ಬೆಂಗಳೂರು (ಜನವರಿ 25): 71ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ. ಅಲ್ಲದೆ, ಈ ಸಂಭ್ರಮಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆಗಳೂ ನಡೆಯದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಗಣರಾಜ್ಯೋತ್ಸವ ಪೆರೇಡ್ ನಡೆಯುವ ಮಾಣಿಕ್ ಷಾ ಮೈದಾನದಲ್ಲಿ ಬಿಗಿ ಭದ್ರತೆಯನ್ನೂ ನಿಯೋಜಿಸಲಾಗಿದೆ.
ಭದ್ರತೆಗಾಗಿ 10 ಕೆಎಸ್ಆರ್ಪಿ ತುಕಡಿ, 2 ಡಿಸ್ವ್ಯಾಟ್ ತಂಡ, 1 ಕ್ಷಿಪ್ರ ಕಾರ್ಯಾಚರಣೆ ತಂಡ, ಗರುಡ ಪಡೆ, ಕಮಾಂಡ್ ಕಂಟ್ರೋಲ್ ವಾಹನ ನಿಯೋಜನೆ. ಮೈದಾನದ ಸಂಪೂರ್ಣ ತಪಾಸಣೆಗೆ ವಿಶೇಷ ತಂಡವನ್ನು ನಿಯೋಜನೆ ಮಾಡಲಾಗಿದೆ. 9 ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್ಗೆ ವ್ಯವಸ್ಥೆ ಮಾಡಲಾಗಿದೆ.
ಇದಲ್ಲದೆ, 150 ಹಿರಿಯ ಅಧಿಕಾರಿಗಳು, 943 ಸಿಬ್ಬಂದಿ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ. ಕಳೆದ 15 ದಿನಗಳಿಂದಲೇ ಮಾಣಿಕ್ ಷಾ ಮೈದಾನಕ್ಕೆ 75 ಪೊಲೀಸರಿಂದ ನಿರಂತರ ಭದ್ರತೆ ಒದಗಿಸಲಾಗುತ್ತಿದೆ. ಪಥ ಸಂಕಲನದಲ್ಲಿ 34 ತುಕಡಿಗಳು ಭಾಗವಹಿಸುತ್ತಿದ್ದು, ಮೈದಾನ ಸುತ್ತ 85 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.
ಅಲ್ಲದೆ, ಪರೇಡ್ ವೀಕ್ಷಿಸಲು ಮೈದಾನಕ್ಕೆ ಬರುವವರು ಸಿಗರೇಟ್, ಬೆಂಕಿ ಪೆಟ್ಡಿಗೆ, ಕರಪತ್ರಗಳು, ಹರಿತವಾದ ವಸ್ತು, ಚಾಕು ಚೂರಿಗಳು, ಕಪ್ಪು ಕರವಸ್ತ್ರ, ಬಣ್ಣದ ದ್ರಾವಣ, ವಿಡಿಯೋ, ಸ್ಟಿಲ್ ಕ್ಯಾಮರಾ, ನೀರಿನ ಬಾಟಲ್, ಕ್ಯಾನ್, ಶಸ್ತ್ರಾಸ್ತ್ರಗಳು, ಮದ್ಯದ ಬಾಟಲ್, ತಿಂಡಿ-ತಿನಿಸು, ಬಾವುಟಗಳು, ಪಟಾಕಿ, ಸ್ಫೋಟಕ ವಸ್ತುಗಳನ್ನು ತರುವುದಕ್ಕೆ ನಿಷೇಧ ಹೇರಲಾಗಿದೆ.
ಈ ಭಾನುವಾರ ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ: ಬದಲಿ ಮಾರ್ಗಗಳು
# ಜ.26 ರಂದು ಬೆಳಗ್ಗೆ 8 ರಿಂದ 10.30ರ ವರೆಗೆ ಕಬ್ಬನ್ ರಸ್ತೆಯ ಬಿಆರ್ವಿ ಜಂಕ್ಷನ್ನಿಂದ ಕಾಮರಾಜ ರಸ್ತೆ ಜಂಕ್ಷನ್ವರೆಗೂ ಎರಡೂ ದಿಕ್ಕುಗಳಲ್ಲಿ ಸಂಚಾರ ನಿರ್ಬಂಧಿಸಿದ್ದು, ಪರ್ಯಾಯ ಮಾರ್ಗವನ್ನು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
# ಕಬ್ಬನ್ ಪಾರ್ಕ್, ಬಿವಿಆರ್ ಜಂಕ್ಷನ್ ಕಡೆಯಿಂದ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು ಇನ್ಫೆಂಟ್ರಿ ರಸ್ತೆಗೆ ಬಂದು ಸಫೀನಾ ಪ್ಲಾಜಾದ ಬಳಿ ಎಡ ತಿರುವು ಪಡೆದು ಮೈನ್ಗಾರ್ಡ್ ರಸ್ತೆ – ಆಲೀಸ್ ಸರ್ಕಲ್- ಡಿಸ್ಪೆನ್ಸರಿ ರಸ್ತೆ- ಕಾಮರಾಜ ರಸ್ತೆ ಮತ್ತು ಡೆಕನ್ಸನ್ ರಸ್ತೆ ಜಂಕ್ಷನ್ನಲ್ಲಿ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ ಜಂಕ್ಷನ ಬಳಿ ಎಡಕ್ಕೆ ತಿರುವು ಪಡೆದು ಮನಿಪಾಲ್ ಸೆಂಟರ್ಗೆ ಹೋಗಬಹುದು.
# ಮಣಿಪಾಲ್ ಸೆಂಟರ್ ಕಡೆಯಿಂದ ಬಿಆರ್ವಿ ಜಂಕ್ಷನ್ ಕಡೆ ಹೋಗುವ ವಾಹನಗಳು ಎಂ.ಜಿ.ರಸ್ತೆಗೆ ತೆರಳಿ ಅನಿಲ್ಕುಂಬ್ಳೆ ವೃತ್ತದಲ್ಲಿ ಎಡಕ್ಕೆ ತಿರುವು ಪಡೆಯುವ ಮೂಲಕ ಸಾಗಬಹುದು.
# ಭದ್ರತಾ ದೃಷ್ಟಿ ಹಿನ್ನೆಲೆ ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನವರೆಗೂ ಮಾಣಿಕ್ ಷಾ ಮೈದಾನ ಸುತ್ತ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ವಾಹನ ನಿಲುಗಡೆ ನಿಷೇಧಿಸಿದ ರಸ್ತೆಗಳು:
# ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್ ನಿಲ್ದಾಣವರೆಗೆ.
# ಕಬ್ಬನ್ ರಸ್ತೆ, ಸಿಟಿಒ ವೃತ್ತ, ಕೆ.ಆರ್.ರಸ್ತೆ.
# ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆವರೆಗೆ.
ಇದನ್ನೂ ಓದಿ : ಮಾರಣಾಂತಿಕ ಕೊರೊನಾ ವೈರಸ್; ಚೀನಾದಲ್ಲಿ 25ಕ್ಕೆ ಏರಿದ ಸಾವಿನ ಸಂಖ್ಯೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ