Raksha Ramaiah| ಪ್ರಧಾನಿ ಮೋದಿ-ಅಮಿತ್ ಶಾ ದೇಶದ ನಿಜವಾದ ಡ್ರಗ್​ ಡೀಲರ್​ಗಳು;​ ರಕ್ಷಾ ರಾಮಯ್ಯ ಆರೋಪ

ಯತ್ನಾಳ್ ಅವರಿಗೂ ಮಾನಸಿಕ ಚಿಕಿತ್ಸೆ ಕೊಡಿಸುತ್ತೇವೆ. ನಳೀನ್ ಕುಮಾರ್ ಕಟೀಲ್ ಹಾಗೂ ಬಸನಗೌಡ ಪಾಟೀಲ್ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ. ಬಿಜೆಪಿ ನಾಯಕರ ಇಂತಹ ಧೋರಣೆಯನ್ನು ಯುವ ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ರಕ್ಷಾ ರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ನರೇಂದ್ರ ಮೊದಿ-ಅಮಿತ್ ಶಾ.

ನರೇಂದ್ರ ಮೊದಿ-ಅಮಿತ್ ಶಾ.

 • Share this:
  ಬೆಂಗಳೂರು (ಅಕ್ಟೋಬರ್​ 20): ಮಂಗಳವಾರ ಹುಬ್ಬಳ್ಳಿಯ (Hubballi) ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್​ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (BJP State President Nalin Kumar Kateel), "ರಾಹುಲ್ ಗಾಂಧಿ (Rahul Gandhi) ಒಬ್ಬ ಡ್ರಗ್ ಅಡಿಕ್ಟ್ (Drug Addict), ಡ್ರಗ್ ಪೆಡ್ಲರ್(Drug Peddler). ಆತ ಒರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಅಂತ ವರದಿ ಇವೆ. ಅದಕ್ಕೆ ಸಾಕಷ್ಟು ಸಾಕ್ಷಿ ಇದೆ" ಎಂದು ಆರೋಪಿಸಿದರು. ಆದರೆ, ಕಟೀಲ್ ಅವರ ಆರೋಪಕ್ಕೆ ಇಂದು ಪ್ರತ್ಯಾರೋಪ ಮಾಡಿರುವ ಯೂತ್ ಕಾಂಗ್ರೆಸ್​ ಅಧ್ಯಕ್ಷ ರಕ್ಷಾ ರಾಮಯ್ಯ (Raksha Ramaiah), "ನಿಜವಾದ ಡ್ರಗ್ ಡೀಲರ್, ಡ್ರಗ್ ಪೆಡ್ಲರ್ ಎಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ" ಎಂದು ತಿರುಗೇಟು ನೀಡಿದ್ದಾರೆ.

  ರಾಹುಲ್ ಗಾಂಧಿ ಅವರ ಮೇಲೆ ಮಾಡಿರುವ ಟೀಕೆಗೆ ಪ್ರತಿಕ್ರಿಯೆ ನೀಡಿರುವ ರಕ್ಷಾ ರಾಮಯ್ಯ, "ಗುಜರಾತ್‌‌ನ ಅದಾನಿ ಮಾಲೀಕತ್ವದ ಬಂದರಿನಲ್ಲಿ ಮೂರು ಸಾವಿರ ಕೆ.ಜಿ. ಹೆರಾಯಿನ್ ಪತ್ತೆಯಾಗಿದ್ದು, ಈ ಬಗ್ಗೆ ಯಾವುದಾದರೂ ತನಿಖೆ ನಡೆಯುತ್ತಿದೆಯೇ? ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ" ಎಂದು ಪ್ರಶ್ನಿಸಿದ್ದಾರೆ.

  ಅಲ್ಲದೆ, "ಗುಜರಾತ್ ಅತಿ ಹೆಚ್ಚು ಮಂದಿ ಡ್ರಗ್ ಪ್ಲಡ್ಲರ್‌ಗಳ ತಾಣವಾಗಿದೆ. ಇವರನ್ನು ದೊಡ್ಡ ದೊಡ್ಡ ರಾಜಕಾರಣಿಗಳು ಪೋಷಿಸುತ್ತಿದ್ದಾರೆ. ತಮ್ಮ ರಾಜ್ಯದ ಈ ಅಕ್ರಮ ವ್ಯವಹಾರದ ಬಗ್ಗೆ ಪ್ರಧಾನಿ, ಕೇಂದ್ರ ಗೃಹ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ. ಅದಾನಿ ಪೋರ್ಟ್‌ನಲ್ಲಿ ದೊರೆತ ಮಾದಕ ದ್ರವ್ಯದ ಬಗ್ಗೆ ಬಿಜೆಪಿ ಮಟ್ಟದಲ್ಲಿ ಏನಾದರೂ ಚರ್ಚೆಯಾಗಿದೆಯೇ? ಯಾವುದಾದರೂ ಮಾಹಿತಿ ಬಿಡುಗಡೆ ಮಾಡಲಾಗಿದೆಯೇ?

  ಗುಜರಾತ್‌ನಲ್ಲಿ ಅತಿ ಹೆಚ್ಚು ಮಾದಕ ದ್ರವ್ಯ ದೊರೆಯುತ್ತಿದೆ. ನಿಷೇಧಿತ ಕ್ಯಾಟಮೈನ್ ಮಾದಕ ವಸ್ತು ವಿಶ್ವದಲ್ಲಿಯೇ ಅತಿ ಹೆಚ್ಚು ದೊರೆಯುವ ತಾಣ ಎಂದರೆ ಅದು ಗುಜರಾತ್, ಹೀಗಿರುವಾಗ ರಾಹುಲ್ ಗಾಂಧಿ ಅವರ ಮೇಲೆ ಯಾವ ಉದ್ದೇಶದಿಂದ ಟೀಕೆ ಮಾಡುತ್ತಿದ್ದೀರಿ" ಎಂದು ವಾಗ್ದಾಳಿ ನಡೆಸಿದ್ದಾರೆ.

  "ಗುಜರಾತ್‌ನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದ್ದರೂ, ಕಾಳಸಂತೆಯಲ್ಲಿ ಅತಿ ಹೆಚ್ಚು ಮದ್ಯ ಸಿಗುತ್ತಿದೆ. ಮದ್ಯ ಮಾರಾಟ ತಡೆಗೆ ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ? ಇದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಅರ್ಥಮಾಡಿಕೊಂಡು ಇನ್ನೊಬ್ಬರ ಬಗ್ಗೆ ಸದಾಶಯದಿಂದ ಮಾತನಾಡಬೇಕು. ಕಟೀಲ್ ಅವರದ್ದು ಅತ್ಯಂತ ಕೀಳು ಅಭಿರುಚಿಯ ಮತ್ತು ಹತಾಶೆಯ ಹೇಳಿಕೆಯಾಗಿದೆ" ಎಂದು ರಕ್ಷಾ ರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

  ಇದನ್ನೂ ಓದಿ: Congress vs BJP Twitter War| ರಾಹುಲ್ ಗಾಂಧಿ ಮಾದಕ ವ್ಯಸನಿಯೇ? ಬಿಜೆಪಿಗರು ನಾಗರೀಕರಂತೆ ವರ್ತಿಸಿ ಎಂದ ಡಿ.ಕೆ. ಶಿವಕುಮಾರ್​

  ಅದಾನಿ ಬಂದರಿನಲ್ಲಿ ಮೂರು ಸಾವಿರ ಕೆ.ಜಿ.ಗೂ ಹೆಚ್ಚು ಮಾದಕ ದ್ರವ್ಯ ಪತ್ತೆಯಾಗಿತ್ತು. ಈ ಬಗ್ಗೆ ಯಾವ ತನಿಖೆ ನಡೆಯುತ್ತಿದೆ. ಗುಜರಾತ್ ಮಾದಕ ದ್ರವ್ಯದ ತಾಣವಾಗಿದ್ದು, ಇದು ಗುಜರಾತ್ ಮಾದರಿಯ ಆಡಳಿತವೇ? ಗಾಂಧಿ ನಾಡು ಗುಜರಾತ್‌ನಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದ್ದರೂ ಕಾಳಸಂತೆಯಲ್ಲಿ ಅತಿ ಹೆಚ್ಚು ಮದ್ಯ ಅಕ್ರಮವಾಗಿ ಮಾರಾಟವಾಗುತ್ತಿದೆ. ಇದನ್ನು ಮೊದಲು ನಿಯಂತ್ರಿಸಲು ಬಿಜೆಪಿ ನಾಯಕರು ಮುಂದಾಗಲಿ. ನಂತರ ಇನ್ನೊಬ್ಬರ ಬಗ್ಗೆ ಟೀಕಿಸಲಿ.

  ನಳೀನ್ ಕುಮಾರ್ ಕಟೀಲ್ ಅವರನ್ನು ನಿಮ್ಹಾನ್ಸ್‌ಗೆ ಸೇರಿಸಲು ನಮ್ಮ ಪಕ್ಷದಿಂದ ಈಗಾಗಲೇ ಆಂಬುಲೆನ್ಸ್ ಅನ್ನು ಬಿಜೆಪಿ ಕಚೇರಿಗೆ ಕಳುಹಿಸಲಾಗಿದೆ. ಇದೇ ರೀತಿ ರಾಹುಲ್ ಗಾಂಧಿ ಅವರನ್ನು ಟೀಕಿಸಿರುವ ಮತ್ತೊರ್ವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ನಿಮ್ಹಾನ್ಸ್‌ಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು" ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: Nalin Kumar Kateel: 'ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್': ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ

  ಯತ್ನಾಳ್ ಅವರಿಗೂ ಮಾನಸಿಕ ಚಿಕಿತ್ಸೆ ಕೊಡಿಸುತ್ತೇವೆ. ನಳೀನ್ ಕುಮಾರ್ ಕಟೀಲ್ ಹಾಗೂ ಬಸನಗೌಡ ಪಾಟೀಲ್ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ. ಬಿಜೆಪಿ ನಾಯಕರ ಇಂತಹ ಧೋರಣೆಯನ್ನು ಯುವ ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ರಕ್ಷಾ ರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
  Published by:MAshok Kumar
  First published: