ಬೆಂಗಳೂರು, ಡಿ. 18: ಬೆಳಗಾವಿಯಲ್ಲಿ ಕನ್ನಡ ದ್ವಜ ಸುಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ದ್ವಂಸಗೊಳಿಸಿ ಎಂಇಎಸ್ ಸಂಘಟನೆಯವರು ಪುಂಡಾಡಿಕೆ ಮೆರೆಯುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ ನಡೆಸಲು ನಿರ್ಧರಿಸಿವೆ. ಕರ್ನಾಟಕ ರಕ್ಷಣಾ ವೇದಿಕೆಯ ಒಂದು ಬಣದ ಅಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಇಂದು ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಕನ್ನಡಪರ ಹೋರಾಟಗಾರರು ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಾಳೆ ಭಾನುವಾರ ಬೆಳಗ್ಗೆ 11 ಗಂಟೆಗೆ ಮೈಸೂರು ಬ್ಯಾಂಕ್ ಸರ್ಕಲ್ನಿಂದ ಬೆಳಗಾವಿ ಚಲೋ ಕಾರ್ಯಕ್ರಮ ಆರಂಭವಾಗಲಿದೆ. ಸೋಮವಾರ ಬೆಳಗ್ಗೆ ರ್ಯಾಲಿಗಳು ಬೆಳಗಾವಿಯ ಸುವರ್ಣ ಸೌಧ ತಲುಪುವ ನಿರೀಕ್ಷೆ ಇದೆ.
ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಬೆಂಬಲಿಗರು ಕಾರು, ಬೈಕು, ಬಸ್, ರೈಲುಗಳ ಮೂಲಕ ಹೊರಟು ಸೋಮವಾರ ಬೆಳಗ್ಗೆ ಬೆಳಗಾವಿ ತಲುಪಲು ಸೂಚನೆ ನೀಡಲಾಗಿದೆ. ನೆಲಮಂಗಲದ ಹಾದಿಯಲ್ಲಿ ಪುಣೆ ಹೆದ್ದಾರಿಯಲ್ಲಿ ರ್ಯಾಲಿಗಳು ಸಾಗಲಿವೆ. ಮಾರ್ಗದಲ್ಲಿ ಸಿಗುವ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ.
ಕನ್ನಡಪರ ಹೋರಾಟ ಮತ್ತು ಪ್ರತಿಭಟನೆಗೆ ದಲಿತ ಸಂಘಟನೆಗಳು, ರೈತ ಸಂಘಟನೆಗಳು, ರಾಯಣ್ಣ ಅಭಿಮಾನಿ ಸಂಘಟನೆಗಳು ಕೂಡ ಕೈಜೋಡಿಸಿವೆ. ಚಾಲುಕ್ಯ ಸರ್ಕಲ್ ಬಳಿಕ ಗಾಲ್ಫ್ ಕ್ಲಬ್ನಲ್ಲಿ ಇಂದು ನಡೆದ ಸಭೆಯಲ್ಲಿ ಎಲ್ಲಾ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ರೈತ ಮುಖಂಡ ಕುರುಬೂರು ಶಾಂತಕುಮಾರ್, ಕರವೇ ಮತ್ತೊಂದು ಬಣದ ನಾರಾಯಣಗೌಡ ಮೊದಲಾದವರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಬೆಳಗಾವಿ ಚಲೋ ಕಾರ್ಯಕ್ರಮ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು. ಕರ್ನಾಟಕ ಬಂದ್ಗೆ ಕರೆ ಕೊಡುವ ನಿಟ್ಟಿನಲ್ಲಿ ಚರ್ಚೆಯೂ ಆಯಿತು. ಆದರೆ, ಕಾದು ನೋಡಲು ನಿರ್ಧರಿಸಲಾಗಿದೆ. ಕನ್ನಡಕ್ಕಾಗಿ ಎಲ್ಲರೂ ಮನಸ್ತಾಪ ಬಿಟ್ಟು ಒಂದಾಗುವಂತೆ ಸಭೆಯಲ್ಲಿ ಸಾರ್ವತ್ರಿಕವಾಗಿ ಕರೆ ಕೊಡಲಾಗಿದೆ.
ಇದನ್ನೂ ಓದಿ: MES ಪುಂಡರನ್ನು ಸದೆಬಡೆಯುತ್ತೇವೆ ಎಂದ ಸಿಎಂ: ಕೈ ಕತ್ತರಿಸ್ತೇವೆ ಎಂದ ಹಿಂದೂ ಪರಿಷತ್ ಮುಖಂಡ
ಬೆಳಗಾವಿ ಕರ್ನಾಟಕದಲ್ಲಿ ಇದೆಯೋ ಅಥವಾ ಬೇರೆಲ್ಲಿಯಾದರೂ ಇದೆಯೋ ಎನ್ನುವ ಅನುಮಾನ ಕಾಡುತ್ತಿದೆ. ನಮ್ಮ ಸರ್ಕಾರ ಬೆಳಗಾವಿಯಲ್ಲಿ ಮಹಾಮೇಳ ಮಾಡಿದರೆ ಎಂಇಎಸ್ ಪುಂಡರು ಪ್ರತಿಭಟನೆ ಮಾಡುತ್ತಾರೆ. ಅದನ್ನು ನೋಡಿಯೂ ನಮ್ಮ ಸರ್ಕಾರ ಕೈಕಟ್ಟಿ ಕುಳಿತಿತ್ತು. ಹೀಗಾಗಿ ನಮ್ಮವರು ಮಸಿ ಬಳಿದರು. ಆದರೆ, ಕನ್ನಡಿಗರನ್ನೇ ಸರ್ಕಾರ ಜೈಲಿಗೆ ಕಳುಹಿಸಿತು. ಕನ್ನಡಿಗರನ್ನು ಬಗ್ಗುಬಡಿಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಶಿವಾಜಿ ಬಗ್ಗೆ ಸಿ.ಟಿ. ರವಿ ಪ್ರೀತಿ ತೋರಿಸುತ್ತಿದ್ದಾರೆ. ಇವರಿಗೆ ಸಂಗೊಳ್ಳಿ ರಾಯಣ್ಣ ಬಗ್ಗೆ ಪ್ರೀತಿ ಇಲ್ಲವಾ? ಎಂದು ಪ್ರವೀಶ್ ಶೆಟ್ಟಿ ಪ್ರಶ್ನೆ ಮಾಡಿದರು.
ಸಾ.ರಾ. ಗೋವಿಂದು, ವಾಟಾಳ್ ನಾಗರಾಜ್, ಕೋಡಿಹಳ್ಳಿ ಚಂದ್ರಶೇಖರ್, ನಾರಾಯಣಗೌಡ ಎಲ್ಲರೂ ಈ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಎಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಂಡು ಬೆಳಗಾವಿಗೆ ಹೋಗುವುದರ ಬಗ್ಗೆ ತೀರ್ಮಾನ ಮಾಡಿದೀವಿ. ಎಂಇಎಸ್ ಪುಂಡರನ್ನು ಬಗ್ಗುಬಡಿಯಲಿಲ್ಲ ಅಂದರೆ ಕನ್ನಡಪರ ಸಂಘಟನೆಗಳಿಂದ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದೂ ಕರವೇ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.
ಕುರುಬೂರು ಶಾಂತಕುಮಾರ್ ಟೀಕೆ:
ಕರ್ನಾಟಕದಿಂದ 25 ಜನ ಸಂಸದರಿದ್ದಾರೆ. ನಮ್ಮ ರಾಜ್ಯದ ಬಗ್ಗೆ ಇವರಾರೂ ಕೂಡ ಕೇಂದ್ರದ ಬಳಿ ಏನೂ ಮಾತನಾಡಲ್ಲ. ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಲ್ಲ ಎಂದು ಟೀಕಿಸಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದೂ ಆಗ್ರಹಿಸಿದ್ಧಾರೆ.
ಸಭೆಯಲ್ಲಿ ಭಾಗಿಯಾದ ಸಂಘಟನೆ ಹಾಗೂ ಅಧ್ಯಕ್ಷರು:
1) ಕುರುಬೂರು ಶಾಂತಕುಮಾರ್, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ
2) ಹರೀಶ್ ಕುಮಾರ್, ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ
3) ಪಿ. ಸಿ ರಾವ್, ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ
4) ಕೆಜಿ ಕನ್ನಡ ಪ್ರಕಾಶ್, ಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷ
5) ಮಹೇಶ್ ಕೆ ಪಿ, ಕಾನೂನು ಮತ್ತು ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ.
6) ಡಾ. ರವಿ ಶೆಟ್ಟಿ ಬೈಂದೂರು, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ.
7) ವಿಜಯ್ ಕುಮಾರ್ ಎಸ್, ಮಾತೃಭೂಮಿ ಯುವಸೇನಾ ರಾಜ್ಯಾಧ್ಯಕ್ಷ.
8) ಗಿರಿಜಮ್ಮ, ಅಖಿಲ ಭಾರತ ಕಾರ್ಮಿಕ ಹಿತರಕ್ಷಣ ವೇದಿಕೆ ಅಧ್ಯಕ್ಷೆ
9) ಪ್ರಕಾಶ್ ಮತ್ತಿಹಳ್ಳಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ.
10) ಶಿವಕುಮಾರ್, ಕರ್ನಾಟಕ ವಿದ್ಯಾರ್ಥಿ ವೇದಿಕೆ ರಾಜ್ಯಾಧ್ಯಕ್ಷ
11) ಮಂಗಳ ಶಂಕರ್, ಅಖಿಲ ಭಾರತ ಕಾರ್ಮಿಕ ಕ್ರಿಯಾ ಹಿತರಕ್ಷಣಾ ವೇದಿಕೆ ಅಧ್ಯಕ್ಷೆ
12) ಚಂದ್ರಶೇಖರ್ ಶೆಟ್ಟಿ, ಹೋಟೆಲ್ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ
ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡಾಟ; ಯಾರು ಏನು ಹೇಳಿದರು?
ಡಿಜಿ-ಐಜಿಪಿಗೆ ದೂರು:
ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳು ಕನ್ನಡ ವಿರೋಧಿ ಚಟುವಟಿಕೆ ನಡೆಸುತ್ತಿವೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿ ಪೊಲೀಸ್ ವಾಹನ ದ್ವಂಸಗೊಳಿಸಿ ಪುಂಡಾಡಿಕೆ ಮೆರೆಯುತ್ತಿವೆ. ಇಲ್ಲಿನ ಸ್ವತ್ತು ಪಡೆದು ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಮಾಡಿ ಉದ್ಧಟತನ ತೋರಿವೆ. ರಾಜ್ಯ ರಾಜ್ಯಗಳ ಮಧ್ಯೆ ಉದ್ವಗ್ನ ಸ್ಥಿತಿ ನಿರ್ಮಾಣ ಮಾಡುತ್ತಿವೆ. ಆದ್ದರಿಂದ ರಾಜ್ಯದಲ್ಲಿ ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನ ನಿಷೇಧಿಸಬೇಕು ಎಂದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ:
ಸೋಮವಾರದೊಳಗೆ ಶಿವಸೇನೆ ಮತ್ತು ಎಂಇಎಸ್ ಸಂಘಟನೆಯನ್ನ ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಿತ್ಯವೂ ಸಚಿವರು ಹೋದಲ್ಲಿ ಬಂದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ