HOME » NEWS » State » PRIYANKA KHARGE ALLEGES RATE FIX BY POLICE FOR ILLEGAL ACTIVITIES IN GULBARGA SESR SAKLB

ಕಲಬುರ್ಗಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಪೊಲೀಸರಿಂದ ರೇಟ್ ಫಿಕ್ಸ್; ಪ್ರಿಯಾಂಕ್ ಖರ್ಗೆ

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ವ್ಯಾಪಕಗೊಂಡಿವೆ. ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ, ಜೂಜು, ಐಪಿಎಲ್ ಬೆಟ್ಟಿಂಗ್, ಇತ್ಯಾದಿ ಅಕ್ರಮ ಚಟುವಟಿಕೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. 

news18-kannada
Updated:November 24, 2020, 2:41 PM IST
ಕಲಬುರ್ಗಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಪೊಲೀಸರಿಂದ ರೇಟ್ ಫಿಕ್ಸ್; ಪ್ರಿಯಾಂಕ್ ಖರ್ಗೆ
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ
  • Share this:
ಕಲಬುರ್ಗಿ (ನ.24):  ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ  ಟೀಕಿಸಿರುವ ಅವರು, ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ, ಜೂಜು, ಐಪಿಎಲ್ ಬೆಟ್ಟಿಂಗ್, ಅಕ್ರಮ ಮರಳುಗಾರಿಕೆ, ಅಕ್ರಮ ಮದ್ಯ ಮಾರಾಟ, ಉದ್ಯಮಿಗಳಿಗೆ ಕಿರುಕುಳ, ನಿಷೇಧಿತ ಗುಟ್ಕಾ ದಂಧೆ, ನಾಗರೀಕರ ಸುಲಿಗೆ  ಇತ್ಯಾದಿ ಅಕ್ರಮ ಚಟುವಟಿಕೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿ ಅಕ್ರಮ ದಂಧೆಗೂ 1 ಲಕ್ಷ ರೂಪಾಯಿಗಳಿಂದ 12 ಲಕ್ಷ ರೂಪಾಯಿಗಳವರೆಗೂ ಪ್ರತಿ ತಿಂಗಳು ಹಫ್ತಾ ವಸೂಲಿ ಮಾಡಲಾಗುತ್ತಿದೆ.  ಈ ಕುರಿತು ತಮ್ಮ ಬಳಿ ದಾಖಲೆ ಇದ್ದು,  ಇದನ್ನು ಸಾಬೀತು ಮಾಡಲು ಸಿದ್ಧ ಎಂದು ಬಿಜೆಪಿ ನಾಯಕರಿಗೆ ಸವಾಲ್​ ಹಾಕಿದ್ದಾರೆ.

ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ  ಗೋವಿಂದ ಕಾರಜೋಳರವರೇ  ಜಿಲ್ಲಾ ಗೃಹ ಇಲಾಖೆ ಅಕ್ರಮ ವ್ಯವಹಾರಕ್ಕಾಗಿ ವಸೂಲಿ ರೇಟ್ ಕಾರ್ಡ್ ನ್ನು ಸಿದ್ಧ ಮಾಡಿದ್ದಾರೆ. ಯುವಕರ ಭವಿಷ್ಯ ಹಾಳಾದರೂ ಪರವಾಗಿಲ್ಲ, ನಾವು ಅಕ್ರಮ ಚಟುವಟಿಕೆಗಳನ್ನು ಬೆಂಬಲಿಸುತ್ತೇವೆ ಎಂಬುವುದು ಕೆಲ ಬಿಜೆಪಿ ನಾಯಕರು ಮತ್ತು ಪೊಲೀಸರ ವರ್ತನೆಯಾಗಿದೆ ಎಂದು ಹರಿಹಾಯ್ದರು.

ಜಿಲ್ಲೆಯಲ್ಲಿ ಅಕ್ರಮ ದಂಧೆಗಳ ಹಫ್ತಾ ವಸೂಲಿಯ ರೇಟ್ ಕಾರ್ಡ್ ಸಹ ನೀಡಿದ್ದಾರೆ. ನಗರದ ಪ್ರತಿ ವೈನ್ ಶಾಪ್‌ನಿಂದ ಪ್ರತಿ ತಿಂಗಳು 1350 ರೂಪಾಯಿಗಳಂತೆ ಪ್ರತಿ ವರ್ಷ 1,20,000 ಹಫ್ತಾ ವಸೂಲಿ‌ ಮಾಡಲಾಗುತ್ತಿದೆ. ಗುಟ್ಕಾ ವ್ಯವಹಾರದಿಂದ ಪ್ರತಿ ತಿಂಗಳು 5 ಲಕ್ಷ ರೂಪಾಯಿ, ಅಕ್ರಮ ಅಕ್ಕಿ ಮಾರಾಟ ಹಾಗೂ ಸಾಗಾಣೆದಾರರಿಂದ ಪ್ರತಿ ತಿಂಗಳು 6 ಲಕ್ಷ ರೂಪಾಯಿ, 80 ಟಿಪ್ಪರ್ ಗಳಲ್ಲಿ ಸಾಗಿಸುವ ಅಕ್ರಮ ಮರಳು ದಂಧೆಕೋರದಿಂದ ಪ್ರತಿ ತಿಂಗಳು 12 ಲಕ್ಷ ರೂಪಾಯಿ, ಇಸ್ಪೀಟ್ ಅಡ್ಡೆಗಳ ಮಾಲೀಕರಿಂದ 5 ಲಕ್ಷ ರೂಪಾಯಿ ಮತ್ತು ಅಕ್ರಮ ಜಿಲೆಟಿನ್ ಕಡ್ಡಿ ಸಂಗ್ರಹಿಸಿಟ್ಟಿರುವವರಿಂದ 1 ಲಕ್ಷ ರೂಪಾಯಿ ಲಂಚ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ನೆರೆಯ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಂದ ಜಿಲ್ಲೆಗೆ ಜನ ಜೂಜಾಡಲು ಬರುತ್ತಿದ್ದಾರೆ. ಖಣದಾಳ್, ಸೇಡಂ ಹಾಗೂ ಆಳಂದ ರಸ್ತೆಯಲ್ಲಿ ಮೂರು ಜೂಜು ಅಡ್ಡೆಗಳಿವೆ. ಇಲ್ಲಿ ಪ್ರತಿ ಅಡ್ಡೆಗೆ ದಿನವೊಂದಕ್ಕೆ 60 ಸಾವಿರ ರೂಪಾಯಿ ಬಾಡಿಗೆ ಇದೆ. ಈ ಎಲ್ಲಾ ಹಣ  ಯುವಕರ ಜೇಬಿಂದ ಕಸಿಯಲಾಗುತ್ತಿದೆ. ಈ ಮೂಲಕ ಐಪಿಎಲ್ ಬೆಟ್ಟಿಂಗ್ ಹಾಗೂ ಜೂಜಾಟವನ್ನು  ಪ್ರೋತ್ಸಾಹಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಜಿಲ್ಲೆಯಲ್ಲಿ ರಿಕ್ರಿಯೇಷನಲ್ ಕ್ಲಬ್ ಗಳಿಗೆ ಯಾರು ಮತ್ತು ಏಕೆ ಅನುಮತಿ ನೀಡುತ್ತಿದ್ದಾರೆ.
ಇಷ್ಟೆಲ್ಲಾ ನಡೀತಿದ್ದರೂ ಇಲ್ಲಿನ ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಜಿಲ್ಲೆಯಲ್ಲಿ ನಡೀತಿರುವ ಅಕ್ರಮಗಳನ್ನು  ಹೊರಗಿನ ಪೊಲೀಸರು ಬಂದು ಮಟ್ಟ ಹಾಕುವ ಕೆಲಸ ಮಾಡುತ್ತಿದ್ದಾರೆ.  ಐಪಿಎಲ್ ಬೆಟ್ಟಿಂಗ್ ದಂಧೆ ಬಯಲಿಗೆಳೆದದ್ದು ಸೊಲ್ಲಾಪುರ ಸಿಸಿಬಿ ಪೊಲೀಸರು.  ಸ್ಥಳೀಯ ಪೊಲೀಸರು ಎಷ್ಟರ ಮಟ್ಟಿಗೆ ಕೈ ಕಟ್ಟಿ ಕುಳಿತಿದ್ದಾರೆ ಎನ್ನೋದಕ್ಕೆ ಇದು ಸಾಕ್ಷಿ.

ಇದನ್ನು ಓದಿ: ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್​; ಮುಂಬೈ, ಉ.ಪ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೊಸ ಮಾರ್ಗಸೂಚಿ ಪ್ರಕಟಈ ಎಲ್ಲಾ‌ ಅಕ್ರಮ ಚಟುವಟಿಕೆಗಳು  ಜಿಲ್ಲೆಯಲ್ಲಿ  ‌ರಾಜಾರೋಷವಾಗಿ ತಲೆ ಎತ್ತಿವೆ. ಇದು  ನಗರದ ಮಾಹಿತಿ ಮಾತ್ರವಾಗಿದ್ದು, ಈ ನಿಟ್ಟಿನಲ್ಲಿ ತಾವು ದಯವಿಟ್ಟು  ಸಭೆಯನ್ನು ಮಾಡಿ, ನಾನು ನಿಮಗೆ ಜಿಲ್ಲೆಯ ಮಾಹಿತಿಯನ್ನು ಮತ್ತು ಅದಕ್ಕೆ ಜವಾಬ್ದಾರರಾಗಿರುವ ವ್ಯಕ್ತಿಗಳ ಮಾಹಿತಿಯನ್ನು ನೀಡುತ್ತೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳರಿಗೆ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

ಜಿಲ್ಲೆಯನ್ನು ಕಾಯಬೇಕಾದವರೇ ಹಣದಾಸೆಗೆ ಜಿಲ್ಲೆಯನ್ನು ಬಲಿ ಕೊಡುತ್ತಿದ್ದಾರೆ. ಇದಕ್ಕೆ ಆಡಳಿತ ಪಕ್ಷದ ಕೃಪಾಕಟಾಕ್ಷವಿದ್ದು, ಅವರ ಮೂಗಿನ ನೇರದಲ್ಲೇ ಇದೆಲ್ಲವೂ ನಡೆಯುತ್ತಿದೆ.  ಯುವಕರ ಭವಿಷ್ಯಕ್ಕೆ ಈ ಬಿಜೆಪಿ ಸರ್ಕಾರದಲ್ಲಿ ಬೆಲೆ ಇದೆಯೇ ಎಂದು ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.
Published by: Seema R
First published: November 24, 2020, 2:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories