ರಾಜ್ಯಸಭೆಯಲ್ಲಿ ಪ್ರಧಾನಿಯಿಂದ ದೇವೇಗೌಡರ ಗುಣಗಾನ; ರೈತರನ್ನು ಮಾತುಕತೆಗೆ ಆಹ್ವಾನಿಸಿದ ನರೇಂದ್ರ ಮೋದಿ

ದೇವೇಗೌಡರ ಜೀವನ ರೈತರಿಗೆ ಮೀಸಲಾಗಿದೆ. ದೇವೇಗೌಡರು ಕೃಷಿ ಯೋಜನೆಗಳ ಬಗ್ಗೆ ನಮಗೆ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಅವರಿಗೆ ನಾನು ಅಭಾರಿಯಾಗಿದ್ದೇನೆ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ

  • Share this:
ನವದೆಹಲಿ (ಫೆ. 8): ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಜಂಟಿ ಅಧಿವೇಶನದಲ್ಲಿ ನಡೆದಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಭಾಷಣವನ್ನು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಬಹಿಷ್ಕರಿಸಿದ್ದರು. ಈ ಮೂಲಕ ರೈತರ ಪ್ರತಿಭಟನೆಗೆ ಕಾಂಗ್ರೆಸ್​, ಆಮ್​ ಆದ್ಮಿ ಪಕ್ಷಗಳ ಜೊತೆಗೆ ಜೆಡಿಎಸ್ ಕೂಡ ಬೆಂಬಲ ಸೂಚಿಸಿತ್ತು. ಆದರೆ, ಇಂದು ರಾಜ್ಯಸಭೆಯಲ್ಲಿ ತಮ್ಮ ಭಾಷಣದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಜಿ ಪ್ರಧಾನಮಂತ್ರಿ ಹೆಚ್​.ಡಿ ದೇವೇಗೌಡರ ಗುಣಗಾನ ಮಾಡಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನನ್ನ ರೈತ ಸಹೋದರರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದೇನೆ ಎಂದು ದೇವೇಗೌಡರು ಹೇಳಿದ್ದರು. ಅಲ್ಲದೆ, ಈ ಬಗ್ಗೆ ರಾಜ್ಯಸಭೆಯಲ್ಲಿಯೂ ಮಾತನಾಡಿದ್ದ ದೇವೇಗೌಡರು, ನಾನು ನನ್ನ ಜೀವನದ ಕೊನೆಯ ದಿನಗಳನ್ನು ಎಣಿಸುತ್ತಿದ್ದೇನೆ. ಕೇಂದ್ರ ಸರ್ಕಾರ ರೈತರ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಸರ್ಕಾರ ರೈತರನ್ನು ಮಾತುಕತೆಗೆ ಆಹ್ವಾನಿಸಿ, ಅವರ ಮನವೊಲಿಸಬೇಕು. ಇದಕ್ಕೆ ರಾಜ್ಯಸಭಾ ಸದಸ್ಯರು ಕೂಡ ಜೊತೆಯಾಗುತ್ತೇವೆ. ಸರ್ಕಾರ ತನ್ನ ಮತ್ತು ರೈತರ ನಡುವೆ ಗೋಡೆ ಕಟ್ಟಿಕೊಂಡರೆ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ ಎಂದು ಹೇಳಿದ್ದರು.

ಈ ಕುರಿತಾಗಿ ಇಂದು ರಾಜ್ಯಸಭೆಯಲ್ಲಿ ದೇವೇಗೌಡರ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ದೇವೇಗೌಡರು ರೈತರಿಗಾಗಿ ಜೀವನವನ್ನು ಸವೆಸಿದವರು. ದೇವೇಗೌಡರ ಜೀವನ ರೈತರಿಗೆ ಮೀಸಲಾಗಿದೆ. ದೇವೇಗೌಡರು ಕೃಷಿ ಯೋಜನೆಗಳ ಬಗ್ಗೆ ನಮಗೆ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಅವರು ನಾವು ಮಾಡಿದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಕೃಷಿ ಕಾಯ್ದೆಯ ಕುರಿತಾದ ಚರ್ಚೆಗೆ ದೇವೇಗೌಡರು ಗಾಂಭೀರ್ಯತೆ ತಂದುಕೊಟ್ಟಿದ್ದಾರೆ. ದೇವೇಗೌಡರಿಗೆ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.ದೇಶಾದ್ಯಂತ ತಿಂಗಳುಗಳಿಂದ ನಡೆಯುತ್ತಿರುವ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆ ಇನ್ನೂ ಕಾವೇರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯಸಭೆಯಲ್ಲಿ ತಮ್ಮ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ರೈತರ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಸಿಖ್ಖರ ಮನಸಿನಲ್ಲಿ ಯಾರೋ ವಿಷದ ಬೀಜ ಬಿತ್ತುತ್ತಿದ್ದಾರೆ. ಸರ್ಕಾರ ಎಲ್ಲ ವರ್ಗದ ರೈತರಿಗೂ ನ್ಯಾಯ ಕೊಡಿಸಲು ಕಾನೂನನ್ನು ಜಾರಿಗೆ ತಂದಿದೆ. ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಪ್ರತಿಭಟನೆ ನಡೆಸುತ್ತಿರುವವರು ಧರಣಿ ಕೈಬಿಟ್ಟು ಮಾತುಕತೆಗೆ ಬನ್ನಿ. ಈ ಕಾನೂನಿನಲ್ಲಿ ಏನು ಸಮಸ್ಯೆಯಿದೆ ಎಂಬುದರ ಬಗ್ಗೆ ಕೂತು ಚರ್ಚಿಸೋಣ ಎಂದು ಮೋದಿ ರೈತರ ಮನವೊಲಿಕೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: Narendra Modi: ಕೃಷಿ ಕಾಯ್ದೆ ಬಗ್ಗೆ ಮನಮೋಹನ್ ಸಿಂಗ್ ಹೇಳಿದ್ದನ್ನೇ ನಾವು ಮಾಡಿದ್ದೇವೆ; ಕಾಂಗ್ರೆಸ್​ಗೆ ಪ್ರಧಾನಿ ಮೋದಿ ಚಾಟಿ

ಕೃಷಿ ಕಾಯ್ದೆಗಳ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿದ್ದು ಆಶ್ಚರ್ಯವೇನಲ್ಲ. ಒಂದು ಮನೆಯೊಳಗಿನ ಸದಸ್ಯರಲ್ಲೇ ಹಲವು ಅಭಿಪ್ರಾಯಗಳಿರುತ್ತವೆ. ಅಂಥದ್ದರಲ್ಲಿ ದೇಶದ ಕೋಟ್ಯಂತರ ಜನರಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಅಸಹಜವೇನಲ್ಲ. ಆದರೆ, ನಾವು ಜಾರಿಗೆ ತಂದಿರುವ ಕಾನೂನಿನಲ್ಲಿ ಕೊರತೆ ಏನಿದೆ? ಸಮಸ್ಯೆ ಏನಿದೆ? ಎಂಬುದನ್ನು ಚರ್ಚೆ ಮಾಡಿ. ಒಟ್ಟಿಗೇ ಕುಳಿತು ಚರ್ಚಿಸಿ, ಆ ಸಮಸ್ಯೆಯನ್ನು ಬಗೆಹರಿಸೋಣ. ನಾವು ಮುಂದೆ ಹೋಗಬೇಕೆಂಬ ಸ್ವಾರ್ಥದಿಂದ ದೇಶವನ್ನು ಹಿಂದಕ್ಕೆ ಎಳೆಯುವುದು ಸರಿಯಲ್ಲ ಎಂದು ವಿಪಕ್ಷಗಳ ವಿರುದ್ಧ ಮೋದಿ ಆಕ್ರೋಶ ಹೊರಹಾಕಿದ್ದಾರೆ.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, 1930ರ ಕೃಷಿ ಕಾನೂನಿನಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಕೃಷಿ ಕಾಯ್ದೆ ರೈತರನ್ನು ತಮಗೆ ಬೇಕಾದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದಂತೆ ತಡೆಯುತ್ತಿವೆ. ಕೃಷಿ ಕ್ಷೇತ್ರದ ಏಳಿಗೆಗೆ ಈ ಕಾಯ್ದೆಯಿಂದ ತೊಡಕು ಉಂಟಾಗುತ್ತಿದೆ. ಹೀಗಾಗಿ, ಈ ಕಾಯ್ದೆಯನ್ನು ತೆಗೆದುಹಾಕುತ್ತೇವೆ ಎಂದು ಭಾಷಣ ಮಾಡಿದ್ದರು. ಆದರೆ, ಅವರ ಅಧಿಕಾರಾವಧಿಯಲ್ಲಿ ಕೃಷಿ ಕಾಯ್ದೆಗೆ ತಿದ್ದುಪಡಿ ತರಲು ಸಾಧ್ಯವಾಗಲೇ ಇಲ್ಲ. ಮನಮೋಹನ್ ಸಿಂಗ್ ಹೇಳಿದ್ದನ್ನೇ ಈಗ ಮೋದಿ ಮಾಡಿದ್ದಾರೆ ಎಂದು ನೀವು ಹೆಮ್ಮೆ ಪಡಬೇಕು. ಆದರೂ ಕಾಂಗ್ರೆಸ್​ನವರು ಈಗ ಯೂಟರ್ನ್ ಹೊಡೆಯುತ್ತಿದ್ದೀರ ಎಂದು ವಿಪಕ್ಷ ಕಾಂಗ್ರೆಸ್​ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಟಿ ಬೀಸಿದ್ದಾರೆ.
Published by:Sushma Chakre
First published: