ಕೋಲಾರಕ್ಕೆ ಕೆಸಿ ವ್ಯಾಲಿ ನೀರು ಪುನರ್ ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ

news18
Updated:September 4, 2018, 1:48 PM IST
ಕೋಲಾರಕ್ಕೆ ಕೆಸಿ ವ್ಯಾಲಿ ನೀರು ಪುನರ್ ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ
news18
Updated: September 4, 2018, 1:48 PM IST
-ರಘುರಾಜ್​, ನ್ಯೂಸ್​ 18 ಕನ್ನಡ

ಕೋಲಾರ,(ಸೆ. 04): ಹಿಂದಿನ ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳ ಪೈಕಿ ಕೆಸಿ ಯೋಜನೆಯೂ ಒಂದು. ಆದರೆ ಯೋಜನೆ ನೀರಿನ ಗುಣಮಟ್ಟ ವಿಚಾರ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಯೋಜನೆ ತಾತ್ಕಾಲಿಕ ಸ್ಥಗಿತವಾಗಿದೆ. ಈ ಹಿನ್ನಲೆ ಯೋಜನೆ ಮರು ಜಾರಿಗಾಗಿ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಐನೂರಕ್ಕು ಹೆಚ್ಚು ಹೋರಾಟಗಾರರು ಪ್ರತಿಭಟನೆ ನಡೆಸಿದರು.

ಕೋಲಾರದಲ್ಲಿ ರಾಜ್ಯಾಧ್ಯಕ್ಷ್ಯ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಂಡ ಹೋರಾಟಗಾರರು, ನಗರದ ಪ್ರವಾಸಿ ಮಂದಿರ ವೃತ್ತದಿಂದ ಮೆಕ್ಕೆ ವೃತ್ತದವರೆಗೂ ಬೃಹತ್ ಕಾಲ್ನಡಿಗೆ ಪ್ರತಿಭಟನೆ ಜಾಥಾ ನಡೆಸಿದರು. ಈಗಾಗಲೇ ಕೆಸಿ ವ್ಯಾಲಿ ಯೋಜನೆ ನೀರು ಗುಣಮಟ್ಟ ಪ್ರಶ್ನಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದು, ಯೋಜನೆ ನೀರಿನ ಗುಣಮಟ್ಟ ಪ್ರಮಾಣಪತ್ರ ಸಲ್ಲಿಸುವವರೆಗೂ ಕೋಲಾರಕ್ಕೆ ಯೋಜನೆ ಮೂಲಕ ನೀರನ್ನ ಹರಿಸದಂತೆ ಹೈಕೋರ್ಟ್ ಆದೇಶಿಸಿದೆ. ಇತ್ತ ಪ್ರಮಾಣ ಸಲ್ಲಿಸಲು ಹೈಕೋರ್ಟ್ ಕಾಲಾವಕಾಶ ನೀಡಿದರೂ ಬೆಂಗಳೂರಿನ ಬಿಡಬ್ಲುಎಸ್‍ಎಸ್‍ಬಿ ಅಧಿಕಾರಿಗಳು ಇದುವರೆಗೂ ಗುಣಮಟ್ಟ ಪ್ರಮಾಣ ಪತ್ರ ಸಲ್ಲಿಸದೇ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸದ್ಯ ಮತ್ತೆ ನೀರನ್ನು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹೋರಾಟ ನಡೆಸುತ್ತಿದ್ದು, ಸಂಬಂಧಪಟ್ಟ ಇಲಾಖೆ ಕಾನೂನು ತೊಡಕನ್ನು ಶೀಘ್ರ ನಿವಾರಿಸುವಂತೆಯೂ ಮನವಿ ಮಾಡಿದ್ದಾರೆ. ಕಾಲ್ನಡಿಗೆ ಜಾಥಾ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ್ಯ ಕೋಡಿಹಳ್ಳಿ ಚಂದ್ರಶೇಖರ್ ರೈತರ ಹಿತದೃಷ್ಟಿಯಿಂದ ಯೋಜನೆ ನೀರು ಜಿಲ್ಲೆಗೆ ಅವಶ್ಯವಿದೆ ಎಂದು ತಿಳಿಸಿದರು. ಇತ್ತ ಯೋಜನೆ ವಿರುದ್ದ ಕೆಲ ರೈತಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ನೀರನ್ನು  ಮೂರನೇ ಹಂತದಲ್ಲಿ ಶುದ್ಧೀಕರಿಸಿ ನಂತರ ಕೋಲಾರಕ್ಕೆ ಹರಿಸಲು ಆಗ್ರಹಿಸಿದ್ದಾರೆ.

ಜಿಲ್ಲೆಗೆ ಜಾರಿಯಾಗಿರುವ ಏಕೈಕ ಯೋಜನೆ ಇದಾಗಿದ್ದು 1400 ಕೋಟಿ ರೂ ಹಣವನ್ನು ವ್ಯಯಿಸಲಾಗಿದೆ. ಸದ್ಯ ಯೋಜನೆ ನೀರಿನ ಕುರಿತಾಗಿ ಕೆಲ ಹೋರಾಟಗಾರರು ಪರ-ವಿರೋಧದ ವಾದಗಳ ಮೂಲಕ ಯೋಜನೆ ಬೇಡ- ಬೇಕು ಎನ್ನುವ ನಿಲುವಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ ಇದೇ ಸೆಪ್ಟೆಂಬರ್ ತಿಂಗಳ 11 ರಂದು ಹೈಕೋರ್ಟ್‍ನಲ್ಲಿ ಮತ್ತೆ ವಿಚಾರಣೆ ನಡೆಯಲಿದ್ದು, ಬಿಡಬ್ಲುಎಸ್‍ಎಸ್‍ಬಿ ಅಧಿಕಾರಿಗಳು ನೀರಿನ ಗುಣಮಟ್ಟ ಪ್ರಮಾಣಪತ್ರ ಸಲ್ಲಿಸಿದ ನಂತರ, ವಿಚಾರಣೆ ನಡೆಯಲಿದೆ. ಹೈಕೋರ್ಟ್ ನೀಡುವ ತೀರ್ಪಿನ ಮೇಲೆಯೇ ಯೋಜನೆ ಭವಿಷ್ಯವೂ ನಿರ್ಧಾರವಾಗಲಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ