Presidential Poll: ಇತ್ತ ಭಾರೀ ಮಳೆ; ಅತ್ತ ಖಾಸಗಿ ಹೋಟೆಲ್​ಗೆ ಎಲ್ಲ ಶಾಸಕರನ್ನು ಕರೆದ ಬಿಜೆಪಿ!

ಬಿಜೆಪಿಯ ಶಾಸಕರಿಗೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್​ನಲ್ಲಿ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಶನಿವಾರವೇ (ಜುಲೈ  16) ಚೆಕ್ ಇನ್ ಮಾಡಿಕೊಳ್ಳುವಂತೆ ಸೂಚನೆಯನ್ನೂ ನೀಡಲಾಗಿದೆ.

ಕರ್ನಾಟಕಕ್ಕೆ ಆಗಮಿಸಿದ್ದ ದ್ರೌಪದಿ ಮುರ್ಮು

ಕರ್ನಾಟಕಕ್ಕೆ ಆಗಮಿಸಿದ್ದ ದ್ರೌಪದಿ ಮುರ್ಮು

  • Share this:
    ಬೆಂಗಳೂರು: ಬಲು ಕುತೂಹಲ ಹುಟ್ಟಿಸಿರುವ ರಾಷ್ಟ್ರಪತಿ ಚುನಾವಣೆಯ ಮತದಾನ ಮುಗಿಯುವವರೆಗೆ ಕರ್ನಾಟಕ ಬಿಜೆಪಿ (Karnataka BJP) ಘಟಕವು ತನ್ನ ಎಲ್ಲಾ ಶಾಸಕರನ್ನು ಬೆಂಗಳೂರಿನ ಸ್ಟಾರ್ ಹೋಟೆಲ್​ಗೆ ಶಿಫ್ಟ್ ಮಾಡಲು ಯೋಜನೆ ರೂಪಿಸಿದೆ. ರಾಷ್ಟ್ರಪತಿ ಚುನಾವಣೆಗೆ (Presidential Poll) ಇದೇ ಸೋಮವಾರದಂದು (ಜುಲೈ 18) ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬಿಜೆಪಿಯ ಎಲ್ಲ ಶಾಸಕರಿಗೂ ಬುಲಾವ್ ನೀಡಿದೆ. ಅಲ್ಲದೇ ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕ ಎಂ ಸತೀಶ್ ರೆಡ್ಡಿ ಅವರಿಂದ ಆಡಳಿತ ಪಕ್ಷ ಬಿಜೆಪಿಯ ಶಾಸಕರಿಗೆ (BJP MLA) ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್​ನಲ್ಲಿ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಶನಿವಾರವೇ (ಜುಲೈ  16) ಚೆಕ್ ಇನ್ ಮಾಡಿಕೊಳ್ಳುವಂತೆ ಸೂಚನೆಯನ್ನೂ ನೀಡಲಾಗಿದೆ.

    ರಾಷ್ಟ್ರಪತಿ ಚುನಾವಣೆಯಲ್ಲಿ ಶಾಸಕರು ಮತ್ತು ಸಂಸತ್ತಿನ ಚುನಾಯಿತ ಸದಸ್ಯರು ಮತದಾರರಾಗಿರುತ್ತಾರೆ. ಹೀಗಾಗಿ ರಾಷ್ಟ್ರಪತಿ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಭಾನುವಾರವೇ ಅಣಕು ಮತದಾನ ಮಾಡಿಸಿ ತನ್ನೆಲ್ಲ ಶಾಸಕರಿಗೆ ತರಬೇತಿ ನೀಡಲಿದೆ.

    ಮೂವರಿಂದ ತರಬೇತಿ
    ಶಾಸಕರೂ ಆಗಿರುವ ಮತದಾರರು ಹೇಗೆ ಮತ ಚಲಾಯಿಸಬೇಕು ಎಂದು ಈ ಅಣಕು ರಾಷ್ಟ್ರಪತಿ ಚುನಾವಣೆಯಲ್ಲಿ ತರಬೇತಿ ನೀಡಲಾಗುತ್ತದೆ. ದೆಹಲಿಯಲ್ಲಿ ನಡೆದ ಪಕ್ಷದ ಅಧಿವೇಶನದಲ್ಲಿ ತರಬೇತಿ ಪಡೆದ ಮೂವರು ವ್ಯಕ್ತಿಗಳು ಭಾನುವಾರ ಕರ್ನಾಟಕದ ಎಲ್ಲ ಬಿಜೆಪಿ ಶಾಸಕರಿಗೆ ತರಬೇತಿ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

    ಅಡ್ಡಮತದಾನ ಭೀತಿ?
    ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷವು ವಿಪ್ ಜಾರಿ ಮಾಡಲು ಸಾಧ್ಯವಾಗದ ಕಾರಣ ಬಿಜೆಪಿ ಶಾಸಕರನ್ನು ಹೋಟೆಲ್‌ನಲ್ಲಿ ಇರಿಸುವ ಯೋಜನೆ ರೂಪಿಸಿದೆ. ರಾಷ್ಟ್ರಪತಿ ಚುನಾವಣೆಯಲ್ಲಿಯೂ ಸಹ ರಹಸ್ಯವಾಗಿಯೇ ಮತದಾನ ನಡೆಸಲಾಗುತ್ತದೆ.  ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರು ಹತ್ತನೇ ಶೆಡ್ಯೂಲ್ ಅಡಿಯಲ್ಲಿ ಅನರ್ಹತೆಯ ವ್ಯಾಪ್ತಿಗೆ ಬರುವುದಿಲ್ಲ. ಮತ ಹಾಕಿದ ನಂತರ ಮತಗಟ್ಟೆ ಏಜೆಂಟ್ ಅವರ ಬ್ಯಾಲೆಟ್ ಪೇಪರ್‌ಗಳನ್ನು ಪರಿಶೀಲಿಸುವಂತಿಲ್ಲ.  ಈ ವಿಷಯವನ್ನು ಈ ಹಿಂದೆಯೇ ಚುನಾವಣಾ ಆಯೋಗವು ಹಲವು ಬಾರಿ ಸ್ಪಷ್ಟಪಡಿಸಿದೆ. ಹೀಗಾಗಿ ಅಡ್ಡ ಮತದಾನ ಭೀತಿಯಿಂದ ಬಿಜೆಪಿ ತನ್ನೆಲ್ಲ ಶಾಸಕರನ್ನು ಖಾಸಗಿ ಹೋಟೆಲ್​ನಲ್ಲಿ ಅಣಕು ತರಬೇತಿ ನೀಡಲಿದೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: Presidential Election: ರಾಷ್ಟ್ರಪತಿ ಚುನಾವಣೆಗೆ ಭರದ ಸಿದ್ಧತೆ, ಸ್ಟ್ರಾಂಗ್ ರೂಂನಲ್ಲಿ ಚುನಾವಣಾ ಸಾಮಾಗ್ರಿ ಭದ್ರ

    ಈ ಹಿಂದೆ ಜೂನ್‌ ತಿಂಗಳಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ವಿಪ್ ಜಾರಿಗೊಳಿಸಿ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಸೂಚಿಸಿತ್ತು. ಮತಗಳ ಹಂಚಿಕೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಮತದಾರರಾದ ಶಾಸಕರು -ಪಕ್ಷದ ಏಜೆಂಟರಿಗೆ ಪಕ್ಷದ ವಿಪ್ ಅನ್ನು ಪಾಲಿಸಿದ್ದಾರೆ ಎಂಬುದನ್ನು ಖಚಿತಪಡಿಸಲು ತಮ್ಮ ಮತಪತ್ರಗಳನ್ನು ತೋರಿಸಬೇಕಾಗಿತ್ತು.

    ಹತಾಶೆಯ ಭಾವನೆ ಮೂಡಿದೆಯೇ?
    ಬಿಜೆಪಿಯ ಕರ್ನಾಟಕ ಘಟಕವು ಈಗ ಪ್ರತಿಕ್ರಿಯಿಸುತ್ತಿರುವ ರೀತಿ ಕೆಲವು ನಾಯಕರಲ್ಲಿ ಹತಾಶೆಯ ಭಾವನೆ ಮೂಡಿರುವುದನ್ನು ಸೂಚಿಸುತ್ತದೆ  ಎಂದು ಬಿಜೆಪಿ ಸದಸ್ಯರೊಬ್ಬರು ಹೇಳಿದ್ದಾಗಿ ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

    ಇದನ್ನೂ ಓದಿ: Draupadi Murmu: ದ್ರೌಪದಿ ಮುರ್ಮು, ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ; ಮಹಿಳೆಗೆ ಮಣೆ ಹಾಕಿದ ಬಿಜೆಪಿ

    ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲ್ಲುತ್ತಾರೆ ಎಂಬುದು ನಮಗೆ ಖಚಿತವಾಗಿ ತಿಳಿದಿದೆ. ಆದರೆ ಶಾಸಕರನ್ನು ಎರಡು ದಿನ ಹೋಟೆಲ್‌ನಲ್ಲಿ ಇರಿಸಲು ಹೇಳುವುದು ದೊಡ್ಡ ವಿಷಯವೇ ಆಗಿದೆ.  ಶಾಸಕರು ಮತದಾನದ ದಿನ ಸೇರಿದಂತೆ ಮೂರು ದಿನಗಳ ಕಾಲ ತಮ್ಮ ಕ್ಷೇತ್ರಗಳ ಹೊರಗೆ ಇರಬೇಕಾಗುತ್ತದೆ. ಅಲ್ಲದೇ ಈಗ  ನಿರಂತರ ಮಳೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿಪಾಸ್ತಿ ಹಾನಿ ಮತ್ತು ಜನಜೀವನ ಅಸ್ತವ್ಯಸ್ತಗೊಂಡ ಸಂದರ್ಭದಲ್ಲಿ ಕ್ಷೇತ್ರದಿಂದ ಮೂರು ದಿನ ಹೊರಗೆ ಇರುವುದು ಅಷ್ಟು ಸರಿಯಲ್ಲ ಎಂದು ಬಿಜೆಪಿ ಸದಸ್ಯರೊಬ್ಬರು ತಿಳಿಸಿದ್ದಾಗಿಯೂ ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
    Published by:guruganesh bhat
    First published: