ತಂದೆ ಮಕ್ಕಳ ಆಸ್ತಿ ವಿವಾದಕ್ಕೆ ಸಿಲುಕಿದ ಸರ್ಕಾರಿ ಶಾಲೆ; ಬೀದಿಗೆ ಬಿದ್ದ ನೂರಾರು ಮಕ್ಕಳು

ಶಾಲಾ ಹಂಚುಗಳು ಹಾಗೂ ಮೇಲ್ಛಾವಣಿ ಹಾಳಾದ ಹಿನ್ನಲೆ 2017 ರಲ್ಲಿ ರಿಪೇರಿ ಕಾರ್ಯ ಪ್ರಾರಂಭಿಸಲಾಯಿತು. ಆಗಿನಿಂದ ಇವತ್ತಿನವರೆಗೂ ದುರಸ್ಥಿ ಮಾಡಲು ಬಿಡದೆ ತಕರಾರು ಮಾಡುತ್ತಿದ್ದಾರೆ

G Hareeshkumar | news18-kannada
Updated:February 22, 2020, 5:51 PM IST
ತಂದೆ ಮಕ್ಕಳ ಆಸ್ತಿ ವಿವಾದಕ್ಕೆ ಸಿಲುಕಿದ ಸರ್ಕಾರಿ ಶಾಲೆ; ಬೀದಿಗೆ ಬಿದ್ದ ನೂರಾರು ಮಕ್ಕಳು
ಸರ್ಕಾರಿ ಶಾಲೆ
  • Share this:
ಚಿಕ್ಕೋಡಿ(ಫೆ. 22): ಶಾಲಾ ದುರಸ್ಥಿಗೆಂದು ತೆಗೆದ ಸರಕಾರಿ ಶಾಲೆಯನ್ನು ಜಾಗದ ಮಾಲಿಕರು ದುರಸ್ಥಿ ಮಾಡಲು ಬಿಡದ ಪರಿಣಾಮ ಬೀದಿಯಲ್ಲೇ ಮಕ್ಕಳು ಶಾಲೆ ಕಲಿಯುವಂತಹ ಪರಿಸ್ಥಿತಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೆಮಲಾಪುರ ಗ್ರಾಮದಲ್ಲಿ ನಿರ್ಮಾಣವಾಗಿದೆ. ಅದು 70 ವರ್ಷದ ಹಳೆಯ ಶಾಲೆ. ಭೂದಾನಿಯೊಬ್ಬರು ಜಮೀನು ದಾನ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುವು ಮಾಡಿಕೊಟ್ಟಿದ್ದರು. ಆದರೆ, ಭೂದಾನಿಯ ಮಗ ಬಂದು ಶಾಲೆಯ ಜಮೀನು ಇಲ್ಲಿ ಬರಲ್ಲ, ನಿಮ್ಮ ಜಮೀನು ಬೇರೆಡೆಗೆ ಬರುತ್ತೆ ಎಂದು ಶಾಲೆಯ ರಿಪೇರಿ ಕೆಲಸವನ್ನ ಸ್ಥಗಿತಗೊಳಿಸಿದ್ದಾರೆ. ಪರಿಣಾಮ ಮಕ್ಕಳು ಬೀದಿಗೆ ಬಿದ್ದಿದ್ದಾರೆ.

1951 ರಲ್ಲಿ ತೋಟದ ಪ್ರದೇಶದಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ 1 ರಿಂದ 7 ನೆ ತರಗತಿ ವರೆಗೆ ಸದ್ಯ 109 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಟ್ಟು 7 ಕೊಠಡಿಗಳು ಇದ್ದು 4 ಕೊಠಡಿಗಳನ್ನ ದುರಸ್ಥಿ ಮಾಡಲು ತೆಗೆದಿದ್ದಾರೆ. ಆದರೆ, ಶಾಲೆಗೆ ದಾನ ಕೊಟ್ಟಿರುವ ಜಾಗದ ಮಾಲೀಕ ಮಲ್ಲಯ್ಯ ಮಠಪತಿ ಮಾತ್ರ ಶಾಲೆ ದುರಸ್ಥಿ ಮಾಡಲು ವಿರೋಧಿಸುತ್ತಿದ್ದಾರೆ. ಮಲ್ಲಯ್ಯ ಮಠಪತಿ ತಂದೆ ನಿರುಪಾದಯ್ಯ 10 ಗುಂಟೆ ಜಾಗವನ್ನ ಶಾಲೆ ನಿರ್ಮಾಣಕ್ಕೆ ದಾನ ಮಾಡಿದರು. 69 ವರ್ಷಗಳವರೆಗೂ ಶಾಲೆ ಚೆನ್ನಾಗಿಯೇ ನಡೆದಿದೆ. ಶಾಲಾ ಹಂಚುಗಳು ಹಾಗೂ ಮೇಲ್ಛಾವಣಿ ಹಾಳಾದ ಹಿನ್ನಲೆ 2017 ರಲ್ಲಿ ರಿಪೇರಿ ಕಾರ್ಯ ಪ್ರಾರಂಭಿಸಲಾಯಿತು. ಆಗಿನಿಂದ ಇವತ್ತಿನವರೆಗೂ ದುರಸ್ಥಿ ಮಾಡಲು ಬಿಡದೆ ತಕರಾರು ಮಾಡುತ್ತಿದ್ದಾರೆ. ಪರಿಣಾಮ ಮಕ್ಕಳು ಕೊಠಡಿಗಳಿಲ್ಲದೆ ಶಾಲೆ ಆವರಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇನ್ನು ಶಾಲೆಗೆ ಹೆಚ್ಚುವರಿಯಾಗಿ 3 ಗುಂಟೆ ಜಮೀನು ಬಂದಿದೆ. ಆ ಕಾರಣಕ್ಕಾಗಿ ಜಮೀನು ಮಾಲೀಕ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನೊಂದೆಡೆ ಜಮೀನು ಮಾಲೀಕ ಮಲ್ಲಯ್ಯ ಮಠಪತಿಯನ್ನ ಕೇಳಿದರೆ, ನಾವು ಜಮೀನು ಕೊಟ್ಟಿದ್ದು ನಿಜ. ಆದರೆ, ಬೇರೆಡೆಗೆ ಜಮೀನು ನೀಡಲಾಗಿದೆ. ಸರ್ಕಾರಿ ಶಾಲೆ ಇರುವ ಚೆಕ್​​​ಬಂದಿ ಹುಡುಕಿ ಶಾಲೆಯನ್ನ ಅಲ್ಲಿ ಕಟ್ಟಿಕೊಳ್ಳಿ. ಈಗ ಈ ಶಾಲೆ ನನ್ನ ಜಾಗವನ್ನ ಅತಿಕ್ರಮಣ ಮಾಡಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ :  ಪಾಠದೊಂದಿಗೆ ಪರಿಸರ ಪ್ರೀತಿ ಹೇಳುವ ಕಲ್ಮಡ ಸರ್ಕಾರಿ ಪ್ರಾಥಮಿಕ ಶಾಲೆ

ಇನ್ನು, ಜಮೀನು ವಿವಾದ ಬಗೆಹರಿಸುವಂತೆ ರಾಯಬಾಗ ತಹಶೀಲ್ದಾರ್​​ ಅವರಿಗೆ ಇಲ್ಲಿನ ಶಿಕ್ಷಕರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ. ಇದುವರೆಗೂ ಬಂದು ಸಮಸ್ಯೆಯನ್ನು ಕೇಳಿಲ್ಲ ಎಂದು ಇಲ್ಲಿನ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಜಮೀನು ವಿವಾದಕ್ಕೆ ಮಕ್ಕಳು ಪರದಾಡುವಂತಾಗಿದೆ. ಇನ್ನಾದರೂ ತಹಶಿಲ್ದಾರ್​ ಭೇಟಿ ನೀಡಿ ಶಾಲೆಯ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕಿದೆ.

 (ವರದಿ : ಲೊಹೀತ್ ಶಿರೋಳ )
First published: February 22, 2020, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading