Sushma ChakreSushma Chakre
|
news18-kannada Updated:October 5, 2019, 4:47 PM IST
ಪ್ರತಾಪ್ ಸಿಂಹ- ಚಂದನ್ ಶೆಟ್ಟಿ
ಬೆಂಗಳೂರು (ಅ. 5): ಮೈಸೂರಿನ ಯುವದಸರಾ ವೇದಿಕೆಯಲ್ಲಿ ನಿನ್ನೆ ರಾತ್ರಿ ಬಿಗ್ಬಾಸ್ ಖ್ಯಾತಿಯ ಕನ್ನಡ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ ತಮ್ಮ ಗೆಳತಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ್ದರು. ಸರ್ಕಾರದ ದುಡ್ಡಿನಲ್ಲಿ ನಡೆಸಲಾಗುವ ದಸರಾ ವೇದಿಕೆಯನ್ನು ತಮ್ಮ ಪ್ರೇಮ ನಿವೇದನೆಗೆ ಬಳಸಿಕೊಂಡಿದ್ದಕ್ಕೆ ಸಾಕಷ್ಟು ಜನರಿಂದ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಟ್ರೋಲ್ ಮಾಡಲಾಗಿತ್ತು. ಯುವದಸರಾ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದನ್ನು ವಿರೋಧಿಸಿ ಇಂದು ಮೈಸೂರಿನಲ್ಲಿ ಪ್ರತಿಭಟನೆಗಳೂ ನಡೆದಿದ್ದವು. ಆದರೆ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಚಂದನ್ ಶೆಟ್ಟಿಗೆ ಬೆಂಬಲ ಸೂಚಿಸಿದ್ದು, ಅವರು ಮಾಡಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಂದು ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದ ಮೈಸೂರು ಪ್ರಜ್ಞಾವಂತ ವೇದಿಕೆಯವರು ಚಂದನ್ ಶೆಟ್ಟಿ ಸಂಭಾವನೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಸಾರ್ವಜನಿಕರು ಹಣದಲ್ಲಿ ಆಯೋಜಿಸಲಾಗುವ ಯುವದಸರಾ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿರುವ ಚಂದನ್ ಶೆಟ್ಟಿ ಅವರ ನಿನ್ನೆಯ ಕಾರ್ಯಕ್ರಮದ ವೆಚ್ಚವನ್ನು ಅವರ ತಂಡದವರೇ ಭರಿಸಲಿ. ಅವರಿಗೆ ನೀಡಬೇಕಾದ ಸಂಭಾವನೆಯನ್ನು ರದ್ದುಗೊಳಿಸಿ ಆ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವಂತೆ ಕೋರಿದ್ದರು.
ಯುವ ದಸರಾದಲ್ಲಿ ಲವ್ ಪ್ರೊಪೋಸಲ್ ವಿವಾದ: ವಿ. ಸೋಮಣ್ಣ ಕೋಪ; ಇದು ಜಸ್ಟ್ ಮನರಂಜನೆ ಎಂದ ಚಂದನ್ ಶೆಟ್ಟಿ
ಚಂದನ್ ಶೆಟ್ಟಿ-ನಿವೇದಿತಾ ಗೌಡ ನಿನ್ನೆ ಯುವ ದಸರಾ ವೇದಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ನಿವೇದಿತಾಗೆ ಪ್ರಪೋಸ್ ಮಾಡಿದ್ದ ಚಂದನ್ ಶೆಟ್ಟಿ ಆಕೆಗ ಬೆರಳಿಗೆ ಉಂಗುರ ತೊಡಿಸಿದ್ದರು. ಸದ್ಯದಲ್ಲೇ ಮದುವೆಯಾಗುವುದಾಗಿಯೂ ಘೋಷಿಸಿದ್ದರು. ಈ ಮೂಲಕ ಬಿಗ್ಬಾಸ್ ಜೋಡಿ ತಮ್ಮ ಪ್ರೇಮ ಸಂಬಂಧವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಇದಾದ ನಂತರ ಜನರ ವಿರೋಧಗಳು ಹೆಚ್ಚಾಗುತ್ತಿದ್ದಂತೆ ಚಂದನ್ ಶೆಟ್ಟಿ ಜನರ ಕ್ಷಮಾಪಣೆಯನ್ನೂ ಕೇಳಿದ್ದರು.
ಆ ವೇಳೆ ಅದು ತಪ್ಪು ಎಂದು ನನಗೆ ಗೊತ್ತಾಗಲಿಲ್ಲ. ಈ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ಯುವದಸರಾ ಉಪಸಮಿತಿ ಅನುಮತಿಯನ್ನೂ ಕೇಳಿರಲಿಲ್ಲ. ನಮ್ಮ ಮದುವೆ ವಿಚಾರವನ್ನು ಜನರಿಗೆ ತಿಳಿಸಲು ಹೀಗೆ ಮಾಡಿದೆ. ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಹೇಳಿದ್ದರು. ನಿವೇದಿತಾ ಅವರ ತಂದೆ-ತಾಯಿ ಕೂಡ ಚಂದನ್ ಮಾಡಿದ್ದು ತಪ್ಪೇನಲ್ಲ ಎಂದು ಹೇಳಿಕೆ ನೀಡಿದ್ದರು.
ಯುವ ದಸರಾ ವೇದಿಕೆಯಲ್ಲೇ ನಿವೇದಿತಾ-ಚಂದನ್ ಶೆಟ್ಟಿ ಲವ್ ಪ್ರೊಪೋಸಲ್; ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆ; ಉಸ್ತುವಾರಿ ಸೋಮಣ್ಣಗೂ ತರಾಟೆ
ಸಾಮಾಜಿಕ ಜಾಲತಾಣದಲ್ಲಿ ಚಂದನ್ ಪ್ರಪೋಸ್ ಮಾಡಿರುವ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗುತ್ತಿದ್ದು, ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿ ಹಂಪಿ ಉತ್ಸವದಲ್ಲಿ ಮದುವೆಯೂ ಆಗುವ ಪ್ಲಾನ್ ಇರಬಹುದು. ಇದಕ್ಕೆಲ್ಲ ಸರ್ಕಾರದ ಹಣವನ್ನು ಯಾಕೆ ಬಳಸಿಕೊಳ್ಳುತ್ತೀರಿ? ಎಂದು ಖಡಕ್ ಆಗಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಸಂಸದ ಪ್ರತಾಪ್ ಸಿಂಹ ಬೆಂಬಲ:
ಆದರೆ, ಈ ಬಗ್ಗೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದು, 'ಯುವದಸರಾದಲ್ಲಿ 2 ಗಂಟೆ ಮೈಸೂರಿಗರ ಮನಸ್ಸಿಗೆ ಮುದ ಕೊಟ್ಟು 2 ಸೆಕೆಂಡ್ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿಯವರನ್ನು ಏನೋ ಮಹಾಪರಾಧ ಮಾಡಿದವರಂತೆ ಕಾಣುವುದು ಸಾಕು. ಇಬ್ಬರಿಗೂ ಒಳ್ಳೆಯದಾಗಲಿ' ಎಂದು ಶುಭ ಹಾರೈಸಿದ್ದಾರೆ.

ಪ್ರತಾಪ್ ಸಿಂಹ ಅವರ ಫೇಸ್ಬುಕ್ ಪೋಸ್ಟ್
ಪ್ರತಾಪ್ ಸಿಂಹ ಅವರ ಈ ಟ್ವೀಟ್ಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. 'ದಸರಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಾಯ್ತಲ್ಲ ಇನ್ನು ನಿಮ್ಮ ಮನೆಯಲ್ಲೇ ಪ್ರಸ್ತ ಮಾಡಿಸಿ', 'ಪ್ರೇಮ ನಿವೇದನೆ ಮಾಡಿಕೊಳ್ಳಲು ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ರಾಜಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಸಂಸ್ಕೃತಿ ನಮ್ಮದು. ದಸರಾ ಕಾರ್ಯಕ್ರಮದಲ್ಲಿ ಈ ರೀತಿ ಮಾಡೋದು ತಪ್ಪು ಎಂದು ನಿಮಗೆ ಅರ್ಥವಾಗುವುದಿಲ್ಲವೇ? ನಮ್ಮ ಸಂಸ್ಕೃತಿ, ಆಚಾರ-ವಿಚಾರದ ಬಗ್ಗೆ ನಿಮಗೇನಾದರೂ ಗೊತ್ತಾ? ನಿಮ್ಮಿಂದ ಇಂತಹ ಮೂರ್ಖತನದ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ' ಎಂದು ಟ್ವಿಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
'ಮಹಿಷಿ ದಸರಾ ನಮ್ಮ ಸಂಸ್ಕೃತಿಯಲ್ಲ ಎಂದು ಬೊಬ್ಬೆ ಹೊಡೆದುಕೊಂಡು ಗಲಾಟೆಯೆಬ್ಬಿಸಿದ ನಿಮಗೆ ಚಂದನ್ ಶೆಟ್ಟಿ ಮಾಡಿರುವ ಕೆಲಸ ನಮ್ಮ ಸಂಸ್ಕೃತಿಯಂತೆ ಕಾಣುತ್ತಿದೆಯಾ? ಸುಮ್ಮನೆ ಇಂತಹ ವಿಷಯದಲ್ಲೆಲ್ಲ ತಲೆಹಾಕಿ ನಿಮ್ಮ ಗೌರವ ಕಳೆದುಕೊಳ್ಳಬೇಡಿ' ಎಂದು ಟ್ವಿಟ್ಟಿಗರು ಬುದ್ಧಿವಾದ ಹೇಳಿದ್ದಾರೆ.
ಚಂದನ್ ಶೆಟ್ಟಿ- ನಿವೇದಿತಾ ಗೌಡ ಕುರಿತ ತಮ್ಮ ಪೋಸ್ಟ್ಗೆ ಟ್ವಿಟ್ಟರ್ನಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರತಾಪ್ ಸಿಂಹ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.
First published:
October 5, 2019, 4:16 PM IST