ಹುಬ್ಬಳ್ಳಿ (ಜು.18) - ದೇಶದೆಲ್ಲೆಡೆ ಈಗ 75 ನೇ ಸ್ವಾತಂತ್ರ್ಯೋತ್ಸವದ (75th Independence Day) ಸಂಭ್ರಮ ಮನೆ ಮಾಡಿದೆ. ಕೇಂದ್ರ ಸರ್ಕಾರ ಆಜಾದೀಕಾ ಅಮೃತ ಮಹೋತ್ಸವ ಮಾಡ್ತಿದೆ. ಆದರೆ ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹುಬ್ಬಳ್ಳಿಯ (Hubballi) ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯ (Khadi Village Industries Institute) ಸಂಭ್ರಮ ಕಿತ್ತುಕೊಂಡಿದೆ. 75 ರ ಸಂಭ್ರಮಕ್ಕೆ ದೇಶವೇ ಸಂತೋಷದಲ್ಲಿ ಇರುವಾಗಲೇ ಧ್ವಜ ತಯಾರರಿಕಾ ಘಟಕಕ್ಕೆ ಸಂಕಷ್ಟ ಎದುರಾಗಿದೆ. ಸರ್ಕಾರದ ನಿರ್ಧಾರದಿಂದ ಅಕ್ಷರಶಃ ಬೀದಿಗೆ ಬರೋ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ರಾಷ್ಟ್ರಧ್ವಜ ಸಿದ್ಧಪಡಿಸೋ ಏಕೈಕ ಸಂಸ್ಥೆ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘವಾಗಿದೆ. ಮಾನಕ ಬ್ಯೂರೋ ದಿಂದ ಮಾನ್ಯತೆ ಪಡೆದ ದೇಶದ ಏಕೈಕ ರಾಷ್ಟ್ರದ್ವಜ ತಯಾರಿಕಾ ಸಂಘ ಇದಾಗಿದೆ.
ರಾಷ್ಟ್ರದ್ವಜ ತಯಾರಿಕೆಯಲ್ಲಿ ಕೇಂದ್ರ ಸರ್ಕಾರ ಬದಲಾವಣೆ
ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿಯೊಂದು ಮನೆ ಮನೆಯ ಮೇಲೆಯೂ ರಾಷ್ಟ್ರ ಧ್ವಜವನ್ನು ಹಾರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಆದ್ರೆ ಧ್ವಜ ಸಂಹಿತೆಗೆ ತಂದಿರೋ ತಿದ್ದುಪಡಿ ಖಾದಿ ಧ್ವಜಕ್ಕೆ ಕಂಟಕ ತಂದಿದೆ. ಕೇಂದ್ರ ಸರಕಾರ ಪ್ಲ್ಯಾಗ್ ಕೋಡ್ ಆಫ್ ಇಂಡಿಯಾ 2002 ಅಮೆಂಡ್ ಮೆಂಟ್ ನಲ್ಲಿ ಬದಲಾವಣೆ ತಂದಿದೆ. ರಾಷ್ಟ್ರದ್ವಜ ತಯಾರಿಕೆಯಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ. ಖಾದಿ, ಉಲನ್, ಸಿಲ್ಕ್, ಬಟ್ಟೆಯಿಂದ ಧ್ವಜ ತಯಾರಾಗ್ತಾ ಇತ್ತು. ಖಾದಿ ಬಟ್ಟೆಯನ್ನು ಕೈಯಿಂದ ಹೊಲಿದು ಧ್ವಜ ಸಿದ್ಧಪಡಿಸಲಾಗ್ತಿತ್ತು. ಇದೀಗ ಖಾದಿ ಬಟ್ಟೆಯ ಬದಲಾಗಿ ಪಾಲಿಸ್ಟರ್ ಬಟ್ಟೆಯಿಂದ ಧ್ವಜ ತಯಾರಿಕೆಗೆ ಸರ್ಕಾರ ಮುಂದಾಗಿದೆ. ಬಟ್ಟೆ ಮಿಲ್ ಗಳಿಂದ ಧ್ವಜ ತಯಾರಿಕೆಗೆ ಸರ್ಕಾರ ಮುಂದಾಗಿದೆ.
ಆತಂಕದಲ್ಲಿ ಧ್ವಜ ತಯಾರಿಕಾ ಕೇಂದ್ರ
ಯಾರು ಬೇಕಾದ್ರೂ, ಯಾವ ಬಟ್ಟೆಯಲ್ಲಿ ಬೇಕಾದ್ರೂ ರಾಷ್ಟ್ರ ಧ್ವಜವನ್ನು ಸಿದ್ಧಗೊಳಿಸಬಹುದು ಎಂದು ಕಾನೂನು ತಿದ್ದುಪಡಿ ಮಾಡಲಾಗಿದೆ. ಕೇಂದ್ರದ ನಿರ್ಧಾರ ದಿಂದ ಧ್ವಜ ತಯಾರಿಕಾ ಕೇಂದ್ರ ಬಂದಾಗುವ ಆತಂಕದಲ್ಲಿದೆ. ಅಧಿಕಾರಿಗಳು ಈ ಮೊದಲು ಧ್ವಜ ತಯಾರಿಕೆಗೆ ಸೂಚಿಸಿದ್ದರು. ಕೋಟ್ಯಾಂತರ ರೂಪಾಯಿ ವೆಚ್ಚದ ದ್ವಜ ತಯಾರಾದ ಬಳಿಕ ಸರ್ಕಾರ ನಿಲುವು ಬದಲಿಸಿದೆ. ಇದರಿಂದಾಗಿ ಪ್ರತಿ ವರ್ಷಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಧ್ವಜಗಳ ಮಾರಾಟವಾಗಿವೆ. ಪ್ರತಿ ವರ್ಷ ಮೂರುವರೆಯಿಂದ ನಾಲ್ಕು ಕೋಟಿ ವ್ಯಾಪಾರವಾಗುತ್ತಿತ್ತು. ಈ ಬಾರಿ ಬೇಡಿಕೆ ಪ್ರಮಾಣ ಅರ್ಧಕ್ಕೆ ಕುಸಿತವಾಗಿದೆ.
ಇದನ್ನೂ ಓದಿ: Curd Price: ಮೊಸರು-ಮಜ್ಜಿಗೆ ಬೆಲೆ ನಿನ್ನೆ ಏರಿಕೆ, ಇಂದು ಇಳಿಕೆ; KMFನಿಂದ ನೂತನ ದರ ಜಾರಿ
ಹುಸಿಯಾಗ್ತಿದೆ ಕೋಟಿ ಕೋಟಿ ವ್ಯವಹಾರದ ಕನಸು
75 ನೇ ವರ್ಷಾಚಾರಣೆಯಿಂದ 7 ರಿಂದ 8 ಕೋಟಿ ರೂಪಾಯಿ ವ್ಯವಹಾರವಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಸರ್ಕಾರದ ತಿದ್ದುಪಡಿಯಿಂದ ಪಾಲಿಸ್ಟರ್ ಧ್ವಜ ಖರೀದಿಯ ಬಿರುಸುಗೊಂಡಿದೆ. ಹೀಗಾಗಿ ಖಾದಿ ಧ್ವಜ ಕೇಳೋರೇ ಇಲ್ಲ ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಬೆಂಗೇರಿಯೊಂದರಲ್ಲಿಯೇ 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಖಾದಿ ಬಟ್ಟೆ ನೂಲುವ 1300 ಕ್ಕೂ ಹೆಚ್ಚು ಜನರಿಗೆ ಆತಂಕ ಸೃಷ್ಟಿಯಾಗಿದೆ.
ಕಾರ್ಮಿಕರಿಗೆ ಬೀದಿ ಪಾಲಾಗೋ ಭೀತಿ
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದ ಗ್ರಾಮೋದ್ಯೋಗ ಸಂಸ್ಥೆ ಇದೀಗ ಮುಚ್ಚುವ ಆತಂಕ ಎದುರಿಸುತ್ತಿದೆ.
ಸಾವಿರಾರು ಜನ ಬೀದಿ ಪಾಲಾಗೋ ಆತಂಕ ಸೃಷ್ಟಿಯಾಗಿದೆ. ಸರ್ಕಾರದ ಮಾತು ನಂಬಿ ನಾವು ಧ್ವಜ ತಯಾರಿಸಿದ್ದೇವೆ. ಪ್ರತಿ ವರ್ಷ ಜುಲೈ ತಿಂಗಳಲ್ಲಿ 70-80 ಲಕ್ಷ ರೂಪಾಯಿ ಧ್ವಜ ಮಾರಾಟ ಮಾಡುತ್ತಿದ್ದೆವು. ಆದರೆ ಈ ಅವಧಿಯಲ್ಲಿ ಕೇವಲ 12 ಲಕ್ಷ ರೂಪಾಯಿ ಧ್ವಜ ಮಾರಾಟವಾಗಿದೆ. ಆದರೆ ಕೋಟ್ಯಾಂತರ ರೂಪಾಯಿ ಮೌಲ್ಯದ ಧ್ವಜಗಳ ಸಂಗ್ರಹ ಇದ್ದಲ್ಲಿಯೇ ಇದೆ. ಅವುಗಳ ಮಾರಾಟ ಹೇಗೆಂಬುದು ತೋಚದಂಗಾಗಿದೆ.
ಇದನ್ನೂ ಓದಿ: Dr C N Manjunath: ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ.ಮಂಜುನಾಥ್ ಮುಂದುವರಿಕೆ; ಸರ್ಕಾರಕ್ಕೆ ವೈದ್ಯರ ಅಭಿನಂದನೆ
ಹೊಸ ಧ್ವಜ ನೀತಿಯನ್ನ ವಾಪಸ್ ಪಡೆಯಬೇಕು
ಖಾದಿಗೆ ಒತ್ತು ಕೊಡೋದು ಬಿಟ್ಟು ಪಾಲಿಸ್ಟರ್ ಗೆ ಒತ್ತು ಕೊಡ್ತಿರೋದು ಸರಿಯಲ್ಲ.ಕೂಡಲೇ ಹೊಸ ಧ್ವಜ ನೀತಿಯನ್ನ ವಾಪಸ್ ಪಡೆಯಬೇಕು. ಖಾದಿ ಬಟ್ಟೆಗಳಿಂದ ಸಿದ್ದ ಪಡಿಸಿದ ಧ್ವಜಗಳನ್ನೇ ಖರೀದಿ ಮಾಡಬೇಕು. ಗ್ರಾಮೋದ್ಯೋಗ ಸಂಸ್ಥೆಯನ್ನು ಕೇಂದ್ರ ಸರ್ಕಾರ ಉಳಿಸಬೇಕಂದು ಗ್ರಾಮೋದ್ಯೋಗ ಸಂಸ್ಥೆ ಕಾರ್ಯದರ್ಶಿ ಎಸ್.ಎಸ್.ಮಠಪತಿ ಆಗ್ರಹಿಸಿದ್ದಾರೆ. ಕೇಂದ್ರದ ನಿರ್ಧಾರದಿಂದಾಗಿ ಎಲ್ಲರಿಗೂ ತೊಂದರೆಯಾಗಿದೆ. ಹಗಲಿರುಳು ರಾಷ್ಟ್ರ ಧ್ವಜ ತಯಾರಿಕೆಯಲ್ಲಿ ತೊಡಗಿಕೊಂಡ ತಮಗೆ ತೀವ್ರ ವೇದನೆಯಾಗುತ್ತಿದೆ. ಕೂಡಲೇ ತನ್ನ ನಿರ್ಧಾರ ಬದಲಿಸಬೇಕೆಂದು ಇತರೆ ಸಿಬ್ಬಂದಿಯೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ