ಬೆಂಗಳೂರು(ಫೆ.23): ಖಾಸಗಿ ಶಿಕ್ಷಣ ಸಂಸ್ಥೆಗಳ ಹೋರಾಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಮತ್ತೆ ಸರ್ಕಾರದ ವಿರುದ್ಧ ತೊಡೆ ತಟ್ಟಲು ಖಾಸಗಿ ಶಾಲೆಗಳ ಒಕ್ಕೂಟ ನಿರ್ಧರಿಸಿದೆ. ಶುಲ್ಕ ಕಡಿತ ವಿಚಾರದಲ್ಲಿ ಸ್ಪೋಟ ಭುಗಿಲೆದ್ದಿದ್ದು, ಸರ್ಕಾರದ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟಗಳು ಕಿಡಿಕಾರಿವೆ. ಶುಲ್ಕ ಕಡಿತ ಪುನರ್ ಪರಿಶೀಲನೆ ಮಾಡಿ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಒತ್ತಾಯಿಸಿದ್ದವು. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ, ಕ್ಯಾಮ್ಸ್, ಮಿಕ್ಸಾ, ಮಾಸ್ , ಕುಸಮ, ಸಿಬಿಎಸ್ ಇ ಹಾಗೂ ಐಸಿಎಸ್ಸಿ ಇ ಒಕ್ಕೂಟಗಳು ಪ್ರತಿಭಟನೆಗೆ ನಿರ್ಧರಿಸಿವೆ. ಹೀಗಾಗಿ ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿವೆ.
ಖಾಸಗಿ ಶಾಲೆಗಳ ಬೇಡಿಕೆಗಳೇನು..?
1. ರಾಜ್ಯ ಸರ್ಕಾರದ ಶೇ.30 ರಷ್ಟು ಶುಲ್ಕ ಕಡಿತದ ಆದೇಶವನ್ನ ಪುನರ್ ಪರಿಶೀಲನೆ ಮಾಡಬೇಕು. ರಾಜ್ಯ ಸರ್ಕಾರ ಶೇ.30 ರಷ್ಟು ಕಡಿತ ಅಂತ ಹೇಳಿದೆ. ಆದರೆ ಆದೇಶದ ಪ್ರಕಾರ ಶೇ.55 ರಿಂದ 65 ರಷ್ಟು ಶುಲ್ಕ ಕಡಿತವಾಗ್ತಿದೆ.
2. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗೆ ಅನುದಾನ ನೀಡುವಂತೆ ಒತ್ತಾಯ
3. ಕಟ್ಟಡ ಸುರಕ್ಷಿತ ಪ್ರಮಾಣ ಪತ್ರ ಹಳೆಯ ಶಾಲೆಗಳಿಗೆ ಕೈ ಬಿಡುವಂತೆ ಒತ್ತಾಯ
4. 1 ರಿಂದ 5 ನೇ ತರಗತಿ ಆರಂಭ ಮಾಡಬೇಕು
5. ಬಿಇಓ, ಡಿಡಿಪಿಐಗಳ ಭ್ರಷ್ಟಾಚಾರ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ
ಇನ್ನೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಆದರೆ ಸರ್ಕಾರ ಯಾವ ಬೇಡಿಕೆಗಳನ್ನೂ ಈಡೇರಿಸದ ಕಾರಣ ಇಂದು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲು ಖಾಸಗಿ ಶಾಲೆಗಳ ಒಕ್ಕೂಟಗಳು ಮುಂದಾಗಿವೆ.
Corona: ಮುಂಬೈನಿಂದ ಮತ್ತೆ ಯಾದಗಿರಿಗೆ ಕೊರೋನಾ ಕಂಟಕವಾಗುತ್ತಾ...?
ಪ್ರತಿಭಟನೆಗೆ ರುಪ್ಸಾ ಬೆಂಬಲವಿಲ್ಲ:
ಇನ್ನು, ಶುಲ್ಕ ಕಡಿತ ವಿಚಾರ ಹೋರಾಟದಿಂದ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಹಿಂದೆ ಸರಿದಿದೆ. ಶಿಕ್ಷಣ ಇಲಾಖೆ ತೆಗೆದುಕೊಂಡ ನಿರ್ಧಾರ ಸ್ವಾಗತಿಸಿದ್ದು, ಪೋಷಕರ ಪರ ನಿಂತಿದೆ.
ರುಪ್ಸಾ ಅಡಿಯಲ್ಲಿ ಸುಮಾರು 13 ಸಾವಿರಕ್ಕೂ ಹೆಚ್ಚು ಬಜೆಟ್ ಶಾಲೆಗಳಿವೆ. ಸಿಬಿಎಸ್ಇ ಹಾಗೂ ಸ್ಟೇಟ್ ಬೋರ್ಡ್ ಇಂಗ್ಲೀಷ್ ಶಾಲೆಗಳಿವೆ. ಶೇ.30 ರಷ್ಟು ಶುಲ್ಕ ಕಡಿತದ ಬಗ್ಗೆ ಸರ್ಕಾರಕ್ಕೆ ರುಪ್ಸಾ ಕಡೆಯಿಂದ ಯಾವುದೇ ತಕರಾರು ಇಲ್ಲ. ಹೀಗಾಗಿ ಇಂದು ಕರೆ ಕೊಟ್ಟಿರುವ ಖಾಸಗಿ ಶಾಲೆಗಳ ಜಂಟಿ ಹೋರಾಟ ಬೆಂಬಲ ಇಲ್ಲ ಎಂದು ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ಪಷ್ಟನೆ ನೀಡಿದ್ದಾರೆ.
ಇಂದು ಆನ್ಲೈನ್ ಕ್ಲಾಸ್ ಬಂದ್
ಶಿಕ್ಷಣ ಸಚಿವರ ದ್ವಂದ, ಅಸ್ಪಷ್ಟ ಹೇಳಿಕೆ ವಿರುದ್ದ ಖಾಸಗಿ ಶಾಲಾ ಒಕ್ಕೂಟ ಪ್ರತಿಭಟಿಸಲಿದ್ದು, ಇಂದು ಆನ್ಲೈನ್ ಕ್ಲಾಸ್ ಬಂದ್ ಆಗಲಿದೆ. ಸರ್ಕಾರದ ಶುಲ್ಕ ಆದೇಶದ ವಿರುದ್ಧ ಖಾಸಗಿ ಶಾಲೆಗಳು ಸಮರ ಸಾರಿವೆ. ಶುಲ್ಕ ಕಡಿತದ ಆದೇಶ ಪುನರ್ ಪರಿಶೀಲಿಸುವಂತೆ ಈಗಾಗಲೇ ಖಾಸಗಿ ಶಾಲೆಗಳು ಆಗ್ರಹಿಸಿದ್ದವು. ಆದ್ರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕದ ಹಿನ್ನೆಲೆ, ಸರ್ಕಾರದ ವಿರುದ್ಧ ಸಮರ ಸಾರಲು ಖಾಸಗಿ ಶಾಲೆಗಳ ಒಕ್ಕೂಟ ಸಜ್ಜಾಗಿದೆ.
10 ಸಾವಿರಕ್ಕೂ ಹೆಚ್ಚು ಜನರು ಇಂದಿನ ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಖಾಸಗಿ ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಶಿಕ್ಷಕರು, ಆಡಳಿತ ಮಂಡಳಿಯವರು ಆಗಮಿಸಲಿದ್ದಾರೆ. ಹೀಗಾಗಿ ಇಂದು ಖಾಸಗಿ ಶಾಲೆಗಳ ಆನ್ ಲೈನ್ ಕ್ಲಾಸ್ ಇರಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ