ಕೊಡಗು: ಸನ್ನಿಸೈಡ್ ಯುದ್ಧಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ; ಫೆ.6ಕ್ಕೆ ರಾಷ್ಟ್ರಪತಿಗಳಿಂದ ಲೋಕಾರ್ಪಣೆ

ರಾಷ್ಟ್ರಪತಿಯವರು ತಲಕಾವೇರಿಗೆ ಭೇಟಿ ನೀಡಲಿರುವುದರಿಂದ ಫೆಬ್ರವರಿ 5 ಮತ್ತು 6 ಎರಡು ದಿನಗಳ ಕಾಲ ತಲಕಾವೇರಿ ಮತ್ತು ಭಾಗಮಂಡಲಕ್ಕೆ ಸಾರ್ವಜನಿಕರು ಮತ್ತು ಭಕ್ತರ ಪ್ರವೇಶವನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.

ಸನ್ನಿಸೈಡ್ ಯುದ್ಧ ಸ್ಮಾರಕ

ಸನ್ನಿಸೈಡ್ ಯುದ್ಧ ಸ್ಮಾರಕ

  • Share this:
ಕೊಡಗು(ಫೆ.03): ವೀರರ ನಾಡು ಕೊಡಗು ದೇಶದ ಸೇನೆಗೆ ನೀಡಿರುವ ಅವಿಸ್ಮರಣೀಯ ಸೇವೆಗಳನ್ನು ಬಿಂಬಿಸುವ ಯುದ್ಧಸ್ಮಾರಕದ ಲೋಕಾರ್ಪಣೆಗೆ ಸನ್ನಿಸೈಡ್ ಸಿದ್ದಗೊಂಡಿದೆ. ಹೌದು, ಭಾರತೀಯ ಸೇನೆಯ ದಂಡಾನಾಯಕರಾಗಿದ್ದ ಜನರಲ್ ಕೆ.ಎಸ್ ತಿಮ್ಮಯ್ಯ ಅವರು ಹುಟ್ಟಿ ಬೆಳೆದಿದ್ದ ಮನೆ ಸನ್ನಿಸೈಡ್ ಈಗ ಯುದ್ಧ ಸ್ಮಾರಕವಾಗಿ ಪರಿವರ್ತನೆಯಾಗಿದ್ದು, ಫೆಬ್ರವರಿ 6 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಲೋಕಾರ್ಪಣೆಗೊಳ್ಳಲಿದೆ.

ಮಡಿಕೇರಿಯಲ್ಲಿರುವ ಸನ್ನಿಸೈಡ್ ಆವರಣಕ್ಕೆ ಎಂಟ್ರಿಯಾಗುತ್ತಿದ್ದಂತೆ ಯುದ್ಧ ಟ್ಯಾಂಕರ್, ಸೂಪರ್ ಸಾನಿಕ್ ಯುದ್ಧ ವಿಮಾನಗಳು ಸೇನೆಯ ಶಕ್ತಿ ಸಾರುತ್ತಲೇ ನಿಮ್ಮನ್ನು ಸೆಳೆದುಬಿಡುತ್ತವೆ. ಅಲ್ಲಿಂದ ಮುಂದೆ ನಡೆದರೆ, ತಿಮ್ಮಯ್ಯ ಅವರ ಮನೆ ಸನ್ನಿಸೈಡ್ ಒಳಹೊಕ್ಕರೆ, ತಿಮ್ಮಯ್ಯ ಅವರು ಬಳಸಿದ್ದ ಸಮವಸ್ತ್ರವು ಅವರ ಪಡೆದಿದ್ದ ವಿವಿಧ ಮೆಡಲ್ ಗಳೊಂದಿಗೆ ನಿಮ್ಮ ಎದೆಯುಬ್ಬುವಂತೆ ಮಾಡುತ್ತದೆ.

ಅಷ್ಟೇ ಅಲ್ಲ, ಅವರ ಕುಟುಂಬದೊಂದಿದೆ ತಿಮ್ಮಯ್ಯ ಅವರು ಇದ್ದ ಕ್ಷಣಗಳು, ಸೇನೆಯಲ್ಲಿದ್ದಾಗ ಮೊದಲ ರಾಷ್ಟ್ರಪತಿ ರಾಜೆಂದ್ರ ಪ್ರಸಾದ್ ಅವರೊಂದಿಗೆ ಇರುವ ಅಪರೂಪದ ಫೋಟೋಗಳು ಜೊತೆಗೆ ಸೇನೆಯಲ್ಲಿರುವಾಗ ಅವರು ವಿವಿಧ ಸಂದರ್ಭದಲ್ಲಿದ್ದ ಭಾವಚಿತ್ರಗಳು ಸನ್ನಿಸೈಡ್ ಮನೆಯ ಗೋಡೆಗಳನ್ನು ಅಲಂಕರಿಸಿವೆ.  ಜೊತೆಗೆ ವಿವಿಧ ಯುದ್ಧಗಳಲ್ಲಿ ಬಳಕೆಯಾಗಿದ್ದ ರೈಫಲ್ ಗಳಿವೆ.

ಇನ್ನು ಕೊಡಗಿನ ಶೈಲಿಯ ಮನೆಯಾಗಿರುವುದರಿಂದ ಅತೀ ಹೆಚ್ಚು ಮಳೆ ಸುರಿಯುವುದರಿಂದ ಮನೆ ಬೆಚ್ಚಗೆ ಇರಲೆಂದು ಮಾಡಿದ್ದ ಉರುವಲೆಗಳನ್ನು ನವೀಕರಿಸಿ ಇರಿಸಲಾಗಿದೆ.

Viral Video: 60 ಅಡಿ ಆಳದ ನೀರೊಳಗೆ ಪ್ರಪೋಸ್ ಮಾಡಿಕೊಂಡು ಸಪ್ತಪದಿ ತುಳಿದ ನವ ದಂಪತಿ..!

ಒಟ್ಟಿನಲ್ಲಿ ಸನ್ನಿಸೈಡ್ ಈಗ ಯುದ್ಧ ಸ್ಮಾರಕವಾಗಿ ಪರಿವರ್ತನೆಯಾಗಿದ್ದು, ಜನರಲ್ ತಿಮ್ಮಯ್ಯ ಮತ್ತು ಮಾರ್ಷಲ್ ಕಾರ್ಯಪ್ಪ ಫೋರಂ ನಿರ್ಮಿಸಿರುವ ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಫೆಬ್ರವರಿ ಆರರಂದು ಕೊಡಗಿಗೆ ಆಗಮಿಸಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂದು ಮೊದಲು ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ತಲಕಾವೇರಿಯಲ್ಲಿ ಸಿದ್ಧತೆಗಳನ್ನು ನಡೆಸಲಾಗಿದೆ. ತಲಕಾವೇರಿಗೆ ಪೂಜೆಗೆ ಹೋಗುವುದರಿಂದ ಅದಕ್ಕಾಗಿ ಈಗಾಗಲೇ ಬಾಗಮಂಡಲದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ.

ರಾಷ್ಟ್ರಪತಿಯವರು ತಲಕಾವೇರಿಗೆ ಭೇಟಿ ನೀಡಲಿರುವುದರಿಂದ ಫೆಬ್ರವರಿ 5 ಮತ್ತು 6 ಎರಡು ದಿನಗಳ ಕಾಲ ತಲಕಾವೇರಿ ಮತ್ತು ಭಾಗಮಂಡಲಕ್ಕೆ ಸಾರ್ವಜನಿಕರು ಮತ್ತು ಭಕ್ತರ ಪ್ರವೇಶವನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ತಲಕಾವೇರಿಯಿಂದ ಮಡಿಕೇರಿಗೆ ಆಗಮಿಸಲಿರುವ ರಾಮನಾಥ್ ಕೋವಿಂದ್ ಅವರು ಮಧ್ಯಾಹ್ನ ಮೂರುಗಂಟೆಗೆ ಸನ್ನಿಸೈಡ್ ಯುದ್ಧಸ್ಮಾರಕ ಭವನ ಉದ್ಘಾಟನೆ ಮಾಡಲಿದ್ದಾರೆ. ಮೂರುಗಂಟೆಯಿಂದ ಮೂರುಗಂಟೆ 45 ನಿಮಿಷಗಳವರೆಗೆ ಸನ್ನಿಸೈಡ್ ನಲ್ಲಿ ಇರಲಿದ್ದಾರೆ. ಇದಕ್ಕಾಗಿ ಕೊಡಗು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈಗಾಗಲೇ ಮಡಿಕೇರಿ, ಬಾಗಮಂಡಲ ಮತ್ತು ತಲಕಾವೇರಿ ಸೇರಿದಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂಚರಿಸುವ ಎಲ್ಲೆಡೆ ಜಿಲ್ಲಾಡಳಿತ ಭಾರೀ ಭದ್ರತೆ ಸೇರಿದಂತೆ ಉಳಿದ ಎಲ್ಲಾ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನು ಮಡಿಕೇರಿಯಲ್ಲಿ ಸಂಚರಿಸುವ ಮಾರ್ಗಗಳಲ್ಲಿ ಎಲ್ಲಾ ಅಂಗಗಡಿ ಮುಂಗಟ್ಟುಗಳನ್ನು ಮುಚ್ಚಲು ಮಡಿಕೇರಿ ನಗರ ಸಭೆ ಆಯುಕ್ತ ರಾಮದಾಸ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಫೆಬ್ರವರಿ 6 ರಂದು ಸನ್ನಿಸೈಡ್ ಉದ್ಘಾಟನೆಗೊಳ್ಳುವ ಮೂಲಕ ಕೊಡಗಿನ ಹಿರಿಮೆಗೆ ಮತ್ತೊಂದು ಗರಿ ಸೇರಲಿದೆ.
Published by:Latha CG
First published: