ಕೊರೋನಾ ನಿಯಂತ್ರಣದಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ವಿಫಲ; ಕಾಂಗ್ರೆಸ್ ನಾಯಕ ಎಸ್​.ಆರ್. ಪಾಟೀಲ್ ವಾಗ್ದಾಳಿ

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ ಎಸ್​.ಆರ್. ಪಾಟೀಲ್, ಭೂಮಿ ರೈತರಿಗೆ ತಾಯಿ ಸಮಾನ. ಕೃಷಿಕರಿಗೆ ಭೂಮಿಯೇ ತಾಯಿ. ರಾಜ್ಯ ಸರ್ಕಾರ ತಾಯಿ ಮಕ್ಕಳನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದೆ ಎಂದರು.

news18-kannada
Updated:July 16, 2020, 2:44 PM IST
ಕೊರೋನಾ ನಿಯಂತ್ರಣದಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ವಿಫಲ; ಕಾಂಗ್ರೆಸ್ ನಾಯಕ ಎಸ್​.ಆರ್. ಪಾಟೀಲ್ ವಾಗ್ದಾಳಿ
ಎಸ್​.ಆರ್. ಪಾಟೀಲ್
  • Share this:
ಬಾಗಲಕೋಟೆ (ಜು, 16): ದೇಶದಲ್ಲಿ ಕೊರೊನಾ ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ  ನೂರಕ್ಕೆ ನೂರು ವಿಫಲರಾಗಿದ್ದಾರೆ. ಫೆಬ್ರವರಿಯಿಂದಲೇ ವಿದೇಶಿದಿಂದ ಬಂದವರನ್ನು ವಿಮಾನ ನಿಲ್ದಾಣದಿಂದಲೇ ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ದರೆ ಲಾಕ್​ಡೌನ್, ಸೀಲ್ ಡೌನ್ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಭಾರತ ದೇಶ ಕೋವಿಡ್ -19ದಿಂದ ಮುಕ್ತವಾಗಿರುತ್ತಿತ್ತು ಎಂದು ಬಾಗಲಕೋಟೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಎಸ್ .ಆರ್. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಅಮೇರಿಕಾದ ಅಧ್ಯಕ್ಷರ ಸ್ವಾಗತ, ಮಧ್ಯಪ್ರದೇಶ ಸರ್ಕಾರ ಉರಳಿಸುವಲ್ಲಿ ಕಾಲಹರಣ ಮಾಡಿತು. ಆ ಬಳಿಕ ಮಾರ್ಚ್  22ರಿಂದ  ಲಾಕ್ ಡೌನ್ ಮಾಡಿದರು. ಲಾಕ್ ಡೌನ್ ಸಡಿಲಿಕೆ ನಂತರ ಇದೀಗ ತೀವ್ರಗತಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಬೆಂಗಳೂರು ಸೇರಿ 7 ಜಿಲ್ಲೆ ಅಲ್ಪಾವಧಿ ಲಾಕ್ ಡೌನ್ ಮಾಡಿದ್ದಾರೆ. ಅಲ್ಪಾವಧಿ ಲಾಕ್  ಡೌನ್ ದಿಂದ ಖಂಡಿತವಾಗಿ ಕೊರೊನಾ ನಿಯಂತ್ರಣ ಆಗೋದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಕೊರೊನಾ ನಿಯಂತ್ರಣದ ವೈಫಲ್ಯದ ಜವಾಬ್ದಾರಿಯನ್ನು ಕೇಂದ್ರ, ರಾಜ್ಯ ಸರ್ಕಾರ ಹೊರಬೇಕು ಎಂದು ಎಸ್​.ಆರ್. ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ಕಟುಕರಾಗಬೇಡಿ, ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ; ವೈದ್ಯರಿಗೆ ಸಚಿವ ಡಾ. ಕೆ. ಸುಧಾಕರ್ ಸೂಚನೆ

ನಮ್ಮ ದೇಶದ ಆರ್ಥಿಕ ಪರಿಸ್ಥಿತಿ 50 ವರ್ಷದ ಹಿಂದಕ್ಕೆ ಹೋಗಿದೆ. ಇಡೀ ರಾಜ್ಯದ ಜನ ಭಯಭೀತರಾಗಿದ್ದಾರೆ. ಬೆಂಗಳೂರು ಪರಿಸ್ಥಿತಿ ಹದಗೆಟ್ಟು ಹೋಗಿದೆ. ಬೆಂಗಳೂರಿಗೆ ಹೋಗಲು ಭಯವಾಗುತ್ತಿದೆ. ಜನ ಬೆಂಗಳೂರು ತೊರೆಯುತ್ತಿದ್ದಾರೆ. ಬೀದರ್, ಯಾದಗಿರಿ, ಕಲಬುರ್ಗಿ, ಬಳ್ಳಾರಿ ಗಡಿಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು‌, ರಾಜ್ಯ ಸರ್ಕಾರ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ 5 ಸಾವಿರ ಬೆಡ್​ಗಳುಳ್ಳ ಕೋವಿಡ್ ಆಸ್ಪತ್ರೆಯನ್ನು ಬೆಂಗಳೂರು ಮಾದರಿಯಲ್ಲಿ ನಿರ್ಮಿಸಲು ಆಗ್ರಹಿಸಿದ್ದರು. ಆಡಳಿತ ಎಲ್ಲವೂ ಬೆಂಗಳೂರು ಕೇಂದ್ರಿಕೃತವಾಗಿದೆ. ಉತ್ತರ ಕರ್ನಾಟಕಕ್ಕೆ ಉಪಯೋಗ ಆಗುವ ಇಲಾಖೆಯನ್ನು ಬೆಳಗಾವಿಗೆ ಸ್ಥಳಾಂತರಿಸಬೇಕು. ಕೋವಿಡ್ ಸಂದರ್ಭದಲ್ಲಿ ಬೆಂಗಳೂರಿಗೆ ಉತ್ತರ ಕರ್ನಾಟಕ ಭಾಗದ ಜನ ಹೋಗಲು ಹಿಂಜರಿಯುತ್ತಿದ್ದಾರೆ. ಇಲಾಖೆ ಸ್ಥಳಾಂತರಿಸಿದರೆ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಲಿದೆ. ಜೊತೆಗೆ ಸೋಂಕು ನಿಯಂತ್ರಣಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದ ಈ ಗ್ರಾಮಕ್ಕೆ ಹೊರಗಿನವರು ಬಂದರೆ 14 ದಿನ ಕ್ವಾರಂಟೈನ್ ಕಡ್ಡಾಯ!

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಎಸ್ ಆರ್ ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದು, ಕೃಷಿಕರಲ್ಲದವರು ಇದೀಗ ಭೂಮಿ, ಮಣ್ಣನ್ನು ಬಿಡುತ್ತಿಲ್ಲ. ಅಂತವರಿಗೆ ಭೂ ಖರೀದಿಗೆ ಅವಕಾಶ ನೀಡಿದ್ದಾರೆ. ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿ ಸುಗ್ರಿವಾಜ್ಞೆ ಹೊರಡಿಸಿದ್ದಾರೆ. ಬಂಡವಾಳಶಾಹಿ, ಭ್ರಷ್ಟಾಚಾರದಿಂದ ಹಣ ಗಳಿಸಿದ ರಾಜಕಾರಣಿಗಳು, ಅಧಿಕಾರಿಗಳು ಭೂಮಿ ಖರೀದಿಗೆ ಅವಕಾಶ ನೀಡಿದ್ದಾರೆ. ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತನೆಗೆ ತಿದ್ದುಪಡಿ ಕಾಯ್ದೆ ಅವಕಾಶ ನೀಡಿದಂತಾಗಿದೆ. ತುಂಗಭದ್ರಾ ಯೋಜನೆಗೆ ಆಂಧ್ರಪ್ರದೇಶ ಜನ ಬಂದು ಭೂಮಿ ಖರೀದಿಸಿದ್ದಾರೆ. ಮುಂದೆ ಆಲಮಟ್ಟಿ ಅಣೆಕಟ್ಟೆಯ ಯೋಜನೆ ಅಚ್ಚುಕಟ್ಟು ಪ್ರದೇಶದಲ್ಲೂ ಹೊರರಾಜ್ಯದವರು ಬಂದು ಭೂಮಿ ಖರೀದಿಸ್ತಾರೆ. ಸಣ್ಣ ರೈತರು ಭಿಕಾರಿಯಾಗುವ ಪರಿಸ್ಥಿತಿ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕಂದಾಯ ಸಚಿವ ಆರ್ ಅಶೋಕ್  ಮಾಹಿತಿ ತಂತ್ರಜ್ಞಾನ ಹೇಳಿಕೆಗೆ ಇದೇ ವೇಳೆ  ಟಾಂಗ್ ನೀಡಿದ ಎಸ್ ಆರ್ ಪಾಟೀಲ್,  ನಮ್ಮ ರೈತರಿಗೆ ತಂತ್ರಜ್ಞಾನ ಗೊತ್ತಿಲ್ಲವೇನು? ರೈತರ ಮನೆಯಲ್ಲೂ ಡಾಕ್ಟರ್, ಇಂಜಿನಿಯರ್ ಇದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರದಿಂದ ಗಳಿಸಿದ ಹಣದಿಂದ ಭೂಮಿ ಖರೀದಿಗೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಭೂಮಿ ರೈತರಿಗೆ ತಾಯಿ ಸಮಾನ, ಕೃಷಿಕರಿಗೆ ತಾಯಿಯೇ ಭೂಮಿ. ರಾಜ್ಯ ಸರ್ಕಾರ ತಾಯಿ ಮಕ್ಕಳನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದೆ. ಇದೊಂದು ಅತ್ಯಂತ ಹೀನ ಕರಾಳ ಶಾಸನ. ತಾಯಿಯನ್ನು ಮಾರಾಟ ಮಾಡುವಂತ ಅತ್ಯಂತ ಹೀನ ಕಾನೂನಿದು ಎಂದು ಆಕ್ರೋಶ ವ್ಯಕ್ತಪಡಿಸಿದರು.
Published by: Sushma Chakre
First published: July 16, 2020, 2:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading