ಕಲಬುರ್ಗಿ(ಫೆ.13) : ಕೇಂದ್ರದ ಎನ್.ಡಿ.ಎ. ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಮತ್ತೊಂದು ಶಾಕ್ ನೀಡಿದೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರ್ಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಜವಳಿ ಪಾರ್ಕ್ ನ್ನು ಕೈಬಿಟ್ಟಿದೆ. ಕೋಲಾರದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಕೋಚ್ ಫ್ಯಾಕ್ಟರಿ ಕೈಬಿಟ್ಟಿರುವ ಕೇಂದ್ರ ಸರ್ಕಾರ, ಅದರ ಬೆನ್ನ ಹಿಂದೆಯೇ ಕಲಬುರ್ಗಿ ಜವಳಿ ಪಾರ್ಕ್ ಯೋಜನೆಗೂ ಎಳ್ಳು ನೀರು ಬಿಟ್ಟಿದೆ. ಕೇಂದ್ರದ ಎನ್ಡಿಎ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಮತ್ತೊಂದು ಶಾಕ್ ನೀಡಿದೆ.
ಯುಪಿಎ ಸರ್ಕಾರ 2011ರಲ್ಲಿ ಕಲಬುರ್ಗಿಗೆ ಜವಳಿ ಪಾರ್ಕ್ ಮಂಜೂರು ಮಾಡಿತ್ತು. ಅದಕ್ಕಾಗಿ ಶಹಾಬಾದ್ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಸ್ಥಳವನ್ನೂ ಮೀಸಲಿಡಲಾಗಿತ್ತು. ಜವಳಿ ಪಾರ್ಕ್ ಸ್ಥಾಪನೆಯಿಂದಾಗಿ ಸುಮಾರು 5 ಜನರಿಗೆ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆಗಳಿತ್ತು. ಆದರೆ ಇದೀಗ ಏಕಾಏಕಿ ಜವಳಿ ಪಾರ್ಕ್ ಸ್ಥಾಪನೆಯನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಆ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಮತ್ತೊಂದು ಶಾಕ್ ನೀಡಿದೆ. ಈಗಾಗಲೇ ಸಣ್ಣೂರು ಬಳಿ ಸ್ಥಾಪಿಸಲು ಉದ್ದೇಶಿಸಿದ್ದ ನ್ಯಾಷನಲ್ ಮ್ಯಾನಿಫ್ಯಾಕ್ಷರ್ ಝೋನ್(ನಿಮ್ಜ್)ಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿತ್ತು. ಜೊತೆಗೆ ಕಲಬುರ್ಗಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಗೂ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಇದೀಗ ಮಂಜೂರಾಗಿದ್ದ ಜವಳಿ ಪಾರ್ಕ್ ಸ್ಥಾಪನೆ ಉದ್ದೇಶವನ್ನೇ ಕೈಬಿಟ್ಟು ಹಿಂದುಳಿದ ಭಾಗದ ಜನರ ಗಾಯದ ಮೇಲೆ ಬರೆ ಎಳೆದಿದೆ.
ಕಲಬುರ್ಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಜವಳಿ ಪಾರ್ಕ್ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದೆ. ಜೊತೆಗೆ ಇದರ ಸ್ಥಾಪನೆಯಿಂದ ಹೆಚ್ಚು ಲಾಭವಾಗುವುದಿಲ್ಲ ಎಂದು ಸ್ಪಷಲ್ ಪರ್ಪಸ್ ವೆಹಿಕಲ್(ಎಸ್.ಎಸ್.ವಿ.) ಕೇಂದ್ರ ಜವಳಿ ಖಾತೆಗೆ ನೀಡಿರುವ ವರದಿಯನ್ನಾಧರಿಸಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಮೋದಿ ಸರ್ಕಾರದಿಂದ ಮತ್ತೊಮ್ಮೆ ಮೋಸ ಎಂದು ಕಿಡಿಕಾರಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಮಂಜೂರಾದ ಯೋಜನೆಗಳಿಗೆ ವಿಶೇಷ ಉದ್ದೇಶಿತ(ಎಸ್.ವಿ.ಪಿ) ಸಂಸ್ಥೆಗಳು ಮುಂದೆ ಬರಲಿಲ್ಲ ಎಂಬ ಕಾರಣ ನೀಡಿ ಇಡೀ ಯೋಜನೆಯನ್ನೇ ರದ್ದುಗೊಳಿಸೋದು ಎಷ್ಟು ಸರಿ ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ. ಎಸ್.ವಿ.ಪಿ. ಸಂಸ್ಥೆಗಳು ಬರಲಿಲ್ಲವೆಂದರೆ ಅವರಿಗೆ ಬೇಕಾದ ರಿಯಾಯಿತಿಗಳನ್ನು ನೀಡಿದರೆ, ಒಂದಷ್ಟು ಮುತುವರ್ಜಿ ವಹಿಸಿದರೆ ಖಂಡೀತಾ ಬರುತ್ತಾರೆ. ಆದರೆ ಕೇಂದ್ರ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬೇಕಿಲ್ಲ ಎಂದು ಪ್ರಿಯಾಂಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮನವಿ ಜಾಧವ್
ಮತ್ತೊಂದೆಡೆ ಸಾಮಾಜಿಕ ಜಾಲ ತಾಣದಲ್ಲಿ ಸಂಸದ ಡಾ.ಉಮೇಶ್ ಜಾಧವ್ ವಿರುದ್ಧವೂ ಪೋಸ್ಟರ್ ಗಳು ಹರಿದಾಡುತ್ತಿದ್ದು, ಅವರ ನಿಷ್ಕ್ರಿಯತೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಬಿಡುಗಡೆ ಮಾಡಿರುವ ಪೋಸ್ಟರ್ ನಲ್ಲಿ ಡಾ.ಉಮೇಶ್ ಮನವಿ ಜಾಧವ್ ಎಂದು ಲೇವಡಿ ಮಾಡಲಾಗಿದೆ. ಉಮೇಶ್ ಜಾಧವ್ ಎಲ್ಲಿಯೇ ಹೋದರೂ ಮನವಿ ಸಲ್ಲಿಸುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಕಲಬುರ್ಗಿಗೆ ಮಂಜೂರಾದ ಜವಳಿ ಪಾರ್ಕ್ ಉಳಿಸಿಕೊಳ್ಳಲಾಗಲಿಲ್ಲ. ಇನ್ನು ಜಮೀನು ಮಂಜೂರು ಮಾಡಿ, ಐದು ಕೋಟಿ ಹಣ ಮೀಸಲಿಟ್ಟು, ಬಜೆಟ್ ನಲ್ಲಿ ಪ್ರಕಟಿಸಿದ ನಂತರವೂ ಕಲಬುರ್ಗಿ ರೈಲ್ವೆ ವಿಭಾಗೀಯ ಕೇಂದ್ರ ಅಸ್ತಿತ್ವಕ್ಕೆ ತರಲಾಗುತ್ತಿಲ್ಲ. ಕಲ್ಯಾಣ ಕರ್ನಾಟಕದ ಯೋಜನೆಗಳನ್ನು ಕಿತ್ತುಕೊಂಡರೂ ಉಮೇಶ್ ಜಾಧವ್ ಚಕಾರ ಎತ್ತುತ್ತಿಲ್ಲ ಎಂದು ಬರೆಯಲಾಗಿದೆ. ಸಂಸದ ಉಮೇಶ್ ಜಾಧವ್, ಮನವಿಗಳ ಜಾಧವ್ ಆಗಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ : ಪಾಕ್ ಹೆಸರು ಹೇಳದಿದ್ದರೆ ಮೋದಿಗೆ ತಿಂದ ಅನ್ನ ಕರಗುವುದಿಲ್ಲ: ಕಲಬುರ್ಗಿಯಲ್ಲಿ ಬೃಂದಾ ಕಾರಟ್ ಟೀಕೆ
ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್ ನಲ್ಲಿಯೂ ಕಲ್ಯಾಣ ಕರ್ನಾಟಕಕ್ಕೆ ಯಾವುದೇ ಸಿಹಿ ಸುದ್ದಿ ಸಿಕ್ಕಿಲ್ಲ. ವಿಶೇಷ ಆರ್ಥಿಕ ವಲಯ, ನಿಮ್ಜ್, ಎಐಐಎಂಎಸ್, ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಗೆ ಒಂದಷ್ಟು ಒತ್ತು ಸಿಗುತ್ತದೆ ಎಂದು ಕೈಗಾರಿಕೋದ್ಯಮಿಗಳು, ಈ ಭಾಗದ ಜನತೆ ನಿರೀಕ್ಷೆಯಿಟ್ಟಿದ್ದರು. ಆದರೆ ಬಜೆಟ್ ಬೆನ್ನಹಿಂದೆಯೇ ಮಂಜೂರಾದ ಜವಳಿ ಪಾರ್ಕ್ ಯೋಜನೆಯನ್ನೇ ಕೇಂದ್ರ ಕಿತ್ತುಕೊಂಡಿರೋದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆ ಆಕ್ರೋಶ ಸಂಸದರ ಕಡೆ ತಿರುಗುವಂತೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ