news18-kannada Updated:December 17, 2020, 8:32 PM IST
ಗರ್ಭಿಣಿ ಮಹಿಳೆ
ಚಿಕ್ಕಮಗಳೂರು(ಡಿಸೆಂಬರ್. 17): ಸ್ಥಳಿಯರೇ ಬಲವಂತವಾಗಿ ಚುನಾವಣೆಗೆ ನಿಲ್ಲಿಸಿದ್ದ ತುಂಬು ಗರ್ಭಿಣಿ ಮಹಿಳೆಯೊಬ್ಬಳು ಗ್ರಾಮದ ಜನರಿಗಾಗಿ ಚುನಾವಣೆ ತ್ಯಾಗ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅತ್ತಿಗುಂಡಿಯಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಚಿಕ್ಕಮಗಳೂರು ತಾಲೂಕಿನ ಐ.ಡಿ.ಪೀಠ (ಇನಾಂ ದತ್ರಾತ್ರೇಯ ಪೀಠ) ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಗ್ರಾಮ ಪಂಚಾಯಿತಿ ಅಭ್ಯರ್ಥಿ ತುಂಬು ಗರ್ಭಿಣಿ ಸುಮಿತಾ ನಾಮಪತ್ರ ಸಲ್ಲಿಸಿದ್ದಳು. ಎಲ್ಲಾ ಸರಿ ಇದ್ದಿದ್ರೆ ಈ ವೇಳೆಗೆ ಪ್ರಚಾರದ ಭರಾಟೆ ಜೋರು ಇರುತ್ತಿತ್ತು, ಆದರೆ, ಕಸ್ತೂರಿ ರಂಗನ್ ವರದಿಯ ತೂಗುಗತ್ತಿ ಮಲೆನಾಡಿಗರ ನೆತ್ತಿ ಮೇಲೆ ತೂಗಾಡುತ್ತಿರುವುದರಿಂದ ಚುನಾವಣೆ ಬಹಿಷ್ಕಾರ ಮಾಡಿ ದತ್ತಪೀಠ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಈಕೆಯು ಸೇರಿದಂತೆ 12 ಜನರೂ ನಾಮಪತ್ರ ಹಿಂಪಡೆದಿದ್ದಾರೆ. ಶತಮಾನಗಳಿಂದ ಸಾವಿರಾರು ಜನ ಮುಳ್ಳಯ್ಯನಗಿರಿಯ ಹಾಸುಪಾಸಿನಲ್ಲಿ ಕಾಫಿತೋಟದಲ್ಲಿ ಕೂಲಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.
ಡಿಸೆಂಬರ್ 14 ನಾಮಪತ್ರ ಹಿಂಪಡೆಯಲು ಕೊನೆ ದಿನ. ವೈದ್ಯರು ಅಂದೇ ಹೆರಿಗೆಗೆ ಸುಮಿತಾಗೆ ಸಮಯ ಕೊಟ್ಟಿದ್ದರು. ಹೊಟ್ಟೆ ನೋವು ಶುರುವಾಗಿತ್ತು. ಜನ ಮನೆಯಲ್ಲಿದ್ದಳನ್ನ ಗೆಲ್ಲಿಸಿ ಪಂಚಾಯಿತಿ ಅಧ್ಯಕ್ಷೆ ಮಾಡಿದ್ದಾರೆ. ನನ್ನೊಬ್ಬಳಿಂದ ಜನರ ಹೋರಾಟಕ್ಕೆ ತೊಂದರೆಯಾಗಬಾರದೆಂದು ಹೊಟ್ಟೆ ನೋವಿದ್ದರು ಕೂಲಿ ಕೆಲಸಕ್ಕೆ ಹೋಗಿದ್ದ ಗಂಡನನ್ನ ಕರೆಸಿಕೊಂಡು ಸೀದಾ ಪಂಚಾಯಿತಿಗೆ ಬಂದು ನಾಮಪತ್ರ ಹಿಂಪಡೆದಿದ್ದಾಳೆ.
ನಾಮಪತ್ರ ಹಿಂಪಡೆದ ನೇರವಾಗಿ ಬಂದು ಹೆರಿಗೆಗೆ ಅಡ್ಮಿಟ್ ಆಗಿದ್ದಾರೆ. ಐ.ಡಿ.ಪೀಠ ಗ್ರಾಮ ಪಂಚಾಯಿತಿಯಲ್ಲಿ ನಾಮಪತ್ರ ಹಿಂಪಡೆಯುತ್ತಿದ್ದಂತೆ ಗಂಡ ಸುಂದರ್, ಆಶಾ ಕಾರ್ಯಕರ್ತೆ ಹಾಗೂ ಸ್ಥಳಿಯರು ಕಾರಿನಲ್ಲಿ ಕರೆತಂದು ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದಾರೆ. ಬಳಿಕ ಸುಮಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಶತಮಾನಗಳ ಬದುಕೇ ಬೀದಿಗೆ ಬೀಳತ್ತಿದೆ. ಪರಿಸರ ಸೂಕ್ಷ್ಮ ವಲಯ, ಕಸ್ತೂರಿ ರಂಗನ್ ವರದಿ ನಮ್ಮ ಬದುಕಿಗೆ ಮಾರಾಕವಾಗುತ್ತಿದೆ. ಕಾಫಿ ತೋಟದಲ್ಲಿ ನಮಗೆ 200 ರೂಪಾಯಿ ಕೂಲಿ ಕೊಟ್ಟರು ಬದುಕುತ್ತೇವೆ. ನಗರ ಪ್ರದೇಶದಲ್ಲಿ ನಾವು ಬದುಕಲು ಕಷ್ಟ. ಬದುಕಿಗಿಂತ ಚುನಾವಣೆ ದೊಡ್ಡದಲ್ಲ. ಬದುಕನ್ನ ನಾಶ ಮಾಡಿಕೊಂಡು ಚುನಾವಣೆ ಗೆದ್ದರೇ ಏನು ಉಪಯೋಗ. ನಮಗೆ ಬದುಕು ಬೇಕೆಂದು ಸೀರಿಯಸ್ ನೋವಲ್ಲೂ ಸುಮಿತಾ ಕಸ್ತೂರಿ ರಂಗನ್ ವರದಿಯನ್ನ ವಿರೋಧಿಸಿದ್ದಾರೆ. ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯನ್ನ ಚುನಾವಣೆಯಲ್ಲಿ ಗೆಲ್ಲಿಸಿ ಅಧ್ಯಕ್ಷೆ ಮಾಡಿದ ಊರ ಜನ ಕೂಡ ಚುನಾವಣೆ ನಡೆಯದಿದ್ದರೆ ಏನಂತೆ, ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆಂದು ಹಾರೈಸುತ್ತಿದ್ದಾರೆ.
ಇದನ್ನೂ ಓದಿ :
ರಾಜ್ಯ ಸರ್ಕಾರ ಐಸಿಯುನಲ್ಲಿ - ಕೆಕೆಆರ್ಡಿಬಿ ಕೋಮಾ ಸ್ಥಿತಿಯಲ್ಲಿ: ಪ್ರಿಯಾಂಕ್ ಖರ್ಗೆ ಲೇವಡಿ
ನಾನು ಮನೆಯಲ್ಲಿದ್ದರು ನಮ್ಮ ಜನ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದರು. ಅವರ ಸೇವೆಗೆಂದು ಮತ್ತೆ ಚುನಾವಣೆಗೆ ನಿಂತಿದ್ದೆ. ಆದರೆ, ಕಸ್ತೂರಿ ರಂಗನ್ ವರದಿಯನ್ನ ವಿರೋಧಿಸಿರುವ ಜನ ತೀರ್ಮಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಅದಕ್ಕೆ ಆಸ್ಪತ್ರೆಗೆ ಹೋಗುವ ಮುಂಚೆ ಪಂಚಾಯಿತಿಗೆ ಹೋಗಿ ನನ್ನ ನಾಮಪತ್ರವನ್ನ ನಾನೇ ಹಿಂಪಡೆದಿದ್ದೇನೆ.
ನಮಗೆ ಸ್ಥಳಾಂತರಗೊಂಡು ಬದುಕು ನಡೆಸಲು ಅಸಾಧ್ಯ. ಹಾಗಾಗಿ, ಸರ್ಕಾರ ಕಸ್ತೂರಿ ರಂಗನ್ ವರದಿಯನ್ನ ಜಾರಿಗೊಳಿಸಬಾರದು. ನಮ್ಮನ್ನ ಅಲ್ಲೇ ನಮ್ಮ ಪಾಡಿಗೆ ಬದುಕಲು ಬಿಡಬೇಕೆಂದು ಬಾಣಂತಿ ಸುಮಿತಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Published by:
G Hareeshkumar
First published:
December 17, 2020, 8:31 PM IST