Arecanut Crop: ಅಕಾಲಿಕ ಮಳೆ ತಂದ ಸಂಕಷ್ಟ; ಕೊಯ್ದ ಅಡಿಕೆ ಮಳೆ ನೀರು ಪಾಲು

ಅಡಿಕೆ ಮರಗಳಲ್ಲಿರುವ ಹಿಂಗಾರು ಕೂಡಾ ಮಳೆಯಿಂದಾಗಿ ಕರಟಿ ಹೋಗುವ ಆತಂಕ ಎದುರಾಗಿದೆ

ಅಡಿಕೆ

ಅಡಿಕೆ

  • Share this:
ಪುತ್ತೂರು (ಜ. 8):  ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಮಳೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಭಾರೀ ನಷ್ಟ ಉಂಟು ಮಾಡುತ್ತಿದೆ. ಜಿಲ್ಲೆಯ ಕೃಷಿಕರ ಪ್ರಮುಖ ಬೆಳೆಯಾದ ಅಡಿಕೆ ಮಳೆಯಿಂದಾಗಿ ಸರಿಯಾಗಿ ಒಣಗದೆ ಕೆಟ್ಟು ಹೋಗುವ ಭೀತಿಯಲ್ಲಿದೆ. ಅಲ್ಲದೆ ಅಡಿಕೆ ಮರಗಳಲ್ಲಿರುವ ಹಿಂಗಾರು ಕೂಡಾ ಮಳೆಯಿಂದಾಗಿ ಕರಟಿ ಹೋಗುವ ಆತಂಕ ಎದುರಾಗಿದೆ . ಮಾರುಕಟ್ಟೆಯಲ್ಲಿ ಅಡಿಕೆಗೆ ಉತ್ತಮ ಧಾರಣೆಯಿದ್ದರೂ, ಅದರ ಪ್ರಯೋಜನವನ್ನು ಪಡೆಯಲಾಗದ ಸ್ಥಿತಿಗೆ ಅಡಿಕೆ ಕೃಷಿಕರನ್ನು ಅಕಾಲಿಕ ಮಳೆ ತಂದೊಡ್ಡಿದೆ.  ಜಿಲ್ಲೆಯ ಕೃಷಿಕರ ಪ್ರಮುಖ ಜೀವನಾಧಾರ ಬೆಳೆಯಾದ ಅಡಿಕೆ ಬೆಳೆಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ.  ಮೊದಲ ಕೊಯಿಲನ್ನು ಕೊಯ್ದು ಒಣಗಲು ಹಾಕಿರುವ ಅಡಿಕೆ ಮಳೆಯಿಂದಾಗಿ ಸಂಪೂರ್ಣವಾಗಿ ಒದ್ದೆಯಾಗಿದೆ. ಸರಿಯಾಗಿ ಒಣಗದ ಅಡಿಕೆಯ ಹೋಳುಗಳು ಕಪ್ಪು ಬಣ್ಣಕ್ಕೆ ತಿರುಗುವ ಪರಿಣಾಮ ಮಾರುಕಟ್ಟೆಯಲ್ಲಿ ಇದು ತೃತೀಯ ದರ್ಜೆಯ ಅಡಿಕೆಯಾಗಿ ಪರಿವರ್ತಿತವಾಗುತ್ತದೆ. ಈ ಅಡಿಕೆಗೆ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆ ನಿಗದಿಯಾಗಿದ್ದು, ಹೆಚ್ಚಿನ ಅಡಿಕೆಗಳು ಹಾಳಾಗುವ ಭೀತಿಯಲ್ಲೂ ಇದೆ.

ಕೊಯಿಲು ಮಾಡಿದ ಅಡಿಕೆ ಕನಿಷ್ಟ ಹದಿನೈದು ದಿನಗಳ ಕಾಲ ಬಿಸಿಲಲ್ಲಿ ಒಣಗುವ ಅಗತ್ಯವಿದ್ದು, ಈ ಬಾರಿ ಮಳೆ ಸುರಿದ ಪರಿಣಾಮ ಸರಿಯಾಗಿ ಒಣಗದ ಕಾರಣ, ಅಡಿಕೆ ಕಪ್ಪಾಗುವ ಸಾಧ್ಯತೆಯು ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ಭಾರೀ ಬೆಲೆಯಿದ್ದರೂ, ಕೈಯಲ್ಲಿದ್ದ ಅಡಿಕೆ ಮಳೆಯಿಂದಾಗಿ ಹಾಳಾಗುತ್ತಿರುವುದು ಬೆಳೆಗಾರನ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ಡಿಸೆಂಬರ್, ಜನವರಿ ತಿಂಗಳಿನಲ್ಲಿ ಅಡಿಕೆಯ ಮೊದಲ ಫಸಲು ಕೊಯಿಲಿಗೆ ಸಿದ್ಧವಾಗುತ್ತಿದ್ದು, ಈ ಕಾರಣಕ್ಕಾಗಿ ಜಿಲ್ಲೆಯ ಎಲ್ಲಾ ಕೃಷಿಕರೂ ಫಸಲನ್ನು ಕೊಯ್ದು ಒಣಗಲು ಹಾಕುವ ಸಮಯ ಇದಾಗಿದೆ. ಆದರೆ ನಿರಂತರವಾಗಿ ಒಂದು ವಾರಗಳ ಕಾಲ ಮಳೆ ಸುರಿಯುತ್ತಿರುವ ಪರಿಣಾಮ ಅಡಿಕೆಯನ್ನು ಸರಿಯಾಗಿ ಒಣಗಿಸಲಾಗದ ಸ್ಥಿತಿ ಅಡಿಕೆ ಬೆಳೆಗಾರರದ್ದಾಗಿದೆ.

ಕೊಯ್ದ ಅಡಿಕೆಯ ಸ್ಥಿತಿ ಇದಾದರೆ, ಇನ್ನೊಂದೆಡೆ ಇದೀಗ ಮತ್ತೊಂದು ಫಸಲಿಗೆ ಹೂ ಬಿಡುವ ಕಾಲವಾಗಿರುವುದರಿಂದ ಮಳೆ ಅಡಿಕೆ ಹಿಂಗಾರವನ್ನೂ ಹಾಳು ಮಾಡುತ್ತಿವೆ. ನಿರಂತರವಾಗಿ ಮಳೆಯಾಗಿ, ಬಿಸಿಲು ಬರುವ ಕಾರಣ ಹಿಂಗಾರಗಳು ಬಿಸಿಲಿಗೆ ಕರಟಿ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಹೆಚ್ಚಿನ ತೋಟಗಳಲ್ಲಿ ಈ ಸಮಸ್ಯೆಯೂ ಹೆಚ್ಚಾಗಿದೆ. ಒಂದೆಡೆ ಕೊಯ್ದು ಮಾರಾಟ ಮಾಡಲು ಸಿದ್ಧವಾದ ಅಡಿಕೆ ಮಳೆಯಿಂದಾಗಿ ಹಾಳಾದರೆ, ಇನ್ನೊಂದೆಡೆ ಹೊಸ ಫಸಲೂ ಮಳೆಯ ಕಾಟದಿಂದ ತಪ್ಪಿಸಿಕೊಳ್ಳದಂತಾಗಿದೆ. ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಗರಿಷ್ಟ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಕಿಲೋವೊಂದಕ್ಕೆ 400 ರೂಪಾಯಿ ದಾಟಿ, 500 ರೂಪಾಯಿಗೆ ಬಿಕರಿಯಾಗುವ ಲಕ್ಷಣಗಳು ಕಂಡು ಬರುತ್ತಿದೆ. ಆದರೆ ಮಾರಾಟಕ್ಕೆ ಸಿದ್ಧವಾಗುವ ಮೊದಲೇ ಅಡಿಕೆಗಳು ಮಳೆಗೆ ಆಹುತಿಯಾಗುತ್ತಿದ್ದು, ಅಡಿಕೆ ಬೆಳೆಗಾರನ ಚಿಂತೆಗೆ ಕಾರಣವಾಗಿದೆ.
Published by:Seema R
First published: