ಬೆಂಗಳೂರು; ಜಾತಿಗಳಿಗೆ, ಮಠಗಳಿಗೆ ಕೋಟ್ಯಾಂತರ ಹಣವನ್ನು ನೀಡುತ್ತಾ "ಮತ ರಾಜಕಾರಣ" ಮಾಡುವ ಬದಲು ಸರ್ಕಾರವು ನಾಡಿನ ಭಾಷೆಯಾದ ಕನ್ನಡಕ್ಕಾಗಿಯೇ ಇರುವ ಏಕೈಕ ವಿವಿಗೆ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕು. ಈ ಮೂಲಕ ಕನ್ನಡದ ಸಂಶೋಧನೆಗಳು, ಕನ್ನಡದ ಹಳಮೆಯನ್ನು ಸಾಧಿಸುತ್ತಲೇ ಕನ್ನಡದ ನಾಳೆಯನ್ನು ಕಟ್ಟಬಹುದಾದ ಕನ್ನಡದ್ದೇ ಕೆಲಸಗಳನ್ನು ಮಾಡಲು ಆದ್ಯತೆ ನೀಡಬೇಕು. ತುರ್ತಾಗಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಚಲನಚಿತ್ರ ನಿರ್ದೇಶಕ, ರಂಗಕರ್ಮಿ ಬಿ.ಸುರೇಶ ಆಗ್ರಹಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಹಂಪಿ ವಿಶ್ವವಿದ್ಯಾಲಯ ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಆರಂಭಿಸಿರುವ ‘ಭಿತ್ತಿಪತ್ರ ಚಳವಳಿ’ಯ ಎರಡನೇ ದಿನವಾದ ಇಂದು ಅನೇಕ ಸಾಮಾಜಿಕ ಹೋರಾಟಗಾರರು, ಚಿತ್ರರಂಗದ ಗಣ್ಯರು, ಸಾಹಿತಿಗಳು, ಸಂಘಟನೆಗಳ ಮುಖಂಡರು ಆಂದೋಲನದಲ್ಲಿ ಪಾಲ್ಗೊಂಡು ಕನ್ನಡ ವಿಶ್ವವಿದ್ಯಾಲಯದ ಕುರಿತು ರಾಜ್ಯ ಸರ್ಕಾರ ಹೊಂದಿರುವ ತಾತ್ಸಾರ ಧೋರಣೆಯನ್ನು ಖಂಡಿಸಿದ್ದಾರೆ.
ಸಾಮಾಜಿಕ ಚಿಂತಕ ಗ್ಲಾಡ್ ಸನ್ ಅಲ್ಮೀಡಾ ತಮ್ಮ ಹೇಳಿಕೆಯಲ್ಲಿ, ಕರ್ನಾಟಕದಲ್ಲೇ ಇರುವ ಕನ್ನಡ ವಿವಿಗೆ ಅದರ ಹಕ್ಕಿನ ಅನುದಾನವನ್ನು ಬಿಡುಗಡೆಗೊಳಿಸಿ ಎಂದು ಕರ್ನಾಟಕ ಸರಕಾರವನ್ನು ಈ ರೀತಿ ಅಭಿಯಾನದ ಮೂಲಕ ಕೇಳಬೇಕಾದ ಪರಿಸ್ಥಿತಿಗೆ ನಮ್ಮನ್ನು ತಂದಿಟ್ಟಿರುವ ಸರಕಾರ ತಾನು ಕನ್ನಡ ವಿರೋಧಿ, ಕನ್ನಡ ರಾಷ್ಟ್ರೀಯತೆಯ ವಿರೋಧಿ, ನಾಡದ್ರೋಹಿ ಎಂದು ತಾನಾಗಿಯೇ ಸಾಬೀತುಪಡಿಸಿದೆ. ಕನ್ನಡಿಗರಿಗೆ ಕನ್ನಡ ಕೇವಲ ಭಾಷೆಯಲ್ಲ ಬದಲಾಗಿ ಅಸ್ತಿತ್ವ, ಅಸ್ಮಿತೆ ಹಾಗೂ ರಾಷ್ಟ್ರೀಯತೆ. ಇದನ್ನು ಕಾರ್ಯಗತಗೊಳಿಸುವ ಕನ್ನಡ ವಿವಿಗೆ ಸರಕಾರ ಮಾಡುತ್ತಿರುವ ಅವಮಾನ, ಕನ್ನಡಿಗರಿಗೆ ಮಾಡಿದ ಅವಮಾನ. ಹಾಗಾಗಿ ಈ ಸರಕಾರಕ್ಕೆ ಕನ್ನಡ, ಕನ್ನಡಿಗರು ಹಾಗೂ ಕರ್ನಾಟಕದ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಈ ಕೂಡಲೇ ತನ್ನ ಭಂಡತನವನ್ನು ಬದಿಗೆ ಸರಿಸಿ, ಅನುದಾನವನ್ನು ಬಿಡುಗಡೆಗೊಳಿಸಲಿ ಎಂದು ಒತ್ತಾಯಿಸಿದ್ದಾರೆ.
ಹಂಪಿಯಲ್ಲಿನ ಒಡೆದ ಗುಡಿಗಳು, ಮುರಿದ ದೇವತಾ ವಿಗ್ರಹಗಳು ಕರ್ನಾಟಕ ಸಾಮ್ರಾಜ್ಯ ಇಲ್ಲಿತ್ತು ಎಂದು ನೆನಪು ಮಾಡುವ ನೆನೆಯುಳಿಕೆಗಳು.. ಈ ನೆಲದಲ್ಲಿ ಕನ್ನಡಿಗರು ಜಗತ್ತಿಗೇ ಹಿರಿಯರಾಗಿ ಬಾಳಿದ್ದರು ಎನ್ನುವ ದಿಟ ನೀಡುವ ಹುರುಪಿನಿಂದ ಕನ್ನಡ ಕಟ್ಟುವ ಕೆಲಸ ಹೊಸ ಬಿರುಸು ಗಳಿಸಲಿ ಎಂಬ ಆಶಯದಿಂದ ಶುರು ಮಾಡಲಾದ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಇದೇ ಪಳೆಯುಳಿಕೆಗಳ ಸಾಲಲ್ಲಿ ನಿಲ್ಲಿಸುವ ಕೆಲಸ ಆಗದಿರಲಿ. ಹಂಪಿ ವಿಶ್ವವಿದ್ಯಾಲಯಕ್ಕೆ ಬೇಕಾದ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಲಿ ಎಂದು ಬನವಾಸಿ ಬಳಗದ ಅಧ್ಯಕ್ಷ ಆನಂದ್ ಆಗ್ರಹಿಸಿದ್ದಾರೆ.
ರಾಜಕೀಯ ನಿರಾಶ್ರಿತರಿಗೆ ಆಶ್ರಯ ನೀಡಲು ಅನಗತ್ಯ ನಿಗಮ ,ಮಂಡಳಿಗಳಿಗೆ ಮತ್ತು ಓಲೈಕೆ ಮಾಡಲು ಮಠಗಳಿಗೆ ಹಣವನ್ನು ಸುರಿಯುತ್ತಿರುವ ಸರ್ಕಾರ ಕನ್ನಡ ಭಾಷೆ, ಸಂಸ್ಕೃತಿ ,ಕನ್ನಡದ ಅಸ್ಮಿತೆ ಉಳಿವಿಕೆಗೆ ಹೊಸತನವನ್ನು ಅಧ್ಯಯನ, ಸಂಶೋಧನೆಯ ಮೂಲಕ ಹುಡುಕಿ ಕನ್ನಡವನ್ನ ಕಟ್ಟುತ್ತಿರುವ ಕನ್ನಡ ವಿವಿ ಗೆ ಅನುದಾನ ನಿಲ್ಲಿಸಿರುವುದು ಒಂದು ರೀತಿಯ ನಾಡದ್ರೋಹದ ಕೆಲಸ ಎಂದು ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಕೊಟ್ಟಾ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವವಿದ್ಯಾಲಯಗಳೆಂದರೆ ನಮ್ಮ ಮನೋಭಿತ್ತಿಯ ಹೊಲಗಳು. ಹೊಲದಲ್ಲಿ ಹೇಗೆ ನಾವು ನಾಳಿನ ಬದುಕಿಗೆ ಅನ್ನವನ್ನು ಬೆಳೆಯುತ್ತೇವೆಯೋ, ವಿಶ್ವವಿದ್ಯಾಲಯಗಳಲ್ಲಿಯೂ ಸಹ ನಾವು ನಾಳೆಗಳನ್ನು ಬಿತ್ತಿ ಬೆಳೆಯುತ್ತಿರುತ್ತೇವೆ. ಅವುಗಳ ಜೊತೆಗೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯವಾದರೆ, ಅವುಗಳನ್ನು ಪೋಷಿಸಿ ಬೆಳೆಸುವುದು ಸರಕಾರಗಳ ಕರ್ತವ್ಯ. ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮಾತ್ರ ನಡೆಯುವುದಿಲ್ಲ. ಚಿಂತನೆ, ಸಂಶೋಧನೆ, ಸಂಗೋಪನೆ ಎಲ್ಲವೂ ನಡೆಯುತ್ತಿರುತ್ತದೆ. ಒಂದು ವಿಶ್ವವಿದ್ಯಾಲಯಕ್ಕೆ ಕೊಡಬೇಕಾಗಿರುವ ನೆರವನ್ನು ತಡೆಹಿಡಿಯುವುದೆಂದರೆ ನಮ್ಮ ನಾಳೆಗಳನ್ನು ಕೈಬಿಟ್ಟ ಹಾಗೆ. ನಾವೇ ನೋಡಿರುವ ಹಾಗೆ ಹಂಪಿ ಕನ್ನಡ ವಿಶ್ಯವಿದ್ಯಾಲಯ ಕನ್ನಡ ಸಂಸ್ಕೃತಿಗೆ, ಕನ್ನಡ ಬದುಕಿಗೆ ತನ್ನ ಪಾಲಿನ ಕಾಣಿಕೆಯನ್ನು ಕಾಲದಿಂದ ಕಾಲಕ್ಕೆ ನೀಡುತ್ತಲೇ ಬಂದಿದೆ. ಅದಕ್ಕೆ ಒಂದು ಇತಿಹಾಸ ಇದೆ. ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಲೇಖಕಿ ಸಂಧ್ಯಾರಾಣಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
ಕನ್ನಡ ಎನ್ನುವುದು ಕೇವಲ ಸಂವಹನದ ಭಾಷೆ ಮಾತ್ರವಲ್ಲ. ಅದು ಒಂದು ಸಮುದಾಯದ, ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಸ್ಮಿತೆಯ ಪ್ರತೀಕ. ಈ ನುಡಿಯನ್ನು ಬೆಳೆಸುವ ಉದಾತ್ತ ಧ್ಯೇಯವನ್ನು ಹೊಂದಿರುವ ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿ. ಕರ್ನಾಟಕ ಸರ್ಕಾರ ಕೂಡಲೇ ಅನುದಾನವನ್ನು ಬಿಡುಗಡೆ ಮಾಡಿ ತನ್ನ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು ಎಂದು ಹಿರಿಯ ಪತ್ರಕರ್ತ ಡಾ.ಜಗದೀಶ್ ಕೊಪ್ಪ ಒತ್ತಾಯಿಸಿದ್ದಾರೆ.
ಒಂದು ಭಾಷೆಯ ಉಳಿವಿಗೆ ಅದು ಜನರ ಮಾತಾಗಿ ಉಳಿಯುವುದು ಎಷ್ಟು ಮುಖ್ಯವೋ ಆ ಭಾಷೆಯ ಜ್ಞಾನ ಶಾಖೆಗಳು ವೃದ್ಧಿಸಿ ಸದೃಢವಾಗುವುದೂ ಅಷ್ಟೇ ಮುಖ್ಯ. ಅದಕ್ಕಾಗಿ ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಹಿರಿಯ ರಂಗಕರ್ಮಿ ರಕ್ಷಿದಿ ಪ್ರಸಾದ್ ಹೇಳಿದರೆ, ಸಾಮಾಜಿಕ ಚಿಂತಕ ಶಂಕರ ಕೆಂಚನೂರು, ಕರ್ನಾಟಕ ತನ್ನದೇ ಭಾಷೆಯ ವಿಶ್ವವಿದ್ಯಾಲಯದ ಅನುದಾನಕ್ಕಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ನಿಜಕ್ಕೂ ವಿಪರ್ಯಾಸ. ಸರಕಾರ ಯಾವುದೇ ವಿಳಂಬ ಮಾಡದೆ ಈ ಕೂಡಲೇ ಅನುದಾನ ಬಿಡುಗಡೆ ಮಾಡಿ ಹೆಚ್ಚಿನ ಮುಜುಗರದಿಂದ ತನ್ನನ್ನು ಕಾಪಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಪಾಪ ಪುಣ್ಯ ಧರ್ಮ ಕರ್ಮ ಅಂತ ಬೋಧಿಸುವ ಜಾಗಗಳಿಗೆ ಹುಡುಕಿಕೊಂಡು ಹೋಗಿ ಅನುದಾನ ದಯಪಾಲಿಸುವ ಗರಿಷ್ಠ ತಿಳಿವಳಿಕೆ ಇರುವ ಸರ್ಕಾರ ಜ್ಞಾನ ದೇಗುಲಗಳಿಗೆಂದೇ ಮೀಸಲಿಟ್ಟ ಅನುದಾನಗಳನ್ನು ಕಡಿತಗೊಳಿಸಬಾರದು, ಕೊಡದಿರಬಾರದು ಎನ್ನುವ ಕನಿಷ್ಠ ಜ್ಞಾನವನ್ನೂ ಅರಿವನ್ನೂ ಹೊಂದಿರಬೇಕು ಎಂದು ಚಿತ್ರನಟ ಎಂ.ಎಸ್.ಜಹಾಂಗೀರ್ ಕುಟುಕಿದ್ದಾರೆ.
ಇದನ್ನು ಓದಿ: ಸಾರ್ವಜನಿಕರು, ಸಚಿವರು, ಅಧಿಕಾರಿಗಳು, ವಿಪಕ್ಷಗಳ ವಿರೋಧ; ರಾತ್ರಿ ಕರ್ಫ್ಯೂ ಹಿಂಪಡೆದ ಸರ್ಕಾರ
ಸಾಮಾಜಿಕ ಚಿಂತಕರು, ಲೇಖಕರಾದ ದಾದಾ ಖಲಂದರ್, ದೀಪಾ ಹಿರೇಗುತ್ತಿ, ರಾಜೇಂದ್ರ ಪ್ರಸಾದ್, ಚಿದಂಬರ ನರೇಂದ್ರ, ಸನತ್ ಕುಮಾರ್ ಬೆಳಗಲಿ, ಇಸ್ಮತ್ ಪಜೀರ್ ಸೇರಿದಂತೆ ಹಲವಾರು ಮಂದಿ ಮಂಡಿಸಿದ ಅಭಿಪ್ರಾಯಗಳ ಪೋಸ್ಟರ್ ಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸಿದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ