ಕನ್ನಡ ಬಳಸಿದ್ರೆ ಈ ಶಾಲೆಯಲ್ಲಿ ದಂಡ ಹಾಕ್ತಾರಂತೆ: ಸ್ವಾಮಿ ಇದು ತಾಯಿ ಭುವನೇಶ್ವರಿಯ ನಾಡು, ಇಲ್ಲೂ ಕನ್ನಡ ಮಾತಾಡ್ಬಾರ್ದು ಅಂದ್ರೆ ಹೇಗೆ?

ಇನ್ನು ಕನ್ನಡ ಮಾತಾಡದಂತೆ ಸುತ್ತೋಲೆ ಹೊರಡಿಸಿದ ವಿಚಾರ ತಿಳಿಯುತ್ತಿದ್ದಂತೆಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗರಂ ಆಗಿದೆ. ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ ನೇತೃತ್ವದಲ್ಲಿ ಶಿಕ್ಷಣತಜ್ಞ ವಿ.ಪಿ ನಿರಂಜನಾರಾಧ್ಯ ಸೇರಿದಂತೆ ಹಲವರ ನಿಯೋಗ ಭೇಟಿ ನೀಡಿದೆ.

ಕನ್ನಡ ಬಾವುಟ

ಕನ್ನಡ ಬಾವುಟ

 • Share this:
  ಬೆಂಗಳೂರು(ಫೆ.03): ನಮ್ಮ ಪಕ್ಕದ ರಾಜ್ಯ ತಮಿಳುನಾಡಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುತ್ತಾರೆ ಎಂಬ ಸುದ್ದಿ ಕೇಳಿದ್ದೇವೆ. ಈ ಮಧ್ಯೆಯೇ ಕರ್ನಾಟಕದಲ್ಲೇ ಕನ್ನಡ ಮಾತಾಡಿದರೆ ದಂಡ ವಿಧಿಸ್ತಾರೆ ಎಂಬ ಅಚ್ಚರಿ ಸಂಗತಿ ಬಯಲಿಗೆ ಬಂದಿದೆ. ನಗರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕನ್ನಡ ಮಾತಾಡುವುದೇ ಅಪರಾಧವಂತೆ. ಹೀಗೆಂದು ಖಾಸಗಿ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸುತ್ತೋಲೆ ಹೊರಡಿಸಿದೆ. 

  ಹೌದು, ನಗರದ ಹೊರಮಾವು ಬಳಿಯ ಚನ್ನಸಂದ್ರ ಪ್ರತಿಷ್ಠಿತ ಎಸ್ಎ​​ಲ್ಎಸ್​​​ ಇಂಟರ್​​ನ್ಯಾಷನಲ್​​ ಗುರುಕುಲ ಶಾಲೆಯೊಂದರಲ್ಲಿ​​ ಕನ್ನಡ ಮಾತಾಡದಂತೆ ವಿದ್ಯಾರ್ಥಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಮೊದಲ ಬಾರಿಗೆ ಕನ್ನಡ ಮಾತಾಡಿದರೆ ರೂ. 50 ಮತ್ತು ಎರಡನೇ ಸಲ ಕನ್ನಡ ಮಾತಾಡಿದರೆ ರೂ. 100 ದಂಡ ವಿಧಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.  ಇನ್ನು ಕನ್ನಡ ಮಾತಾಡದಂತೆ ಸುತ್ತೋಲೆ ಹೊರಡಿಸಿದ ವಿಚಾರ ತಿಳಿಯುತ್ತಿದ್ದಂತೆಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗರಂ ಆಗಿದೆ. ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ ನೇತೃತ್ವದಲ್ಲಿ ಶಿಕ್ಷಣತಜ್ಞ ವಿ.ಪಿ ನಿರಂಜನಾರಾಧ್ಯ ಸೇರಿದಂತೆ ಹಲವರ ನಿಯೋಗ ಭೇಟಿ ನೀಡಿದೆ. ಕನ್ನಡ ಮಾತಾಡಂತೆ ಸುತ್ತೋಲೆ ಹೊರಡಿಸಿದ ಶಾಲೆಯ ಆಡಳಿತ ಮಂಡಳಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ.

  ಇನ್ನು ಈ ಸಂಬಂಧ ನ್ಯೂಸ್​​-18 ಕನ್ನಡದೊಂದಿಗೆ ಮಾತಾಡಿದ ಕನ್ನಡಪರ ಹೋರಾಟಗಾರರೊಬ್ಬರು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ಕನ್ನಡವನ್ನು ಅವಮಾನಿಸಲಾಗುತ್ತಿದೆ. ಇಂತಹ ಖಾಸಗೀ ಶಾಲೆಗಳ ಪರವಾನಗಿ ರದ್ದುಗೊಳಿಸಬೇಕು. ಮಹಾರಾಷ್ಟ್ರದಲ್ಲಿ ಮರಾಠಿ ಮಾತಾಡದಿದ್ದರೆ ಉಳಿಗಾಲವಿಲ್ಲ. ತಮಿಳುನಾಡಿನಲ್ಲಿ ತಮಿಳು ಮಾತಾಡದವರಿಗೆ ಬದುಕಲು ಸಾಧ್ಯವೇ ಇಲ್ಲ. ಹಾಗೆಯೇ ಕರ್ನಾಟಕದಲ್ಲೂ ಕನ್ನಡ ಮಾತಾಡದಿದ್ದರೆ, ಮಾತಾಡಬಾರದು ಎಂದರೆ ದಂಡ ವಿಧಿಸಬೇಕು. ಇಂತಹ ಶಾಲೆಗಳ ಪರವಾನಗಿ ರದ್ದುಗೊಳಿಸಬೇಕು ಎಂದರು.

  ಇದನ್ನೂ ಓದಿ: ವರ್ಷದಲ್ಲಿ ಕನ್ನಡಿಗರು ಮಾಡುವ ಖರ್ಚು 4 ಲಕ್ಷ 20 ಸಾವಿರ ಕೋಟಿ: ಗ್ರಾಹಕ ಸೇವೆ ನಮ್ಮ ಭಾಷೆಯಲ್ಲಿ ನೀಡಿ ಆಂದೋಲನ

  ಹೀಗೆ ಮಾತು ಮುಂದುವರೆಸಿದ ಅವರು, ಶಾಲೆ ಇರುವುದು ಕನ್ನಡ ನಾಡಿನಲ್ಲಿ. ಅವರಿಗೆ ವ್ಯಾಪಾರಕ್ಕೆ ಮತ್ತು ಹಣ ಸಂಪಾದನೆಗೆ ಕನ್ನಡ ಬೇಕು. ಆದರೆ, ಶಾಲೆಯಲ್ಲಿ ಲಕ್ಷಗಟ್ಟಲೇ ಹಣ ಕೊಟ್ಟು ಓದುವ ಕನ್ನಡಿಗರ ಮಕ್ಕಳು ಕನ್ನಡ ಮಾತಾಡುವಂತಿಲ್ಲ. ಇದ್ಯಾವ ನ್ಯಾಯ, ಕೂಡಲೇ ಸರ್ಕಾರದ ಈ ಶಾಲೆಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

  ಬೆಳಿಗ್ಗೆಯಷ್ಟೇ ಕನ್ನಡ ವಿರೋಧಿ ಕೆಲಸ ಮಾಡುವ ನಾಡದ್ರೋಹಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ನ್ಯಾ. ಕೆ.ಎಲ್​​ ಮಂಜುನಾಥ್​​ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಈಗ ಕನ್ನಡ ವಿರೋಧಿ ಕೃತ್ಯವೊಂದು ಬೆಳಕಿಗೆ ಬಂದಿದ್ದು, ನಾಡಭಾಷೆ ಮಾತಾಡಂತೆ ಸುತ್ತೋಲೆ ಹೊರಡಿಸಿದ ಶಾಲೆಯ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆಯಾ? ಎಂದು ಕಾದು ನೋಡಬೇಕಿದೆ.
  First published: