ಚಿಕ್ಕಮಗಳೂರು: ಮುಳ್ಳಯ್ಯನಗಿರಿ (Mullayanagiri ) ಬೆಟ್ಟ, ಕರ್ನಾಟಕದ (Karnataka) ಅತಿ ಎತ್ತರದ ಶಿಖರ. ಮುಳ್ಳಯ್ಯನಗಿರಿಯು ನಿಸರ್ಗ ಪ್ರೇಮಿಗಳ (Nature Lovers) ಸ್ವರ್ಗ ಎಂದರೆ ತಪ್ಪಾಗಲಾರದು. ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿರುವ ಈ ಬೆಟ್ಟವನ್ನು ನೋಡಲು, ಟ್ರೆಕ್ಕಿಂಗ್ (Trekking) ಹೋಗಲು ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು (Tourists) ಭೇಟಿ ನೀಡುತ್ತಾರೆ. ಹೀಗಾಗಿಯೇ ಅಲ್ಲಿ ಸಾಕಷ್ಟು ಟ್ರಾಫಿಕ್ (Traffic Jam in Mullayanagiri) ಕೂಡ ಉಂಟಾಗುತ್ತಿದೆ. ಈಗ ಈ ಟ್ರಾಫಿಕ್ ಅಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದೆ.
ಖಾಸಗಿ ವಾಹನಗಳಿಗೆ ಬ್ರೇಕ್
ವಾರಾಂತ್ಯ ಬಂದರೆ ಪ್ರವಾಸಿಗರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ ಅಲ್ಲಿನ ರಸ್ತೆಗಳು ವಾಹನಗಳಿಂದ ಕಿಕ್ಕಿರಿದು ತುಂಬಿರುತ್ತವೆ. ಬೆಟ್ಟಕ್ಕೆ ತಲುಪುವ ರಸ್ತೆಗಳು ಕಿರಿದಾಗಿದ್ದರಿಂದ ಕೆಲವರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ದೊಡ್ಡ ಟ್ರಾಫಿಕ್ಜಾಮ್ಗೆ ಕಾರಣರಾಗುತ್ತಾರೆ.
ಅಷ್ಟೇ ಅಲ್ಲ, ಮಾರ್ಗ ಮಧ್ಯೆ ಬರುವ ಪ್ರಾಣಿಗಳಿಗೂ ತೊಂದರೆಯಾಗುತ್ತಿದೆ. ಹೀಗಾಗಿ ಬೆಟ್ಟದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಖಾಸಗಿ ವಾಹನಗಳಿಗೆ ಬ್ರೇಕ್ ಹಾಕಲು ಇಲ್ಲಿನ ಜಿಲ್ಲಾಡಳಿತ ನಿರ್ಧರಿಸಿದೆ.
ಶೀಘ್ರದಲ್ಲೇ ವೈಯಕ್ತಿಕ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗುವುದು ಮತ್ತು ಪ್ರವಾಸಿಗರು ಸಾರ್ವಜನಿಕ ವಾಹನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಭಾಗವಾಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಖಾಸಗಿ ವಾಹನ ಪ್ರವೇಶಕ್ಕೆ ತಡೆ ನೀಡಿ, ಕೆಎಸ್ಆರ್ಟಿಸಿ ಸೇವೆ ನೀಡಲಾಗುತ್ತಿದೆ. ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿರುವ ಚಿಕ್ಕಮಗಳೂರು ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: Chikkamagaluru: ಬಿಜೆಪಿ ಕಾರ್ಯಕರ್ತನ ಕಿರುಕುಳ? ಡೆತ್ನೋಟ್ ಬರೆದಿಟ್ಟು ಅಪ್ರಾಪ್ತ ಬಾಲಕಿ ಆತ್ಮಹತ್ಯೆ
ಬೆಟ್ಟದ ಸುಂದರ ಪರಿಸರವನ್ನು ಸಂರಕ್ಷಿಸುವ ಜತೆಗೆ ವನ್ಯಜೀವಿಗಳಿಗೂ ಮುಕ್ತ ವಾತಾವರಣ ಕಲ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಖಾಸಗಿ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಯೋಜಿಸಿದೆ.
ಇದರಿಂದ ಬೆಟ್ಟದ ಮೇಲಿನ ವಾಹನ ಒತ್ತಡವೂ ತಗ್ಗಲಿದೆ. ಪರಿಸರ ಮಾಲಿನ್ಯವನ್ನೂ ಆದಷ್ಟು ನಿಯಂತ್ರಿಸಬಹುದು ಎನ್ನುವ ಆಶಯದೊಂದಿಗೆ ಯೋಜನೆ ರೂಪಿಸಲಾಗಿದೆ.
ಅಲ್ಲಂಪುರ ಬಳಿ ಖಾಸಗಿ ವಾಹನಗಳ ಪಾರ್ಕಿಂಗ್ಗೆ ಸ್ಥಳ ನಿಗಧಿ
ಚಿಕ್ಕಮಗಳೂರು ಉಪ ಆಯುಕ್ತ ಕೆ.ಎನ್.ರಮೇಶ್ ಮಾತನಾಡಿ, ಅಹಿತಕರ ಘಟನೆಗಳು ನಡೆಯದಂತೆ ಈಗಾಗಲೇ ಮೊಬೈಲ್ ಮತ್ತು ಪೊಲೀಸ್ ತುಕಡಿಗಳನ್ನು ನಿಯೋಜಿಸಿದ್ದೇವೆ.
ಈಗ ಮತ್ತಷ್ಟು ಮುಂಜಾಗ್ರತೆ ಕ್ರಮವಾಗಿ ಅಲ್ಲಂಪುರ ಬಳಿ (17 ಕಿ.ಮೀ.) ಐದು ಎಕರೆ ಭೂಮಿಯನ್ನು ಗುರುತಿಸಿದ್ದೇವೆ. ಅಲ್ಲಿಯೇ ಎಲ್ಲಾ ಪ್ರವಾಸಿಗರು ತಮ್ಮ ವೈಯಕ್ತಿಕ ವಾಹನಗಳನ್ನು ನಿಲ್ಲಿಸಬೇಕು.
ಅಲ್ಲಂಪುರದಿಂದ ಮುಳ್ಳಯ್ಯನಗಿರಿ ನಡುವೆ ಪ್ರವಾಸಿಗರನ್ನು ಕರೆದೊಯ್ಯಲು ಸಾರ್ವಜನಿಕ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ. ಪಾರ್ಕಿಂಗ್ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಖಾಸಗಿ ವಾಹನಗಳ ಪ್ರವೇಶಕ್ಕೆ ತಡೆಹಿಡಿಯಲಾಗುವುದು ಎಂದರು.
ಸ್ವಂತ ವಾಹನಗಳನ್ನು ತೆಗೆದುಕೊಂಡು ಹೋಗುವುದರಿಂದ ಕಸವನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬೆಟ್ಟದಲ್ಲಿ ಸೃಷ್ಟಿ ಮಾಡುತ್ತಿದ್ದಾರೆ, ಎಲ್ಲೆಂದರಲ್ಲಿ ಕಸ, ಬಾಟಲಿ ಬೀಸಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಸಹ ಈ ಕ್ರಮ ಸಹಕಾರಿಯಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಕ್ರಮಕ್ಕೆ ಪರಿಸರ ಪ್ರೇಮಿಗಳ ಸ್ವಾಗತ
ಮುಳ್ಳಯ್ಯನಗಿರಿಯು ಪಶ್ಚಿಮ ಘಟ್ಟಗಳ ಭಾಗವಾಗಿದ್ದು, ದುರದೃಷ್ಟವಶಾತ್ ಭಾರೀ ವಾಹನಗಳ ಸಂಚಾರಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳುವ ನಿಸರ್ಗ ಪ್ರೇಮಿಗಳು ಈ ಕ್ರಮವನ್ನು ಸ್ವಾಗತಿಸಿದ್ದಾರೆ.
ಈ ಬಾರಿ ಅಧಿಕಾರಿಗಳು ಗಂಭೀರವಾಗಿ ಚಿಂತಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಪರಿಸರ ಪ್ರೇಮಿ ಗಿರೀಶ್ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Chikkamagaluru: ಚಿಕ್ಕಮಗಳೂರಿನ ಗಿರಿ-ಪರ್ವತಕ್ಕೆ ನೀಲಿ ಚಿತ್ತಾರ, ಕಾಫಿನಾಡಿನ ಬೆಟ್ಟ-ಗುಡ್ಡಗಳಿಗೆ ಹೊಸ ಬಣ್ಣ!
ಮುಳ್ಳಯ್ಯನಗಿರಿ ಮಾರ್ಗ ಸಾಕಷ್ಟು ಅಂಕುಡೊಂಕಾಗಿದ್ದು, ದೊಡ್ಡ ಪ್ರಪಾತಗಳು ಸಹ ಇವೆ. ಅಪ್ಪಿ ತಪ್ಪಿ ಚಾಲಕ ಎಡವಿದರೆ ಅಪಾಯ ಸಂಭವಿಸಬಹುದು.
ಹೀಗಾಗಿ ಎಲ್ಲಾ ದೃಷ್ಟಿಯಿಂದಲೂ ಈ ಕ್ರಮ ಅಗತ್ಯವಾಗಿದೆ. ಬಹಳ ದಿನಗಳಿಂದ ಸಂಚಾರ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯ ಕಸರತ್ತು ನಡೆಸುತ್ತಿದೆ. ಈ ಹಿಂದೆ ಮುಳ್ಳಯ್ಯನಗಿರಿ ಕಡೆಗೆ ಕೇವಲ 300 ವಾಹನಗಳಿಗೆ ಮಾತ್ರ ಅನುಮತಿ ನೀಡುವಂತೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ