Mysore Dasara: ಭರ್ಜರಿಯಾಗಿ ರೆಡಿಯಾಗ್ತಿದೆ ಅಭಿಮನ್ಯು ಆ್ಯಂಡ್​ ಟೀಂ, ಇಲ್ಲಿದೆ ಗಜಪಡೆ ಊಟದ​ ಮೆನು

Mysore Dasara Elephant 2022: ಮೈಸೂರು ದಸರ ಅಂದ್ರೆ ಯಾರಿಗ್ ತಾನೆ ಇಷ್ಟ ಇಲ್ಲ ಹೇಳಿ. ಜಗಮಗಿಸುವ ದೀಪಾಲಂಕಾರ. ಅತ್ತಿತ್ತ ಕಣ್ಣು ಹಾಯಿಸಿದಷ್ಟು ಜನ ಮತ್ತು ಅಂಗಡಿಗಳು. ಜೊತೆಗೆ ಉತ್ಸವ. ಅದರಲ್ಲಿಯೂ ಅಂಬಾರಿಯನ್ನು ಹೊತ್ತೊಯ್ಯುವ ಗಜವನ್ನು ನೋಡಲು ಅದೇನೋ ರೀತಿಯ ಖುಷಿ. ಅಭಿಮನ್ಯು ಎಂಬ ಗಜವು ಅಂಬಾರಿಯನ್ನು ಹೊರಲು ಸಿದ್ಧವಾಗ್ತಾ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರು ದಸರಾ (Mysore Dasara) ಅಂದ್ರೆ ಯಾರಿಗ್ ತಾನೆ ಇಷ್ಟ ಇಲ್ಲ ಹೇಳಿ. ಜಗಮಗಿಸುವ ದೀಪಾಲಂಕಾರ. ಅತ್ತಿತ್ತ ಕಣ್ಣು ಹಾಯಿಸಿದಷ್ಟು ಜನ ಮತ್ತು ಅಂಗಡಿಗಳು. ಜೊತೆಗೆ ಉತ್ಸವ. ಕರ್ನಾಟಕದ ರಾಯಲ್ ಫಸ್ಟಿವಲ್  (Royal festival) ಅಂತಾನೇ ಹೇಳ್ಬೋದು. ಮೈಸೂರಿನಲ್ಲಿ 10 ದಿನಗಳ ಕಾಲ ಉತ್ಸವವಾಗಿ ಆಚರಿಸಲಾಗುತ್ತದೆ. ನವರಾತ್ರಿ ಎಂದು ಕರೆಯಲ್ಪಡುವ ಒಂಬತ್ತು ರಾತ್ರಿಗಳು ಮತ್ತು ಕೊನೆಯ ದಿನ ವಿಜಯದಶಮಿ (Vijayadashami). ಈ ಎಲ್ಲಾ ಉತ್ಸವಗಳ ಅಂಬಾರಿಯನ್ನು ಹೊರುವ ಗಜವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಲಂಕಾರಗೊಂಡಿರುವ ಗಜ ಪಡೆಯು ಹಲವು ವರ್ಷಗಳ ಪ್ರತೀತಿಯಾಗಿದೆ. ಈ ಹಬ್ಬಕ್ಕೆ ಮೂರು ವಾರಗಳಷ್ಟೇ ಬಾಕಿ ಉಳಿದಿವೆ. ಅರಮನೆ (Mysore Palace) ಅಂಗಳದಲ್ಲಿ ಬೀಡುಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಈಗ ರಾಜಭೋಜನ ಭಾಗ್ಯ. ಜಂಬೂಸವಾರಿ ದಿನದಂದು ಸುಮಾರು 750 ಕಿಲೋ ತೂಕದ ಅಂಬಾರಿ ಹೊತ್ತು ಸಾಗುವ ಅಭಿಮನ್ಯು ಹಗಲಿರುಳು ಶ್ರಮಿಸುತ್ತಿದೆ.

ಗಜಪಡೆಯಲ್ಲಿರುವ ಸುಮಾರು 14 ಆನೆಗಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಬೇಕೆಂದು ವೈದ್ಯರು ಸಲಹೆ ಮಾಡಿದ್ದರು. ಅದೇ ರೀತಿಯಾದಂತಹ ಆಹಾರವನ್ನು ನೀಡಲಾಗುತ್ತಿದೆ. ಜಂಬೂ ಸವಾರಿಯ ದಿನ ಎಲ್ಲ ಆನೆಗಳು ಸದೃಢವಾಗಿ ಮತ್ತು ಆರೋಗ್ಯಪೂರ್ಣವಾಗಿರುವಂತೆ ನೋಡಿಕೊಳ್ಳಲು ಆಹಾರದ ವಿಚಾರದಲ್ಲಿ ವಿಶೇಷ ಎಚ್ಚರಿಕೆ ವಹಿಸಲಾಗುತ್ತದೆ.

ಇದನ್ನೂ ಓದಿ: ಮಕರ ಸಂಕ್ರಾಂತಿಯಂದು ವಿರಾಜಮಾನನಾಗಲಿದ್ದಾರೆ ಶ್ರೀರಾಮ! ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಅಯೋಧ್ಯೆ ದೇಗುಲ

ದಿನಕ್ಕೆ ಎರಡು ಬಾರಿ ಆನೆಗಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಎಲ್ಲಾ ರೀತಿಯ ಸಿದ್ಧತೆಗಳನ್ನು ನೀಡಲಾಗುತ್ತಿದೆ.   ಅರಣ್ಯ ಇಲಾಖೆ ಉಸ್ತುವಾರಿಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆನೆ ವೈದ್ಯ ಮುಜೀಬ್, ಪಶುವೈದ್ಯರ ಸಹಾಯಕ ರಂಗರಾಜು ಅವರನ್ನು ಇದರ ಉಸ್ತುವಾರಿಗೆ ನೇಮಿಸಲಾಗಿದೆ.

ಮೊದಲ ತಂಡದ ಆನೆಗಳು ಅರಮನೆ ಶಿಬಿರ ಸೇರಿ ಈಗಾಗಲೇ ಒಂದು ತಿಂಗಳು ದಾಟಿದೆ. ಈ ಆನೆಗಳು 80ರಿಂದ 425 ಕಿಲೋ ತೂಕ ಹೆಚ್ಚಿಸಿಕೊಂಡಿವೆ. ದಸರ ವೇಳೆಗೆ ಕೆಲವು ಆನೆಗಳು 500 ಕಿಲೋಗಳಿಗಿಂತಲೂ ಹೆಚ್ಚು ತೂಕ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ.

ಗಜಗಳಿಗೆ ಊಟ
ಮೈಸೂರಿನ ದಸರಾದಲ್ಲಿ ಗಜವು ಸುಮಾರು 750 ಕೆ.ಜಿ ತೂಕದ ಅಂಬಾರಿಯನ್ನು ಹೊರುತ್ತದೆ. ಇದಕ್ಕಾಗಿ ಹಲವಾರು ರೀತಿಯ ಸಿದ್ಧತೆಗಳು ಕೂಡ ನಡೆಯುತ್ತಿವೆ. ಗಜಕ್ಕೆ ನೀಡುವ ಆಹಾರವು ಮುಖ್ಯ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ವೈದ್ಯರು ನೀಡುವ ಸಲಹೆಯ ಪ್ರಕರವೇ ಆಹಾರವನ್ನು ನೀಡಲಾಗುತ್ತಿದೆ.

ಕುಸುಬಲಕ್ಕಿ, ಉದ್ದಿನ ಕಾಳು, ಹೆಸರು ಕಾಳು, ಗೋಧಿ, ಈರುಳ್ಳಿ ಬೇಯಿಸಿ ಮಿಶ್ರಣ ಮಾಡಿ, ಬೀಟ್ ರೂಟ್, ಕ್ಯಾರೆಟ್, ಮೂಲಂಗಿ, ಗೆಡ್ಡೆಕೋಸು, ಸೌತೆಕಾಯಿ ತುಂಡುಗಳೊಂದಿಗೆ ನೀಡಲಾಗುತ್ತದೆ.

ತಯಾರಿಸುವ ವಿಧಾನ
ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಇರುವ ಅಡುಗೆ ಮನೆಯಲ್ಲಿ ಪ್ರತಿ ದಿನ ಬೆಳಿಗ್ಗೆ 10.30ಕ್ಕೆ ದೊಡ್ಡ ಪಾತ್ರೆಯೊಂದರಲ್ಲಿ ಮೊದಲಿಗೆ ಕುಸುಬಲಕ್ಕಿ, ಉದ್ದಿನ ಕಾಳು, ಗೋಧಿಯನ್ನು ಹಾಕಿ ಬೇಯಿಸಲಾಗುತ್ತಿದೆ. ಬಳಿಕ ಹೆಸರು ಕಾಳು, ಈರುಳ್ಳಿಯನ್ನು ಬೆರೆಸಿ ಬೇಯಿಸಲಾಗುತ್ತದೆ.

ಎರಡೂವರೆ ಗಂಟೆಗಳ ಕಾಲ ಬೇಯಿಸಿದ ನಂತರ ಒಂದು ಗಂಟೆ ಹಾಗೆಯೇ ಇಡಲಾಗುತ್ತದೆ. ಬೇಯಿಸಿದ ಧಾನ್ಯಗಳನ್ನು ಮಧ್ಯಾಹ್ನ3.30ಕ್ಕೆ ಟ್ರೇಗೆ ಹಾಕಿ ಮುದ್ದೆಯಾಗಿ ಕಟ್ಟಿ ಸಂಜೆ ಆನೆಗಳು ತಾಲೀಮಿಗೆ ಹೋಗುವ ಮುನ್ನ ಅಂದರೆ ಸಂಜೆ 4 ಗಂಟೆಗೆ ನೀಡಲಾಗುತ್ತದೆ.

ಇದನ್ನೂ ಓದಿ: ಕೊಹಿನೂರ್ ವಜ್ರ ಭಾರತದ ಈ ದೇವರಿಗೆ ಸೇರಿದ್ದು, ತಕ್ಷಣ ಮರಳಿಸಲು ಆಗ್ರಹ

ನಂತರ ರಾತ್ರಿ 7ಕ್ಕೆ ಮತ್ತೊಮ್ಮೆ ಆಹಾರ ಪದಾರ್ಥಗಳನ್ನು ಬೇಯಿಸಿ ದಾಸ್ತಾನು ಕೊಠಡಿಯಲ್ಲಿ ಸುರಕ್ಷಿತವಾಗಿಡಲಾಗುತ್ತದೆ. ಆ ಆಹಾರವನ್ನು ಮುಂಜಾನೆ 5ಕ್ಕೆ ಪಾತ್ರೆಯಿಂದ ತೆಗೆದು ಮುದ್ದೆ ಕಟ್ಟಿ ಬೆಳಿಗ್ಗೆ 6.30ರ ಒಳಗೆ ಆನೆಗಳಿಗೆ ನೀಡಲಾಗುತ್ತದೆ.

ಆರಂಭದಲ್ಲಿ ಒಂದೊಂದು ಆನೆಗೆ 3 ಕೆಜಿ ಪೌಷ್ಟಿಕ ಆಹಾರ ನೀಡಲಾಗುತ್ತದೆ. ನಂತರ ದಿನಗಳಲ್ಲಿ ಈ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ. ಆನೆಗಳಿಗೆ ಊಟ ತಯಾರಿಸಲು 6 ಮಂದಿ ಇದ್ದಾರೆ ಮತ್ತು ವಿತರಿಸಲು 6 ಮಂದಿ ಇದ್ದಾರೆ.

ಬೆಣ್ಣೆಗಳನ್ನೂ ನೀಡಲಾಗುತ್ತದೆ.
ಎರಡನೇ ತಂಡದ ಆನೆಗಳು ಬಂದ ನಂತರ ಪ್ರತಿ ದಿನ ಎರಡು ಬಾರಿ ಆನೆಗಳಿಗೆ ಆಹಾರ ನೀಡಲು ತಲಾ 70 ಕೆಜಿ ಹೆಸರು ಕಾಳು, ಉದ್ದಿನಕಾಳು, ಕುಸುಬುಲು ಅಕ್ಕಿ, ಗೋಧಿಯನ್ನು ಬೇಯಿಸಲಾಗುತ್ತದೆ. ಇದರೊಂದಿಗೆ ತಲಾ 70 ಕೆಜಿ ಕ್ಯಾರೆಟ್, 70 ಕೆಜಿ ಬೀಟ್ರೋಟ್, 70 ಕೆಜಿ ಮೂಲಂಗಿ, 70 ಕೆಜಿ ಗೆಡ್ಡೆಕೋಸು, 70 ಕೆಜಿ ಸೌತೆಕಾಯಿಯನ್ನು ಪ್ರತಿ ದಿನ ಉಪಯೋಗಿಸಲಾಗುತ್ತದೆ.

ಪ್ರತಿ ಆನೆಗೆ ಒಂದು ಹೊತ್ತಿಗೆ 15ರಿಂದ 25 ಕಿಲೋ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಅಂಬಾರಿ ಹೊರುವ ಅಭಿಮನ್ಯುವಿಗೆ ಒಂದು ಹೊತ್ತಿಗೆ 25ರಿಂದ 30 ಕಿಲೋ ಪೌಷ್ಟಿಕ ಆಹಾರ ನೀಡಲಾಗುತ್ತದೆ.

ಪೊಟೋ ಕೃಪೆ: ಫೇಸ್​ ಬುಕ್


ಹೆಣ್ಣಾನೆಗಳನ್ನು ಹೊರತುಪಡಿಸಿ ಗಂಡಾನೆಗಳಿಗೆ ಒಂದು ಹೊತ್ತಿಗೆ ಅರ್ಧ ಕೆಜಿಯಂತೆ ದಿನಕ್ಕೆ ಒಂದು ಕೆಜಿ ಬೆಣ್ಣೆ, ಅಭಿಮನ್ಯುವಿಗೆ ದಿನಕ್ಕೆ ಒಂದೂವರೆ ಕೆಜಿ ಬೆಣ್ಣೆ ನೀಡಲಾಗುತ್ತದೆ. ಜೊತೆಗೆ ಒಂದು ಆನೆಗೆ ದಿನಕ್ಕೆ 450ರಿಂದ 600 ಕಿಲೋ ಆಲದಸೊಪ್ಪು, 250 ಕೆಜಿ ಹಸಿ ಹುಲ್ಲು, 50 ಕೆಜಿ ಭತ್ತದ ಹುಲ್ಲನ್ನು ನೀಡಲಾಗುತ್ತದೆ. ಆನೆಗಳಿಗೆ ಹಸಿವು ಹೆಚ್ಚಾಗುವುದಕ್ಕೆ ಹಾಗೂ ಮೈಕಟ್ಟಲು ವಿಟಮಿನ್ ಯುಕ್ತ ಮಾತ್ರೆಗಳನ್ನು ನೀಡಲಾಗುತ್ತದೆ.
ಮಧ್ಯಾಹ್ನಕ್ಕೆ ಕುಸುರೆಯನ್ನು ನೀಡಲಾಗುತ್ತದೆ.

ಕುಸುರೆಯೆಂದು ಕೇಳಿದಾಗ ಸಾಮಾನ್ಯವಾಗಿ ಯಾರಿಗೂ ತಿಳಿಯುವುದಿಲ್ಲ. ಮಧ್ಯಾಹ್ನದ ವೇಳೆ ಆನೆಗಳಿಗೆ ಸುಮಾರು 35 ಕೆಜಿ ಕುಸುರೆ ನೀಡಲಾಗುತ್ತಿದೆ. ಭತ್ತ, ಬೆಲ್ಲ, ತೆಂಗಿನಕಾಯಿ, ಕಡಲೆಕಾಯಿ ಹಿಂಡಿ, ಉಪ್ಪನ್ನು ಮಿಶ್ರಣ ಮಾಡಿ ಭತ್ತದ ಹುಲ್ಲಿನಲ್ಲಿ ಗಂಟು ಕಟ್ಟಿ(ಕುಸುರೆ) ಆನೆಗಳಿಗೆ ನೀಡಲಾಗುತ್ತಿದೆ. ಇದೊಂದು ರೀತಿಯ ಪೌಷ್ಠಿಕ ಆಹಾರ ಎಂದೇ ಹೇಳಬಹುದು.

ಫೋಟೋ ಕೃಪೆ: ಫೇಸ್ ಬುಕ್


ದಿನಕ್ಕೆ ಮೂರು ಬಾರಿ ನೀರು ಆನೆಗಳು ಪ್ರತಿ ದಿನ 250ರಿಂದ 300 ಲೀಟರ್ ನೀರು ಕುಡಿಯುತ್ತವೆ. ಮುಂಜಾನೆ 5.30ಕ್ಕೆ ಪೌಷ್ಟಿಕ ಆಹಾರ ಸೇವಿಸಿದ ನಂತರ ಒಮ್ಮೆ, ಮಧ್ಯಾಹ್ನ ಹಾಗೂ ಸಂಜೆ ತಾಲೀಮಿಗೆ ಹೋಗುವ ಮುನ್ನ ನೀರು ಕುಡಿಸಲಾಗುತ್ತದೆ.

ಇನ್ನು ಕೆಲವೇ ದಿನಗಳು ಬಾಕಿ ಇರುವ ಈ ಮೈಸೂರು ದಸರಾಕ್ಕೆ ನಾಡಿನ ಸಮಸ್ತ ಜನರೂ ಕಾತುರರಾಗಿರುವುದಂತು ಪಕ್ಕಾ. ಹೀಗಾಗಿ ಆನೆಗಳಿಗೆ ಹೆಚ್ಚೆಚ್ಚು ಆಹಾರ ಮತ್ತು ಸಿದ್ಧತೆಗಳನ್ನು ಮಾಡಿಸುತ್ತಲೇ ಇದ್ದಾರೆ.
First published: