ರಾಮನಗರ: ಜಾನುವಾರು ಸಾಗಾಣಿಕೆ ವೇಳೆ ವ್ಯಕ್ತಿ ಸಾವು ಪ್ರಕರಣದಲ್ಲಿ ಆರೋಪಿಯಾಗಿರುವ, ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli, Hindu Activist) ಸೇರಿದಂತೆ ಐವರು ಆರೋಪಿಗಳನ್ನು ಇಂದು ಸಾತನೂರು ಪೊಲೀಸರು (Satanuru Police) ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ (Court) ಆರೋಪಿಗಳನ್ನು ಏಳು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶ ನೀಡಿದೆ. ಪ್ರಧಾನ ಸಿವಿಲ್ ನ್ಯಾ.ಅಪ್ಪಣ್ಣ ಸವದಿ ಅವರು ಆರೋಪಿಗಳನ್ನು ಪೊಲೀಸರ ವಶಕ್ಕೆ (Police Custody) ನೀಡಿ ಆದೇಶ ನೀಡಿದ್ದಾರೆ.
ವ್ಯೆದ್ಯಕೀಯ ತಪಾಸಣೆಗಳು ಮುಗಿದ ನಂತರ ಪೊಲೀಸರು ಇಂದು ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಕನಕಪುರ ತಾಲೂಕಿನ ಒಂದನೇ ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಕಳೆದ ರಾತ್ರಿ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರನ್ನು ಸಾತನೂರು ಪೋಲಿಸ್ ಠಾಣೆಗೆ ಪೊಲೀಸರು ಕರೆತಂದಿದ್ದರು. ಇನ್ನು, ಬೆಂಗಳೂರು ಮೂಲದ ವಕೀಲರಾದ ನಿಶಾಂತ್ ಕುಶಾಲಪ್ಪ, ಉಮಾಶಂಕರ್ ಅವರು ಪುನೀತ್ ಕೆರೆಹಳ್ಳಿ ಪರವಾಗಿ ವಕಾಲತ್ತು ವಹಿಸಿಕೊಂಡಿದ್ದರು.
ಏನಿದು ಪ್ರಕರಣ?
ಮಾರ್ಚ್ 3 1ರಂದು ಸಾತನೂರು ಬಳಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ 16 ಜಾನುವಾರುಗಳನ್ನು ಪುನೀತ್ ಕೆರೆಹಳ್ಳಿ ಆ್ಯಂಡ್ ಟೀಂ ರಕ್ಷಣೆ ಮಾಡಿತ್ತು. ಆದರೆ ಕ್ಯಾಂಟರ್ ವಾಹನದಲ್ಲಿದ್ದ ಇದ್ರೀಶ್ ಪಾಷ ಎಂಬಾತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ.
ಜಾನುವಾರುಗಳನ್ನು ರಕ್ಷಿಸಿದ ಅನತಿ ದೂರದಲ್ಲಿಯೇ ಇದ್ರೀಶ್ ಶವ ಪತ್ತೆಯಾಗಿತ್ತು. ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ತಂಡದಿಂದ ದಾಳಿ ನಡೆದಿದೆ ಎಂದು ಮೃತನ ಕುಟುಂಬಸ್ಥರು ಪುನೀತ್ ಕೆರೆಹಳ್ಳಿ ವಿರುದ್ಧ ಆರೋಪಿಸಿ, ಸಾತನೂರು ಪೊಲೀಸರು ಠಾಣೆ ಮುಂದೆ ಪ್ರತಿಭಟನೆ ಸಹ ನಡೆಸಿದ್ದರು.
ಮೃತನ ಕುಟುಂಬಸ್ಥರು ನೀಡಿದ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ರಾಜಸ್ಥಾನದಲ್ಲಿ ಆರೋಪಿಗಳನ್ನ ಬಂಧನ ಮಾಡಿದ್ದರು. ನಿನ್ನೆ ಸಂಜೆ ವೇಳೆಗೆ ಪುನೀತ್ ಕೆರೆಹಳ್ಳಿ ಸೇರಿದಂತೆ ಇತರೆ ನಾಲ್ಕು ಮಂದಿ ಆರೋಪಿಗಳನ್ನು ಬಂಧನ ಮಾಡಿದ್ದರು.
ನ್ಯಾಯಾಲಯದ ಎದುರು ಆರೋಪಿಗಳನ್ನು ಹಾಜರುಪಡಿಸಿದ್ದ ಪೊಲೀಸರು, ವಿಚಾರಣೆ ನಿಮಿತ್ತ ಆರೋಪಿಗಳನ್ನು ವಶಕ್ಕೆ ನೀಡಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಲಯ ಆರೋಪಿಗಳನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ