ಬೆಂಗಳೂರು (ಡಿ.06): ಬೆಳಗಾವಿ ಗಡಿ ವಿವಾದದ (Belagavi Boundary Dispute) ಕಿಚ್ಚು ದಿನೇ ದಿನೇ ಜೋರಾಗುತ್ತಿದೆ. ಎಂಇಎಸ್ ಪುಂಡರು ಮತ್ತೆ ಕನ್ನಡ ನೆಲದಲ್ಲಿ ನಾಡದ್ರೋಹಿ ಘೊಷಣೆ ಕೂಗಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ (District Collector Office) ಎದುರು ಎಂಇಎಸ್ ಕಾರ್ಯಕರ್ತರು (MES Activist) ಪ್ರತಿಭಟನೆ ನಡೆಸಿದ್ರು. ಈ ವೇಳೆ ಬೆಳಗಾವಿ, ಕಾರವಾರ ನಿಪ್ಪಾಣಿ ಬಾಲ್ಕಿ ಸಂಯಕ್ತ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದಾರೆ.
ಡಿಸಿಗೆ ಎಂಇಎಸ್ ಕಾರ್ಯಕರ್ತರ ಮನವಿ
ಮಹಾರಾಷ್ಟ್ರದ ಸಚಿವರಿಗೆ ಕರ್ನಾಟಕ ಪ್ರವೇಶ ಅನುಮತಿ ನೀಡುವಂತೆ ಮನವಿ ಮಾಡಲು ಬೆಳಗಾವಿ ಜಿಲ್ಲಾಧಿಕಾರಿಗೆ ಎಂಇಎಸ್ ಮುಖಂಡರು ಆಗಮಿಸಿದ್ರು. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಭೇಟಿ ಮಾಡಿದ ಎಂಇಎಸ್ ಕಾರ್ಯಕರ್ತರು ಮನವಿ ಮಾಡಿದ್ರು. ಗಡಿ ವಿಚಾರವಾಗಿ ಮಹಾರಾಷ್ಟ್ರದ ಸಚಿವರೊಂದಿಗೆ ಚರ್ಚೆ ಮಾಡಲು ಅನುಮತಿ ನೀಡಲು ಕೋರಿದ್ದಾರೆ. ಮಾಜಿ ಶಾಸಕ ದಿಗಂಬರ್ ಪಾಟೀಲ್ ಪ್ರಕಾಶ್ ಮರಗಾಳೆ, ರಂಜೀತ್ ಚೌವ್ಹಾಣ ಪಾಟೀಲ್ ನೇತೃತ್ವದಲ್ಲಿ ಮನವಿ ಡಿಸಿಗೆ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು
ಬೆಳಗಾವಿ ಡಿಸಿಗೆ 5ಕ್ಕೂ ಹೆಚ್ಚು ಜನರು ಮನವಿ ಸಲ್ಲಿಸಲು ಬಂದ ಹಿನ್ನೆಲೆ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಮನವಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಎಂಇಎಸ್ ಮುಖಂಡರು ಡಿಸಿ ಕಚೇರಿ ಎದುರೇ ಪ್ರತಿಭಟನೆ ನಡೆಸಿದ್ರು. ಈ ವೇಳೆ ನಾಡದ್ರೋಹಿ ಘೋಷಣೆ ಕೂಗಿದ್ದಾರೆ. ಈ ವೇಳೆ ಬೆಳಗಾವಿ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದಿದ್ದಾರೆ.
ಕರವೇ ಕಾರ್ಯಕರ್ತರ ಪ್ರತಿಭಟನೆ
ಮಹಾರಾಷ್ಟ್ರ ನೋಂದಣಿ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕಲ್ಲು ತೂರಾಟ ನಡೆಸಿದ ಕಾರ್ಯಕರ್ತರು ಮತ್ತು ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ಅವರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದರು
ಟೋಲ್ ನಾಕಾ ಬಳಿ ಕಾರ್ಯಕರ್ತರ ಆಕ್ರೋಶ
ನಾರಾಯಣ ಗೌಡ ನೇತೃತ್ವದಲ್ಲಿ ಬೆಳಗಾವಿ ನಗರದವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆ ಬೆಳಗಾವಿ ನಗರ ಪ್ರವೇಶಿಸುವ ಮೊದಲೇ ಟೋಲ್ ನಾಕಾ ಬಳಿ ಕಾರ್ಯಕರ್ತರನ್ನು ಪೊಲೀಸರು ತಡೆದರು.
ಮಹಾರಾಷ್ಟ್ರದ ಲಾರಿಗಳಿಗೆ ಕಲ್ಲು ತೂರಾಟ
ಹಿರೇಬಾಗೆವಾಡಿ ಟೋಲ್ ನಾಕಾ ಬಳಿಯಲ್ಲಿ ಮಹಾರಾಷ್ಟ್ರ ನೊಂದಣಿ ಇರುವ ಲಾರಿಗಳಿಗೆ ಮಸಿ ಬಳಿದು ಗಾಜು ಒಡೆದರು. ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಲಾರಿಗಳನ್ನು ತಡೆದು ಮಹಾರಾಷ್ಟ್ರ ನೋಂದಣಿಯ ಹತ್ತಕ್ಕೂ ಅಧಿಕ ಲಾರಿಗಳ ನಂಬರ್ ಪ್ಲೇಟ್ ಕಿತ್ತು ಹಾಕಿ ಮಸಿ ಬಳಿಯಲಾಯಿತು. ಕೂಡಲೇ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ನಮ್ಮ ಹೋರಾಟ ಹತ್ತಿಕ್ಕುವ ಯತ್ನ
ನಾರಾಯಣ ಗೌಡ ಮಾತನಾಡಿ, 'ಇವತ್ತು ಪೊಲೀಸರು ನಮ್ಮನ್ನು ಅರೆಸ್ಟ್ ಮಾಡಿದ್ದಾರೆ. ಇವತ್ತು ಒಂದಿನ ನಮ್ಮನ್ನು ತಡೆಯಬಹುದು. ಆದರೆ, ಇದು ಒಂದು ದಿನದ ಚಳುವಳಿ ಅಲ್ಲ. ಕರವೇ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಧಿಕ್ಕರಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದೆ. ಸರ್ಕಾರ ಇವತ್ತು ಪೊಲೀಸರನ್ನು ಮುಂದಿಟ್ಟುಕೊಂಡು ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ.
ಇದನ್ನೂ ಓದಿ: CM Basavaraj Bommai: ರಾಜ್ಯದಲ್ಲಿ 2023ಕ್ಕೆ ನೂರಕ್ಕೆ ನೂರು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ- ಸಿಎಂ ಬೊಮ್ಮಾಯಿ
ಸರ್ಕಾರ ನಮ್ಮ ಚಳುವಳಿ ಹತ್ತಿಕ್ಕಿದ್ರೆ ನಾವು ನಮ್ಮ ಹೋರಾಟ ಇಷ್ಟಕ್ಕೆ ಬಿಡಲ್ಲ. ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡ್ತೇವೆ' ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ, ಅಧಿವೇಶನದಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಬಗ್ಗೆ ಕುಳಿತು ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ