ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರಧಾನಿ ಭೇಟಿಗೆ ತೆರಳಿದ್ದ ಬಿಎಸ್​ವೈಗೆ ಮತ್ತೆ ನಿರಾಸೆ; ಭೇಟಿಗೆ ಸಿಗದ ಮೋದಿ

ಇಂದು ಭೇಟಿ ಸಾಧ್ಯವಾಗದ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ ಮತ್ತೊಮ್ಮೆ ಭೇಟಿಯಾಗಲು ನಿರ್ಧಾರ ಮಾಡಲಾಗಿದೆ. ನಾಳೆ ಬೆಳಿಗ್ಗೆಯೂ ಭೇಟಿ ಸಾಧ್ಯವಾಗದಿದ್ದರೆ ದೆಹಲಿಗೆ ತೆರಳಿ ಪ್ರಧಾನಿ ಭೇಟಿ ಮಾಡಿ ಮನವರಿಕೆ ಮಾಡಲು ಸಿಎಂ ಬಿಎಸ್​ವೈ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

news18-kannada
Updated:January 2, 2020, 10:00 PM IST
ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರಧಾನಿ ಭೇಟಿಗೆ ತೆರಳಿದ್ದ ಬಿಎಸ್​ವೈಗೆ ಮತ್ತೆ ನಿರಾಸೆ; ಭೇಟಿಗೆ ಸಿಗದ ಮೋದಿ
ರಾಜಭವನಕ್ಕೆ ಆಗಮಿಸಿದ ಮೋದಿ ಅವರನ್ನು ಸ್ವಾಗತಿಸಿದ ರಾಜ್ಯಪಾಲ ವಜುಬಾಯಿ ವಾಲಾ.
  • Share this:
ಬೆಂಗಳೂರು: ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಅವರಿಗೆ ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ವಿವರಿಸಿ, ಬಗೆಹರಿಸುವಂತೆ ಮನವಿ ಮಾಡಲು ರಾಜಭವನಕ್ಕೆ ತೆರಳಿದ್ದ ಸಿಎಂ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ನಿಯೋಗ ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ ಆಗಿದೆ.

ಪ್ರಧಾನಿ ಮೋದಿ ಭೇಟಿಗೆ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಸಚಿವ ಜೆ.ಸಿ‌.ಮಾಧುಸ್ವಾಮಿ ಅವರು ರಾಜಭವನಕ್ಕೆ ತೆರಳಿದ್ದರು. ಆದರೆ, ಸಿಎಂ ಬಿಎಸ್​ವೈ ನೇತೃತ್ವದ ನಿಯೋಗ ಭೇಟಿಗೆ ಪ್ರಧಾನಿ ಮೋದಿ ಅವಕಾಶವನ್ನೇ ನೀಡಲಿಲ್ಲ. ನಿಯೋಗ ಬರುವ ಮುನ್ನವೇ ಮೋದಿ ಅವರು ವಿಶ್ರಾಂತಿಗೆ ತೆರಳಿದ್ದರು. ಹೀಗಾಗಿ ಪ್ರಧಾನಿ ಭೇಟಿಗೆ ಭದ್ರತಾ ಸಿಬ್ಬಂದಿ ಬಿಡಲಿಲ್ಲ. ಆದ್ದರಿಂದ ಬಿಎಸ್​ವೈ ನಿಯೋಗ ರಾಜಭವನದಿಂದ ವಾಪಸ್ಸಾಯಿತು.

ಮಹದಾಯಿ ವಿವಾದ ವಿಚಾರ, ಮೇಕೆದಾಟು ವಿಚಾರ, ಕಾವೇರಿ ನದಿ ನೀರು ಹಂಚಿಕೆ ವಿಚಾರ, ಅತಿವೃಷ್ಟಿಯಿಂದಾದ ಹಾನಿ ಪರಿಹಾರಕ್ಕೆ ಹೆಚ್ಚಿನ ವಿಶೇಷ ಅನುದಾನ ಬಿಡುಗಡೆ  ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲು ಸಿಎಂ ಬಿಎಸ್​ವೈ ನಿರ್ಧರಿಸಿದ್ದರು. ಅದಕ್ಕಾಗಿ 10 ದಿನಗಳ ಹಿಂದೆಯೇ ಪಿಎಂ ಭೇಟಿ ವೇಳೆ ಚರ್ಚಿಸಬೇಕಾದ ವಿಚಾರಗಳ ಮಾಹಿತಿಯನ್ನು ಸಿಎಂ ಬಿಎಸ್​ವೈ ಸಿದ್ದಪಡಿಸಿಕೊಂಡು, ಇಂದು ವರದಿಯೊಂದಿಗೆ ತೆರಳಿದ್ದರು. ಆದರೆ, ಭೇಟಿಗೆ ಪ್ರಧಾನಿ ಅವರೇ ಸಿಗಲಿಲ್ಲ.

ಇಂದು ಭೇಟಿ ಸಾಧ್ಯವಾಗದ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ ಮತ್ತೊಮ್ಮೆ ಭೇಟಿಯಾಗಲು ನಿರ್ಧಾರ ಮಾಡಲಾಗಿದೆ. ನಾಳೆ ಬೆಳಿಗ್ಗೆಯೂ ಭೇಟಿ ಸಾಧ್ಯವಾಗದಿದ್ದರೆ ದೆಹಲಿಗೆ ತೆರಳಿ ಪ್ರಧಾನಿ ಭೇಟಿ ಮಾಡಿ ಮನವರಿಕೆ ಮಾಡಲು ಸಿಎಂ ಬಿಎಸ್​ವೈ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಟ್ವಿಟರ್​ನಲ್ಲಿ ಟಾಪ್​ ಟ್ರೆಂಡಿಂಗ್​ ಆಯ್ತು #GobackModi ಹ್ಯಾಷ್​ಟ್ಯಾಗ್!

ಡಿಆರ್​ಡಿಒ ಕಾರ್ಯಕ್ರಮ ಮುಗಿಸಿ ಪ್ರಧಾನಿ ಅವರ ಕಾರಿನಲ್ಲಿ ಬಿಎಸ್​ವೈ ಒಟ್ಟಿಗೆ ಆಗಮಿಸಿದ್ದರು. ಬಳಿಕ ರಾಜಭವನಕ್ಕೆ ಬರುತ್ತಿದ್ದಂತೆ ರಾಜ್ಯಪಾಲರು ಪ್ರಧಾನಿಯನ್ನು ಸ್ವಾಗತಿಸಿದರು. ನಂತರ ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಪ್ರಧಾನಿ ನರೇಂದ್ರ ಮೋದಿ‌ ಇಬ್ಬರು ಕೆಲ ಕಾಲ ಚರ್ಚೆ ಪ್ರತ್ಯೇಕವಾಗಿ ಚರ್ಚೆ ಮಾಡಿದ್ದರು. ಈ ವೇಳೆ ಸಿಎಂ ಬಿಎಸ್​ವೈ ಬೇರೊಂದು ಕೊಠಡಿಯಲ್ಲಿ ಕಾದು ಕುಳಿತಿದ್ದರು. ನಂತರ ಪಿಎಂ ಭೇಟಿಗೆ  ಅವಕಾಶ ಸಾಧ್ಯವಿಲ್ಲ ಎಂದು ಎಸ್​ಪಿಜಿ ಸಿಬ್ಬಂದಿ ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ. 20 ನಿಮಿಷ ಕಾದು ನಂತರ ಸಿಎಂ ತಮ್ಮ ಮನೆಗೆ ವಾಪಸ್ಸಾದರು.
Published by: HR Ramesh
First published: January 2, 2020, 10:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading