HOME » NEWS » State » PRIYANK KHARGE TWEET AGAINST BABURAO CHINCHANASURU STATEMENT ON ST RESERVATION RHHSN SAKLB

ಖರ್ಗೆ ಮನಸು ಮಾಡಿದರೆ ಕೋಲಿ ಸಮಾಜಕ್ಕೆ ಎಸ್​ಟಿ ಮೀಸಲಾತಿ ಸಿಗಲಿದೆ ಎಂಬ ಚಿಂಚನಸೂರ ಹೇಳಿಕೆಗೆ ಪ್ರಿಯಾಂಕ್ ತಿರುಗೇಟು

ಇದೀಗ ಯು ಟರ್ನ್ ಹೊಡೆದಿರುವ ಬಾಬುರಾವ್ ಚಿಂಚನಸೂರ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಮನಸ್ಸು ಮಾಡಿದರೆ ಕೋಲಿ, ಕಬ್ಬಲಿಗ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ಸುಲಭವಾಗಿ ಸಿಗಲಿದೆ ಎಂದು ಹೇಳಿರುವ ಹೇಳಿಕೆ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. 

news18-kannada
Updated:March 4, 2021, 8:41 PM IST
ಖರ್ಗೆ ಮನಸು ಮಾಡಿದರೆ ಕೋಲಿ ಸಮಾಜಕ್ಕೆ ಎಸ್​ಟಿ ಮೀಸಲಾತಿ ಸಿಗಲಿದೆ ಎಂಬ ಚಿಂಚನಸೂರ ಹೇಳಿಕೆಗೆ ಪ್ರಿಯಾಂಕ್ ತಿರುಗೇಟು
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ
  • Share this:
ಕಲಬುರ್ಗಿ: ರಾಜ್ಯದಲ್ಲಿ ಸದ್ಯ ಮೀಸಲಾತಿ ಹೋರಾಟದ ಪರ್ವ ಜೋರಾಗಿದೆ. ಒಂದು ಕಡೆ ಎಸ್.ಟಿ. ಮೀಸಲಾತಿಗಾಗಿ ಕುರುಬ ಸಮುದಾಯ ಸ್ವಾಮೀಜಿಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರುವರೆಗೂ ಮೆರವಣಿಗೆ ಮಾಡಿ ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡಿತು. ಮತ್ತೊಂದೆಡೆ ಪಂಚಮಸಾಲಿಗೆ ಹಿಂದುಳಿದ ವರ್ಗ 2 ಎ ಮೀಸಲಾತಿಗಾಗಿ ಒತ್ತಾಯಿಸಿ ಮಠಾಧೀಶರ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆದು, ವಿಧಾನಸೌಧ ಮುತ್ತಿಗೆಯಂತಹ ಉಗ್ರ ಸ್ವರೂಪಕ್ಕೂ ಹೋಗಿತ್ತು. ಇದೇ ಮೀಸಲಾತಿ ವಿಚಾರ ರಾಜಕೀಯ ಕೆಸರೆರಚಾಟಕ್ಕೂ ವೇದಿಕೆಯಾಗಿ ಮಾರ್ಪಟ್ಟಿದೆ.

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಮನಸ್ಸು ಮಾಡಿದರೆ ಕೋಲಿ ಸಮಾಜಕ್ಕೆ ಎಸ್.ಟಿ. ಮೀಸಲಾತಿ ಸಿಗಲಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಸಾಮಾಜಿಕ ನ್ಯಾಯ ಕಾಪಾಡಲಿ ಎಂದು ಮಾಜಿ ಸಚಿವ, ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿಕೆ ನೀಡಿದ್ದರು. ಇದೀಗ ಚಿಂಚನಸೂರ ಹೇಳಿಕೆಗೆ ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಬುರಾವ್ ಚಿಂಚನಸೂರ ಹೇಳಿಕೆಗೆ ಟ್ವಟರ್ ಮೂಲಕ ಪ್ರಿಯಾಂಕ್ ಖರ್ಗೆ ಉತ್ತರ ಕೊಟ್ಟಿದ್ದಾರೆ. ಚುನಾವಣೆ ಗೆಲ್ಲುವುದಕ್ಕಾಗಿಯೇ ಕೋಲಿ ಸಮಾಜವನ್ನು ಎಸ್ ಟಿಗೆ ಸೇರಿಸುವುದಾಗಿ ಸುಳ್ಳು ಹೇಳಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಮನಸು ಮಾಡಿದರೆ ಕೋಲಿ ಸಮಾಜವನ್ನು ಎಸ್ ಟಿ ಗೆ ಸೇರಿಸಿ, ಸಮಾಜಿಕ‌ ನ್ಯಾಯ ಕಾಪಾಡಲಿ ಎಂದು ಹೇಳಿರುವ ಬಾಬುರಾವ ಚಿಂಚನಸೂರ ಅವರ ಹೇಳಿಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರರೂ ಆಗಿರುವ ಪ್ರಿಯಾಂಕ್ ಖರ್ಗೆ ಅವರು ಚುನಾವಣೆ ಗೆಲ್ಲುವುದಕ್ಕಾಗಿಯೇ ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿ ಸೇರಿಸುವುದಾಗಿ ಸುಳ್ಳು ಹೇಳಿದ್ದೀರಾ ? ಎಂದು ಟೀಕಿಸಿದ್ದಾರೆ.

ಇದನ್ನು ಓದಿ: ಒನ್ ನೇಷನ್ ಒನ್ ಎಲೆಕ್ಷನ್​ಗೆ ಈ ಹಿಂದೆ ಸಿದ್ದರಾಮಯ್ಯ ಕೂಡ ಬೆಂಬಲ ನೀಡಿದ್ದರು; ಸಚಿವ ಬಸವರಾಜ ಬೊಮ್ಮಾಯಿ

ತಮ್ಮ ಟ್ವಿಟ್ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದರೆ ಕೋಲಿ, ಕುರುಬ ಸಮಾಜವು ಎಸ್ ಟಿ ಗೆ ಸೇರಿಸೋದು ನಿಶ್ಚಿತ ಎಂದು ನೀವು ಹೇಳಿದ್ದೀರಿ‌. ಈಗ ನೀವು ಯಾರನ್ನು ಸೋಲಿಸಿದ್ದಿರೋ ಅವರೇ ನಿಮ್ಮ‌ ಸಮಾಜಕ್ಕೆ ಎಸ್.ಟಿ ಕೊಡಿಸಬಲ್ಲರು ಎನ್ನುತ್ತಿದ್ದೀರ. ಹಾಗಾದರೆ, ಬಿಜೆಪಿಯಿಂದ ಸಮಸ್ಯೆ ಬಗೆಹರಿಸಲು ಆಗದು ಅಥವಾ ಕೇವಲ ಚುನಾವಣೆ ಗೆಲ್ಲಲು ನೀವೆಲ್ಲರೂ ಸುಳ್ಳು ಹೇಳಿದ್ದೀರಾ ? ಎಂದು ವ್ಯಂಗ್ಯವಾಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಕೋಲಿ, ಕಬ್ಬಲಿಗ, ಕುರುಬ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ದೊರಕಿಸಿಕೊಡೋದಾಗಿ ಬಿಜೆಪಿಯ ನಾಯಕರು ವಾಗ್ದಾನ ಮಾಡಿದ್ದರು. ಮಾಜಿ ಸಚಿವ ಬಾಬುರಾವ್ ಚಿಂಚನಸೂರ ತೊಡೆ ತಟ್ಟುವ ಮೂಲಕ ಗಮನ ಸೆಳೆದಿದ್ದರು. ಎಸ್.ಟಿ. ಮೀಸಲಾತಿ ಕೊಡಿಸೋ ಭರವಸೆ ನೀಡಿದ್ದರೂ, ಯಾವುದೇ ಬೇಡಿಕೆ ಈಡೇರಿಲ್ಲ. ಇದೀಗ ಯು ಟರ್ನ್ ಹೊಡೆದಿರುವ ಬಾಬುರಾವ್ ಚಿಂಚನಸೂರ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಮನಸ್ಸು ಮಾಡಿದರೆ ಕೋಲಿ, ಕಬ್ಬಲಿಗ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ಸುಲಭವಾಗಿ ಸಿಗಲಿದೆ ಎಂದು ಹೇಳಿರುವ ಹೇಳಿಕೆ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

ವರದಿ: ಶಿವರಾಮ ಅಸುಂಡಿ
Published by: HR Ramesh
First published: March 4, 2021, 8:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories