• Home
  • »
  • News
  • »
  • state
  • »
  • ಕಲಬುರ್ಗಿಯಲ್ಲಿ ತಟ್ಟೆ ಹಿಡಿದು ಭಿಕ್ಷೆ ಬೇಡಿದ ಶಿಕ್ಷಕರು; ಯಾಕೆ ಅಂತ ಗೊತ್ತಾ...?

ಕಲಬುರ್ಗಿಯಲ್ಲಿ ತಟ್ಟೆ ಹಿಡಿದು ಭಿಕ್ಷೆ ಬೇಡಿದ ಶಿಕ್ಷಕರು; ಯಾಕೆ ಅಂತ ಗೊತ್ತಾ...?

ಪ್ರತಿಭಟನೆಯಲ್ಲಿ ಶಿಕ್ಷಕರು

ಪ್ರತಿಭಟನೆಯಲ್ಲಿ ಶಿಕ್ಷಕರು

ಕಲ್ಯಾಣ ಕರ್ನಾಟಕದ ವಿವಿಧ ಮಠಾಧೀಶರ ನೇತೃತ್ವದಲ್ಲಿ ಶಿಕ್ಷಕರು ಭಿಕ್ಷಾಟನೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

  • Share this:

ಕಲಬುರ್ಗಿ (ಫೆ. 9): ಭಾರತದಲ್ಲಿ ಶಿಕ್ಷಕರಿಗೆ ತನ್ನದೇ ಆದ ಸ್ಥಾನವಿದೆ. ಜನತೆ ಗೌರವವನ್ನೂ ಕೊಡುತ್ತಾರೆ. ಕೈಯಲ್ಲಿ ಚಾಕ್ ಪೀಸ್ ಹಿಡಿದು ತರಗತಿ ಕೋಣೆಯಲ್ಲಿ ಪಾಠ ಮಾಡಬೇಕಾದ ಶಿಕ್ಷಕರು ಇಂದು ನಗರದಲ್ಲಿ ಬೀದಿಗೆ ಇಳಿದಿದ್ದರು. ಚಾಕ್ ಪೀಸ್ ಹಿಡಿಯೋ ಕೈಯಲ್ಲಿ ತಟ್ಟೆ ಹಿಡಿದುಕೊಂಡ ಶಿಕ್ಷಕರು ಭಿಕ್ಷಾಟನೆ ಮಾಡಿದರು.ಖಾಸಗಿ ಶಾಲೆಗಳೆಂದ್ರೆ ಸರ್ಕಾರಕ್ಕೆ ಅನಾದರ. ಅದ್ರಲ್ಲಿಯೂ ಖಾಸಗಿ ಕನ್ನಡ ಶಾಲೆಗಳತ್ತ ಸರ್ಕಾರ ಗಮನ ಹರಿಸ್ತಾನೆ ಇಲ್ಲ. ಕೋವಿಡ್ ಬಂದ ನಂತ್ರವಂತೂ ಖಾಸಗಿ ಶಾಲೆಗಳ ಹಾಗೂ ಖಾಸಗಿ ಶಿಕ್ಷಕರ ಸ್ಥಿತಿ ಅಧೋಗತಿಗೆ ಹೋಗಿದೆ. ಇಷ್ಟಾದ್ರೂ ಸರ್ಕಾರ ಖಾಸಗಿ ಶಾಲೆಗಳು, ಶಿಕ್ಷಕರ ನೆರವಿಗೆ ಮುಂದಾಗ್ತಿಲ್ಲ. ತಮ್ಮನ್ನು ನಡೆಸಿಕೊಳ್ಳುವ ರೀತಿಗೆ ರಾಜ್ಯ ಸರ್ಕಾರದ ವಿರುದ್ಧ ಶಿಕ್ಷಕರು ಈ ರೀತಿಯಾಗಿ ಆಕ್ರೋಶ ಹೊರ ಹಾಕಿದ್ದಾರೆ. ಖಾಸಗಿ ಶಾಲೆಗಳಿಗೆ ಅನುದಾನ ನೀಡಲು ಆಗ್ರಹಿಸಿ ಕಲಬುರ್ಗಿಯಲ್ಲಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು. ಖಾಸಗಿ ಶಾಲೆಗಳ ಶಿಕ್ಷಕರು, ಆಡಳಿತ ಮಂಡಳಿ ಪ್ರತಿನಿಧಿಗಳು ಈ ಹೋರಾಟದಲ್ಲಿ ಭಾಗಿಯಾಗಿದ್ದರು.


ಕಲ್ಯಾಣ ಕರ್ನಾಟಕದ ವಿವಿಧ ಮಠಾಧೀಶರ ನೇತೃತ್ವದಲ್ಲಿ ಶಿಕ್ಷಕರು ಭಿಕ್ಷಾಟನೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಕೆ.ಕೆ.ಆರ್.ಡಿ.ಬಿ. ಕಛೇರಿವರೆಗೆ ಭಿಕ್ಷಾಟನಾ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಕೈಯಲ್ಲಿ ತಟ್ಟೆ ಹಿಡಿದ ಶಿಕ್ಷಕರು ಭಿಕ್ಷೆ ಬೇಡುತ್ತಾ ತಮ್ಮನ್ನು ಕಾಪಾಡುವಂತೆ ಗೋಗರೆದರು.


ಕೋವಿಡ್ ನಂತರ ಖಾಸಗಿ ಶಾಲೆಗಳ ಸ್ಥಿತಿ ಅಧೋಗತಿಗೆ ಹೋಗಿದೆ. ಸಂವಿಧಾನದ ಕಲಂ 371(ಜೆ) ಅನ್ವಯ ಶಿಕ್ಷಣ ಸಂಸ್ಥೆಗಳಿಗೆ ನೆರವಿಗೆ ಅವಕಾಶವಿದ್ರೂ ಸರ್ಕಾರ ನಿರಾಸಕ್ತಿ ತೋರಿಸುತ್ತಿದೆ. ಸರ್ಕಾರದ ಧೋರಣೆಯಿಂದಾಗಿ ಖಾಸಗಿ ಶಾಲೆಗಳು ಬೀದಿಗೆ ಬರೋ ಸ್ಥಿತಿ ಎದುರಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನೆರವು ನೀಡುವಂತೆ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಸುನಿಲ್ ಹುಡಗಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ಶಿಕ್ಷಕರು ಬೀದಿಗಿಳಿದು ಭಿಕ್ಷಾಟನೆ ಮಾಡುವ ಹಂತಕ್ಕೆ ಹೋಗುವವರೆಗೂ ರಾಜ್ಯ ಸರ್ಕಾರ ಸುಮ್ಮನೇ ಕುಳಿತಿರೋದಕ್ಕೆ ಮಠಾಧೀಶರು ಆಕ್ರೋಶ ವ್ಯಕ್ತಪಡಿಸಿದರು.


ಈ ವೇಳೆ ಮಾತನಾಡಿದ ತಡೋಳ ಸಂಸ್ಥಾನ ಮಠದ ರಾಜಶೇಖರ ಶಿವಾಚಾರ್ಯರು ರಾಜ್ಯ ಸರ್ಕಾರದ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ಭಿಕ್ಷೆ ಬೇಡೋ ಸ್ಥಿತಿಗೆ ತಂದಿಟ್ಟಿದೆ ಶ್ರೀಗಳು ಕಿಡಿ ಕಾರಿದರು. ಶಿಕ್ಷಕರು ಭಿಕ್ಷಾಟನೆ ಮಾಡಿ ಹೋರಾಟ ಮಾಡ್ತಿರೋದು ಹಾಸ್ಯಾಸ್ಪದ. ಶಿಕ್ಷಕರಿಗೆ ಭಿಕ್ಷಾಟನೆ ಮಾಡೋ ಪರಿಸ್ಥಿತಿ ಬರುತ್ತೇ ಅಂದ್ರೆ ಆ ನಾಡು ಉದ್ಧಾರ ಆಗ್ಲಿಕ್ಕೆ ಸಾಧ್ಯವಿಲ್ಲ. ಶಿಕ್ಷಕ ಮಾತ್ರ ದೇಶವನ್ನು, ನಾಡನ್ನು, ರಾಷ್ಟ್ರ ಕಟ್ಟಲು ಸಾಧ್ಯ. ಆದರೆ ಇದು ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ಒದಗಿಸಲು ಸರ್ಕಾರ ನೆರವು ನೀಡಬೇಕೆಂದು ಆಗ್ರಹಿಸಿದರು.


ಇದನ್ನು ಓದಿ: ಲಿಂಗಾಯತ ಒಳಪಂಗಡಗಳಿಗೆ ಮೀಸಲಾತಿ; ಸಿಎಂ ಬಳಿ ಮನವಿಗೆ ಬಂದ ಸ್ವಾಮೀಜಿಗಳ ನಿಯೋಗ


ಭಿಕ್ಷಾಟನೆ ನಡೆಸೋ ಸ್ಥಳಕ್ಕೆ ಭೇಟಿ ನೀಡಿದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ,  ಕೆ.ಕೆ.ಆರ್.ಡಿ.ಬಿ. ರಚಿಸುವ ವೇಳೆ ಏನು ನಿಯಮ ಮಾಡಿದ್ದಾರೋ ನೋಡ್ತೇನೆ. 371(ಜೆ) ಅಡಿ ಖಾಸಗಿ ಹಾಗೂ ಅನುದಾನಿತ ಶಾಲೆಗಳಿಗೆ ನೆರವು ನೀಡಲು ಅವಕಾಶವಿದ್ರೆ ಸೂಕ್ತ ಕ್ರಮ ಕೈಗೊಳ್ತೇನೆ. ಈ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮತ್ತಿತರರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ವಿಚಾರವನ್ನು ರಾಜ್ಯ ಸರ್ಕಾರದ ಗಮವನ್ನೂ ಸೆಳೆಯಲಾಗುತ್ತದೆ ಎಂದರು.


ದತ್ತಾತ್ರೇಯ ಪಾಟೀಲ ಭರವಸೆ ನಂತ್ರ ಶಿಕ್ಷಕರು ಭಿಕ್ಷಾಟನೆ ಹೋರಾಟ ನಿಲ್ಲಿಸಿದರು. ಶೀಘ್ರವೇ ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸೋದಾಗಿ ಎಚ್ಚರಿಸಿದರು. ಪ್ರತಿಭಟನೆ ವೇಳೆ ಓರ್ವ ಶಿಕ್ಷಕ ಮತ್ತು ಓರ್ವ ಶಿಕ್ಷಕಿ ಅಸ್ವಸ್ಥಗೊಂಡ ಘಟನೆಯೂ ನಡೆದಿದೆ. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಯಿತು.


(ವರದಿ - ಶಿವರಾಮ ಅಸುಂಡಿ)

Published by:Seema R
First published: