ಕಾಂಗ್ರೆಸ್‌ ಜೊತೆ ಮೈತ್ರಿ ಮುರಿದುಕೊಳ್ಳಲು ಸಜ್ಜಾದ ಜೆಡಿಎಸ್‌; ಮೈಸೂರು ಮೇಯರ್​ ಸ್ಥಾನದ ಬೇಡಿಕೆ ಇಟ್ಟ ಪ್ರತಾಪ್​ ಸಿಂಹ

ಮೈತ್ರಿ ವಿಚಾರವಾಗಿ ಮೈಸೂರು ಜೆ.ಡಿ.ಎಸ್ ಪಾಲಿಕೆ ಸದಸ್ಯರು ಹಾಗೂ ಪಕ್ಷದ ಮುಖಂಡರು ಇಂದು ಸಭೆ ನಡೆಸಿದರು. ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಮೈಸೂರು ಮಹಾನಗರ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ

  • News18
  • Last Updated :
  • Share this:
ಮೈಸೂರು (ಡಿ. 25): 2018ರಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ ಜೆಡಿಎಸ್​-ಕಾಂಗ್ರೆಸ್​, ಇದೇ ಹುಮ್ಮಸ್ಸಿನಲ್ಲಿ ಮೈಸೂರಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಮೈತ್ರಿ ನಡೆಸಿತು. ರಾಜ್ಯದಲ್ಲಿ ಸರ್ಕಾರ ಬೀಳುತ್ತಿದ್ದಂತೆ,  ಮಹಾನಗರ ಪಾಲಿಕೆಯಲ್ಲಿನ ಆಡಳಿತದಲ್ಲಿನ ಸಂಬಂಧ ಕೂಡ ಹದಗೆಟ್ಟಿದೆ. ಇದೇ ಹಿನ್ನಲೆ ಜೆಡಿಎಸ್,​ ಕಾಂಗ್ರೆಸ್​ ಮೈತ್ರಿ ತೊರೆದು ಬಿಜೆಪಿ ಜೊತೆ ಸೇರುವ ಹುಮ್ಮಸ್ಸು ತೋರಿದೆ. ಮೇಯರ್- ಉಪಮೇಯರ್ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈತ್ರಿ ವಿಚಾರ ಚರ್ಚೆಗೆ ಬಂದಿದ್ದು, ಕಾಂಗ್ರೆಸ್​ ಮೈತ್ರಿ ಮುಂದುವರೆಸುವುದಾ ಅಥವಾ ಬಿಜೆಪಿ ಸೇರುವುದಾ ಎಂಬ ಬಗ್ಗೆ ಜೆಡಿಎಸ್​ ನಾಯಕರು ಚಿಂತನೆ ನಡೆಸಿದ್ದಾರೆ.  ಈ ಕುರಿತು ಈಗಾಗಲೇ  ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ನಡೆಸಲು ಇಂದು ಜೆಡಿಎಸ್​ ನಾಯಕರು ಸಭೆ ನಡೆಸಿದ್ದಾರೆ.  ಈ ನಡುವೆ ಜೆಡಿಎಸ್​- ಬಿಜೆಪಿ ಮೈತ್ರಿ ಸಾಧ್ಯತೆ ಕುರಿತು ಮಾತನಾಡಿರುವ ಸಂಸದ ಪ್ರತಾಪ್​ ಸಿಂಹ, ಒಂದು ವೇಳೆ ಈ ಮೈತ್ರಿಯಾದರೆ, ನಮಗೆ ಮೇಯರ್​ ಪಟ್ಟ ಬೇಕು ಎಂದು ಷರತ್ತು ವಿಧಿಸಿದ್ದಾರೆ.  

ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಬಿಜೆಪಿಗೆ ಮೇಯರ್ ಸ್ಥಾನ ಬೇಕೆ ಬೇಕು ಎಂದು ಆಗ್ರಹಿಸಿದ್ದಾರೆ. ಮೈಸೂರಿನ ಸಮಗ್ರ ಅಭಿವೃದ್ಧಿ ಆಗಬೇಕೆಂದರೆ ಮೇಯರ್ ಸ್ಥಾನ ನಮಗೆ ಕೊಡಿ, ನಾವು ಪಾಲಿಕೆಯಲ್ಲಿ ಎಲ್ಲರಿಗಿಂತ ಹೆಚ್ಚು ಸ್ಥಾನಗಳನ್ನ ಗೆದ್ದಿದ್ದೇವೆ. 22 ಸ್ಥಾನ ‌ಇರುವ ನಮಗೆ ಯಾರು ಬೇಕಾದರೂ ಸಹಕಾರ ಕೊಡಬಹುದು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ ಮೈಸೂರು ಪಾಲಿಕೆಯಲ್ಲು ಬಿಜೆಪಿ ನೇತೃತ್ವದ ಅಧಿಕಾರ ಇದ್ದರೆ ಅಭಿವೃದ್ಧಿಗೆ ಪೂರಕವಾಗಲಿದೆ. ನಮಗೆ ಒಮ್ಮೆಯೂ ಮೈಸೂರು ಪಾಲಿಕೆ ಮೇಯರ್ ಸ್ಥಾನ ಸಿಕ್ಕಿಲ್ಲ. ಹಿಂದೆ ಜೆಡಿಎಸ್‌ ಜೊತೆ ಹೊಂದಾಣಿಕೆ ಆಗಿದ್ದಾಗ ನಾಲ್ಕು ಬಾರಿ ಉಪಮೇಯರ್ ಮಾತ್ರ ಆಗಿದ್ದೇವೆ.ಈ ಬಾರಿ ಯಾರ ಜೊತೆ ಹೊಂದಾಣಿಕೆ ಆದರೂ ಮೇಯರ್ ಸ್ಥಾನ ನಮಗೇ ಬೇಕು. ನಿಮಗೆಲ್ಲ ಸಾಕಷ್ಟು ಅವಕಾಶ ನೀಡಲಾಗಿದೆ. ನಮಗೂ ಒಮ್ಮೆ ಪಾಲಿಕೆಯಲ್ಲಿ ಮೇಯರ್ ಸ್ಥಾನ ನೀಡಿ ಅವಕಾಶ ಕೊಡಿ ಎಂದು ಮನವಿ ಮಾಡಿದರು. ಅಲ್ಲದೇ, ಮೇಯರ್‌ ಸ್ಥಾನ ನಮಗೆ ನೀಡುವುದಾದರೆ ನಮ್ಮೊಂದಿಗೆ ಕೈ ಜೋಡಿಸಬಹುದು ಎಂದು ಪರೋಕ್ಷವಾಗಿ ಜೆಡಿಎಸ್‌ಗೆ ಆಹ್ವಾನ ನೀಡಿದರು.

ಇದನ್ನು ಓದಿ: ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ಸಗಣಿ ಬಾಚಿ, ಗೋ ಸೇವೆ ಮಾಡಿದ ಸಂಸದ ಪ್ರತಾಪ್​ ಸಿಂಹ

ಜೆಡಿಎಸ್​ ಸಭೆ

ಇತ್ತ ಮೈತ್ರಿ ವಿಚಾರವಾಗಿ ಮೈಸೂರು ಜೆ.ಡಿ.ಎಸ್ ಪಾಲಿಕೆ ಸದಸ್ಯರು ಹಾಗೂ ಪಕ್ಷದ ಮುಖಂಡರು ಇಂದು ಸಭೆ ನಡೆಸಿದರು. ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು  ಜೆಡಿಎಸ್​ ಹೈ ಕಮಾಂಡ್​ ನಿರ್ಧಾರ ತೆಗೆದು ಕೊಳ್ಳಲಿ ಎಂಬ ತೀರ್ಮಾನ ನಡೆಸಿದ್ದಾರೆ.  ಸಭೆ ನಂತರ ಮಾತನಾಡಿದ ಜೆ.ಡಿ.ಎಸ್ ನಗರ ಅಧ್ಯಕ್ಷ ಚಲುವೆಗೌಡ, ನಾವು ಯಾರ ಜೊತೆ ಹೋಗಬೇಕು ಎಂದು ಹೈಕಮಾಂಡ್  ಅಂತಿಮ ತೀರ್ಮಾನ ನಡೆಸಲಿದೆ. ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಅದನ್ನು ಹೈ ಕಮಾಂಡ್ ಗೆ ತಿಳಿಸುತ್ತೇವೆ ಎಂದರು.

ಇದೇ ವೇಳೆ  ಕಳೆದ ಬಾರಿ ಮೈತ್ರಿಯಲ್ಲಿ ಕಾಂಗ್ರೆಸ್ ನಮಗೆ ಸಹಕಾರ ಕೊಟ್ಟಿಲ್ಲ. ನಾವು ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೇವು.  ಆದರೆ, ಅವರು ನಮ್ಮ‌ ಪಕ್ಷದಿಂದ ಆಯ್ಕೆಯಾದ ಮೇಯರ್‌ಗೆ ಅಪಮಾನ ಮಾಡಿದ್ದಾರೆ‌. ಯಾವುದೇ ಸಹಕಾರವನ್ನ ನೀಡದೆ ಮೈತ್ರಿಗೂ ಅಪಮಾನ ಮಾಡಿದ್ದಾರೆ. ಹಾಗಾಗಿ ಬಿಜೆಪಿ ಜೊತೆ ಮೈತ್ರಿಯೋ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂಬುದನ್ನ ಹೈಕಮಾಂಡ್ ತೀರ್ಮಾನ ಮಾಡಲಿದೆ. ಈ ಬಗ್ಗೆ ಚುನಾವಣೆಗೆ ಇನ್ನು ಮೂರು ದಿನ ಬಾಕಿ ಇರುವಾಗ ನಮ್ಮ ನಿರ್ಧಾರವನ್ನ ಸ್ಪಷ್ಟವಾಗಿ ತಿಳಿಸುತ್ತೇವೆ ಎಂದರು.
Published by:Seema R
First published: