ಮಕ್ಕಳಿಗಾಗಿ (Children) ತಂದೆ ತಾಯಿ ಏನೇನೆಲ್ಲ ಮಾಡ್ತಾರೆ. ಹೊಟ್ಟೆಯಲ್ಲಿರುವಾಗಿನಿಂದ ಹಿಡಿದು ತನ್ನ ಕಾಲ ಮೇಲೆ ತಾನು ನಿಲ್ಲುವವರೆಗೂ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತಾರೆ. ಆದ್ರೆ ರೆಕ್ಕೆ ಬಲಿತ ಹಕ್ಕಿಯಂತೆ ಸ್ವತಂತ್ರರಾದ ಬಳಿಕ ಅನೇಕ ಮಕ್ಕಳು ತಂದೆತಾಯಿಯನ್ನೇ (Parents) ಮರೆತು ಬಿಡ್ತಾರೆ. ಆಧುನಿಕತೆಯ ಗುಂಗಿನಲ್ಲೋ ಅಥವಾ ದುಡಿಯುವ ತುಡಿತದಲ್ಲೋ ಏನೋ ಮಾನವೀಯತೆಯನ್ನೇ ಮರೆತವರಂತೆ ಅಪ್ಪ ಅಮ್ಮನನ್ನು ದೂರ ಮಾಡುತ್ತಾರೆ. ನಮ್ಮಲ್ಲಿ “ಮಕ್ಕಳಿಗಾಗಿಯೇ ಅಲ್ವಾ ದುಡಿಯೋದು”? ಅಂತ ಕೇಳೊ ಅಪ್ಪ-ಅಮ್ಮಂದಿರು ತುಂಬಾ ಜನ ಸಿಗ್ತಾರೆ. ದುಡಿದ ದುಡ್ಡನ್ನೆಲ್ಲ, ಗಳಿಸಿದ ಆಸ್ತಿಯನ್ನೆಲ್ಲ (Property) ಮಕ್ಕಳಿಗೇ ಕೊಟ್ಟು ಕೈ ಖಾಲಿ ಮಾಡಿಕೊಳ್ಳೋ ಅದೆಷ್ಟೋ ಪೋಷಕರು ನಮಗೆ ಸಿಗ್ತಾರೆ.
ಹೀಗೆಯೇ ಆಸ್ತಿಯೆಲ್ಲ ಮಕ್ಕಳಿಗೇ ನೀಡಿ, ದುಡ್ಡನ್ನು ಹಾಗೂ ಮಕ್ಕಳನ್ನು ದೂರಮಾಡಿಕೊಂಡು ಗೋಳು ಅನುಭವಿಸುತ್ತಿದ್ದ ಪೋಷಕರು, ಮಕ್ಕಳ ಬುದ್ದಿ ಗೊತ್ತಾಗಿ ಕೊನೆಗೂ ತಮ್ಮ ಆಸ್ತಿಯನ್ನು ಮರಳಿ ಪಡೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಇಂಥದ್ದೊಂದು ಘಟನೆ ನಡೆದಿರೋದು ಯಾದಗಿರಿಯಲ್ಲಿ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೋಷಕರನ್ನು ನೋಡಿಕೊಳ್ಳಲು ವಿಫಲರಾದ ಮಕ್ಕಳಿಂದ ಆಸ್ತಿಯನ್ನು ಮರಳಿ ಪೋಷಕರಿಗೇ ಮರುಹಂಚಿಕೆ ಮಾಡಲು ಯಾದಗಿರಿ ಜಿಲ್ಲಾಡಳಿತ ಆದೇಶಿಸಿದೆ.
2007ರ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆಯಂತೆ ಯಾದಗಿರಿಯ ಸಹಾಯಕ ಆಯುಕ್ತರಾದ ಶಾ ಆಲಂ ಹುಸೇನ್ ಅವರು ಈ ಆದೇಶ ಹೊರಡಿಸಿದ್ದಾರೆ.
ನಾಲ್ಕು ಮಕ್ಕಳಿದ್ದರೂ ಅನಾಥರಂತಿದ್ದ ರವೀಂದ್ರನಾಥ
ಯಾದಗಿರಿಯ ಶಹಾಪುರ ತಾಲೂಕಿನ ಶಿರವಾಳ ಗ್ರಾಮದ ನಿವಾಸಿಯಾಗಿರುವ ರವೀಂದ್ರನಾಥ ಹಿರೇಮಠ ಎಂಬುವವರಿಗೆ ನಾಲ್ಕು ಮಕ್ಕಳು. ಪತ್ನಿ ತೀರಿಕೊಂಡಿದ್ದು, ಸದ್ಯ ಮೂವರು ಪುತ್ರರು ಹಾಗೂ ಒಬ್ಬಳು ಮಗಳಿದ್ದಾಳೆ. ಅವರು ಶಿರವಾಳ ಗ್ರಾಮದಲ್ಲಿ ಮಕ್ಕಳ ಹೆಸರಿನಲ್ಲಿ 10.12 ಎಕರೆ ಜಮೀನು ಖರೀದಿ ಮಾಡಿದ್ದಾರೆ.
ಆದರೂ ಯಾರೂ ನನ್ನನ್ನು ನೋಡಿಕೊಳ್ಳುತ್ತಿಲ್ಲ. ತನ್ನ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎಂಬುದಾಗಿ ರವೀಂದ್ರನಾಥ ಹೇಳುತ್ತಾರೆ. ಆದ್ದರಿಂದ ಅವರು ತಮ್ಮ ಆಸ್ತಿಯನ್ನು ಮರಳಿ ಕೊಡಿಸುವಂತೆ ಕೋರಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಶಂಕ್ರಮ್ಮ ಅವರದ್ದೂ ಅದೇ ಕಥೆ
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಧರ್ಮಾಪುರ ಗ್ರಾಮದ ಶಂಕ್ರಮ್ಮ ಸಾಬಣ್ಣ ಉಡಮಾ ಎಂಬುವವರದ್ದೂ ಥೇಟ್ ಇಂಥದ್ದೇ ಕಥೆ. ಶಂಕ್ರಮ್ಮ ಅವರಿಗೂ ನಾಲ್ಕು ಮಕ್ಕಳಿದ್ದಾರೆ. ಆದ್ರೆ ಅವರ ಬಗ್ಗೆ ಕಾಳಜಿ ತೋರುವವರು ಮಾತ್ರ ಯಾರೂ ಇಲ್ಲ. ಅವರೆಲ್ಲ ಮುಂಬೈ ಮತ್ತು ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ.
ಹಾಗಾಗಿ ಮಕ್ಕಳು ಪಿತ್ರಾರ್ಜಿತವಾಗಿ ಪಡೆದ ನಾಲ್ಕು ಎಕರೆ ಭೂಮಿಯನ್ನು ತನಗೆ ಹಿಂದಿರುಗಿಸಬೇಕು. ಏಕೆಂದರೆ ಮಕ್ಕಳು ನನ್ನನ್ನು ತೊರೆದು ಹೋಗಿದ್ದಾರೆ ಎಂಬುದಾಗಿ ಶಂಕ್ರಮ್ಮ ಅವರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: Bharat Jodo Yatra: ರಾಹುಲ್ ಯಾತ್ರೆ ನಿಲ್ಲಿಸಲು ಕೇಂದ್ರದಿಂದ ಕೊರೊನಾ ಕುತಂತ್ರ; ಶಿವಸೇನೆ ಗಂಭೀರ ಆರೋಪ
ಇನ್ನು ಅರ್ಜಿದಾರರ ಹಕ್ಕುಗಳನ್ನು ಪರಿಶೀಲನೆ ಹಾಗೂ ವಿಚಾರಣೆ ನಡೆಸಿದ ಬಳಿಕ ಅಧಿಕಾರಿಗಳು ರವೀಂದ್ರನಾಥ ಹಾಗೂ ಶಂಕ್ರಮ್ಮ ಅವರ ಮಕ್ಕಳ ಹೆಸರಿನಲ್ಲಿದ್ದ ಆಸ್ತಿಯನ್ನು ನೊಂದ ಪೋಷಕರಿಗೆ ಹಿಂದಿರುಗಿಸಿದರು.
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ
ಒಟ್ಟಾರೆ, ಇಂಥ ಅನೇಕ ನೊಂದ ಪೋಷಕರಿಗೆ 2007ರ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ ವರವಾಗಿದೆ ಎಂದೇ ಹೇಳಬಹುದು.
ತಮ್ಮ ಜೀವನವೇ ಮುಖ್ಯ ಎಂದು ಪೋಷಕರನ್ನು ಕಡೆಗಾಣಿಸಿ ಮಾನವೀಯತೆಯೂ ಇಲ್ಲದಂತೆ ಬಿಟ್ಟು ಹೋಗುವ ಅದೆಷ್ಟೋ ಮಕ್ಕಳಿದ್ದಾರೆ. ಅದರಿಂದಾಗಿಯೇ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನಾವು ಕಾಣುತ್ತೇವೆ.
ತಾವು ಮುಂದೊಮ್ಮೆ ಪೋಷಕರಾಗುತ್ತೇವೆಂದು ಗೊತ್ತಿದ್ದರೂ ಮಕ್ಕಳು ಯಾಕೆ ಹೀಗೆ ನಡೆದುಕೊಳ್ಳುತ್ತಾರೋ? ಆದರೆ ಭವಿಷ್ಯದಲ್ಲಿ ಮಕ್ಕಳು ನಮ್ಮೊಂದಿಗೆ ಇರುತ್ತಾರೋ ಇಲ್ಲವೋ ಯಾರಿಗೆ ಗೊತ್ತು. ಹಾಗಾಗಿ ನಮ್ಮ ಜೀವನದ ಭದ್ರತೆ ನಾವು ನೋಡಿಕೊಳ್ಳಬೇಕು ಅನ್ನೋದು ಮಾತ್ರ ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ