ಮೇಲ್ಮನೆಗೆ ನೂತನ ಸಭಾಪತಿಯಾಗಿ ಪ್ರತಾಪ್ ಚಂದ್ರ ಶೆಟ್ಟಿ ಆಯ್ಕೆ

ಸಿದ್ದರಾಮಯ್ಯ ವಿದೇಶ ಪ್ರವಾಸ ಹೋದ ಕ್ಷಣದಿಂದಲೇ ವೀರಪ್ಪ ಮೊಯಿಲಿ, ಆಸ್ಕರ್ ಫೆರ್ನಾಂಡಿಸ್ ಅವರ ಮೂಲಕ ಲಾಬಿ ಮಾಡಿಸಿ ಪ್ರತಾಪ್ ಚಂದ್ರ ಶೆಟ್ಟಿ ಪರಿಷತ್ ಸಭಾಪತಿ ಸ್ಥಾನ ಗಿಟ್ಟಿಸಿದ್ದಾರೆ.

Vijayasarthy SN | news18
Updated:December 11, 2018, 5:30 PM IST
ಮೇಲ್ಮನೆಗೆ ನೂತನ ಸಭಾಪತಿಯಾಗಿ ಪ್ರತಾಪ್ ಚಂದ್ರ ಶೆಟ್ಟಿ ಆಯ್ಕೆ
ಕಾಂಗ್ರೆಸ್ ಮುಖಂಡರ ಜೊತೆ ಪ್ರತಾಪ್ ಚಂದ್ರ ಶೆ್ಟ್ಟಿ (ಎಡದಿಂದ ಎರಡನೆಯವರು)
  • News18
  • Last Updated: December 11, 2018, 5:30 PM IST
  • Share this:
ಬೆಂಗಳೂರು(ಡಿ. 11): ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ತಿಕ್ಕಾಟಕ್ಕೆ ಇಂದು ತಾರ್ಕಿಕ ಅಂತ್ಯ ಸಿಕ್ಕಿದೆ. ಕಾಂಗ್ರೆಸ್ ಪಕ್ಷದ ಪ್ರತಾಪ್ ಚಂದ್ರ ಶೆಟ್ಟಿ ಅವರು ನೂತನ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಸಭಾಪತಿ ಆಕಾಂಕ್ಷಿಯಾಗಿದ್ದ ಸಿದ್ದರಾಮಯ್ಯ ಬೆಂಬಲಿತ ಎಸ್.ಆರ್. ಪಾಟೀಲ್ ಅವರಿಗೆ ನಿರಾಯಾಗಿದೆ. ಇವತ್ತು ಬೆಳಗ್ಗೆಯವರೆಗೂ ಸಿದ್ದರಾಮಯ್ಯ ಅವರು ಸೂಚಿಸಿದ ಎಸ್​.ಆರ್. ಪಾಟೀಲ್ ಅವರ ಹೆಸರೇ ಸಭಾಪತಿ ಸ್ಥಾನಕ್ಕೆ ಮುಂಚೂಣಿಯಲ್ಲಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪಾಟೀಲ್ ಬದಲು ಶೆಟ್ಟಿ ಹೆಸರು ಫೈನಲ್ ಆಗಿ, ಮಧ್ಯಾಹ್ನ 12ಗಂಟೆಗೆ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್, ಬಿಜೆಪಿಯಿಂದ ಬೇರೆ ಯಾರೂ ಅಭ್ಯರ್ಥಿ ಸ್ಪರ್ಧೆ ಇರಲಿಲ್ಲವಾದ್ದರಿಂದ ಪ್ರತಾಪ್ ಚಂದ್ರ ಶೆಟ್ಟಿ ಅವಿರೋಧವಾಗಿ ಮೇಲ್ಮನೆ ಸ್ಪೀಕರ್ ಆಗಿ ಆಯ್ಕೆಯಾದರು.

ಇದಕ್ಕೂ ಮೊದಲು, ಕಾಂಗ್ರೆಸ್​ನಿಂದ ಎಸ್.ಆರ್. ಪಾಟೀಲ್ ಮತ್ತು ಕೆ.ಸಿ. ಕೊಂಡಯ್ಯ ಅವರು ಸಭಾಪತಿ ಸ್ಥಾನದ ರೇಸ್​ನಲ್ಲಿದ್ದರು. ಹಾಗೆಯೇ, ಜೆಡಿಎಸ್​ನಿಂದ ಬಸವರಾಜ್ ಹೊರಟ್ಟಿ ಕೂಡ ಆಕಾಂಕ್ಷಿಯಾಗಿದ್ದರು. ಜೆಡಿಎಸ್ ವರಿಷ್ಠರು ಸಭಾಪತಿ ಸ್ಥಾನಕ್ಕಾಗಿ ಬಹಳ ಪ್ರಯತ್ನ ಕೂಡ ಮಾಡಿದ್ದರು. ಆದರೆ, 70 ಸದಸ್ಯಬಲದ ಪತಿಷತ್​ನಲ್ಲಿ ತಮಗೆ ಬಹುಮತ ಇರುವುದರಿಂದ ಸಭಾಪತಿ ಸ್ಥಾನ ತಮಗೇ ಬೇಕು ಎಂದು ಪಟ್ಟುಹಿಡಿದು ಗಿಟ್ಟಿಸಿಕೊಂಡಿತು. ಈ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲ ಹೊಂದಿದ್ದ ಎಸ್.ಆರ್. ಪಾಟೀಲ್ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತವೆಂಬಂತಿತ್ತು.

ಇಲ್ಲಿ ಟರ್ನಿಂಗ್ ಪಾಯಿಂಟ್ ಆಗಿದ್ದು ಸಿದ್ದರಾಮಯ್ಯ ವಿದೇಶ ಪ್ರವಾಸ. ಅದೂವರೆಗೂ ಸೈಲೆಂಟ್ ಆಗಿದ್ದ ಪ್ರತಾಪ್ ಚಂದ್ರ ಶೆಟ್ಟಿ ಅವರು ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಂತೆಯೇ ಸದ್ದಿಲ್ಲದೇ ತೆರೆಮರೆಯಲ್ಲಿ ಲಾಬಿ ಮಾಡಿದರು. ಆಸ್ಕರ್ ಫರ್ನಾಂಡಿಸ್ ಮತ್ತು ವೀರಪ್ಪ ಮೊಯಿಲಿ ಮೂಲಕ ಶೆಟ್ಟಿ ಲಾಬಿ ಮಾಡಿಸಿದರು. ದೇವೇಗೌಡರೂ ಕೂಡ ಪ್ರತಾಪ್ ಚಂದ್ರಗೆ ಬೆಂಬಲ ನೀಡಿದರು. ಕೊನೆಗೂ ಪ್ರತಾಪ್ ಚಂದ್ರ ಶೆಟ್ಟಿ ತಮ್ಮ ಕೆಲಸ ಸಾಧಿಸುವಲ್ಲಿ ಯಶಸ್ವಿಯಾದರು.

ಈ ವೇಳೆ, ಹಂಗಾಮಿ ಸ್ಪೀಕರ್ ಆಗಿದ್ದ ಜೆಡಿಎಸ್​ನ ಬಸವರಾಜ್ ಹೊರಟ್ಟಿ ಅವರೂ ನಾಮಪತ್ರ ಸಲ್ಲಿಸಬಹುದೆಂಬ ಸುದ್ದಿ ಇತ್ತು. ಸಚಿವ ಸ್ಥಾನ ಸಿಗದ ಹತಾಶೆಯಲ್ಲಿದ್ದ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ಕೊಡಿಸುವುದಾಗಿ ಜೆಡಿಎಸ್ ವರಿಷ್ಠರು ಸಮಾಧಾನ ಮಾಡಿದ್ದರು. ಈಗ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಿರಲು ಜೆಡಿಎಸ್ ವರಿಷ್ಠರು ಹೊರಟ್ಟಿಯ ಮನವೊಲಿಸಲು ಯಶಸ್ವಿಯಾದರು. ನಾಲ್ಕು ದಶಕಗಳ ರಾಜಕೀಯ ಅನುಭವ ಇರುವ ಬಸವರಾಜ ಹೊರಟ್ಟಿ ಅವರ ಮುಂದಿನ ದಾರಿ ಏನು ಎಂಬ ಕುತೂಹಲವಿದೆ.

ಇನ್ನು, ನೂತನ ಮೇಲ್ಮನೆ ಸಭಾಪತಿಯಾಗಿರುವ ಪ್ರತಾಪ್ ಚಂದ್ರ ಶೆಟ್ಟಿ ಅವರು ದಕ್ಷಿಣ ಕನ್ನಡ ಮೂಲದ ಕಾಂಗ್ರೆಸ್ ನಾಯಕರಾಗಿದ್ದು, ಏಳು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಅದರಲ್ಲಿ ನಾಲ್ಕು ಬಾರಿ ಅವರು ವಿಧಾನಸಭಾ ಸದಸ್ಯರಾಗಿ ಚುನಾಯಿತರಾಗಿದ್ದಾರೆ.

ಇದೀಗ ಉಪಸಭಾಪತಿ, ಸಚೇತಕ ಸ್ಥಾನಗಳಿಗೆ ಆಯ್ಕೆ ನಡೆಯಬೇಕಿದ್ದು, ಜೆಡಿಎಸ್​ನಿಂದ ತೀವ್ರ ಪೈಪೋಟಿ ನಡೆಯುವ ನಿರೀಕ್ಷೆ ಇದೆ.
First published: December 11, 2018, 3:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading