ಬೆಂಗಳೂರು(ನ.22): ಮರಾಠಿ ಪ್ರಾಧಿಕಾರ ವಿರೋಧಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಮುಂದುವರೆದಿದೆ. ಕನ್ನಡಪರ ಹೋರಾಟಗಾರರು ಸರಣಿ ಪ್ರತಿಭಟನೆಗಳಿಗೆ ಮುಂದಾಗಿದ್ದಾರೆ. ಮರಾಠಿ ಪ್ರಾಧಿಕಾರ ರಚನೆ ಆದೇಶ ಹಿಂಪಡೆಯುವವರೆಗೂ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಮರಾಠಿ ಪ್ರಾಧಿಕಾರ ರಚನೆ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶನ ಮಾಡಿದರು. ಸರ್ಕಾರದ ನಡೆ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿದರು. ಈ ವೇಳೆ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಬಂಧನಕ್ಕೂ ಮುನ್ನ ಮಾತನಾಡಿದ ವಾಟಾಳ್ ನಾಗರಾಜ್, ಯಾವುದೇ ಕಾರಣಕ್ಕೂ ನಮ್ಮ ಹೋರಾಟ ನಿಲ್ಲಲ್ಲ. ನಾಳೆ ಬಳ್ಳಾರಿ, ನಾಳಿದ್ದು ಕೊಪ್ಪಳ. 28ರಂದು ಮತ್ತೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಎಂದೂ ಕಂಡರಿಯದ ಹೋರಾಟ ನಡೆಯುತ್ತದೆ. ಡಿಸೆಂಬರ್ 5ರಂದು ನಡೆಯುವ ಬಂದ್ನ್ನು ಯಾರೂ ಹತ್ತಿಕ್ಕಲು ಆಗುವುದಿಲ್ಲ. ಬಂದ್ ನಡೆದೇ ನಡೆಯುತ್ತೆ, ಮರಾಠಿ ಪ್ರಾಧಿಕಾರ ರಚನೆ ವಿರುದ್ಧ ಸರಣಿ ಪ್ರತಿಭಟನೆ ನಡೆಯುತ್ತವೆ. ಸಾಕಷ್ಟು ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿವೆ ಎಂದರು.
ಬಿಹಾರದಂತೆ ತಮಿಳುನಾಡಿನಲ್ಲೂ ಕಮಲ ಅರಳಲಿದೆ: ಕಾರ್ಯಕರ್ತರಿಗೆ ಅಮಿತ್ ಶಾ ಹುರುಪು
ಇದೇ ವೇಳೆ ಸಾ.ರಾ.ಗೋವಿಂದು ಮಾತನಾಡಿ, ಕನ್ನಡದ ಒಕ್ಕೂಟದಿಂದ ಕಪ್ಪು ಬಾವುಟ ಪ್ರದರ್ಶನ ಮಾಡೋ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಇಡೀ ಕನ್ನಡಿಗರ ಬಳಿ ನಾವು ಮನವಿ ಮಾಡಿಕೊಳ್ಳುತ್ತೇವೆ, ಯಾವುದೇ ಕಠಿಣ ಕ್ರಮ, ಒತ್ತಡವಾದ್ರೂ, ಡಿ. 5ರಂದು ನಡೆಯುವ ಬಂದ್ನ್ನು ಹತ್ತಿಕ್ಕಲು ಆಗುವುದಿಲ್ಲ. 5ನೇ ತಾರೀಖು ನಡೆಯುವ ಬಂದ್ ಗೆ ಈಗಾಗಲೇ ಸಾಕಷ್ಟು ಬೆಂಬಲ ಸಿಕ್ಕಿದೆ. ಇಡೀ ಕರ್ನಾಟಕದ ಜನತೆ ನಮಗೆ ಬೆಂಬಲ ಕೊಡುತ್ತಾರೆ ಎಂದರು.
ಮುಂದುವರೆದ ಅವರು, ನಾಳೆ ಕನ್ನಡದ ಒಕ್ಕೂಟದ ವತಿಯಿಂದ ಬಳ್ಳಾರಿಯಲ್ಲಿ ಹೋರಾಟ ನಡೆಯಲಿದೆ. ಈ ಹೋರಾಟಕ್ಕೆ ಯಾರೂ ಬೆಂಬಲ ಕೊಡೋದಿಲ್ವೋ, ಅವರು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತೆ. ಆ ರೀತಿ ಆಗೋದು ಬೇಡ. ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಒಟ್ಟಾಗಿ ಹೋರಾಡೋ ಪ್ರಯತ್ನ ಮಾಡ್ತೇವೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ