ಕಟ್ಟರ್​ ಹಿಂದುತ್ವ, ಆರ್​ಎಸ್​ಎಸ್​ ಬೆಂಬಲ: ಜೂನಿಯರ್​​ ಪ್ರತಾಪ್​ ಸಿಂಹ ಎಂದೇ ಕರೆಸಿಕೊಳ್ಳುವ ತೇಜಸ್ವಿ ಸೂರ್ಯ ಯಾರು?

Profile of Tejasvi Surya | ಪ್ರಬಲ ಟಿಕೆಟ್​​ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಅನಂತಕುಮಾರ್​​ಗೆ ಟಿಕೆಟ್​​ ಕೈ ತಪ್ಪಿದ್ದು, ಅನಂತಕುಮಾರ್​​ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.ಇದು ಚುನಾವಣೆಯಲ್ಲಿ ಜನಾಭಿಪ್ರಾಯವಾಗಿ ಬದಲಾಗಲಿದೆಯಾ, ಅಥವಾ ಯುವ ಅಭ್ಯರ್ಥಿಯನ್ನು ಜನ ಆರಿಸಿ ಸಂಸತ್ತಿಗೆ ಕಳಿಸುತ್ತಾರ ಎಂಬುದನ್ನು ಕಾದು ನೋಡಬೇಕು

Latha CG | news18
Updated:April 22, 2019, 6:08 PM IST
ಕಟ್ಟರ್​ ಹಿಂದುತ್ವ, ಆರ್​ಎಸ್​ಎಸ್​ ಬೆಂಬಲ: ಜೂನಿಯರ್​​ ಪ್ರತಾಪ್​ ಸಿಂಹ ಎಂದೇ ಕರೆಸಿಕೊಳ್ಳುವ ತೇಜಸ್ವಿ ಸೂರ್ಯ ಯಾರು?
ತೇಜಸ್ವಿ ಸೂರ್ಯ
  • News18
  • Last Updated: April 22, 2019, 6:08 PM IST
  • Share this:
ಬೆಂಗಳೂರು: ತೇಜಸ್ವಿ ಸೂರ್ಯ ವಿದ್ಯಾರ್ಥಿಯಾಗಿದ್ದಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ (ಎಬಿವಿಪಿ) ಸಂಘಟನೆಯಿಂದ ಗುರುತಿಸಿಕೊಂಡ ಯುವ ನಾಯಕ. ವಿದ್ಯಾರ್ಥಿ ಸಂಘಟನೆಯ ಅನೇಕ ಗಲಾಟೆಗಳು, ಪ್ರತಿಭಟನೆಗಳಲ್ಲಿ ಭಾಗವಹಿಸಿ ತನ್ನದೇ ಛಾಪನ್ನು ಮೂಡಿಸಿದ್ದರು. ತೇಜಸ್ವಿ ಸೂರ್ಯ ಬಾಲ್ಯದಿಂದಲೇ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸಿದ್ಧಾಂತಕ್ಕೆ ಮಾರು ಹೋಗಿದ್ದರು. ಆರ್​​ಎಸ್​ಎಸ್​​ನ ಭಾಗವಾದ ಎಬಿವಿಪಿ ಸಂಘಟನೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ರೂಪುಗೊಳ್ಳುವವರೆಗೆ ಬೆಳೆಸಿದ್ದು, ಪ್ರೋತ್ಸಾಹ ನೀಡಿದ್ದು ಅವರ ಚಿಕ್ಕಪ್ಪ ರವಿ ಸುಬ್ರಹ್ಮಣ್ಯ ಅನಂತರಾಮಯ್ಯ ಲಕ್ಯ.

ಬೆಂಗಳೂರಿನ ಬಸವನಗುಡಿಯ ಶಾಸಕ ರವಿ ಸುಬ್ರಹ್ಮಣ್ಯ ಅವರ ಅಣ್ಣನ ಮಗನೇ ಈ ತೇಜಸ್ವಿ ಸೂರ್ಯ. ಮೂಲತಃ ಚಿಕ್ಕಮಗಳೂರಿನವರಾದ ತೇಜಸ್ವಿ ಸೂರ್ಯ ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲೇ. ಬೆಂಗಳೂರಿನಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಜಯನಗರದ ನ್ಯಾಷನಲ್​ ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡಿದರು. ತೇಜಸ್ವಿ ಅವರ ಪೂರ್ಣ ಹೆಸರು ತೇಜಸ್ವಿ ಸೂರ್ಯನಾರಾಯಣ ಅನಂತರಾಮಯ್ಯ ಲಕ್ಯ. ಇವರ ತಂದೆ - ಸೂರ್ಯ ನಾರಾಯಣ ಅನಂತರಾಮಯ್ಯ ಲಕ್ಯ.ಬ್ರಾಹ್ಮಣ ಸಮುದಾಯಕ್ಕೆ ಸೇರಿದ ರವಿ ಸುಬ್ರಹ್ಮಣ್ಯ ಬಸವನಗುಡಿಯಲ್ಲಿ ತಮ್ಮ ಅಧಿಪತ್ಯವನ್ನು ಸಾಧಿಸಲು ಪ್ರಯತ್ನಿಸಿದ್ದರು. ಕಾಂಗ್ರೆಸ್​​ ಶಾಸಕರಾಗಿದ್ದ ಚಂದ್ರಶೇಖರ್​ ಅವರನ್ನು ದಲಿತ ಎಂದು ಬಿಂಬಿಸಿ, ಅಲ್ಲಿಯೂ ಸಹ ತಮ್ಮ ಬ್ರಾಹ್ಮಣ ಪಾರುಪತ್ಯವನ್ನು ಸಾಧಿಸಿದ್ದರು, ಎನ್ನುತ್ತಾರೆ ಆರ್​ಎಸ್​ಎಸ್​ನಲ್ಲೇ ಇರುವ ವ್ಯಕ್ತಿಯೊಬ್ಬರು.

ಇದನ್ನೂ ಓದಿ:'ಯಾರೀತ ತೇಜಸ್ವಿ ಸೂರ್ಯ? ಈತ ಯಾರೆಂಬುದೇ ನಮಗೆ ಗೊತ್ತಿಲ್ಲ'; ಬಿಜೆಪಿ ಕಾರ್ಯಕರ್ತರ ಅಸಮಾಧಾನದ ಮಾತು

ನಾಲ್ಕು ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡ ತೇಜಸ್ವಿ ತಮ್ಮ ಹಿಂದುತ್ವದ ಬಗೆಗಿನ ಭಾಷಣಗಳನ್ನು ಮಾಡುತ್ತಲೇ ಉತ್ತುಂಗಕ್ಕೆ ಏರಿದರು. ಎಬಿವಿಪಿಯ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ವಿದ್ಯಾರ್ಥಿ ಸಂಘಟನೆಯ ಯುವ ನಾಯಕನಾಗಿ ಗುರುತಿಸಿಕೊಂಡಿದ್ದರು. ಚಕ್ರವರ್ತಿ ಸೂಲಿಬೆಲೆ ಅವರಂತೆ ಉತ್ತಮ ವಾಗ್ಮಿಯಾದ ತೇಜಸ್ವಿ ಭಾಷಣಗಳ ಮೂಲಕವೇ ಜನರ ಮನಗೆಲ್ಲುತ್ತಿದ್ದರು. ಹೀಗಾಗಿ ತೇಜಸ್ವಿ ಅವರನ್ನು ಜೂನಿಯರ್​​ ಸೂಲಿಬೆಲೆ ಎಂದೇ ಕರೆಯಲಾಗುತ್ತದೆ, ಎನ್ನುತ್ತಾರೆ ಅವರ ನಿಕಟವರ್ತಿಯೊಬ್ಬರು. ತೇಜಸ್ವಿಯನ್ನು ಮೈಸೂರು - ಕೊಡಗು ಸಂಸದ ಪ್ರತಾಪ್​ ಸಿಂಹ ಅವರಿಗೆ ಹೋಲಿಸುವವರೂ ಇದ್ದಾರೆ.

ತೇಜಸ್ವಿ ಅವರು 'ಅರೈಸ್​ ಇಂಡಿಯಾ' ಎಂಬ ಸಾಮಾಜಿಕ ಸಂಸ್ಥೆಯನ್ನು ಹುಟ್ಟುಹಾಕಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನ ಕಾರ್ಯದರ್ಶಿಯಾಗಿದ್ದರು. ತೇಜಸ್ವಿ ಅವರು 2013-14 ರವರೆಗೆ 'ಇಂಡಿಯಾ ಫ್ಯಾಕ್ಟ್ಸ್'​​​​ ಎಂಬ ಸುದ್ದಿಸಂಸ್ಥೆಯಲ್ಲಿ ಅಂಕಣಕಾರರಾಗಿ ಕೆಲಸ ಮಾಡಿದ್ದಾರೆ. ಬಿಜೆಪಿಯ ರಾಜ್ಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.
ಕುಟುಂಬ ಸದಸ್ಯರೊಂದಿಗೆ ತೇಜಸ್ವಿ ಸೂರ್ಯ


ವಿದ್ಯಾರ್ಥಿ ದೆಸೆಯಿಂದಲೇ ಅನೇಕ ಪ್ರತಿಭಟನೆಗಳು, ಸಮ್ಮೇಳನಗಳಲ್ಲಿ ಪಾಲ್ಗೊಳ್ಳುತ್ತಿದ್ದ ತೇಜಸ್ವಿ ಓದಿದ್ದು ಎಲ್​ಎಲ್​​ಬಿ. ವಕೀಲ ವೃತ್ತಿಯಲ್ಲಿಯೂ ಸಹ ಹೋರಾಟ ಮಾಡಿದವರು. ಪೋಸ್ಟ್​​ ಕಾರ್ಡ್​ ಎಂಬ ವೆಬ್​​ಸೈಟ್​​ ಅಡ್ಮಿನ್ ಮಹೇಂದ್ರ ವಿಕ್ರಂ ಹೆಗ್ಡೆ ಅವರನ್ನು​​ ಸುಳ್ಳು ಸುದ್ದಿ ಹರಡುತ್ತಿರುವ ಆರೋಪದ ಮೇಲೆ ಜೈಲಿಗೆ ಹಾಕಿದ್ದರು. ಆಗ ಅವರ ಪರ ವಾದ ಮಾಡಿ ಮಾಡಿದವರು ಇದೇ ತೇಜಸ್ವಿ. ಇದೇ ರೀತಿ ಹಲವು ಕಟ್ಟರ್​​ ಹಿಂದುತ್ವವಾದಿಗಳು ಜೈಲು ಪಾಲಾದಾಗ ಅವರ ಪರ ಹಣವನ್ನೂ ಪಡೆಯದೇ ವಾದ ಮಾಡಿದ್ದಾರೆ ತೇಜಸ್ವಿ.

ಬಳಿಕ ವಕೀಲ ವೃತ್ತಿಯಿಂದ ವಿರಾಮ ಪಡೆದು ಸಂಪೂರ್ಣವಾಗಿ ಬಿಜೆಪಿ ಕಾರ್ಯಕರ್ತರಾಗಿ ಹಲವಾರು ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಪಕ್ಷದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಚಿಕ್ಕಪ್ಪ ರವಿ ಸುಬ್ರಹ್ಮಣ್ಯ ಅವರು ತೇಜಸ್ವಿ ಅವರ ಬೆನ್ನೆಲುಬಾಗಿ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದ್ದರು. ತೇಜಸ್ವಿ ಆರ್​​ಎಸ್​​ಎಸ್​​ನ ಕೆಲವೊಂದು ಕಾರ್ಯಕ್ರಮಗಳಲ್ಲಿಯೂ ಸಹ ಕಾಣಿಸಿಕೊಳ್ಳುತ್ತಿದ್ದರು. ಸದ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರುವ ತೇಜಸ್ವಿ ಸೂರ್ಯ ಪಕ್ಷದ ಸಾಮಾಜಿಕ ಜಾಲತಾಣ ನಿರ್ವಹಣಾ ತಂಡದ ಸದಸ್ಯರೂ ಹೌದು.ತೇಜಸ್ವಿ ಸೂರ್ಯ ಅವರು ಶಾಲಾದಿನಗಳಿಂದಲೂ ಅನಂತಕುಮಾರ್ ಕುಟುಂಬದ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಅವರ ಜೊತೆ ಉತ್ತಮ ಒಟನಾಟ, ಬಾಂಧವ್ಯ ಇಟ್ಟುಕೊಂಡಿದ್ದರು. ತನ್ನ ಮೊದಲ ರಾಜಕೀಯ ಗುರು ಅನಂತಕುಮಾರ್​ ಎಂದು ಅವರೇ ಹೇಳಿಕೊಂಡಿದ್ದಾರೆ. ತೇಜಸ್ವಿ ಅನಂತಕುಮಾರ್​​​ ಅವರ ಮಾರ್ಗದರ್ಶನ, ತತ್ವಗಳನ್ನು ಅನುಸರಿಸಿ ಬೆಳೆದರು.ತೇಜಸ್ವಿ ಸೂರ್ಯರನ್ನು ಹತ್ತಿರದಿಂದ ನೋಡಿರುವ ಮತ್ತು ಆರ್​ಎಸ್​ಎಸ್​ನಲ್ಲಿ ಒಂದು ಕಾಲದಲ್ಲಿ ಸಕ್ರಿಯರಾಗಿದ್ದ ವ್ಯಕ್ತಿಯೊಬ್ಬರು ಹೇಳುವ ಪ್ರಕಾರ,
"ಬಿಜೆಪಿ ಭದ್ರಕೋಟೆ ಬೆಂಗಳೂರು ದಕ್ಷಿಣದಲ್ಲಿ ಬ್ರಾಹ್ಮಣರ ಅಧಿಪತ್ಯವನ್ನು ಸ್ಥಾಪಿಸಲು ಆರ್​ಎಸ್​ಎಸ್​ ವಕ್ತಾರ ಬಿ.ಎಲ್​. ಸಂತೋಷ್​ ಹುನ್ನಾರ ನಡೆಸಿ ಕಡೆಯ ಕ್ಷಣದಲ್ಲಿ ತೇಜಸ್ವಿನಿ ಅನಂತಕುಮಾರ್​ಗೆ ಟಿಕೆಟ್​ ತಪ್ಪಿಸಿದ್ದಾರೆ. ಆರ್​​ಎಸ್​​ಎಸ್​​ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ತೇಜಸ್ವಿ ಮೇಲೆ ಸಂತೋಷ್​​ ಕಣ್ಣಿಟ್ಟಿದ್ದರು. ಹೀಗಾಗಿ ಯುವ ಕಾರ್ಯಕರ್ತ, ಯುವನಾಯಕ ಎಂದು ಗುರುತಿಸಿಕೊಂಡಿದ್ದ ತೇಜಸ್ವಿ​​ಗೆ ಬೆಂಗಳೂರು ದಕ್ಷಿಣದಲ್ಲಿ ಟಿಕೆಟ್​ ಕೊಡಿಸಲು ಹೈ ಕಮಾಂಡ್​​​​ಗೆ ಒತ್ತಡ ಹಾಕಿದ್ದರು. ಅದರಂತೆ ಈಗ ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣದಲ್ಲಿ ಟಿಕೆಟ್​​ ಸಿಕ್ಕಿದೆ."

ಪ್ರಬಲ ಟಿಕೆಟ್​​ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಅನಂತಕುಮಾರ್​​ಗೆ ಟಿಕೆಟ್​​ ಕೈ ತಪ್ಪಿದ್ದು, ಅನಂತಕುಮಾರ್​​ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.ಇದು ಚುನಾವಣೆಯಲ್ಲಿ ಜನಾಭಿಪ್ರಾಯವಾಗಿ ಬದಲಾಗಲಿದೆಯಾ, ಅಥವಾ ಯುವ ಅಭ್ಯರ್ಥಿಯನ್ನು ಜನ ಆರಿಸಿ ಸಂಸತ್ತಿಗೆ ಕಳಿಸುತ್ತಾರಾ ಎಂಬುದನ್ನು ಕಾದು ನೋಡಬೇಕು.

First published: March 26, 2019, 3:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading