Prashant Kishor- ಬೆಂಗಳೂರಿಗೆ ಪ್ರಶಾಂತ್ ಕಿಶೋರ್ ರಹಸ್ಯ ಭೇಟಿ; ಇಬ್ಬರು ಮಾಜಿ ಸಿಎಂಗಳ ಭೇಟಿಗೆ ಪ್ರಯತ್ನ

Prashant Kishor visit to Bangalore- ಮೇಘಾಲಯದಲ್ಲಿ 12 ಕಾಂಗ್ರೆಸ್ ಶಾಸಕರನ್ನ ಟಿಎಂಸಿಗೆ ಸೆಳೆಯಲು ಪ್ರಮುಖ ಪಾತ್ರ ವಹಿಸಿದ್ದ ಪ್ರಶಾಂತ್ ಕಿಶೋರ್ ಅವರು ಬೆಂಗಳೂರಿಗೆ ರಹಸ್ಯಭೇಟಿ ಕೊಟ್ಟಿದ್ದು, ಇಬ್ಬರು ಮಾಜಿ ಸಿಎಂಗಳ ಭೇಟಿಗೆ ಪ್ರಯತ್ನಿಸಿದರೆನ್ನಲಾಗಿದೆ.

ಪ್ರಶಾಂತ್ ಕಿಶೋರ್

ಪ್ರಶಾಂತ್ ಕಿಶೋರ್

 • Share this:
  ಬೆಂಗಳೂರು, ನ. 26: ಚುನಾವಣಾ ಚಾಣಕ್ಯ, ತಂತ್ರಗಾರ ಎಂದೇ ಹೆಸರು ಮಾಡಿರುವ ಪ್ರಶಾಂತ್ ಕಿಶೋರ್ (Prashant Kishor) ಯಾವ ಸದ್ದೂ ಮಾಡದೇ ಬೆಂಗಳೂರಿಗೆ ರಹಸ್ಯವಾಗಿ ಬಂದು ಹೋಗಿರುವುದು ತಿಳಿದುಬಂದಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ (Trinamool Congress Party) ಜೊತೆ ಇರುವ ಪ್ರಶಾಂತ್ ಕಿಶೋರ್ ಅವರು ರಾಜ್ಯದಲ್ಲಿ ಆ ಪಕ್ಷಕ್ಕೆ ನೆಲೆ ಸ್ಥಾಪಿಸುವ ಕೈಂಕರ್ಯದಲ್ಲಿದ್ಧಾರೆ. ಅದೇ ಕೆಲಸದ ನಿಮಿತ್ತ ನಗರಕ್ಕೆ ಬಂದು ಹೋದರೆನ್ನಲಾಗಿದೆ. ದೇಶಾದ್ಯಂತ ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್ ಸ್ಥಾನವನ್ನು ತುಂಬುವ ಹೆಗ್ಗುರಿಯನ್ನ ಹೊಂದಿರುವ ಮಮತಾ ಬ್ಯಾನರ್ಜಿ ಅವರ ಸೂಚನೆ ಮೇರೆಗೆ ಪ್ರಶಾಂತ್ ಕಿಶೋರ್ ನಿನ್ನೆ ನಗರಕ್ಕೆ ಬಂದಿದ್ದರು. ಕಾಂಗ್ರೆಸ್ ಪಕ್ಷದ ಅವನತಿಯಿಂದ ಖಾಲಿ ಇರುವ ಸ್ಥಾನವನ್ನು ಟಿಎಂಸಿ ತುಂಬುವುದು ಪ್ರಶಾಂತ್ ಕಿಶೋರ್ ರಣತಂತ್ರ. ಮೇಘಾಲಯದಲ್ಲಿ ಇದೇ ತಂತ್ರ ಅನುಸರಿಸಿ ಅಲ್ಲಿನ 12 ಕಾಂಗ್ರೆಸ್ ಶಾಸಕರನ್ನ ಟಿಎಂಸಿಗೆ ಸೆಳೆದಿದ್ದರು ಪ್ರಶಾಂತ್ ಕಿಶೋರ್. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ಭೇಟಿ ನೀಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

  ಸಿದ್ದರಾಮಯ್ಯ, ಮೊಯಿಲಿ ಭೇಟಿಗೆ ಯತ್ನ: ಮೂಲಗಳ ಪ್ರಕಾರ, ಪ್ರಶಾಂತ್ ಕಿಶೋರ್ ಅವರು ರಾಜ್ಯದಲ್ಲಿ ಅಸಮಾಧಾನಿತ ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡಿ ಮಾತನಾಡಲು ಪ್ರಯತ್ನ ಮಾಡಿದ್ಧಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನ ಭೇಟಿಯಾಗುವ ವಿಫಲಯತ್ನ ಕೂಡ ಆಗಿದೆ. ಗಾಂಧಿ ಕುಟುಂಬದ ನಿಷ್ಠಾವಂತ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಿಎಂ ವೀರಪ್ಪ ಮೊಯಿಲಿ ಅವರನ್ನ ಮೂರನೇ ವ್ಯಕ್ತಿಯೊಬ್ಬರ ಮೂಲಕ ಪ್ರಶಾಂತ್ ಕಿಶೋರ್ ಭೇಟಿಯಾಗಲು ಯತ್ನಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ಒಳಗಿದ್ದು ಮಾತುಕತೆ ಮಾಡುವುದಾದರೆ ಬನ್ನಿ. ಬೇರೆ ಪಕ್ಷದ ವಿಚಾರವಾಗಿ, ಹೊಸ ಪಕ್ಷದ ವಿಚಾರವಾಗಿ ಮಾತುಕತೆ ಬಂದರೆ ಅದು ಸಾಧ್ಯ ಇಲ್ಲ ಎಂದು ವೀರಪ್ಪ ಮೊಯಿಲಿ ಬಹಳ ಸ್ಪಷ್ಟವಾಗಿ ಹೇಳಿರುವುದು ತಿಳಿದುಬಂದಿದೆ.

  ಇನ್ನು, ಮತ್ತೊಬ್ಬ ಮಾಜಿ ಸಿಎಂ, ಹಾಗು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಭೇಟಿ ಯತ್ನವೂ ವಿಫಲವಾಗಿದೆ. ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸುವುದು ಕಷ್ಟ. ಅವರು ಸುಲಭಕ್ಕೆ ಅಪಾಯಿಂಟ್ಮೆಂಟ್ ಕೊಡಲ್ಲ ಎಂಬ ಮಾಹಿತಿ ಬಂದದ್ದರಿಂದ ಪ್ರಶಾಂತ್ ಕಿಶೋರ್ ಅವರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ನಿನ್ನೆ ರಾತ್ರಿಯೇ ಬೆಂಗಳೂರಿನಿಂದ ಹೊರಹೋಗಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ರಾಜ್ಯ ರಾಜಕಾರಣದ ಹಲವು ಮಜುಲುಗಳ ಮಾಹಿತಿಯನ್ನ ಕಲೆ ಹಾಕಿದ್ದಾರೆ ಎಂದು ಮೂಲಗಳು ಹೇಳುತ್ತವೆ.

  ರಾಜಕೀಯ ವಾತಾವರಣದ ಮಾಹಿತಿ:

  ಕರ್ನಾಟಕದಲ್ಲಿ ಟಿಎಂಸಿ ಸ್ಥಾಪನೆಗೆ ವಾತಾವರಣ ರೂಪಿಸುವುದು ಪ್ರಶಾಂತ್ ಕಿಶೋರ್ ಉದ್ದೇಶ. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಅಸಮಾಧಾನಿತವಾಗಿರುವ ಮತ್ತು ತಟಸ್ಥರಾಗಿರುವ ನಾಯಕರು ಯಾರಾರಿದ್ದಾರೆ? ಜಾತಿವಾರು ನಾಯಕರ ಪ್ರಾಬಲ್ಯ ಯಾರಲ್ಲಿದೆ? ಹೆಚ್ಚು ಜನಪ್ರಿಯತೆ ಯಾರಲ್ಲಿದೆ ಇತ್ಯಾದಿ ಎಲ್ಲಾ ಮಾಹಿತಿಯನ್ನ ಪ್ರಶಾಂತ್ ಕಿಶೋರ್ ಪಡೆದುಹೋಗಿದ್ಧಾರೆ. ಈ ಎಲ್ಲಾ ಮಾಹಿತಿಯನ್ನ ಇಟ್ಟುಕೊಂಡು ಪ್ರಶಾಂತ್ ಕಿಶೋರ್ ಟಿಎಂಸಿ ಸ್ಥಾಪನೆಗೆ ವೇದಿಕೆ ಸಜ್ಜುಗೊಳಿಸಲು ರಣತಂತ್ರ ರಚಿಸುವ ನಿರೀಕ್ಷೆ ಇದೆ.

  ಇದನ್ನೂ ಓದಿ: Puneeth Rajkumar: ಸಕ್ರೆಬೈಲಿನಲ್ಲಿ ಅಪ್ಪು ನೋಡೋಕೆ ಪ್ರತಿದಿನ ಸಾವಿರಾರು ಜನ!

  ರಾಷ್ಟ್ರವ್ಯಾಪಿ ಹರಡುತ್ತಿರುವ ಟಿಎಂಸಿ:

  ಪಶ್ಚಿಮ ಬಂಗಾಳದಲ್ಲಿ ಮಾತ್ರ ಅಸ್ತಿತ್ವದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಇದೀಗ ರಾಷ್ಟ್ರವ್ಯಾಪಿ ಹರಡಲು ಪ್ರಯತ್ನಿಸುತ್ತಿದೆ. ಮಣಿಪುರ, ಮೇಘಾಲಯದಲ್ಲಿ ಅದು ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ಗೋವಾದಲ್ಲಿ ಲಿಯಾಂಡರ್ ಪೇಸ್ ಸೇರಿದಂತೆ ಹಲವರನ್ನ ಸೆಳೆದು ಪಕ್ಷದ ಘಟಕ ಸ್ಥಾಪಿಸಲಾಗಿದೆ. ತಮಿಳುನಾಡಿನಲ್ಲೂ ಟಿಎಂಸಿ ಘಟಕ ಇದೆ. ಪಂಜಾಬ್, ತ್ರಿಪುರಾ, ಅಸ್ಸಾಮ್ ರಾಜ್ಯಗಳಲ್ಲೂ ಟಿಎಂಸಿ ನೆಲೆ ಸ್ಥಾಪಿಸಿಕೊಳ್ಳುತ್ತಿದೆ.

  ಮೊನ್ನೆ ಮೊನ್ನೆ ಮೇಘಾಲಯದಲ್ಲಿ ಕಾಂಗ್ರೆಸ್ ಪಕ್ಷದ 17 ಶಾಸಕರ ಪೈಕಿ 12 ಮಂದಿ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಮಾಜಿ ಸಿಎಂ ಮುಕುಲ್ ಸಾಂಗ್ಮಾ ಕೂಡ ಇದ್ದಾರೆ. ಪಕ್ಷ ತಮ್ಮನ್ನು ಕಡೆಗಣಿಸಿದೆ ಎಂಬ ಅಸಮಾಧಾನದೊಂದಿಗೆ ಇವರೆಲ್ಲರೂ ತೃಣಮೂಲಕ್ಕೆ ಹೋಗಿದ್ಧಾರೆ.

  ಇದನ್ನೂ ಓದಿ: Earthquake: ಬೆಂಗಳೂರು, ರಾಮನಗರ, ಮಂಡ್ಯದಲ್ಲಿ ಕಂಪನದ ಅನುಭವ: ಭೂ ವಿಜ್ಞಾನ ಇಲಾಖೆ ಹೇಳಿದ್ದೇನು?

  ವಿವಿಧ ಮುಖಂಡರು ಟಿಎಂಸಿಯತ್ತ:

  ಇನ್ನು, ಪಶ್ಚಿಮ ಬಂಗಾಳ ಚುನಾವಣೆಗೆ ಮುನ್ನ ಟಿಎಂಸಿ ಬಿಟ್ಟು ಬಿಜೆಪಿಯತ್ತ ಹೋದವರಲ್ಲಿ ಬಹುತೇಕ ಮಂದಿ ವಾಪಸ್ ಟಿಎಂಸಿಗೆ ಹೋಗಿದ್ಧಾರೆ. ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಮೊದಲಾದ ಹಿರಿಯ ನಾಯಕರು ಟಿಎಂಸಿಗೆ ಸೇರಿದ್ದಾರೆ. ಮಾಜಿ ಕೇಂದ್ರ ಹಣಕಾಸು ಸಚಿವ ಹಾಗೂ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಟಿಎಂಸಿಯತ್ತ ಮುಖ ಮಾಡಿರುವುದು ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಕಾಡುತ್ತಿರುವುದರಿಂದ ದೇಶಾದ್ಯಂತ ಬಿಜೆಪಿಯನ್ನ ಎದುರುಗೊಳ್ಳಲು ವಿಪಕ್ಷಗಳಿಗೆ ಸಮರ್ಥ ನಾಯಕರ ಅಗತ್ಯತೆ ಇದೆ. ಮಮತಾ ಬ್ಯಾನರ್ಜಿ ಅವರು ಈ ಕೊರತೆಯನ್ನ ನೀಗಿಸಬಲ್ಲರು. ಅವರ ಪ್ರಭಾವ ಹೆಚ್ಚಿಸಲು ಇದು ಸಕಾಲ ಎಂಬುದು ರಾಜಕೀಯ ವಿಶ್ಲೇಷಕರ ಅನಿಸಿಕೆ.

  ತಂತ್ರಗಾರ ಕಿಶೋರ್:

  ಈ ಹಿಂದೆ 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ, ಬಿಹಾರ ಚುನಾವಣೆಯಲ್ಲಿ ಜೆಡಿಯುಗೆ, ಬಂಗಾಳ ಚುನಾವಣೆಯಲ್ಲಿ ಟಿಎಂಸಿಗೆ ಗೆಲುವು ಪ್ರಾಪ್ತವಾಗಲು ಪ್ರಶಾಂತ್ ಕಿಶೋರ್ ಪಾತ್ರ ಬಹಳ ದೊಡ್ಡದು ಎಂದು ಹೇಳಲಾಗುತ್ತದೆ. ರಾಜಕೀಯ ತಂತ್ರಗಾರಿಕೆಯ ಆಳ ಅಗಲವನ್ನು ಅವರು ಚೆನ್ನಾಗಿ ಬಲ್ಲರು. ಹೀಗಾಗಿ, ಮಮತಾ ಬ್ಯಾನರ್ಜಿ ಅವರು ರಾಷ್ಟ್ರಮಟ್ಟದಲ್ಲಿ ವಿಪಕ್ಷಗಳಿಗೆ ಹಿರಿಯಕ್ಕ ಅನಿಸಿಕೊಂಡು ಪಿಎಂ ಕ್ಯಾಂಡಿಡೇಟ್ ಆದರೆ ಅಚ್ಚರಿ ಇಲ್ಲ.
  Published by:Vijayasarthy SN
  First published: