• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Assembly Election 2023: ಕಾಂಗ್ರೆಸ್ ನೋಡಬ್ಯಾಡ್ರಿ, ನನ್ನ ನೋಡಿ ವೋಟ್​ ಹಾಕ್ರಿ ಅಂದ್ರೆ ಹೆಂಗ್? ಶೆಟ್ಟರ್​​ಗೆ ಜೋಶಿ ಟಾಂಗ್

Assembly Election 2023: ಕಾಂಗ್ರೆಸ್ ನೋಡಬ್ಯಾಡ್ರಿ, ನನ್ನ ನೋಡಿ ವೋಟ್​ ಹಾಕ್ರಿ ಅಂದ್ರೆ ಹೆಂಗ್? ಶೆಟ್ಟರ್​​ಗೆ ಜೋಶಿ ಟಾಂಗ್

ಪ್ರಹ್ಲಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್

ಪ್ರಹ್ಲಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್

Pralhad Joshi: ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರೂ ಕಾಂಗ್ರೆಸ್ ನೋಡಬ್ಯಾಡ್ರಿ, ನನ್ನ ನೋಡಿ ಮತ ಹಾಕ್ರಿ ಅಂದ್ರೆ ಹೇಗೆ ಎಂದು ಪ್ರಶ್ನಿಸಿರೋ ಪ್ರಹ್ಲಾದ್ ಜೋಶಿ, ಹೊಸ ರೀತಿಯ ಮತ ಕೇಳುವವರಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದ್ದಾರೆ.

  • Share this:

ಹುಬ್ಬಳ್ಳಿ: ಇತ್ತೀಚೆಗೆ ಪಕ್ಷಾಂತರ ಮಾಡಿದ ನಾಯಕರೊಬ್ಬರು ಕಾಂಗ್ರೆಸ್ (Congress) ನೋಡಿ ಮತ ಹಾಕಬೇಡಿ. ನನ್ನನ್ನು ನೋಡಿ ಮತ ಹಾಕಿ ಅಂತ ಹೊಸ ಟ್ರೆಂಡ್ ಆರಂಭಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi, Union Minister) ಲೇವಡಿ ಮಾಡಿದ್ದಾರೆ. ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದ ಲಿಂಗರಾಜ ನಗರದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹೊಸ ರೀತಿಯಲ್ಲಿ ಮತ ಕೇಳುವುದು ಪ್ರಾರಂಭ ಆಗಿದೆ. ಕಾಂಗ್ರೆಸ್ ನೋಡಿ ಮತ ಹಾಕಬೇಡಿ, ನನ್ನನ್ನ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ವಿರುದ್ಧ ವಾಗ್ದಾಳಿ ನಡೆಸಿದರು.


ಆರ್ಟಿಕಲ್ 370 ರದ್ದಿಗೆ ವಿರೋಧ ಮಾಡಿದವರು ಕಾಂಗ್ರೆಸ್. ಅಧಿಕಾರಕ್ಕೆ ಬಂದ್ರೆ ವಾಪಸ್ ಜಾರಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ನೋಡಿ ಮತಹಾಕಬೇಡಿ ನನ್ನ ನೋಡಿ ಮತ ಹಾಕಿ ಎನ್ನುವರು ಆ ಪಕ್ಷ ಬಿಟ್ಟು ಬರ್ತಾರಾ? ಪಾರ್ಟಿ ನೋಡಿ ಮತ ನೀಡಬೇಡಿ. ನಮ್ಮನ್ನ ನೋಡಿ ಮತ ನೋಡಿ ಎನ್ನುವವರನ್ನ ನಾವು ಒಪ್ಪಿಕೊಳ್ಳುವದಿಲ್ಲ.


ಶೆಟ್ಟರ್ ವಿರುದ್ಧ ವಾಗ್ದಾಳಿ


ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೋ ಅಥವಾ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರಬೇಕೋ ಎಂದು ನೀವೇ ವಿಚಾರ ಮಾಡಿ. ಪ್ರಧಾನಿ ಅವರು ಪೂರ್ತಿ ಬಹುಮತದ ಸರ್ಕಾರ ಕೊಡಿ ಅಂತ ಕೇಳಿದ್ದಾರೆ. ಮೋದಿ ನೇತೃತ್ವದ ಬಿಜೆಪಿಗೆ ಮತ ಹಾಕಿ. ಬಜರಂಗದಳ ನಿಷೇಧದ ಶೆಟ್ಟರ್ ಚಕಾರ ಎತ್ತುತ್ತಿಲ್ಲ. ನನಗೆ ವೋಟ್ ಹಾಕಿ ಎನ್ನುವವರ ಕಡೆಯಿಂದ ಉತ್ತರ ಬರಲಿಲ್ಲ ಎಂದು ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು.


ಬಿಜೆಪಿಯಿಂದ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿಲ್ಲ


ಇದೇ ವೇಳೆ ಮಾತನಾಡಿದ ಮಾಜಿ ಸಂಸದ ವಿಜಯ ಸಂಕೇಶ್ವರ್, ಬಿ.ಆರ್.ಟಿ.ಎಸ್ ಯೋಜನೆಗೆ ಹುಬ್ಬಳ್ಳಿ ಹೊಂದಿಕೊಂಡಿರೋದೇ ದುರ್ದೈವ. ಈ ಹಿಂದಿನ ಶಾಸಕರು ಈ ಯೋಜನೆಯನ್ನ ಮಾಡಿದ್ರು ಎಂದು ಶೆಟ್ಟರ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.


ಕಾಂಗ್ರೆಸ್​​ನವರು ಮಹಾನ್ ಕಳ್ಳರು


ಯಾರೋ ಮಾಡಿದ ಕೆಲಸವನ್ನ ತಾವೇ ಮಾಡಿದ್ದಾಗಿ ಹೇಳುತ್ತಾರೆ. ಕಳೆದ ಚುನಾವಣೆಯಲ್ಲಿ ಶೆಟ್ಟರ್ ಕಡಿಮೆ ಮತಗಳ ಅಂತರದಿಂದ ಗೆದ್ದರು. ಇದೇ ಕಾರಣಕ್ಕೆ ಶೆಟ್ಟರ್ ಗೆ ಟಿಕೆಟ್ ಕೊಟ್ಟಿಲ್ಲ. ಆದರೆ ಅವರು ಕಾರಣ ಕೇಳುತ್ತಾರೆ. ಪ್ರಹ್ಲಾದ್ ಜೋಶಿಯವರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ. ಕಾಂಗ್ರೆಸ್​​ನವರು ಮಹಾನ್ ಕಳ್ಳರು.


ಬಿಎಲ್ ಸಂತೋಷ್ ಅವರ ಕುರಿತು ಸುಳ್ಳು ಅಪಪ್ರಚಾರವಾಯ್ತು. ಬಿಜೆಪಿಯಿಂದ ಲಿಂಗಾಯತ ಸಮುದಾಯಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದು, ಅದನ್ನು ನಂಬಬೇಡಿ ಎಂದರು.


ಈ ಚುನಾವಣೆ ಭಾರತದ ಭವಿಷ್ಯ ಹಾಗೂ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವ ಚುನಾವಣೆ. ಕಾಂಗ್ರೆಸ್ ನವರ ಕುತಂತ್ರಕ್ಕೆ ಯಾರೂ ಕಿವಿಗೊಡಬೇಡಿ. ಬಿಜೆಪಿಗೆ ಮತ ನೀಡಿ ಸದೃಢ ಸರ್ಕಾರ ರಚನೆಗೆ ಕೈಜೋಡಿಸಿ ಎಂದು ಕರೆ ನೀಡಿದರು.


ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮತ್ತಿತರರು ಮಹೇಶ್ ಟೆಂಗಿನಕಾಯಿ ಪರ ಪ್ರಚಾರ ನಡೆಸಿದರು. ಇದೇ ಸಮುದಾಯ ಭವನದಲ್ಲಿ ಮೊನ್ನೆ ಕಾಂಗ್ರೆಸ್ ವೀರಶೈವ, ಲಿಂಗಾಯತರ ಸ್ವಾಭಿಮಾನಿ ಸಮಾವೇಶ ನಡೆಸಿತ್ತು.


ಕರ್ನಾಟಕದಲ್ಲಿ ಬದಲಾವಣೆ ಗಾಳಿ ಎಂದ ಹಿಮಾಚಲ ಸಿಎಂ


ಕರ್ನಾಟಕದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಸರ್ಕಾರವನ್ನು ಬದಲಾಯಿಸಲು ಜನ ಉತ್ಸುಕರಾಗಿದ್ದಾರೆ ಎಂದು ಹಿಮಾಚಲ ಪ್ರದೇಶದ ಸಿಎಂ ಸುಖವಿಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.


ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾಲ್ಕು ವರ್ಷದ ಹಿಂದೆ ಕೊಟ್ಟ ಭರವಸೆ ಬಿಜೆಪಿ ಈಡೇರಿಸಿಲ್ಲ. ಹೇಳಿದ್ದನ್ನು ಬಿಜೆಪಿ ಮಾಡಿ ತೋರಿಸ್ತಿಲ್ಲ. ಹಿಮಾಚಲ ಪ್ರದೇಶದಲ್ಲಿ ನಾವು 10 ಗ್ಯಾರಂಟಿ ಕೊಟ್ಟಿದ್ದೆವು. ಈ ಪೈಕಿ ದೊಡ್ಡ ಗ್ಯಾರಂಟಿ ಒಪಿಎಸ್ ಜಾರಿಗೆ ತಂದೆವು. ಮೊದಲ ಸಂಪುಟದಲ್ಲಿಯೇ ಜಾರಿಗೆ ತಂದೆವು. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಗ್ಯಾರಂಟಿ ತಂದಿದ್ದೇವೆ ಎಂದು ಹೇಳಿದರು.
ಆದರೆ ಬಿಜೆಪಿ ನಾಯಕರು ಅಪಪ್ರಚಾರ ಮಾಡ್ತಿದಾರೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿ ಭರವಸೆ ಈಡೇರಿಸಿಲ್ಲ ಅಂತ ಸುಳ್ಳು ಹೇಳ್ತಾರೆ. ಬಿಜೆಪಿ ಕಳ್ಳತನ ಮಾಡೋ ಆಲೋಚನೆ ಮಾಡದ ರೀತಿಯಲ್ಲಿ ಜನ ಕಾಂಗ್ರೆಸ್ ಬೆಂಬಲ ನೀಡ್ತಾರೆ.
ಶಾಸಕರನ್ನು ಖರೀದಿಸುವ ಯೋಚನೆ ಮಾಡದ ರೀತಿಯಲ್ಲಿ ಭರ್ಜರಿ ಬಹುಮತ ಕೊಡ್ತಾರೆ. ಬಜರಂಗದಳ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಜರಂಗಬಲಿ ನಮ್ಮ ಹೃದಯದಲ್ಲಿದ್ದಾರೆ. ಆದರೆ ನಾವು ಬಜರಂಗ ದಳದ ನಿಷೇಧ ಮಾಡ್ತಿರೋ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ.


ಇದನ್ನೂ ಓದಿ:  Karnataka Assembly Election 2023: ವೋಟ್​ ಹಾಕೋಣಾ ಅಂತ ಊರಿಗೆ ಹೊರಟ ಪ್ರಯಾಣಿಕರಿಗೆ ಬಿಗ್​​ಶಾಕ್​!


ಐಟಿ, ಇಡಿ, ಸಿಬಿಐ ಬಿಜೆಪಿಯ ಅಸ್ತ್ರಗಳು


ಕಾಂಗ್ರೆಸ್ ನಾಯಕರ ಬೆಂಬಲಿಗರ ಮೇಲೆ ಐಟಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಐಟಿ, ಇಡಿ ಹಾಗೂ ಸಿಬಿಐಗಳು ಬಿಜೆಪಿಯ ಅಸ್ತ್ರಗಳಾಗಿವೆ. ರಾಜನೀತಿಯ ಅಸ್ತ್ರಗಳಾಗಿವೆ. ಚುನಾವಣೆ ಬಂದಾಗ ಈ ಅಸ್ತ್ರಗಳನ್ನು ದುರ್ಬಳಕೆ ಮಾಡಿಕೊಳ್ತಾಯಿದೆ.
ಕೇವಲ ಕಾಂಗ್ರೆಸ್ ಪಕ್ಷವೊಂದೇ ಅಲ್ಲ ಪ್ರತಿಪಕ್ಷಗಳೇ ಬಿಜೆಪಿಯ ಟಾರ್ಗೆಟ್ ಆಗಿದೆ. ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಅಲ್ಲಿ ಈ ರೀತಿಯ ಅಸ್ತ್ರಗಳನ್ನು ಬಳಸ್ತಿದೆ. ಪ್ರತಿಪಕ್ಷಗಳನ್ನು ಬಗ್ಗು ಬಡಿಯಲು ಯತ್ನಿಸ್ತಿದೆ ಎಂದು ಸುಖವಿಂದರ್ ಸಿಂಗ್ ಕಿಡಿಕಾರಿದರು.

top videos
    First published: