ದಕ್ಷಿಣ ಕನ್ನಡ (ಮೇ 2): ಕಾಶ್ಮೀರದಲ್ಲಿ(Kashmir) ಆರ್ಟಿಕಲ್ 370 (Article 370) ಯನ್ನು ಕೇಂದ್ರ ಸರಕಾರ ರದ್ದುಪಡಿಸಿದ ಮೇಲೆ ಕಾಶ್ಮೀರವು ದೇಶದ ಇತರ ಭಾಗಕ್ಕೆ ಮುಕ್ತವಾಗಿ ತೆರೆದುಕೊಂಡಿದೆ. ಈ ಆಶಾದಾಯಕ ಬೆಳವಣೆಗೆಯ ಮಧ್ಯೆ ಕಾಶ್ಮೀರದ ಸರ್ಕಾರಿ ಶಾಲೆಯೊಂದನ್ನು (Government School) ಕನ್ನಡಿಗನೋರ್ವ ದತ್ತು ಸ್ವೀಕರಿಸಲು ಮುಂದಾಗಿದ್ದಾರೆ. ಸಾಂವಿಧಾನಿಕವಾಗಿದ್ದ (Constitutional) ವಿಶೇಷ ಸ್ಥಾನಮಾನ ಕಳೆದುಕೊಂಡ ಜಮ್ಮು ಕಾಶ್ಮೀರ ದೇಶದ ಇತರ ರಾಜ್ಯಗಳಿಗೆ ಹತ್ತಿರವಾಗುತ್ತಿರುವುದಕ್ಕೆ ಇದು ಇನ್ನೊಂದು ನಿದರ್ಶನವಾಗಿ ಈ ಬೆಳವಣಿಗೆ ಗುರುತಿಸಲ್ಪಟ್ಟಿದೆ.
ನನಸಾಯ್ತು ಪ್ರಕಾಶ್ ಕನಸು
ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೂರದೃಷ್ಟಿಯ ಯೋಜನೆಗಳನ್ನು ಹಾಕಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಈ ಪ್ರಯತ್ನಕ್ಕೆ ಕೈ ಹಾಕಿದವರು. ಎರಡು ವರ್ಷಗಳಿಂದ ಈ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತಿದ್ದರು. ಕೋವಿಡ್ನಿಂದಾಗಿ ಸಾಧ್ಯವಾಗಿರಲಿಲ್ಲ.
ಈಗ ಕಾಶ್ಮೀರದಲ್ಲಿ ಸರ್ಕಾರಿ ಶಾಲೆ ದತ್ತು ಪಡೆಯಲು ಅವಕಾಶ ನೀಡುವಂತೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಮನೋಜ್ ಸಿನ್ಹಾಗೆ ಮನವಿ ಸಲ್ಲಿಕೆಯಾಗಿದ್ದು, ಶೀಘ್ರ ಸಕಾರಾತ್ಮಕ ಸ್ಪಂದನೆಯ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಬಂಟ್ವಾಳದ ದಡ್ಡಲಕಾಡು ಶಾಲೆಯ ನೂತನ ಕೊಠಡಿಗಳು ಮತ್ತು ಕಲಿಕಾ ಭವನದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ,ದಡ್ಡಲಕಾಡು ಶಾಲೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Hijab Controversy: ಹಿಜಾಬ್ ಧರಿಸಿ ಕಾಲೇಜ್ಗೆ ಬಂದ ವಿದ್ಯಾರ್ಥಿನಿಯರು! ಉಪ್ಪಿನಂಗಡಿಯಲ್ಲಿ 6 ಮಂದಿ ಅಮಾನತು
ಸಚಿವೆ ಶೋಭಾ ಕರಂದ್ಲಾಜೆ ಬೆಂಬಲ
ಮಾತ್ರವಲ್ಲದೆ ಕಾಶ್ಮೀರದಲ್ಲಿ ಶಾಲೆ ದತ್ತು ಪಡೆಯುವ ಪ್ರಕಾಶ್ ಅಂಚನ್ ಕನಸಿಗೆ ಪೂರಕವಾಗಿ ಸ್ಪಂದಿಸಿದ್ದರು. ಮುಂದುವರಿದ ಭಾಗವಾಗಿ ಮೇ 25 ರಂದು ದೆಹಲಿಯಲ್ಲಿ ಪ್ರಕಾಶ್ ಅಂಚನ್, ಒಂದು ದೇಶ ಒಂದು ಶಿಕ್ಷಣ ಸಮಿತಿಯ ಪ್ರಮುಖರಾದ ಉತ್ತರ ಪ್ರದೇಶದ ಸರ್ವೇಶ್ ಮಿಶ್ರಾ, ಸುರೇಂದ್ರ ಸಿಂಗ್ ಅವರ ನಿಯೋಗ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿತ್ತು. ಮನವಿಗೆ ಸ್ಪಂದಿಸಿದ ಸಚಿವೆ ಕಾಶ್ಮೀರದ ಗಡಿಯಲ್ಲಿ ಸರ್ಕಾರಿ ಶಾಲೆ ದತ್ತು ಸ್ವೀಕರಿಸಲು ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದಲ್ಲದೆ, ಜಮ್ಮು ಕಾಶ್ಮೀರದ ರಾಜ್ಯಪಾಲರಿಗೆ ಪತ್ರಮುಖೇನ ಮನವಿ ಮಾಡಿದ್ದಾರೆ.
ದಡ್ಡಲಕಾಡು ಸರಕಾರಿ ಶಾಲೆ ದತ್ತು
ಒಟ್ಟು 28 ಮಕ್ಕಳಿದ್ದು ಮುಚ್ಚುವ ಹಂತಕ್ಕೆ ತಲುಪಿದ್ದ ದಡ್ಡಲಕಾಡು ಸರಕಾರಿ ಶಾಲೆಯನ್ನು ದುರ್ಗಾ ಚಾರಿಟೆಬಲ್ ಟ್ರಸ್ಟ್ ದತ್ತು ಸ್ವೀಕರಿಸಿತ್ತು. ಮೂರು ಮಹಡಿಯ ಸುಸಜ್ಜಿತ ಕಟ್ಟಡ, ಕಲಿಕಾ ಭವನ, ಬಸ್ಸಿನ ವ್ಯವಸ್ಥೆ, ಕನ್ನಡದೊಂದಿಗೆ ಆಂಗ್ಲ ಮಾಧ್ಯಮ ಶಿಕ್ಷಣ, ಮೂಲಸೌಕರ್ಯ, ಗುಣಮಟ್ಟದ ಕಲಿಕೆಯೊಂದಿಗೆ ಕರಾಟೆ, ಯೋಗ, ಭಜನೆ, ನೃತ್ಯ ತರಬೇತಿ ಮೊದಲಾದ ಪಠೇತರ ಚಟುವಟಿಕೆಗಳನ್ನು ಹಮ್ಮಿಕೊಂಡು ಖಾಸಗಿ ಶಾಲೆಯನ್ನು ಮೀರಿಸುವಂತೆ ರಾಷ್ಟ್ರಕ್ಕೆ ಮಾದರಿ ಸರ್ಕಾರಿ ಶಾಲೆಯನ್ನು ಟ್ರಸ್ಟ್ ರೂಪಿಸಿದೆ.
ಇದನ್ನೂ ಓದಿ: Text Book Row: ಪಠ್ಯ ಪರಿಷ್ಕರಣಾ ವಿವಾದ ಚುನಾವಣಾ ಗಿಮಿಕ್; ಪ್ರಹ್ಲಾದ್ ಜೋಶಿ ಕಿಡಿ
ಪ್ರಸಕ್ತ ಶಾಲೆಯಲ್ಲಿ 1,200 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದಡ್ಡಲಕಾಡು ಶಾಲೆ ಮಾತ್ರವಲ್ಲ, ದೇಶದ ಪ್ರತಿ ಗ್ರಾಮದಲ್ಲೂ ಇಂಥ ಮಾದರಿ ಸರ್ಕಾರಿ ಶಾಲೆಗಳು ನಿರ್ಮಾಣಗೊಳ್ಳಬೇಕು, ದೇಶಾದ್ಯಂತ ಏಕರೂಪದ ಶಿಕ್ಷಣ ಜಾರಿಯಾಗಬೇಕು ಎನ್ನುವುದು ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಕನಸಾಗಿದೆ. ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕೂಕಬೆಟ್ಟು ಸರ್ಕಾರಿ ಶಾಲೆ, ಬೈಂದೂರಿನ ಅರೆಶಿರೂರು ಶಾಲೆ ಟ್ರಸ್ಟ್ನ ಮುಂದಾಳತ್ವದಲ್ಲಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಗ್ರಾಮ ಸಮಿತಿಯ ಸಹಕಾರದೊಂದಿಗೆ ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಿದೆ.
ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಪ್ರಕಾಶ್
ಕಾಶ್ಮೀರದಲ್ಲಿ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕೆನ್ನುವುದು ನನ್ನ ಬಹುದಿನಗಳ ಕನಸು, ನಮ್ಮ ಮನವಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಪೂರಕವಾಗಿ ಸ್ಪಂದಿಸಿದ್ದು, ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದಾರೆ. ಈಗಾಗಲೇ ಜಮ್ಮು ಕಾಶ್ಮೀರದ ರಾಜ್ಯಪಾಲರಿಗೆ ಪತ್ರ ಬರೆದು ಶಾಲೆ ದತ್ತು ಪಡೆಯಲು ಅವಕಾಶ ನೀಡುವಂತೆ ಕೋರಿದ್ದಾರೆ ಎಂದು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಪ್ರಕಾಶ್ ಅಂಚನ್ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ