ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (BJP Activist Praveen Nettar) ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿಯನ್ನು ಎನ್ಐಎ (NIA) ಬಂಧಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಆರೋಪಿ ತೌಫಿಲ್ ತಲೆಮರೆಸಿಕೊಂಡಿದ್ದನು. ಮಾರ್ಚ್ 4ರಂದು ರಾತ್ರಿ ಸುಮಾರು 9.30ಕ್ಕೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿ (Dasarahalli) ತೌಫಿಲ್ ಬಂಧನವಾಗಿದೆ. ತೌಫಿಲ್ ಪತ್ತೆಗೆ ಎನ್ಐಎ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ಎನ್ಐಎ ಅಧಿಕಾರಿಗಳಿಗೆ ದಾಸರಹಳ್ಳಿಯಲ್ಲಿ ತೌಫಿಲ್ ಇರೋ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಆಟೋ ಚಾಲಕ ಮತ್ತು ಪ್ಲಂಬರ್ ರೀತಿಯಲ್ಲಿ ತೌಫಿಲ್ ಮನೆಗೆ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದರು. ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಅಧಿಕಾರಿಗಳ ಮೇಲೆ ದಾಳಿಗೆ ಯತ್ನ
ಮೊದಲಿಗೆ ಫ್ಲಂಬರ್ ಅಂತ ಕೈಯಲ್ಲಿ ರಿಂಚ್ ಹಿಡಿದು ಮನೆ ಒಳಗೆ ಇಬ್ಬರು ಅಧಿಕಾರಿಗಳು ಹೋಗಿದ್ದರು. ಈ ವೇಳೆ ತೌಫಿಲ್ ಮನೆಯಲ್ಲಿ ಮಟನ್ ಕಟ್ ಮಾಡುತ್ತಿದ್ದನು. ಅಧಿಕಾರಿಗಳನ್ನ ನೋಡಿ ಗಲಿಬಿಲಿಗೊಂಡು ತೌಫಿಲ್ ಅವರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದನು.
ಅಷ್ಟರಲ್ಲಿ ಅಧಿಕಾರಿಗಳು ತೌಫಿಲ್ನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪ್ರವೀಣ್ ಕೊಲೆ
ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರೂ ಆಗಿದ್ದ 36 ವರ್ಷದ ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ (Chicken Shop) ನಡೆಸುತ್ತಿದ್ದರು.
ಬೆಳ್ಳಾರೆ ಪೇಟೆಯಲ್ಲಿ ತಮ್ಮ ಅಂಗಡಿ ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಪ್ರವೀಣ್ ಮೃತಪಟ್ಟಿದ್ದರು.
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 50 ರೂ. ಲಕ್ಷ ಪರಿಹಾರ
ಕುಟುಂಬ ನಿರ್ವಹಣೆ ಮಾಡುತ್ತಿದ್ದ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳ ದಾಳಿಗೆ ಬಲಿಯಾದ ಹಿನ್ನೆಲೆ ಸರ್ಕಾರ ಪ್ರವೀಣ್ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ. ಹಾಗೂ ಭಾರತೀಯ ಜನತಾ ಪಕ್ಷದ ವತಿಯಿಂದ 25 ಲಕ್ಷ ರೂ. ಪರಿಹಾರ ನೀಡಿತ್ತು. ಜೊತೆಗೆ ಮನೆಯನ್ನು ಕಟ್ಟಿಸಿಕೊಡುವ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.
ಪ್ರವೀಣ್ ಪತ್ನಿಗೆ ಸರ್ಕಾರಿ ಕೆಲಸ
ಪ್ರವೀಣ್ ನೆಟ್ಟಾರು ಹತ್ಯೆ ಸಂದರ್ಭದಲ್ಲಿ ವಯಸ್ಸಾದ ಅತ್ತೆ-ಮಾವರನ್ನು ನೋಡಿಕೊಳ್ಳುವುದಕ್ಕಾಗಿ ಪ್ರವೀಣ್ ಪತ್ನಿ ನೂತನ ಕುಮಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಅಂತೆಯೇ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗದಲ್ಲಿ ಕೆಲಸ ಕೊಡಿಸಿದ್ದರು. ಆದರೆ ನೂತನ ಕುಮಾರಿ ಅವರ ಮನವಿ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಗಿದೆ.
ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗೆ SDPI ಟಿಕೆಟ್
ಆರೋಪಿಗಳಲ್ಲಿ (Accused) ಓರ್ವನಿಗೆ ಎಸ್ಡಿಪಿಐ (SDPI- Social Democratic Party of India) ಪಕ್ಷ ಚುನಾವಣೆಯಲ್ಲಿ ಟಿಕೆಟ್ ನೀಡಿರುವುದು ಕರಾವಳಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಶಫಿ ಬೆಳ್ಳಾರೆಯನ್ನು (Shafi Bellare) ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ (Puttur Constituency) ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ.
ಫೆಬ್ರವರಿ 10 ರಂದು ಪುತ್ತೂರಿನಲ್ಲಿ ನಡೆದ ಎಸ್ಡಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು, ಪ್ರವೀಣ್ ನೆಟ್ಟಾರು ಕುಟುಂಬ (Praveen Nettar Family) ಸೇರಿದಂತೆ ಸಾರ್ವಜನಿಕ ವಲಯದಲ್ಲೂ ಈ ನಿರ್ಧಾರಕ್ಕೆ ಭಾರೀ ವಿರೋಧ ಕೇಳಿ ಬರಲಾರಂಭಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ