ಬೆಂಗಳೂರು: ಚಾಮರಾಜಪೇಟೆ (Chamrajpet) ಕ್ಷೇತ್ರದ ಬಿಜೆಪಿ (BJP) ಟಿಕೆಟ್ಅನ್ನು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಅವರಿಗೆ ಘೋಷಣೆ ಮಾಡಿದ ಹಿನ್ನೆಯಲ್ಲಿ ಇಂದು ಟಿಕೆಟ್ ಆಕಾಂಕ್ಷಿಯಾಗಿದ್ದ ಸೈಲೆಂಟ್ ಸುನೀಲ್ (Silent Sunil) ಬೆಂಬಲಿಗರು ಮಲ್ಲೇಶ್ವರಂನಲ್ಲಿರುವ (Malleshwaram) ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ನೂರಾರು ಸಂಖ್ಯೆಯಲ್ಲಿ ಕಚೇರಿಗೆ ಮುತ್ತಿಗೆ ಹಾಕಿದ್ದ ಕಾರ್ಯಕರ್ತರು ಬೇಡ ಬೇಡ ಭಾಸ್ಕರ್ ರಾವ್ ಬೇಡ ಎಂದು ಘೋಷಣೆ ಕೂಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಂದಹಾಗೇ, ಸುನೀಲ್ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ನಡುವೆ ಎಎಪಿ ಪಕ್ಷದಿಂದ (AAP Party) ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಭಾಸ್ಕರ್ ರಾವ್ ಅವರಿಗೆ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿತ್ತು.
ಕಚೇರಿ ಒಳಗೆ ನುಗ್ಗಿದ್ದ ಕಾರ್ಯಕರ್ತರು
ಈ ಹಿನ್ನೆಲೆಯಲ್ಲಿ ಇಂದು ಸಂಜೆ ವೇಳೆಗೆ ಸುನೀಲ್ ಬೆಂಬಲಿಗರು ಬಿಜೆಪಿಗೆ ಕಚೇರಿ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಮಹಿಳಾ ಕಾರ್ಯಕರ್ತರು ಕೂಡ ಕೂಡ ಭಾಸ್ಕರ್ ರಾವ್ ಅವರ ವಿರುದ್ಧ ಘೋಷಣೆ ಕೂಗಿ, ಸುನೀಲ್ಗೆ ಜೈಕಾರ ಕೂಗಿದರು. ಕಚೇರಿ ಒಳಗೆ ನುಗ್ಗಿದ್ದ ಕಾರ್ಯಕರ್ತರು ನೆಲದ ಮೇಲೆ ಮಲಗಿ ಭಾಸ್ಕರ್ ರಾವ್ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು.
ಬಿಜೆಪಿ ಪಕ್ಷದ ಬಾವುಟ ಹಾರಿಸಬೇಕು ಅಂತ ತೀರ್ಮಾನ ಮಾಡಿದ್ದೇವೆ. ನಿನ್ನೆಯ ಪಟ್ಟಿಯಲ್ಲಿ ಕೋರ್ ಕಮಿಟಿಯಿಂದ ಹೆಸರೇ ಹೋಗಿರಲಿಲ್ಲ. ರಾಜೀನಾಮೆ ಕೊಡಲು ಬಂದಾಗ ರವಿಕುಮಾರ್ ಜಿ ಭರವಸೆ ನೀಡಿದ್ದಾರೆ. ಭಾಸ್ಕರ್ ರಾವ್ ಬೇಡ ಅಂತ ಪತ್ರ ನೀಡಿದ್ದೇವೆ. ಭಾಸ್ಕರ್ ರಾವ್ ಬದಲಾವಣೆ ಮಾಡಲು ಆಗ್ರಹ ಮಾಡಿದ್ದೇವೆ. ಎ ಸುನಿಲ್ಗೆ ಟಿಕೆಟ್ ಕೊಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕರ್ತರಿಗೆ ರವಿಕುಮಾರ್ ಭರವಸೆ
ಚಾಮರಾಜಪೇಟೆ ಅಭ್ಯರ್ಥಿ ಭಾಸ್ಕರ್ ರಾವ್ ಬದಲಾವಣೆ ಮಾಡುವಂತೆ ಹೇಳಿದ್ದಾರೆ. ಮಂಡಲ ಅಧ್ಯಕ್ಷರು ಹಾಗೂ ಚಾಮರಾಜಪೇಟೆ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ನಿಮ್ಮ ರೀತಿ ನಾನು ಕಾರ್ಯಕರ್ತ. ನಿಮ್ಮ ಬೇಡಿಕೆ ಬಗ್ಗೆ ಬರೆದುಕೊಡಿ, ನಿಮ್ಮ ಪ್ರತಿನಿಧಿಯಾಗಿ ರಾಜ್ಯಾಧ್ಯಕ್ಷರ ಜೊತೆ ಚರ್ಚೆ ಮಾಡುತ್ತೇನೆ. ಅಂತಿಮವಾಗಿ ಆ ಪತ್ರ ವನ್ನು, ಕೇಂದ್ರಕ್ಕೆ ಕಳುಹಿಸಿಕೊಡುತ್ತೇವೆ. ಚಾಮರಾಜಪೇಟೆ ಸದ್ಯದ ಪರಿಸ್ಥಿತಿ ಏನು ಅಂತ ವರದಿ ಕಳುಹಿಸುತ್ತೇವೆ. ನಮ್ಮ ಕಾರ್ಯಕರ್ತರು ಆಗಿರುವುದರಿಂದ ನ್ಯಾಯ ಕೊಡಿಸಲೇಬೇಕಿದೆ. ಚಾಮರಾಜಪೇಟೆಯಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರಿಸೋಣ ಎಂದು ರವಿಕುಮಾರ್ ಕರೆ ನೀಡಿದರು.
ಸುನೀಲ್ ಕುಮಾರ್ ಪರ ಕಾರ್ಯಕರ್ತರು ಜೈಕಾರ
ಈ ವೇಳೆ ಸುನೀಲ್ ಕುಮಾರ್ ಕಾರ್ಯಕರ್ತರು ಜೈ ಎಂದು ಘೋಷಣೆ ಕೂಗಿದರು. ರವಿಕುಮಾರ್ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಟ್ಟು ಬಿಜೆಪಿ ಕಚೇರಿಯಿಂದ ಕಾರ್ಯಕರ್ತರು ತೆರಳಿದರು. ಇನ್ನು ಸುನೀಲ್ ಪರ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಕಚೇರಿ ಒಳಗೆ ಇದ್ದ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಅವರು ಬಳಿಕ ಕಚೇರಿಯಿಂದ ಹೊರಬಂದರು. ಸೈಲೆಂಟ್ ಸುನೀಲ್ ಬೆಂಬಲಿಗರ ಪ್ರತಿಭಟನೆಯಿಂದ ಮತ್ತೆ ಚಾಮರಾಜಪೇಟೆ ಟಿಕೆಟ್ ವಿಷಯದಲ್ಲಿ ಬಿಜೆಪಿ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ