ಕಾಫಿನಾಡಲ್ಲಿ ಜೂನಿಯರ್​ ಇಂದಿರಾ ಗಾಂಧಿ ಸ್ಪರ್ಧೆಗೆ ಒತ್ತಾಯ; ಚಿಕ್ಕಮಗಳೂರಿಗೆ ಪ್ರಿಯಾಂಕಾ...?

Latha CG | news18
Updated:January 30, 2019, 1:52 PM IST
ಕಾಫಿನಾಡಲ್ಲಿ ಜೂನಿಯರ್​ ಇಂದಿರಾ ಗಾಂಧಿ ಸ್ಪರ್ಧೆಗೆ ಒತ್ತಾಯ; ಚಿಕ್ಕಮಗಳೂರಿಗೆ ಪ್ರಿಯಾಂಕಾ...?
ಇಂದಿರಾ ಗಾಂಧಿ-ಪ್ರಿಯಾಂಕಾ ಗಾಂಧಿ
  • News18
  • Last Updated: January 30, 2019, 1:52 PM IST
  • Share this:
-ವೀರೇಶ್ ಜಿ ಹೊಸೂರ್

ಚಿಕ್ಕಮಗಳೂರು,(ಜ.30): 1979ರಲ್ಲಿ ಚಿಕ್ಕಮಗಳೂರಲ್ಲಿ ಝೇಂಕರಿಸುತ್ತಿದ್ದ 'ಲಾಯೆಂಗಮ್ಮ ಲಾಯೆಂಗೆ, ಇಂದಿರಾ ಗಾಂಧಿ ಲಾಯೆಂಗೆ, ಆದ ರೋಟಿ ಖಾಯೆಂಗೆ' ಎಂಬ ಘೋಷ ವಾಕ್ಯ ಇದೀಗ ಮತ್ತೊಮ್ಮೆ ಕಾಫಿನಾಡ ಕಾಂಗ್ರೆಸ್ಸಿಗರ ಟ್ಯಾಗ್​ಲೈನ್​ ಆಗಿದೆ. ಆದರೆ  ಹೆಸರೊಂದು ಬೇರೆಯಷ್ಟೆ. ಅಂದು ಅಜ್ಜಿಗೆ ಗ್ರೀನ್ ಕಾರ್ಪೇಟ್ ಹಾಸಿದ್ದ ಕಾಫಿನಾಡಿಗರು, ಇದೀಗ ಜೂನಿಯರ್ ಇಂದಿರಾಗೂ 'ಲಾಯೆಂಗಮ್ಮ ಲಾಯೆಂಗೆ' ಅಂತಿದ್ದಾರೆ. ಜೂನಿಯರ್ ಇಂದಿರಾ ಬರ್ತಾರೋ ಇಲ್ಲವೋ  ಗೊತ್ತಿಲ್ಲ. ಆದರೆ ಕಾಫಿನಾಡಿನಲ್ಲಿ ಕಾಂಗ್ರೆಸ್​ನ​​ ಸದ್ಯದ ಸ್ಥಿತಿಯಂತೂ ಲಾಯೆಂಗಮ್ಮ ಎಂಬಂತೇ ಇದೆ. ಅದು ಅನಿವಾರ್ಯ ಕೂಡ ಆಗಿದೆ.

ಚಿಕ್ಕಮಗಳೂರು ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಹಾಗೂ ನೆಹರೂ ಕುಟುಂಬ ತಮ್ಮ ಜೀವಿತಾವಧಿಯಲ್ಲೇ ಮರೆಯಲಾರದ ಜಿಲ್ಲೆ. ಅಂತಹ ಕಾಫಿನಾಡಿನಿಂದ ಇಂದಿರಾ ಮೊಮ್ಮಗಳು ಪ್ರಿಯಾಂಕಾ ರಾಜಕೀಯ ಅಖಾಡಕ್ಕಿಳಿಯುತ್ತಾರೆಂಬ ಸುದ್ದಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ:ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿ ಅಧಿಕಾರ ಸ್ವೀಕರಿಸಲಿದ್ದಾರೆ ಪ್ರಿಯಾಂಕಾ ಗಾಂಧಿ!

ಅಂದು ಇಂದಿರಾಗಾಂಧಿ ಅವರಿಗೆ ಡಿ.ಬಿ.ಚಂದ್ರೇಗೌಡ ಕ್ಷೇತ್ರ ಬಿಟ್ಟುಕೊಟ್ಟಂತೆ ಇಂದು ಯಾರೂ ಬಿಟ್ಟುಕೊಡುವ ಅಗತ್ಯವಿಲ್ಲ. ಯಾಕೆಂದರೆ, ಸದ್ಯಕ್ಕೆ ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಕಾರ್ಯಕರ್ತರಿಗೆ ಗೊತ್ತಿಲ್ಲ. ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಹೆಸರು ಕೇಳಿಬರುತ್ತಿದ್ದರೂ, ಎರಡೂ ಜಿಲ್ಲೆಯನ್ನೂ ಸರಿದೂಗಿಸುವಂತವರು ಬೇಕೆಂಬುದು ಕಾರ್ಯಕರ್ತರ ವಾದ. ಅದು ನಿಜ ಹಾಗೂ ಅನಿವಾರ್ಯ ಕೂಡ.ಹಾಗಾಗಿ, ಕೆಲವು ವರ್ಷಗಳ ಬಳಿಕ ರಾಜಕೀಯಕ್ಕೆ ಬರುತ್ತಿರುವ ಪ್ರಿಯಾಂಕಾ ಗಾಂಧಿ ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸಿದರೆ, ಮತ್ತೊಂದು ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಅವರನ್ನು ಗೆಲ್ಲಿಸುವುದಕ್ಕೆ ಯುವಸಮೂಹ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಗಲಿರುಳು ಶ್ರಮಿಸುವುದಕ್ಕೆ ಸಿದ್ಧವಿದ್ದಾರೆ.ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬಂದಿರೋದು ಮೋದಿ ಸರ್ಕಾರವನ್ನು ಬದಲಿಸಲು: ಕೆ.ಸಿ.ವೇಣುಗೋಪಾಲ್

ಅಂದು ಇಂದಿರಾ ಗಾಂಧಿ ವಿರುದ್ಧ ಡಾ.ರಾಜ್​​ಕುಮಾರ್ ಅವರನ್ನು ನಿಲ್ಲಿಸುವುದಕ್ಕೆ ತೆರೆಮರೆಯಲ್ಲಿ ಎಲ್ಲಾ ಕಸರತ್ತು ನಡೆದಿತ್ತು. ಆದರೆ, ರಾಜಣ್ಣ ರಾಜಕೀಯಕ್ಕೆ ಬರುವುದಕ್ಕೆ ಸುತಾರಾಂ ಒಪ್ಪಲಿಲ್ಲವಂತೆ. ಹಾಗಾಗಿ, ಕೊನೆಗೆ 1968 ರಿಂದ 1971ರವೆಗೆ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್, ಕಾಂಗ್ರೆಸ್ ಅಧಿನಾಯಕಿ ವಿರುದ್ಧ ಅಖಾಡಕ್ಕಿಳಿದು ಸೋತಿದ್ದರು. ಇಲ್ಲಿಂದ ಗೆದ್ದ ಇಂದಿರಾ ಮತ್ತೆ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರು.

ಇದೀಗ ಅವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಫೆಬ್ರವರಿ 4 ರಂದು ಮೌನಿ ಅಮಾವಾಸ್ಯೆಯಂದು ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ ಅವರ ರಾಜಕೀಯ ಜೀವನ ಇಲ್ಲಿಂದಲೇ ಆರಂಭವಾಗಲಿ ಎನ್ನುವುದು ಹಿರಿಯ ಕಾಂಗ್ರೆಸ್ಸಿಗರ ಅಭಿಪ್ರಾಯ. ಹಾಗಾಗಿ, ಕಾಫಿನಾಡಿಗರು ಪ್ರಿಯಾಂಕಾ ಗಾಂಧಿ ಅವರಿಗೆ ಚಿಕ್ಕಮಗಳೂರಿಗೆ ಬರುವಂತೆ ಆಹ್ವಾನ ನೀಡಿದ್ದಾರೆ.ಕಾಫಿನಾಡಿಗರು ಜನ ಬದಲಾವಣೆ ಬಯಸಿದ್ದಾರೆ. ಅವರು ಇಲ್ಲಿ ಸ್ಪರ್ಧಿಸಿದರೆ,  ಅವರನ್ನು ಇಲ್ಲೇ ಗೆಲ್ಲಿಸಿ ಲೋಕಸಭೆಗೆ ಕಳಿಸುವುದಕ್ಕೆ ಕಾಫಿನಾಡಿಗರು ಪಣ ತೊಟ್ಟಿದ್ದಾರೆ. ಕಾರ್ಯಕರ್ತರಲ್ಲಿ ಹುಮ್ಮಸ್ಸಿರೋದಂತು ಸತ್ಯ. ಆದರೆ ಜೂನಿಯರ್ ಇಂದಿರಾ ಬರುತ್ತಾರೋ ಇಲ್ಲವೋ ಎನ್ನುವುದು ಮಾತ್ರ ಗೊಂದಲಮಯವಾಗಿದೆ.

ಇದನ್ನೂ ಓದಿ: 'ಪ್ರಿಯಾಂಕಾ ಲಾವೋ ಕಾಂಗ್ರೆಸ್​ ಬಚಾವೋ' ಎಂಬ ಕಾಂಗ್ರೆಸ್ಸಿಗರ ಹಳೇ ಘೋಷಣೆಗೆ ಅಂತು ಜೀವ ಬಂತು!

ಒಟ್ಟಾರೆ, ಕಾಫಿನಾಡಿನ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ಆಗಮನಕ್ಕಂತೂ ತುದಿಗಾಲಲ್ಲಿ ನಿಂತಿದೆ. ಆದರೆ, 1980ರ ಆಸು-ಪಾಸಿನ ರಾಜಕೀಯವೇ ಬೇರೆ. 2020ರ ಆಸು-ಪಾಸಿನ ರಾಜಕೀಯವೇ ಬೇರೆ. ಇಂದು ಪ್ರಿಯಾಂಕಾ ಬಂದರೂ ಗೆಲವು ಅಜ್ಜಿಗೆ ಒಲಿದಷ್ಟು ಸುಲಭವಾಗಿ ಸಿಗುವುದಿಲ್ಲ ಎನ್ನುವುದಂತೂ ಸ್ಪಷ್ಟ. ಅಷ್ಟೇ ಅಲ್ಲದೇ ಉಡುಪಿ-ಚಿಕ್ಕಮಗಳೂರಿನ 9 ಶಾಸಕರಲ್ಲಿ  8 ಜನ ಬಿಜೆಪಿಯವರೇ. ಸಾಲದ್ದಕ್ಕೆ ಸ್ಟ್ರಾಂಗ್ ಹಿಂದೂ ಅಜೆಂಡಾದ ಮಲೆನಾಡ ಜೊತೆ ಮೋದಿ ಅಲೆ. ಇವೆಲ್ಲದರ ನಡುವೆ ಪ್ರಿಯಾಂಕಾ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಬರುತ್ತಾರಾ ಎನ್ನುವುದು ಮಾತ್ರ ಯಕ್ಷಪ್ರಶ್ನೆಯೇ ಸರಿ.

First published:January 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ