HOME » NEWS » State » PROBABLE LIST OF PORTFOLIO DISTRIBUTION AND RESHUFFLE IN BSY CABINET KGV SNVS

BSY Cabinet - ನೂತನ ಸಚಿವರಿಗೆ ಖಾತೆ ಹಂಚಿಕೆ; 10 ಮಂದಿಗೆ ಖಾತೆ ಬದಲಾವಣೆ; ಇಲ್ಲಿದೆ ಪಟ್ಟಿ

ನೂತನ ಸಚಿವರ ಪೈಕಿ ಅರವಿಂದ್ ಲಿಂಬಾವಳಿ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಿಕ್ಕಿರುವ ಖಾತೆಗಳು ತೃಪ್ತಿ ತಂದಿಲ್ಲ. ಹಾಲಿ ಸಚಿವರಾದ ಮಾಧು ಸ್ವಾಮಿ, ಗೋಪಾಲಯ್ಯ, ಸುಧಾಕರ್ ಮೊದಲಾದವರಿಗೆ ಖಾತೆ ಬದಲಾವಣೆ ವಿಚಾರ ಸಮಾಧಾನ ತಂದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

news18-kannada
Updated:January 21, 2021, 1:17 PM IST
BSY Cabinet - ನೂತನ ಸಚಿವರಿಗೆ ಖಾತೆ ಹಂಚಿಕೆ; 10 ಮಂದಿಗೆ ಖಾತೆ ಬದಲಾವಣೆ; ಇಲ್ಲಿದೆ ಪಟ್ಟಿ
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು(ಜ. 21): ಹಲವು ತಿಂಗಳ ವಿಳಂಬದ ಬಳಿಕ ಸಂಪುಟ ವಿಸ್ತರಣೆ ಮಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ಏಳು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಜೊತೆಗೆ ಹತ್ತು ಮಂದಿ ಹಾಲಿ ಸಚಿವರ ಖಾತೆ ಬದಲಾವಣೆಗಳನ್ನೂ ಮಾಡಲಾಗಿದೆ. ನೂತನ ಸಚಿವರು ನಿರೀಕ್ಷಿಸಿದಂತೆ ದೊಡ್ಡ ಖಾತೆಗಳು ಸಿಕ್ಕಿಲ್ಲ. ಎಂಟಿಬಿ ನಾಗರಾಜ್ ಅವರಿಗೆ ಅಬಕಾರಿ ಸಿಕ್ಕಿದೆ. ಮುರುಗೇಶ್ ನಿರಾಣಿ ಅವರಿಗೆ ಗಣಿಗಾರಿಕೆ ಖಾತೆ ಸಿಗುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿಯ ಪ್ರಮುಖ ಮುಖಂಡರಲ್ಲೊಬ್ಬರೆನಿಸಿರುವ ಅರವಿಂದ್ ಲಿಂಬಾವಳಿ ಅವರಿಗೆ ಅರಣ್ಯ ಖಾತೆ ಸಿಕ್ಕಿದೆ ಎಂದೆನ್ನಲಾಗುತ್ತಿದೆ. ಖಾತೆ ಬದಲಾವಣೆ ಆದ ಬಹುತೇಕರಿಗೆ ಅತೃಪ್ತಿ ಮನೆ ಮಾಡಿದೆ. ಕೆಲವರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಏಳು ನೂತನ ಸಚಿವರಿಗೆ ಸಿಕ್ಕಿರುವ ಖಾತೆಗಳು:

1) ಲಿಂಬಾವಳಿ - ಅರಣ್ಯ
2) ಎಂಟಿಬಿ ನಾಗರಾಜ್ - ಅಬಕಾರಿ
3) ಉಮೇಶ್ ಕತ್ತಿ - ಆಹಾರ ಮತ್ತು ನಾಗರಿಕ ಪೂರೈಕೆ
4) ಮುರುಗೇಶ್ ನಿರಾಣಿ - ಗಣಿಗಾರಿಕೆ
5) ಸಿಪಿ ಯೋಗೇಶ್ವರ್ - ಸಣ್ಣ ನೀರಾವರಿ6) ಎಸ್ ಅಂಗಾರ - ಮೀನುಗಾರಿಕೆ ಮತ್ತು ಬಂದರು
7) ಆರ್ ಶಂಕರ್ - ಪೌರಾಡಳಿತ ಮತ್ತು ರೇಷ್ಮೆ

ಹಾಲಿ ಸಚಿವರ ಖಾತೆ ಅದಲುಬದಲು:
ಡಾ ಸುಧಾಕರ್ – ಆರೋಗ್ಯ (ವೈದ್ಯಕೀಯ ಶಿಕ್ಷಣ ಖಾತೆ ಹಿಂಪಡೆಯಲಾಗಿದೆ)
ಆನಂದ್ ಸಿಂಗ್ - ಪ್ರವಾಸೋದ್ಯಮ ಮತ್ತು ಪರಿಸರ (ಹಿಂದೆ ಅರಣ್ಯ ಇಲಾಖೆ ಹೊಂದಿದ್ದರು)
ಪ್ರಭು ಚವಾಣ್ - ಪಶು ಸಂಗೋಪಣೆ (ವಕ್ಫ್ ಮತ್ತು ಹಜ್ ಖಾತೆ ಕೈತಪ್ಪಿದೆ)
ಗೋಪಾಲಯ್ಯ - ತೋಟಗಾರಿಕೆ ಮತ್ತು ಸಕ್ಕರೆ (ಆಹಾರ-ನಾಗರಿಕ ಸರಬರಾಜು ಖಾತೆ ಇತ್ತು)
ನಾರಾಯಣಗೌಡ - ಯುವಜನ ಸೇವೆ ಮತ್ತು ಕ್ರೀಡೆ (ಪೌರಾಡಳಿತ, ತೋಟಗಾರಿಕೆ, ರೇಷ್ಮೆ ಖಾತೆ ಹೊಂದಿದ್ದರು)
ಬಸವರಾಜ ಬೊಮ್ಮಾಯಿ - ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ (ಹೆಚ್ಚುವರಿ)
ಮಾಧುಸ್ವಾಮಿ – ವೈದ್ಯಕೀಯ, ಕನ್ನಡ ಮತ್ತು ಸಂಸ್ಕೃತಿ (ಕಾನೂನು, ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಖಾತೆ ಹೊಂದಿದ್ದರು)
ಸಿಸಿ ಪಾಟೀಲ್ - ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ (ಗಣಿಗಾರಿಕೆ ಖಾತೆ ಕೈತಪ್ಪಿದೆ)
ಕೋಟ ಶ್ರೀನಿವಾಸ ಪೂಜಾರಿ – ಮುಜರಾಯಿ ಮತ್ತು ಹಿಂದುಳಿದ ವರ್ಗ (ಮೀನುಗಾರಿಕೆ ಮತ್ತು ಬಂದರು ಖಾತೆ ಹೊಂದಿದ್ದರು

ಇದನ್ನೂ ಓದಿ: ಉದ್ಧವ್ ಠಾಕ್ರೆಗೆ ಕೆಲಸವಿಲ್ಲ, ಅದಕ್ಕೆ ಬೆಳಗಾವಿ ನಮ್ಮದು ಎನ್ನುತ್ತಾರೆ: ಸಚಿವ ಶ್ರೀಮಂತ ಪಾಟೀಲ್ ಕಿಡಿ

ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಡಾ. ಸುಧಾಕರ್, ಗೋಪಾಲಯ್ಯ, ನಾರಾಯಣ ಗೌಡ, ಮಾಧುಸ್ವಾಮಿ ಮೊದಲಾದವರಿಗೆ ಖಾತೆ ಹಂಚಿಕೆ ಮತ್ತು ಖಾತೆ ಬದಲಾವಣೆ ತೃಪ್ತಿ ತಂದಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಅಬಕಾರಿ ಖಾತೆ ಪಡೆದಿರುವ ಎಂಟಿಬಿ ನಾಗರಾಜ್ ತನಗೆ ಭರವಸೆ ನೀಡಿದಂತೆ ಒಳ್ಳೆಯ ಖಾತೆ ಯಾಕೆ ಕೊಟ್ಟಿಲ್ಲ ಎಂದು ಯಡಿಯೂರಪ್ಪ ಮೇಲೆ ಮುನಿಸಿಕೊಂಡಿದ್ಧಾರಂತೆ. ತಮಗೆ ನಗರಾಭಿವೃದ್ಧಿ, ಇಂಧನ ಖಾತೆಗೆ ಪಟ್ಟು ಹಿಡಿದಿದ್ದಾರೆ. ಇಂದು ಸಿಎಂ ಅವರನ್ನ ಭೇಟಿಯಾಗಿ ತಮ್ಮ ಕೋಪ ವ್ಯಕ್ತಪಡಿಸಿರುವ ವಿಚಾರ ತಿಳಿದುಬಂದಿದೆ. ಹೆಚ್ ನಾಗೇಶ್ ಅವರ ಕೈಯಲ್ಲಿದ್ದ ಅಬಕಾರಿ ಖಾತೆಯನ್ನು ಒಳ್ಳೆಯರಿಗೆ ನೀಡಬೇಕಿತ್ತು. ಅದಕ್ಕೆ ತಮಗೆ ನೀಡಿದ್ದೇನೆ. ಸ್ವಲ್ಪ ದಿನದ ಬಳಿಕ ತಮಗೆ ಬೇರೆ ಒಳ್ಳೆಯ ಖಾತೆ ಕೊಡುತ್ತೇನೆ ಎಂದು ಎಂಟಿಬಿ ನಾಗರಾಜ್ ಅವರಿಗೆ ಯಡಿಯೂರಪ್ಪ ಮತ್ತೊಮ್ಮೆ ಆಶ್ವಾಸನೆ ಕೊಟ್ಟಿದ್ದಾರೆನ್ನಲಾಗಿದೆ.

ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಖಾತೆಗಳನ್ನ ನಿರ್ವಹಿಸುತ್ತಿದ್ದ ಗೋಪಾಲಯ್ಯ ಅವರಿಗೆ ಈಗ ತೋಟಗಾರಿಕೆ ಮತ್ತು ಸಕ್ಕರೆ ಖಾತೆಗಳನ್ನ ಕೊಡಲಾಗಿದೆ. ಇದರಿಂದ ಗೋಪಾಲಯ್ಯ ಅಸಮಾಧಾನಗೊಂಡಿದ್ದಾರೆ. ಇನ್ನೊಂದೆಡೆ, ಡಾ. ಕೆ ಸುಧಾಕರ್ ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನ ಹಿಂಪಡೆದು ಮಾಧುಸ್ವಾಮಿಗೆ ಕೊಡಲಾಗಿದೆ. ಆರೋಗ್ಯ ಸಚಿವರೂ ಆಗಿರುವ ಸುಧಾಕರ್ ಅವರಿಗೆ ಈ ಬೆಳವಣಿಗೆ ಅಸಮಾಧಾನ ತಂದಿದೆ. ಗೋಪಾಲಯ್ಯ ಮತ್ತು ಎಂಟಿಬಿ ನಾಗರಾಜ್ ಅವರು ಇಂದು ಡಾ ಸುಧಾಕರ್ ಮನೆಗೆ ಹೋಗಿ ಭೇಟಿ ಮಾಡಿರುವ ಬೆಳವಣಿಗೆ ಆಗಿದೆ.

ಇದನ್ನೂ ಓದಿ: ಪಾದಯಾತ್ರೆಗೆ ಸ್ಪಂದಿಸದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ; ಬಸವಜಯ ಮೃತ್ಯುಂಜಯ ಸ್ವಾಮೀಜಿ

ಮುಖ್ಯಮಂತ್ರಿಗಳ ಆಪ್ತ ಮಾಧುಸ್ವಾಮಿ ಅವರಿಗೆ ತಮ್ಮ ಬಳಿ ಇದ್ದ ಸಣ್ಣ ನೀರಾವರಿ ಖಾತೆಯನ್ನ ಹಿಂಪಡೆದದ್ದು ಬೇಸರ ತಂದಿರುವುದು ತಿಳಿದುಬಂದಿದೆ. ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಮಾಧು ಸ್ವಾಮಿ ತನಗೆ ಬೇಸರವಾಗಿಲ್ಲ. ಆದರೆ, ನೀರಾವರಿ ಅಭಿವೃದ್ಧಿ ಮಾಡುವ ತಮ್ಮ ಆಸೆ ಈಡೇರುತ್ತಿಲ್ಲ ಎಂಬುದಷ್ಟೇ ಅಸಮಾಧಾನ. ಆದರೆ, ವೈದ್ಯಕೀಯ ಶಿಕ್ಷಣ ಖಾತೆ ಸಿಕ್ಕಿರುವುದು ತನಗೆ ಸಿಕ್ಕ ಪ್ರೊಮೋಷನ್ ಆಗಿದೆ. ತಂಡದ ಕ್ಯಾಪ್ಟನ್ (ಯಡಿಯೂರಪ್ಪ) ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಣ್ಣ ನೀರಾವರಿ ಖಾತೆಯನ್ನು ನೂತನ ಸಚಿವ ಸಿಪಿ ಯೋಗೇಶ್ವರ್ ಅವರಿಗೆ ನೀಡಲಾಗಿದೆ. ಹಿಂದೆಯೂ ಯೋಗೇಶ್ವರ್ ಅವರು ಇದೇ ಖಾತೆ ಇರುವ ಮಂತ್ರಿಯಾಗಿದ್ದರು.

ವರದಿ: ಕೃಷ್ಣ ಜಿ. ವಿ. / ಚಿದಾನಂದ ಪಟೇಲ್
Published by: Vijayasarthy SN
First published: January 21, 2021, 11:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories