಂಟೆಗೆ ಮೂರ್ತಿ ಸ್ಥಾಪನೆಗೆ ಯತ್ನಿಸಿದ್ದರು. ಆದರೆ ಪೊಲೀಸರು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಮೂರ್ತಿಯನ್ನು ವಶಕ್ಕೆ ಪಡೆದು, ಕಾರ್ಯಕರ್ತರನ್ನು ಸಹ ವಶಕ್ಕೆ ಪಡೆದುಕೊಂಡಿದ್ದರು.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಯಿತು. ಪ್ರಕರಣ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿ ಅನೇಕರು ಪ್ರತಿಕ್ರಿಯೆ ನೀಡಿದ್ದರು. ಜಿಲ್ಲಾಡಳಿತ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟಿಸದ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನಿಂದ ವಿವಿಧ ಸಂಘಟನೆಗಳು ಇಂದು ಬೆಳಗಾವಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಸಾವಿರಾರು ಜನ ರಾಯಣ್ಣ ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರ್‍ಯಾಲಿ ಮೂಲಕ ಬಂದ ಪ್ರತಿಭಟನಾಕರರನ್ನು ಪೊಲೀಸರು ಬಿ ಎಸ್ ಯಡಿಯೂರಪ್ಪ ಮಾರ್ಗದಲ್ಲಿ ತಡೆದು ನಿಲ್ಲಿಸಿದರು. ಈ ಸಂದರ್ಭದಲ್ಲಿ ಹೋರಾಟಗಾರರು ಬ್ಯಾರಿಕೇಡ್ ತಳ್ಳಿ ಒಳಗೆ ನುಗ್ಗಲು ಯತ್ನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ