ಮರಳು ದಂಧೆ ತಡೆಯಲು ಕ್ರಮ ಕೈಗೊಳ್ಳಿ: ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದ ಪ್ರಜ್ವಲ್ ರೇವಣ್ಣ ಸೂಚನೆ

ತಾಲ್ಲೂಕು ಹೋಬಳಿಗಳಲ್ಲಿಯೂ ಸರ್ಕಾರಿ ಆಸ್ಪತ್ರೆಗಳು ನಿರಂತರವಾಗಿ ಗುಣಮಟ್ಟ ಕಾಯ್ದುಕೊಂಡು ಕಾರ್ಯನಿರ್ವಹಿಸಬೇಕು. ಅಲ್ಲದೆ ಸರ್ಕಾರಿ ಆಸ್ಪತ್ರೆಗಳಿಲ್ಲದ ಕಡೆ ಜಿಲ್ಲಾ ಪಂಚಾಯತ್ ಅಥವಾ ಯಾವುದೇ ನಿಧಿಯಿಂದ ಆಸ್ಪತ್ರೆಗಳನ್ನು ನಿರ್ಮಾಣ ಮಾಡಬೇಕು ಎಂದು ಸಂಸದ ಪ್ರಜ್ವಲ್ ಸೂಚಿಸಿದ್ದಾರೆ.

ಸಮನ್ವಯ ಸಭೆಯಲ್ಲಿ ಪ್ರಜ್ವಲ್ ರೇವಣ್ಣ

ಸಮನ್ವಯ ಸಭೆಯಲ್ಲಿ ಪ್ರಜ್ವಲ್ ರೇವಣ್ಣ

  • News18
  • Last Updated :
  • Share this:
ಹಾಸನ(ಜ. 31): ಸಕಲೇಶಪುರದಲ್ಲಿ ನಡೆಯುತ್ತಿರುವ ಮರಳು ದಂಧೆಯನ್ನು ತಡೆಗಟ್ಟಲು ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರರು ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಸಂಸದರಾದ ಪ್ರಜ್ವಲ್ ರೇವಣ್ಣ ಅವರು ನಿರ್ದೇಶನ ನೀಡಿದರು . ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ 2019-20ನೇ ಸಾಲಿನ ಮೂರನೇ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (DISHA) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಆನೆ ಕಾರಿಡಾರ್ ಕುರಿತು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಆ ಭಾಗದ ಜನರೊಂದಿಗೆ ಚರ್ಚಿಸಿ ಅಗತ್ಯ ಸ್ಥಳದಲ್ಲಿ ಕಾರಿಡಾರ್ ನಿರ್ಮಾಣ ಮಾಡಬೇಕೆಂದು ಸಂಸದರಾದ ಪ್ರಜ್ವಲ್ ರೇವಣ್ಣ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕು ಹೋಬಳಿಗಳಲ್ಲಿಯೂ ಸರ್ಕಾರಿ ಆಸ್ಪತ್ರೆಗಳು ನಿರಂತರವಾಗಿ ಗುಣಮಟ್ಟ ಕಾಯ್ದುಕೊಂಡು ಕಾರ್ಯನಿರ್ವಹಿಸಬೇಕು. ಅಲ್ಲದೆ ಸರ್ಕಾರಿ ಆಸ್ಪತ್ರೆಗಳಿಲ್ಲದ ಕಡೆ ಜಿಲ್ಲಾ ಪಂಚಾಯತ್ ಅಥವಾ ಯಾವುದೇ ನಿಧಿಯಿಂದ ಆಸ್ಪತ್ರೆಗಳನ್ನು ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: ಸ್ವರ್ಗ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಮೋದಿಯಿಂದ ನರಕ ಸೃಷ್ಟಿ: ಸಿದ್ದರಾಮಯ್ಯ

ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೀಡಿರುವ ಬದಲಿ ಸ್ಥಳಗಳನ್ನು ಅಧಿಕಾರಿಗಳು ಸರ್ವೆ ನಡೆಸಿ ಆ ಜಾಗವನ್ನು ಸಂಬಂಧಿತ ಸಂತ್ರಸ್ತರಿಗೆ ಶೀಘ್ರವಾಗಿ ಖಾತೆ ಮಾಡುವಂತೆ ಸೂಚಿಸಿದರಲ್ಲದೆ, ಹೊಸದಾಗಿ ಪಿಂಚಣಿ ಮಾಡಿಸುವವರಿಗೆ ಗ್ರಾಮ ಪಂಚಾಯಿತಿಗಳಲ್ಲೇ ನೊಂದಣಿ ಮಾಡಿ ಸೌಲಭ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಪ್ರಜ್ವಲ್ ರೇವಣ್ಣ ಸೂಚನೆ ನೀಡಿದ್ದಾರೆ.

ಶಾಸಕರಾದ ಹೆಚ್.ಡಿ. ರೇವಣ್ಣ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯ ನೀಡಬೇಕು. ಹೆಚ್ಚಿನ ಹೆರಿಗೆಗಳು ಸರ್ಕಾರಿ ಆಸ್ಪತ್ರೆಯಲ್ಲೇ ಆಗುವಂತಾಗಬೇಕು ಎಂದು ಸಲಹೆ ನೀಡಿದರು.

ಹಳ್ಳಿ ಹಳ್ಳಿಗೂ ಸರ್ಕಾರಿ ಆಸ್ಪತ್ರೆಗಳ ಸೌಲಭ್ಯ ಕುರಿತು ಪ್ರಚಾರ ಮಾಡಿ ಜನರಲ್ಲಿ ವಿಶ್ವಾಸ ಮೂಡಿಸಿ. ಆ ಮೂಲಕ ಖಾಸಗಿ ಆಸ್ಪತ್ರೆಗಳು ವಿನಾಕಾರಣ ಸಿಜೆರಿಯನ್ ಮಾಡಿ ಬಡವರ ಸುಲಿಗೆ ಮಾಡುವುದನ್ನು ತಪ್ಪಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ರೇವಣ್ಣ ಸೂಚಿಸಿದರು.

ಇದನ್ನೂ ಓದಿ: ಹೈಕಮಾಂಡ್​ ರಾಜಾಹುಲಿಯನ್ನು ಬೋನಿನಿಂದ ಹೊರಬಿಡುತ್ತಿಲ್ಲ; ಬಿಎಸ್​ವೈ ಬಗ್ಗೆ ಎಸ್.ಆರ್.ಪಾಟೀಲ್ ವ್ಯಂಗ್ಯ

ಸುಸಜ್ಜಿತ ಕಟ್ಟಡಗಳಿರುವ ಶಾಲಾ ಕಾಲೇಜುಗಳಿಗೆ ದಾಖಲಾತಿ ನೀಡದೆ ಕಟ್ಟಡಗಳ ಕೊರತೆಯಿರುವ ಕಡೆ ವಿದ್ಯಾರ್ಥಿಗಳನ್ನ ದಾಖಲು ಮಾಡದಂತೆ ನೋಡಿಕೊಳ್ಳಬೇಕು. ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ದೂರದೂರ ಪ್ರದೇಶಗಳಿಂದ ಬರುವ ವಿದ್ಯಾರ್ಥಿನಿಯರಿಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ಸೂಕ್ತ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಮಾಜಿ ಪಿಡಬ್ಲ್ಯೂಡಿ ಸಚಿವರು ಸೂಚನೆ ನೀಡಿದರು.

ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಹಾಗೂ ಕೆ.ಎಂ. ಲಿಂಗೇಶ್ ಅವರು ಮಾತನಾಡಿ, ಆಲೂರು ಸಕಲೇಶಪುರ ತಾಲ್ಲೂಕುಗಳಲ್ಲಿ ಆನೆ ಹಾವಳಿ ಹೆಚ್ಚಿದ್ದು, ಆ ಸಮಸ್ಯೆಗೆ ಸೂಕ್ತ ಪರಿಹಾರ ನೀಡದ ಕಾರಣ ಒಂದೇ ವರ್ಷದಲ್ಲಿ 18 ಪ್ರತಿಭಟನೆಗಳು ನಡೆದಿವೆ. ಹಾಗಾಗಿ ಸಂಪೂರ್ಣವಾಗಿ ಆನೆ ಕಾರಿಡಾರ್ ನಿರ್ಮಿಸಬೇಕಿದೆ ಎಂದು ತಿಳಿಸಿದರು. ರೈತರ ಸಾಗುವಳಿ ಭೂಮಿಯಲ್ಲಿ ಲೇಔಟ್‍ಗಳನ್ನು ನಿರ್ಮಿಸಲು ಯಾವುದೇ ಅಧಿಕಾರಿಯೂ ಅನುಮತಿ ನೀಡದಂತೆಯೂ ಶಾಸಕರು ಸೂಚಿಸಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: