ಬೆಂಗಳೂರು: ಸಿಲ್ಕ್ ಬೋರ್ಡ್ (Silk Board) ಮತ್ತು ಕೆಆರ್ ಪುರಂ (KR Puram) ನಡುವೆ ₹14.3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುಮಾರು 17 ಕಿ.ಮೀ ಉದ್ದದ ‘ಬಸ್ ಆದ್ಯತಾ ಪಥ’ವನ್ನು (Priority Bus Lane) ಭಾರೀ ವಿಜೃಂಭಣೆಯಿಂದ ಉದ್ಘಾಟಿಸಲಾಗಿತ್ತು. ಆದರೆ ಈ ಬಸ್ ಆದ್ಯತಾ ಪಥ ಉದ್ಘಾಟನೆಗೊಂಡ ಕೇವಲ ಮೂರೇ ವರ್ಷಕ್ಕೆ ಕಣ್ಮರೆಯಾಗಿದೆ. ಹೌದು, 2019ರಲ್ಲಿ ಸಿಲ್ಕ್ ಬೋರ್ಡ್ ಮತ್ತು ಕೆಆರ್ ಪುರಂ ನಡುವೆ ಸುಮಾರು ₹14.3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಿಯಾರಿಟಿ ಬಸ್ ಲೇನ್ ಉದ್ಘಾಟನೆಗೊಳಿಸಲಾಗಿತ್ತು. ಇದರಿಂದ ಬಿಎಂಟಿಸಿ (BMTC) ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಮಯದ ಉಳಿತಾಯವಾಗಿ ಬಿಎಂಟಿಸಿಯಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಮೂರೇ ವರ್ಷಕ್ಕೆ ಈ ಬಸ್ ಲೇನ್ ಇನ್ನಿಲ್ಲದಂತೆ ಕಣ್ಮರೆಯಾಗಿದೆ.
ನಮ್ಮ ಮೆಟ್ರೋ ಸಂಸ್ಥೆ (ಬಿಎಂಆರ್ಸಿಎಲ್) ನಗರದ ಹೊರ ವರ್ತುಲ ರಸ್ತೆಯ ಕಾಮಗಾರಿಯನ್ನು ಆರಂಭಿಸಿದ ಹಿನ್ನೆಲೆ ಬಸ್ ಆದ್ಯತಾ ಪಥವನ್ನು ಗುರುತಿಸಲು ಅಳವಡಿಸಲಾಗಿದ್ದ ಎಲ್ಲಾ ಬೋಲಾರ್ಡ್ಗಳನ್ನು ಕಿತ್ತು ಹಾಕಲು ನಿರ್ಧರಿಸಿದ್ದು, ಇದರಿಂದ ರಸ್ತೆ ಕಿರಿದಾಗಿ ಬಸ್ ಸಂಚಾರಕ್ಕೆ ತೊಡಕುಂಟಾಗಿದೆ. ಬಿಎಂಆರ್ಸಿಎಲ್ ಹೊರ ವರ್ತುಲ ರಸ್ತೆಯಲ್ಲಿ 750 ಪಿಲ್ಲರ್ಗಳನ್ನು ನಿರ್ಮಿಸುತ್ತಿದ್ದು, ಸದ್ಯ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆಯ ಮಧ್ಯಭಾಗದಲ್ಲಿ ನಿರ್ಮಾಣ ಕಾರ್ಯಗಳಿಗೆ ಅನುಕೂಲವಾಗುವಂತೆ 9 ಮೀಟರ್ ಸ್ಥಳಾವಕಾಶ ಬೇಕಾಗುತ್ತದೆ.
ಇದನ್ನೂ ಓದಿ: COVID 19: ಮಾಸ್ಕ್ ಧರಿಸಿ ಬಸ್ ಹತ್ತಿ; ಪ್ರಯಾಣಿಕರಿಗೆ ಬಿಎಂಟಿಸಿ ಸೂಚನೆ
ಈ ಹಿಂದೆ ಬಸ್ಲೇನ್ನಲ್ಲಿ ಎಲ್ಲಾ ರೀತಿಯ ವಾಹನ ಸಂಚರಿಸಲು ಅನುವು ಮಾಡಿಕೊಡುವಂತೆ ವಿವಿಧ ವಲಯದಿಂದ ಬೇಡಿಕೆಗಳು ಬಂದಿದ್ದವು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಇತ್ತಿಚೆಗಷ್ಟೇ ಬಸ್ಲೇನ್ಗಾಗಿ ಮೀಸಲಿಟ್ಟ ರಸ್ತೆಯಲ್ಲಿ ಮರು ಡಾಂಬರೀಕರಣ ಮಾಡಿದ್ದರು. ಆದರೆ ಬಸ್ಲೇನ್ಗಳನ್ನು ಬಳಸದಂತೆ ಸೂಚಿಸುವ ಫಲಕಗಳು, ಸಿಸಿಟಿವಿನ ಕಣ್ಗಾವಲಿನ ಎಚ್ಚರಿಕೆ ಫಲಕ ಮಾತ್ರ ಇನ್ನೂ ಹಾಗೇ ಇವೆ.
25000 ಬೊಲಾರ್ಡ್ ತೆರವಿಗೆ ನಿರ್ಧಾರ
ಬಿಬಿಎಂಪಿ ಅಧಿಕಾರಿಗಳು ಹೊರ ವರ್ತುಲ ರಸ್ತೆಯ ಎರಡೂ ಬದಿಗಳಲ್ಲಿ ಬಸ್ ಲೇನ್ಗಳ ಸುರಕ್ಷತೆಯ ಬಗ್ಗೆ ಅಳವಡಿಸಲಾಗಿದ್ದ 25000 ಫೈಬರ್ ಬೋಲಾರ್ಡ್ಗಳನ್ನು ತೆಗೆದು ಹಾಕಲು ನಿರ್ಧರಿಸಿದ್ದು, ನಗರ ಭೂ ಸಾರಿಗೆ ನಿರ್ದೇಶನಾಲಯದ ಯೋಜನೆಯಂತೆ ಅಳವಡಿಸಲಾಗಿದ್ದ ಬೋಲಾರ್ಡ್ಗಳನ್ನು ತೆಗೆಯುವ ಜವಾಬ್ದಾರಿಯನ್ನು ಬಿಬಿಎಂಪಿಯು ಬಿಎಂಆರ್ಸಿಎಲ್ಗೆ ವಹಿಸಿದೆ.
ಇದನ್ನೂ ಓದಿ: Namma Metro: ಬೆಂಗಳೂರಿನಲ್ಲಿ ನಿರ್ಮಾಣ ಆಗ್ತಿದೆ ದೇಶದ ಅತಿ ಎತ್ತರದ ಮೆಟ್ರೊ ನಿಲ್ದಾಣ; ನಮ್ಮ ಮೆಟ್ರೋಗೆ ಮತ್ತೊಂದು ಗರಿಮೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಅಧಿಕಾರಿಯೊಬ್ಬರು, ನಾವು ಬೋಲಾರ್ಡ್ಗಳನ್ನು ತೆಗೆದು ಮತ್ತು ಮೆಟ್ರೋ ಕಾಮಗಾರಿಯ ಕೆಲಸ ಮುಗಿದ ನಂತರ ಮತ್ತೆ ಅಲ್ಲೇ ಅಳವಡಿಸಲು ಸೂಚಿಸಿದ್ದೇವೆ. ಬಸ್ಲೇನ್ಗಳಿಗೆ ಅಳವಡಿಸುವ ಯಾವುದೇ ವಸ್ತುಗಳು ವ್ಯರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಯುಎಲ್ಟಿ ಆಯುಕ್ತೆ ವಿ ಮಂಜುಳಾ, ಮೆಟ್ರೋ ಕಾಮಗಾರಿ ಪ್ರಾರಂಭವಾದ ನಂತರ ರಸ್ತೆ ಕಿರಿದಾದ ಕಾರಣ ಬಸ್ ಸಂಚರಿಸುವ ರಸ್ತೆಯನ್ನು ತೆಗೆದು ಹಾಕಲಾಗಿದೆ. ಮೆಟ್ರೋ ಕಾಮಗಾರಿ ಮುಗಿದ ನಂತರ ಬೋಲಾರ್ಡ್ಗಳನ್ನು ಪುನಃ ಮರುಸ್ಥಾಪಿಸಲು ನಾವು ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ಮರುಸ್ಥಾಪನೆಗೆ ಬಿಎಂಆರ್ಸಿಎಲ್ಗೆ ಸೂಚನೆ
ಇದೇ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಹಿರಿಯ ಟ್ರಾಫಿಕ್ ಅಧಿಕಾರಿಯೊಬ್ಬರು, ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಆರಂಭವಾದ ನಂತರ ಬಸ್ ಸಂಚಾರದ ಮುಖ್ಯ ರಸ್ತೆಯ ಅಗಲವು ಕಿರಿದಾಯಿತು. ಇದರಿಂದ ವ್ಯಾಪಕ ಟ್ರಾಫಿಕ್ ಜಾಂ ಕೂಡ ಉಂಟಾಗಿದೆ. ಹೊರ ವರ್ತುಲ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಖ್ಯ ರಸ್ತೆಯಲ್ಲಿ ಸಂಚರಿಸುವ ಬದಲು ಸರ್ವೀಸ್ ರಸ್ತೆಗಳನ್ನು ಬಳಸುವಂತೆ ಬಸ್ ಚಾಲಕರಿಗೆ ಸೂಚಿಸಲು ಬಿಎಂಟಿಸಿಗೆ ತಿಳಿಸಿದ್ದೇವೆ. ಇದರಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯವಿದೆ. ಮೆಟ್ರೋ ಯೋಜನೆ ಪೂರ್ಣಗೊಳ್ಳುವವರೆಗೆ ಬಸ್ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಸರ್ವಿಸ್ ರಸ್ತೆಗಳಿಗೆ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ