ಬಳ್ಳಾರಿ: ಕಾಂಗ್ರೆಸ್ (Congress) ನಾಯಕರಾಗಿರುವ ರಾಹುಲ್ ಗಾಂಧಿ (Rahul Gandhi) ಸದ್ಯ ಇಂಗ್ಲೆಂಡ್, ಅಮೆರಿಕಾ ಅಂತ ಓಡಾಡುತ್ತಿದ್ದಾರೆ. ಅಲ್ಲದೆ ಅಲ್ಲಿ ಬಾಲಿಶವಾಗಿ ಮಾತನಾಡುತ್ತಿದ್ದಾರೆ. ನಮ್ಮ ಮೈಕ್ಗಳು ಆಫ್ ಆಗುತ್ತಿದೆ ಅಂದಿದ್ದಾರೆ. ಆದರೆ ಜನರೇ ಅವರ ಮೈಕ್ ಗಳನ್ನ ಆಫ್ ಮಾಡಿದ್ದಾರೆ, ನಾವು ಏನು ಮಾಡಲು ಸಾಧ್ಯ? ಇತ್ತೀಚೆಗೆ ಲೋಕಸಭೆಯಲ್ಲಿ ಮೋಷನ್ ಆಫ್ ಥ್ಯಾಂಕ್ ವೇಳೆ 01 ಗಂಟೆ 09 ನಿಮಿಷ ಸಮಯ ಇತ್ತು. ಆದರೂ ಅದನ್ನು ಸ್ಪೀಕರ್ ಅವರು 03 ಗಂಟೆ ಸಮಯ ನೀಡಿದ್ದರು. ಪ್ರಜ್ಞಾಪ್ರಭುತ್ವದ ಬಗ್ಗೆ ಮಾತನಾಡುವ ಇವರ ಅಜ್ಜಿಯೇ ತುರ್ತು ಪರಿಸ್ಥಿತಿ (Emergency) ಜಾರಿ ಮಾಡಿದ್ದನ್ನು ಮರೆತಿದ್ದಾರೆ. ಇದನ್ನು ಗಮನಿಸಿದರೆ ರಾಹುಲ್ ಗಾಂಧಿಯ ಅವರಿಗೆ ಮಾನಸಿಕ ತೊಂದರೆ ಇದ್ದಂತೆ ಕಾಣುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ರಾಹುಲ್ ಗಾಂಧಿ ಅವರು ಒಂದು ರೀತಿಯಲ್ಲಿ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದಂತೆ ಕಾಣುತ್ತಿದೆ. ಇಡೀ ಮಂತ್ರಿಮಂಡಲ ಜಾರಿ ಮಾಡಿದ ನಿರ್ಣಯಗಳನ್ನು ಹರಿದು ಹಾಕಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. ಪ್ರಜಾಪ್ರಭುತ್ವ ತೊಂದರೆಯಲ್ಲಿದೆ ಅಂತಿದ್ದಾರೆ. ಅವರು ಡಾಕ್ಟರ್ ಕಡೆ ತೋರಿಸಬೇಕು ಅಂತ ನನ್ನ ಬಾಯಲ್ಲಿ ಹೇಳಿಸಬೇಡಿ. ಸತತವಾಗಿ ಸೋಲಿನಿಂದ ಹತಾಶರಾಗಿ ಅವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ಬಾಲಿಶವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ವಿದೇಶದಲ್ಲಿ ಭಾಷಣ ಮಾಡಿದ ವೇಳೆ ಉಗ್ರಗಾಮಿಗಳನ್ನು ಭೇಟಿ ಮಾಡಿದ ಬಗ್ಗೆ ಹೇಳಿದ್ದಾರೆ. ಅವರನ್ನು ನೋಡಿದರೆ ಅವರು ಭಯೋತ್ಪಾದಕರು ಅಂತ ಹೇಗೆ ಗೊತ್ತಾಯಿತು. ಉಗ್ರಗಾಮಿಗಳು ಏನೂ ನಿಮ್ಮ ಕಾಕಾನಾ? ನಿಮ್ಮನ್ನು ಯಾಕೆ ಬಿಟ್ಟು ಹೋದರು? ಭಯೋತ್ಪಾದಕರ ಜೊತೆ ನಿಮ್ಮ ಸಂಬಂಧ ಒಳ್ಳೆಯ ಇದೆ. ಆದರೆ ನಿಮ್ಮ ತಂದೆಯ ಸಂಬಂಧ ಸರಿ ಇರಲಿಲ್ವಾ? ಭಾರತ ಜೋಡೋ ವೇಳೆ ಭಯೋತ್ಪಾದಕರು ಗಮನಿಸಿದರೆ ಇವರು ಯಾಕೆ ದೂರು ಕೊಡಲಿಲ್ಲ. ಇವರ ತಂದೆಯನ್ನು ಭಯೋತ್ಪಾದಕರು ಯಾಕೆ ಕೊಂದರು. ಸುಳ್ಳು ಹೇಳಿ, ಸತ್ತವರ ಅನುಕಂಪದ ಆಧಾರದ ಮೇಲೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಹಾಲಿ 4-5 ಶಾಸಕರಿಗೆ ಟಿಕೆಟ್ ನೀಡಲಾಗುವುದಿಲ್ಲ ಎಂಬ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಬಿಎಸ್ವೈ ಪಕ್ಷದಲ್ಲಿ ಹಿರಿಯರು, ಪಾರ್ಲಿಮೆಂಟ್ ಬೋರ್ಡ್ ನಲ್ಲಿದ್ದಾರೆ. ಅವರಿಗೆ ಮಾಹಿತಿ ಇರಬಹುದು. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸೂಕ್ತ ಸಮಯದಲ್ಲಿ ಆಗುತ್ತೆ. ಚುನಾವಣೆ ಘೋಷಣೆ ಆದ ಕೂಡಲೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: Basavaraj Bommai: ಒಣ ಪ್ರತಿಷ್ಠೆಗಾಗಿ ಮತ್ತೊಮ್ಮೆ ಶಿವಾಜಿ ಪ್ರತಿಮೆ ಉದ್ಘಾಟನೆ; ಹೆಬ್ಬಾಳ್ಕರ್ಗೆ ಸಿಎಂ ತಿರುಗೇಟು
ಶಾಸಕ ಮಾಡಾಳ್ ಅವರಿಗೆ ಜಾಮೀನು ಕಾನೂನು ಬದ್ಧವಾಗಿ ಸಿಕ್ಕಿದೆ. ಅವರಿಗೆ ಜಾಮೀನು ಸಿಕ್ಕಿದ್ದರೆ ಒಳ್ಳೆಯದಾಗಲಿ. ಇದರ ಬಗ್ಗೆ ನಮ್ಮ ಪಕ್ಷ ಸೂಕ್ತ ತನಿಖೆ ನಡೆಸುತ್ತಿದೆ. ರಾಷ್ಟ್ರೀಯ ನಾಯಕರು ಸೂಕ್ಷವಾಗಿ ಗಮನಿಸುತ್ತಿದ್ದಾರೆ. ಅವರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಕ್ರಮ ಕೈಗೊಳ್ಳುವ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು. ಚುನಾವಣೆ ಘೋಷಣೆ ಆದ ಕೂಡಲೇ ಪಕ್ಷದ ನಾಯಕರು, ವರಿಷ್ಠರು ತೀರ್ಮಾನ ಮಾಡಿ ಶೀಘ್ರವೇ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ