ಉದ್ಯಮಿಗಳ ಸಾವಿರಾರು ಕೋಟಿ ಸಾಲಮನ್ನಾ ಮಾಡಿದ ಪ್ರಧಾನಿಗೆ ರೈತರ ಅಳಲು ಕೇಳಿಸುತ್ತಿಲ್ಲ; ಸಿದ್ದರಾಮಯ್ಯ ಕಿಡಿ

ಹದಿನಾಲ್ಕು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ಇದರಿಂದ ರೈತರ ಬೆಳೆಗೆ ದುಪ್ಪಟ್ಟು ಬೆಲೆ ಸಿಗಲಿದೆ ಎಂದು ಹೇಳಿಕೊಳ್ಳುತ್ತಿರುವುದು ಅಮಾಯಕ ರೈತರ ಹಾದಿ ತಪ್ಪಿಸುವ ಕುತಂತ್ರ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು (ಜೂನ್ 02); ಲಾಕ್‌ಡೌನ್‌ನಿಂದಾಗಿ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಮ್ಮ ಸಾಲವನ್ನು ಮನ್ನ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ದೇಶದ ಉದ್ಯಮ ಪತಿಗಳ ಸಾವಿರಾರು ಕೋಟಿ ಸಾಲಮನ್ನಾ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಅಳಲು ಕೇಳಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಕ್ಯಾಬಿನೆಟ್ ಸಭೆ ನಡೆದಿತ್ತು. ಈ ಸಭೆಯಲ್ಲಿ ರೈತರ 14 ಬೆಲೆಗಳಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಮಾಡುವುದಾಗಿ ತೀರ್ಮಾ‌ನ ತೆಗೆದುಕೊಳ್ಳಲಾಗಿತ್ತು. ಈ ಕುರಿತು ಇಂದು ಸರಣಿ ಟ್ವೀಟ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು,

"ಹದಿನಾಲ್ಕು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ಇದರಿಂದ ರೈತರ ಬೆಳೆಗೆ ದುಪ್ಪಟ್ಟು ಬೆಲೆ ಸಿಗಲಿದೆ ಎಂದು ಹೇಳಿಕೊಳ್ಳುತ್ತಿರುವುದು ಅಮಾಯಕ ರೈತರ ಹಾದಿ ತಪ್ಪಿಸುವ ಕುತಂತ್ರ. ರೈತರ ಬೆಳೆಯ ಉತ್ಪಾದನಾ ವೆಚ್ಚಕ್ಕೆ ಶೇಕಡಾ 50ರಷ್ಟು ಲಾಭವನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆ ನೀಡುತ್ತೇವೆ ಎಂಬುದು ಮೋದಿಯ ಘೋಷಣೆಯಾಗಿತ್ತು. ಆದರೆ, ಉತ್ಪಾದನಾ ವೆಚ್ಚದ ಲೆಕ್ಕದಲ್ಲಿಯೇ ಸರ್ಕಾರ ರೈತರಿಗೆ ಮೋಸ ಮಾಡಿದೆ" ಎಂದು ಕಿಡಿಕಾರಿದ್ದಾರೆ.ಕೃಷಿ ತಜ್ಞ ಸ್ವಾಮಿನಾಥನ್ ವರದಿ ಪ್ರಕಾರ ರೈತರ ಬೆಳೆಗೆ ನೀಡುವ ಯೋಗ್ಯ ಬೆಲೆ ಎಂದರೆ 'C-2 ಉತ್ಪಾದನಾ ವೆಚ್ಚ'ಕ್ಕಿಂತ ಎರಡು ಪಟ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ. 'C-2 ಉತ್ಪಾದನಾ ವೆಚ್ಚ' ಎಂದರೆ ಬೀಜ, ಗೊಬ್ಬರ ಮತ್ತು ಹೊರಕೂಲಿಯ ಜೊತೆ ಭೂ ಸವಕಳಿ ವೆಚ್ಚ, ಹೂಡಿದ ಬಂಡವಾಳದ ಮೇಲಿನ ಬಡ್ಡಿ ಮತ್ತು ರೈತ ಕುಟುಂಬದ ಕೂಲಿಯನ್ನೂ ಪರಿಗಣಿಸಬೇಕಾಗುತ್ತದೆ. ಆದರೆ, ನಿನ್ನೆ ನೀಡಲಾದ ಬೆಂಬಲ ಬೆಲೆಯಲ್ಲಿ C-2 ಸೂತ್ರ ಪಾಲಿಸಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ, ಕೊರೊನಾ ಹಾವಳಿಯ ಈ ಕಾಲದಲ್ಲಿ ರೈತರ ಉತ್ಪಾದನಾ ವೆಚ್ಚ ಗಣನೀಯವಾಗಿ ಏರುವ ಸಾಧ್ಯತೆ ಇದೆ. ಈ ಸಂದರ್ಭಕ್ಕೆ ತಕ್ಕಂತೆ ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸಿ ನೆರವಾಗಬೇಕಾಗಿದ್ದ ಪ್ರಧಾನಿ ಮೋದಿ ಸರ್ಕಾರ ರೈತರಿಗೆ ಮೋಸ ಮಾಡಿದೆ. ಉದ್ಯಮಿಗಳ ಸಾವಿರಾರು ಕೋಟಿ ರೂಪಾಯಿ ಸಾಲ ಮನ್ನಾ ಮಾಡುತ್ತಿರುವ ಪ್ರಧಾನಿ ರೈತರ ಸಾಲವನ್ನು ಒಂದು ಬಾರಿ ಮನ್ನಾ ಮಾಡಿ ಎಂಬ ರೈತರ ಬೇಡಿಕೆಗೆ ಕಿವಿ ಕೊಟ್ಟಿಲ್ಲ. ಯುಪಿಎ ಸರ್ಕಾರ ಸಾಲ ಮನ್ನಾ ಮಾಡಿದ್ದೇ ಕೊನೆ. ಅಲ್ಲಿಂದೀಚೆಗೆ ನಯಾ ಪೈಸೆ ಸಾಲ ಮನ್ನಾ ಆಗಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ನನ್ನ ಮೇಲೆ ರೈತರ ಋಣವಿದೆ, ಕಾಂಗ್ರೆಸ್‌ನವರದ್ದಲ್ಲ; ಹೆಚ್‌.ಡಿ. ಕುಮಾರಸ್ವಾಮಿ ಕಿಡಿFirst published: