Praveen Nettaru: ಪ್ರವೀಣ್ ನೆಟ್ಟಾರು ಹತ್ಯೆ‌ ಪ್ರಕರಣ; PFI ಮುಖಂಡರ ಮನೆ ಮೇಲೆ NIA ದಾಳಿ

ಪುತ್ತೂರು ನಿರೀಕ್ಷಣಾ ಮಂದಿರದಲ್ಲಿ ದಾಳಿ ಸಂದರ್ಭದಲ್ಲಿ ವಶಪಡಿಸಿಕೊಂಡ ದಾಖಲೆಗಳನ್ನು ಎನ್ಐಎ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ನಿರೀಕ್ಷಣಾ ಮಂದಿರದ ಒಳಗೆ ಅಧಿಕಾರಿಗಳ ಅನುಮತಿಯಿಲ್ಲದೆ ಯಾರಿಗೂ ಪ್ರವೇಶಕ್ಕೆ ಅವಕಾಶವನ್ನು ನಿರಾಕರಿಸಲಾಗಿದೆ. 

ಹತ್ಯೆಯಾದ ಪ್ರವೀಣ್

ಹತ್ಯೆಯಾದ ಪ್ರವೀಣ್

  • Share this:
ಬಿಜೆಪಿ ಯುವ ಮುಖಂಡ (BJP Leaders) ಪ್ರವೀಣ್ ನೆಟ್ಟಾರು ಹತ್ಯೆ (Praveen Nettar Case) ಪ್ರಕರಣಕ್ಕೆ‌ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ರಾಷ್ಟ್ರೀಯ ತನಿಖಾದಳ  (NIA) ತನ್ನ ತನಿಖೆಯನ್ನು  ತೀವ್ರಗೊಳಿಸಿದ್ದು, ಇಂದು ಬೆಳ್ಳಂಬೆಳಗ್ಗೆ ಸುಮಾರು 30 ಕ್ಕೂ ಮಿಕ್ಕಿದ ಕಡೆಗಳಿಗೆ ಏಕಾಏಕಿ ದಾಳಿ ನಡೆಸಿದೆ. ಮುಖ್ಯವಾಗಿ ಪಿಎಫ್ಐ (PFI) ಮತ್ತು ಎಸ್‌ಡಿಪಿಐ (SDPI) ಮುಖಂಡರನ್ನೇ  ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ಪಿಎಫ್ಐ ಮತ್ತು ಎಸ್​​ಡಿಪಿಐ ನ ರಾಜ್ಯದ ಪ್ರಮುಖ ಸ್ಥಾನದಲ್ಲಿರುವ ನಾಯಕರ ಮನೆ ಹಾಗೂ ಅವರು ಕಾರ್ಯಾಚರಣೆ ನಡೆಸುವ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಜುಲೈ 26 ರಂದು ಸುಳ್ಯ ತಾಲೂಕಿನ ಬೆಳ್ಳಾರೆಯ ತನ್ನ ಕೋಳಿ ಅಂಗಡಿಯಲ್ಲಿ ವ್ಯವಹಾರ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು ಮೇಲೆ ಮೂವರು ಹಂತಕರು ತಲವಾರು ದಾಳಿ ನಡೆಸಿ ಹತ್ಯೆ ಮಾಡಿದ್ದರು.

ಈ ಸಂಬಂಧ ಮೂವರು ಪ್ರಮುಖ ಆರೋಪಿಗಳು ಸೇರಿದಂತೆ ಒಟ್ಟು ಹತ್ತು ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆರೋಪಿಗಳ ಬಂಧನದ ಬಳಿಕ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿತ್ತು.

30ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ

ಇಂದು ಏಕಾಏಕಿ ಸುಳ್ಯ, ಕಡಬ ಮತ್ತು ಪುತ್ತೂರು ತಾಲೂಕಿನ ಸುಮಾರು 30ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿ ಶೋಧ ನಡೆಸಿದೆ. ಮುಖ್ಯವಾಗಿ SDPI ಪಕ್ಷದ ಇಕ್ಬಾಲ್ ಬೆಳ್ಳಾರೆ, ಪಿಎಫ್ಐ ಮುಖಂಡ ಜಾಬೀರ್ ಅರಿಯಡ್ಕ, ಸೇರಿದಂತೆ ಹಲವು ಮುಖಂಡರ ಮನೆ ಮೇಲೆ ದಾಳಿ ನಡೆಸಲಾಗಿದೆ.

Praveen Nettaru murder case NIA raids SDPI And PFI Leaders house akp mrq
ಎನ್​​ಐಎ ದಾಳಿ


ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದೆ ಬಂಧಿತರು ಮಾತ್ರವಲ್ಲದೆ ಇನ್ನೂ ಹಲವು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಪಡೆದು ರಾಷ್ಟ್ರೀಯ ತನಿಖಾ ದಳ ಈ ದಾಳಿಯನ್ನು ಸಂಘಟಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:  Amit Shah: ಪ್ರವೀಣ್ ನೆಟ್ಟಾರು ಹತ್ಯೆ, ಕಾರ್ಯಕರ್ತರ ರಾಜೀನಾಮೆ ಶಾಕ್! ಬಸವರಾಜ ಬೊಮ್ಮಾಯಿ ಮೇಲೆ ಅಮಿತ್ ಶಾ ಅಸಮಾಧಾನ

ಹಲವು ದಾಖಲೆ ವಶಕ್ಕೆ

ಮುಖ್ಯವಾಗಿ ಪಿಎಫ್ಐ ಕಾರ್ಯಕರ್ತರಿಗೆ ತರಬೇತಿ ನೀಡುವ ಬಂಟ್ವಾಳ ತಾಲೂಕಿನ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ಮೇಲೆ ದಾಳಿ ನಡೆಸಿರುವ ತನಿಖಾ ದಳ ಪಿಎಫ್ಐ ಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ.

ಕಮ್ಯುನಿಟಿ ಸೆಂಟರ್ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ  ಕೆಲವರು ಕೇಂದ್ರದ ಬಾಗಿಲು ತೆಗೆಯಲು ಅಡ್ಡಿ ಮಾಡಿದ ಕುರಿತು ಮಾಹಿತಿ ಲಭ್ಯವಾಗಿದ್ದು, ಸ್ಥಳೀಯ ಪೊಲೀಸರ ಸಹಕಾರದಿಂದ ತನಿಕಾ ಅಧಿಕಾರಿಗಳು ಸೆಂಟರ್ ಬಾಗಿಲು ಒಡೆದು ಒಳಗೆ ಪ್ರವೇಶಿಸಿದ್ದಾರೆ. ಮುಂಜಾನೆಯಿಂದ ಮಧ್ಯಾಹ್ನದವರೆಗೂ ಈ ಸೆಂಟರ್​ನಲ್ಲಿ ಶೋಧ ಕಾರ್ಯ ಮುಂದುವರಿಸಿರುವ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಫ್ರೀಡಂ ಕಮ್ಯುನಿಟಿ ಹಾಲ್ ಮೇಲೆ ದಾಳಿ

ಪ್ರವೀಣ್ ನೆಟ್ಟಾರು ಕೊಲೆಯ ಪ್ರಮುಖ ಆರೋಪಿ ಶಹಾಬುದ್ದೀನ್ ಇದೇ ಫ್ರೀಡಂ ಕಮ್ಯುನಿಟಿ ಹಾಲ್ ನಲ್ಲಿ ತರಬೇತಿ ಪಡೆದಿದ್ದ. ಈ ವಿಚಾರವನ್ನು ತನಿಖಾಧಿಕಾರಿಗಳ ಮುಂದೆ ಆರೋಪಿ ಶಹಾಬುದ್ದೀನ್ ಒಪ್ಪಿಕೊಂಡಿದ್ದಾನೆ. ಮಿತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಫ್ರೀಡಂ ಕಮ್ಯುನಿಟಿ ಹಾಲ್ ಬಗ್ಗೆ ಸ್ಥಳೀಯರು ಈ ಹಿಂದೆಯೇ ಹಲವು ಅನುಮಾನ ವ್ಯಕ್ತಪಡಿಸಿದ್ದರು.

Praveen Nettaru murder case NIA raids SDPI And PFI Leaders house akp mrq
ಪ್ರವೀಣ್ ನೆಟ್ಟಾರು


ರಾತ್ರಿ ಹೊತ್ತಿನಲ್ಲೇ ಹೆಚ್ಚಾಗಿ ಈ ಹಾಲ್ ಸುತ್ತಮುತ್ತ ಓಡಾಟಗಳು ನಡೆಯುತ್ತಿರುವುದು ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಈ ಸೆಂಟರ್ ಒಳಗೆ ಇರುವ ಬಗ್ಗೆಯೂ ಸ್ಥಳೀಯರು ಪೋಲೀಸರ ಗಮನಕ್ಕೂ ತಂದಿದ್ದರು. ಈ ನಡುವೆ ಇದೀಗ ರಾಷ್ಟ್ರೀಯ ತನಿಖಾ ದಳ ಸೆಂಟರ್‌ ಮೇಲೆ ದಾಳಿ ನಡೆಸಿರುವುದು ಹಲವು ಅನುಮಾನಗಳಿಗೆ ಉತ್ತರವನ್ನೂ ನೀಡುವ ಸಾಧ್ಯತೆಗಳಿವೆ.

ಇದನ್ನೂ ಓದಿ:  Praveen Nettar: ಪ್ರವೀಣ್ ನೆಟ್ಟಾರು ಕೊಲೆಗೆ ಹೇಗಿತ್ತು ಪ್ಲಾನ್- ಆರೋಪಿಗಳು ಬಾಯ್ಬಿಟ್ಟಿದ್ದೇನು?

ಮಹತ್ವದ ದಾಖಲೆಗಳ ಪರಿಶೀಲನೆ

ಸುಮಾರು 50 ವಾಹನಗಳಲ್ಲಿ ಎನ್ಐಎ ಅಧಿಕಾರಿಗಳು ಈ ದಾಳಿಯನ್ನು ಸಂಘಟಿಸಿದ್ದು, ಸ್ಥಳೀಯ ಪೊಲೀಸರೂ ಈ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ. ಪುತ್ತೂರು ನಿರೀಕ್ಷಣಾ ಮಂದಿರದಲ್ಲಿ ದಾಳಿ ಸಂದರ್ಭದಲ್ಲಿ ವಶಪಡಿಸಿಕೊಂಡ ದಾಖಲೆಗಳನ್ನು ಎನ್ಐಎ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ನಿರೀಕ್ಷಣಾ ಮಂದಿರದ ಒಳಗೆ ಅಧಿಕಾರಿಗಳ ಅನುಮತಿಯಿಲ್ಲದೆ ಯಾರಿಗೂ ಪ್ರವೇಶಕ್ಕೆ ಅವಕಾಶವನ್ನು ನಿರಾಕರಿಸಲಾಗಿದೆ.
Published by:Mahmadrafik K
First published: