ಕೊಡಗು (ಏ. 13) : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ (Mahatma Gandhi) ಅವರು ನಾಥೂರಾಮ್ ಗೂಡ್ಸೆಯ (Nathuram Godse) ಗುಂಡೇಟಿಗೆ ಬಲಿಯಾಗಿ 74 ವರ್ಷಗಳೇ ಸಂದಿವೆ. ಆದರೆ ಅವರ ಆತ್ಮಕ್ಕೆ ಮುಕ್ತಿ ದೊರಕಿಸುವ ಕಾರ್ಯವನ್ನು ಕೊಡಗು (Kodagu) ಜಿಲ್ಲಾಡಳಿತ ಅಷ್ಟು ವರ್ಷಗಳಿಂದ ಮಾಡಲೇ ಇಲ್ಲ ಎನ್ನೋದು ವಿಪರ್ಯಾಸ. ಇದೀಗ ಗಾಂಧೀ ಸ್ಮಾರಕ (Gandhi Memorial) ನಿರ್ಮಾಣಕ್ಕೆ ಜಿಲ್ಲಾಡಳಿತ ಜಾಗ ನೀಡಿರುವುದು ಕೊನೆಗೂ ಅವರ ಆತ್ಮಕ್ಕೆ ಶಾಂತಿ ದೊರಕಿಸುವ ಕಾಲ ಕೂಡಿ ಬಂದಿದೆ. ಇದೇನು ಅಂತ ಅಚ್ಚರಿ ಪಡಬೇಡಿ.
ಕೊಡಗಿಗೆ ಬಂದಿದ್ದ ಗಾಂಧಿಜೀ ಚಿತಾಭಸ್ಮ
1948 ರ ಜನವರಿಯಲ್ಲಿ ಮಹಾತ್ಮ ಗಾಂಧಿಜೀ ಅವರ ಹತ್ಯೆ ಯಾಗಿ ಸಂಸ್ಕಾರ ನೆರವೇರಿದ ಬಳಿಕ ಅವರ ಚಿತಾ ಭಸ್ಮವನ್ನು ಕೊಡಗಿಗೂ ತರಲಾಗಿತ್ತು. ಅಂದಿನಿಂದ ಇಂದಿನವರೆಗೆ ಅವರ ಚಿತಾಭಸ್ಮವನ್ನು ಶಾಶ್ವತವಾಗಿ ಒಂದೆಡೆ ಇರಿಸಿ ಗೌರವ ಸಲ್ಲಿಸಲು ಸಾಧ್ಯವೇ ಆಗಿರಲಿಲ್ಲ. ಬದಲಾಗಿ ಜಿಲ್ಲಾ ಖಜಾನೆಯಲ್ಲಿ ಚಿತಾಭಸ್ಮವನ್ನು ಇರಿಸಲಾಗಿತ್ತು. ಪ್ರತೀ ವರ್ಷ ಅವರ ಪುಣ್ಯ ಸ್ಮರಣೆ ದಿನದಂದು ಅವರ ಚಿತಾಭಸ್ಮವನ್ನು ಸರ್ಕಾರಿ ಗೌರವದೊಂದಿಗೆ ಮೆರವಣಿಗೆಯಲ್ಲಿ ತರಲಾಗುತ್ತಿದೆ.
ಚಿತಾಭಸ್ಮವನ್ನು ಖಜಾನೆಯಲ್ಲಿ ಇರಿಸುತ್ತಿದ್ದ ಜಿಲ್ಲಾಡಳಿತ
1934 ಫೆಬ್ರವರಿ 21 ರಂದು ಗಾಂಧೀಜಿಯವರು ಕೊಡಗಿಗೆ ಭೇಟಿ ನೀಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕುವಂತೆ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಸ್ಥಳದಲ್ಲಿ (ಇಂದಿನ ಗಾಂಧಿ ಮಂಟಪ) ಚಿತಾಭಸ್ಮವನ್ನು ಇರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗುತಿತ್ತು. ಬಳಿಕ ಸರ್ವ ಧರ್ಮ ಪ್ರಾರ್ಥನೆ ಸಲ್ಲಿಸಿ ಚಿತಾಭಸ್ಮವನ್ನು ಮತ್ತೆ ಖಜಾನೆಯಲ್ಲೇ ಇರಿಸಲಾಗುತಿತ್ತು. ಆದರೆ, ಅವರ ಚಿತಾಭಸ್ಮಕ್ಕೆ ದೆಹಲಿಯಲ್ಲಿರುವ ರಾಜ್ ಘಾಟ್ ನಂತೆ ಮಡಿಕೇರಿಯಲ್ಲೂ ಗಾಂಧಿ ಭವನ ನಿರ್ಮಾಣ ಮಾಡಬೇಕು ಎಂದು ಸರ್ವೋದಯ ಸಮಿತಿ ಸೇರಿದಂತೆ ನೂರಾರು ಜನರು ಹೋರಾಟ ನಡೆಸುತ್ತಿದ್ದರು.
ಇದನ್ನು ಓದಿ: Santosh Patil ಕುಟುಂಬಕ್ಕೆ ಕೋಟಿ ಪರಿಹಾರ, ಹೆಂಡತಿಗೆ ಸರ್ಕಾರಿ ನೌಕರಿ ನೀಡಬೇಕು; ಕಾಂಗ್ರೆಸ್ ಆಗ್ರಹ
ಗಾಂಧಿ ಭವನ ನಿರ್ಮಾಣಕ್ಕೆ ಸರ್ಕಾರ ಸಮ್ಮತಿ
ಕಳೆದ ಬಜೆಟಿನಲ್ಲಿ ಈಗಿರುವ ಗಾಂಧಿ ಮೈದಾನದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಸರ್ಕಾರ 50 ಲಕ್ಷ ರೂಪಾಯಿ ಘೋಷಿಸಿತ್ತು. ವಿಪರ್ಯಾಸವೆಂದರೆ ಜಾಗದ ದಾಖಲೆಗಳ ಸಮಸ್ಯೆಯಿಂದಾಗಿ ಆ ಕನಸು ಈಡೇರಿರಲೇ ಇಲ್ಲ. ಹಲವು ಜಿಲ್ಲಾಧಿಕಾರಿಗಳು ಬಂದು ಹೋದರು ಯಾರು ಅದನ್ನು ಸಾಕಾರ ಗೊಳಿಸಲೇ ಇಲ್ಲ. ಇದೀಗ ಜಿಲ್ಲೆಗೆ ಬಂದಿರುವ ಜಿಲ್ಲಾಧಿಕಾರಿ ಡಾ ಬಿ ಸಿ ಸತೀಶ್ ಅವರು 32 ಸೆಂಟ್ ಜಾಗವನ್ನು ಗಾಂಧಿ ಭವನಕ್ಕಾಗಿ ಮಂಜೂರು ಮಾಡಿದ್ದಾರೆ. ಇದು ಗಾಂಧೀ ಸ್ಮಾರಕಕ್ಕಾಗಿ ಹಲವು ವರ್ಷಗಳಿಂದ ಹೋರಾಡುತ್ತಿದ್ದ ಸರ್ವೋದಯ ಸಮಿತಿ ಮತ್ತಿತರರಿಗೆ ಖುಷಿ ತಂದಿದೆ. ಅದಕ್ಕಿಂತ ಮುಖ್ಯವಾಗಿ ಗಾಂಧೀಜಿ ಅವರ ಆತ್ಮಕ್ಕೆ ಕೊನೆಗೂ ಮುಕ್ತಿ ಸಿಗುವ ಕಾಲ ಕೂಡಿ ಬಂದಿದೆ ಎಂಬ ಭಾವನೆ ವ್ಯಕ್ತವಾಗಿದೆ.
ಇದನ್ನು ಓದಿ: ಈ ವರ್ಷ ಮಾವು ದುಬಾರಿ..! ಹವಾಮಾನ ಬದಲಾವಣೆಯಿಂದಾಗಿ ಬೆಲೆ ಏರಿಕೆ
ಸ್ಮಾರಕ ನಿರ್ಮಾಣಕ್ಕೆ ಮುಂದಾದ ಸರ್ಕಾರ
ರಾಜ್ ಘಾಟಿನಲ್ಲಿ ಇರುವಂತೆ ಇಲ್ಲಿಯೂ ಅದ್ಭುತವಾದ ಸ್ಮಾರಕ ನಿರ್ಮಿಸಬೇಕು. ಆ ಮೂಲಕ ಕೊಡಗಿಗೆ ಬರುವ ಸಾವಿರಾರು ಜನರು ಬಾಪೂ ಅವರ ಚಿತಾಭಸ್ಮದ ದರ್ಶನ ಪಡೆದು ಅವರ ಆದರ್ಶಗಳನ್ನು ಪಾಲಿಸುವಂತೆ ಮಾಡಬೇಕಾಗಿದೆ ಎನ್ನುವುದು ಹಿರಿಯ ರಾಜಕೀಯ ಮುತ್ಸದಿ ಎಂ. ಸಿ ನಾಣಯ್ಯ ಅವರ ಅಭಿಪ್ರಾಯ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಾಂಧಿ ಭವನದ ನೀಲನಕ್ಷೆ ಸೇರಿದಂತೆ ಯೋಜನೆಯ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿದ್ದೆ. ಸದ್ಯ ಕಳೆದ ಬಜೆಟಿನಲ್ಲೇ ಘೋಷಣೆ ಆಗಿದ್ದ ಹಣ ವಾಪಸ್ ಆಗಿದ್ದು, ಆ ಹಣದ ಬಿಡುಗಡೆ ಒತ್ತಾಯಿಸುತ್ತೇವೆ ಎಂದು ಸರ್ವೋದಯ ಸಮಿತಿ ಮುಖಂಡ ಟಿ ಪಿ ರಮೇಶ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ