ರಾಮನಗರ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಕೌಂಟ್‌ಡೌನ್ ಶುರುವಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಅಭ್ಯರ್ಥಿಗಳಿಂದ ಹಿಡಿದು ಕಾರ್ಯಕರ್ತರ ತನಕ ಎಲ್ಲರೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಡಗರದಿಂದ ಪಾಲ್ಗೊಳ್ಳುತ್ತಿದ್ದಾರೆ. ಇದರ ಜೊತೆಗೆ ರಾಮನಗರದಲ್ಲಿ (Ramanagara) ಕೂಡ ಮತದಾನ ಕಾವು ರಂಗೇರಿಸಿದೆ.
ವಿಧಾನಸಭಾ ಚುನಾವಣೆಯ ಹೈವೋಲ್ಟೇಜ್ ಜಿಲ್ಲೆಗಳ ಪೈಕಿ ಮುಂಚೂಣಿಯಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಇಂದು ಘಟಾನುಘಟಿ ರಾಜಕೀಯ ನಾಯಕರು ಮತದಾನ ಮಾಡಲಿದ್ದಾರೆ. ವಿಶೇಷ ಅಂದ್ರೆ ಈ ಬಾರಿಯ ಚುನಾವಣೆಯಲ್ಲಿ ಇಬ್ಬರು ಮುಖ್ಯಮಂತ್ರಿ ಗಾದಿಯ ಆಕಾಂಕ್ಷಿಗಳು ಕೂಡ ರಾಮನಗರ ಜಿಲ್ಲೆಯಿಂದ ಮತದಾನ ಮಾಡಲಿದ್ದಾರೆ. ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದೇ ರಾಮನಗರ ಜಿಲ್ಲೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಇದನ್ನೂ ಓದಿ: Karnataka Election 2023: ಗಡಿ ಜಿಲ್ಲೆಗಳಲ್ಲಿ ಖಾಕಿ ಹೈ ಅಲರ್ಟ್; ಹೊರ ರಾಜ್ಯಗಳಿಂದ ಬರುವ ವಾಹನಗಳ ತೀವ್ರ ತಪಾಸಣೆ
ರಾಮನಗರದಲ್ಲಿ ಘಟಾನುಘಟಿಗಳು
ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಯಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಜೊತೆಗೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತದಾನ ಮಾಡಲಿದ್ದಾರೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿ ತಮ್ಮ ಹುಟ್ಟೂರು ಕನಕಪುರದ ದೊಡ್ಡಾಲಹಳ್ಳಿಯಲ್ಲಿ ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಹುಟ್ಟೂರಲ್ಲಿ ಸಿಪಿವೈ ಮತದಾನ
ಇನ್ನು ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ತಮ್ಮ ಹುಟ್ಟೂರಾದ ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಮತದಾನ ಮಾಡಲಿದ್ದಾರೆ. ಮಾಗಡಿಯ ಹುಲಿಕಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್‌ಡಿ ಬಾಲಕೃಷ್ಣ ಅವರು ಮತದಾನ ಮಾಡಲಿದ್ದು, ಬಿಡದಿಯ ಭೈರಮಂಗಲದಲ್ಲಿ ಮಾಗಡಿ ಜೆಡಿಎಸ್ ಅಭ್ಯರ್ಥಿ ಎ ಮಂಜು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಒಟ್ನಲ್ಲಿ ರಾಮನಗರ ಜಿಲ್ಲೆ ಈ ಬಾರಿಯ ಚುನಾವಣೆಯಲ್ಲಿ ಹೈವೋಲ್ಟೇಜ್ ಜಿಲ್ಲೆಯಾಗಿ ಪರಿಣಮಿಸಿದ್ದು, ರಾಜ್ಯ ರಾಜಕೀಯದ ಘಟಾನುಘಟಿಗಳು ಇದೇ ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದಾರೆ. ವಿಶೇಷ ಅಂದ್ರೆ ಅವರೆಲ್ಲರ ರಾಜಕೀಯ ಭವಿಷ್ಯ ಇಂದು ಸಂಜೆ ಹೊತ್ತಿಗೆ ಮತಪೆಟ್ಟಿಗೆಯಲ್ಲಿ ಭದ್ರವಾಗಿ ಲಾಕ್ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ